ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿರ್ಮಾಣವಾಗಿರುವ 108 ಅಡಿ ಎತ್ತರದ ಭವ್ಯ ಕೆಂಪೇಗೌಡ ಪ್ರತಿಮೆಯನ್ನು (Kempegowda Statue) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲೋಕಾರ್ಪಣೆ ಮಾಡಿದರು. ಈ ಪ್ರತಿಮೆಯ ಸೃಷ್ಟಿಯ ಹಿಂದಿನ ಕರ್ತೃ ಅನಿಲ್ ಸುತಾರ್ (Anil Sutar). ಶಿಲ್ಪಿಯಾಗಿ ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿರುವ ರಾಮ ಸುತಾರ್ (Ram Sutar) ಅವರ ಪುತ್ರ. ಇಂದು ದೇಶದಲ್ಲಿ ಕಾಣುವ ಬಹುತೇಕ ಭವ್ಯ ಮೂರ್ತಿಗಳ ಹಿಂದೆ ಈ ಅಪ್ಪ-ಮಗನ ಕೈ ಚಳಕವಿದೆ. ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯೆ ಇರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕೆತ್ತಿದವರು ಇವರೇ. ಜಗತ್ತಿನ ಅತಿ ಎತ್ತರದ ಪ್ರತಿಮೆ(597 ಅಡಿ) ಎಂದು ಕೀರ್ತಿಗಳಿಸಿರುವ ಸ್ಟ್ಯಾಚ್ಯೂ ಆಪ್ ಯುನಿಟಿ(ವಲ್ಲಭಭಾಯಿ ಪಟೇಲ್), ವಿವಿಧ ದೇಶಗಳಲ್ಲಿರುವ ಮಹಾತ್ಮ ಗಾಂಧಿ, ಬ್ರಹ್ಮ ಸರೋವರದ ಬಳಿಯ ಕೃಷ್ಣಾರ್ಜುನ ರಥ, ಛತ್ರಪತಿ ಶಿವಾಜಿ, ಭಗವಾನ್ ಪರಶುರಾಮ ಪ್ರತಿಮೆ ಕೂಡ ಇವರ ಮಾರ್ಗದರ್ಶನದಲ್ಲೇ ರೂಪು ತಳೆದಿದ್ದರು. ಹೀಗೆ ನೂರಾರು ಪ್ರತಿಮೆಗಳನ್ನು ದೇಶ, ವಿದೇಶಗಳಲ್ಲಿ ಕಾಣಬಹುದು.
ಅನಿಲ್ ಸುತಾರ್ ಅವರ ಪರಿಚಯ ಮಾಡಿಕೊಳ್ಳುವ ಮುನ್ನ ಅವರ ತಂದೆ, ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕೃತ ರಾಮ ಸುತಾರ್ ಬಗ್ಗೆ ತಿಳಿದುಕೊಳ್ಳೋಣ. 97 ವರ್ಷದ ರಾಮ್ ಸುತಾರ್ ದೇಶದ ಅಗ್ರಮಾನ್ಯ ಶಿಲ್ಪಕಾರರಲ್ಲಿ ಒಬ್ಬರಾಗಿದ್ದಾರೆ. ರಾಮ ಸುತಾರ್ ಅವರು ಮೂಲತಃ ಮಹಾರಾಷ್ಟ್ರದ ಧುಲಿಯಾ ಜಿಲ್ಲೆಯವರು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್‌ನಿಂದ ಚಿನ್ನದ ಪದಕದೊಂದಿಗೆ ಪದವಿಯನ್ನು ಪೂರೈಸಿದ್ದಾರೆ. ಕಂಚಿನ ಪ್ರತಿಮೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು. ರಾಮ್ ಅವರು ತಯಾರಿಸಿದ ಮಹಾತ್ಮ ಗಾಂಧಿ ಪ್ರತಿಮೆಗಳನ್ನು ಸುಮಾರು 50 ದೇಶಗಳಲ್ಲಿ ಕಾಣಬಹುದು. ಈ ಕಾರಣಕ್ಕೆ ಅವರನ್ನು ಅನೇಕ ದೇಶಗಳು ಗೌರವಿಸಿವೆ, ಅನೇಕ ಕಲಾಕಾರರು ಇವರಿಂದ ಪ್ರೇರಣೆ ಪಡೆದುಕೊಂಡಿದ್ದಾರೆ.
1954ರಿಂದ 1958ರವರೆಗೆ ರಾಮ್ ಸುತಾರ್ ಅವರು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲೋರಾ ಮತ್ತು ಅಜಂತಾ ಗುಹೆಗಳಲ್ಲಿನ ಶಿಲ್ಪಗಳ ಮರುಸ್ಥಾಪನಾ ಮಾದರಿಗಳಿಗಾಗಿ ದುಡಿದಿದ್ದಾರೆ. ಅಲ್ಲಿ ಅವರು ಅನೇಕ ಶಿಲ್ಪಗಳನ್ನು ಪುನಃ ಸ್ಥಾಪಿಸಿದ್ದಾರೆ. ಬಳಿಕ 1958ರಿಂದ ಒಂದು ವರ್ಷ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಡಿಯೊ ವಿಶುವಲ್ ಪ್ರಚಾರ ವಿಭಾಗದಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಸ್ವಂತ ಕೆಲಸ
1959ರಲ್ಲಿ ಸರ್ಕಾರಿ ಕೆಲಸದಿಂದ ಬಿಡುವು ತೆಗೆದುಕೊಂಡ ರಾಮ್ ಸುತಾರ್ ಅವರು, ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡಲು ಆರಂಭಿಸಿದರು. ಅದೇ ವರ್ಷ ಅವರು ಕೃಷಿ ಮೇಳದ ಮುಂಭಾಗದಲ್ಲಿ ರಚಿಸಿದ ಎರಡು ರಚಿಸಿದ ಶಿಲ್ಪಗಳು ಭಾರಿ ಗಮನ ಸೆಳೆದವು ಮತ್ತು ಹೆಚ್ಚು ಪ್ರಸಿದ್ಧಿ ತಂದು ಕೊಟ್ಟವು.
ನಿಗರ್ವಿ ಮತ್ತು ಮಿತಭಾಷಿ ರಾಮ್ ಅವರು ಭವ್ಯ ಸ್ಮಾರಕ ಕೃತಿಗಳನ್ನು ರೂಪಿಸುವುದರಲ್ಲೇ ಆನಂದ ಪಡೆಯುತ್ತಾರೆ. ಮಧ್ಯಪ್ರದೇಶದಲ್ಲಿರುವ ಗಾಂಧಿ ಸಾಗರ್ ಡ್ಯಾಮ್‌ನಲ್ಲಿ ನಿರ್ಮಿಸಿದ 45 ಅಡಿ ಎತ್ತರದ ಚಂಬಲ್ ಸಾಂಕೇತಿಕ ಸ್ಮಾರಕ ಶಿಲ್ಪವು ಹೆಸರು ತಂದು ಕೊಟ್ಟಿತು. ಈ ಶಿಲ್ಪವು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಹೋದರತ್ವನ್ನು ಪ್ರತಿಬಿಂಬಿಸುತ್ತದೆ. ಅಂದಿನ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರು ಅವರು ಈ ಶಿಲ್ಪವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಭಾಕ್ರಾ ನಂಗಲ್ ನಿರ್ಮಾಣದ ವೇಳೆ ಮಡಿದ ಕಾರ್ಮಿಕರ ತ್ಯಾಗದ ನೆನಪಿನ 50 ಅಡಿ ಎತ್ತರದ ಕಂಚಿನ ಶಿಲ್ಪವನ್ನು ನಿರ್ಮಿಸಬೇಕೆಂದು ರಾಮ್ ಸುತಾರ್ ಅವರನ್ನು ಕೇಳಿಕೊಂಡರು. ಆಗ ರಾಮ್ ಸುತಾರ್ ನಿರ್ಮಿಸಿದ “ಟ್ರಯಂಫ್ ಆಫ್ ಲೇಬರ್” ಮಾದರಿಯನ್ನು ಎಂಜಿನಿಯರಿಂಗ್‌ನ ಅದ್ಭುತ ಎಂದು ಬಣ್ಣಿಸಲಾಗಿದೆ. ಆದರೆ, ಹಣದ ಕೊರತೆಯಿಂದಾಗಿ ಭಾಕ್ರಾ ಅಣೆಕಟ್ಟಿನ ಈ ಸ್ಮಾರಕವನ್ನು ಇನ್ನೂ ನಿರ್ಮಿಸಲು ಸಾಧ್ಯವಾಗಿಲ್ಲ. ಅವರ ಕನಸು ಹಾಗೆಯೇ ಉಳಿದುಕೊಂಡಿದೆ!
ದಿಲ್ಲಿಯ ರಫಿ ಮಾರ್ಗದಲ್ಲಿರುವ ಗೋವಿಂದ ವಲ್ಲಭ್ ಪಂತ್ ಅವರ ಪ್ರತಿಮೆಯು ಸುತಾರ್ ಅವರ ಸೃಜನಶೀಲ ಪ್ರತಿಭೆಗೆ ಮತ್ತೊಂದು ಸಾಕ್ಷಿಯನ್ನು ಒದಗಿಸುತ್ತದೆ. ಸುಮಾರು 10 ಅಡಿ ಎತ್ತರದ ಈ ಪ್ರತಿಮೆ ಅದ್ಭುತವಾಗಿದೆ. ಕಲಾವಿದನ ಅದ್ಭುತ ಕೌಶಲಕ್ಕೆ ಸಾಕ್ಷಿಯಾಗಿದೆ.
ಕಲಾ ವಿಮರ್ಶಕರೂ ಆಗಿದ್ದ ಪಂಜಾಬ್ ವಿಶ್ವವಿದ್ಯಾಲಯದ ಕುಲಪತಿ ಎಂ ಎಸ್ ರಾಂಧ್ವಾ ಅವರ ಉತ್ತೇಜನದಿಂದಾಗಿ ರಾಮ್ ಸುತಾರ್ ಅವರು, 22 ಅಡಿ ಎತ್ತರದ ಭವ್ಯ ಗಂಗಾ ಮತ್ತು ಯಮುನಾ ಪ್ರತಿಮೆಗಳನ್ನು ಲೂಧಿಯಾನದ ರೋಜ್ ಗಾರ್ಡನ್‌ನಲ್ಲಿ ನಿರ್ಮಿಸಿದರು. ಈ ಎರಡೂ ಪ್ರತಿಮೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಅವುಗಳನ್ನು ನೋಡಿಯೇ ಕಲೆಯನ್ನು ಅನುಭವಿಸಬೇಕು ಎಂಬುದು ವಿಮರ್ಶಕರ ಮೆಚ್ಚುಗೆಯ ಮಾತುಗಳು.
ಮಹಾತ್ಮ ಗಾಂಧಿ ಪುತ್ಥಳಿ
ಭಾರತದಲ್ಲಿ ನಡೆದ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೇಳಗಳಲ್ಲಿ ರಾಮ್ ಅವರು ತಮ್ಮ ಶಿಲ್ಪಗಳನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ ಮಹಾತ್ಮ ಗಾಂಧಿ ಪುತ್ಥಳಿಗೆ ರಾಮ್ ಅವರು ಹೆಸರುವಾಸಿ. ಎಷ್ಟರಮಟ್ಟಿಗೆ ಅವರು ಪ್ರಖ್ಯಾತರು ಎಂದರೆ, ಸುಮಾರು 50 ದೇಶಗಳಲ್ಲಿ ರಾಮ್ ಕೈಯಲ್ಲಿ ಅರಳಿದ ಗಾಂಧಿ ಪುತ್ಥಳಿಯನ್ನು ಪ್ರತಿಷ್ಠಾಪಿಸಿವೆ. ಫ್ರಾನ್ಸ್, ಇಟಲಿ, ಅರ್ಜೇಂಟಿನಾ, ಬಾರ್ಬಡೋಸ್, ರಷ್ಯಾ, ಇಂಗ್ಲೆಂಡ್, ಮಲೇಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿರುವ ಗಾಂಧಿ ಪುತ್ಥಳಿ ಹಿಂದಿನ ಕಲಾ ಶಕ್ತಿ ಇವರೇ ಆಗಿದ್ದಾರೆ. ನಮ್ಮ ವಿಧಾನಸೌಧ ಮತ್ತು ವಿಕಾಸ ಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಕೂಡ ಇವರದ್ದೇ ಮಾರ್ಗದರ್ಶನದಲ್ಲಿ ಸಿದ್ಧವಾಗಿದೆ.
ಕಳೆದ 60 ವರ್ಷದಲ್ಲಿ ಅವರು ಸಮಾರು 90ಕ್ಕೂ ಹೆಚ್ಚು ಶಿಲ್ಪ ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ ಹೆಚ್ಚಿನವು ಸಂಸತ್ ಭವನದಲ್ಲಿ ಪ್ರತಿಷ್ಠಾಪಿತವಾಗಿವೆ. ಈ ಪೈಕಿ 16 ಅಡಿ ಎತ್ತರದ ಮಹಾತ್ಮ ಗಾಂಧಿ, 18 ಅಡಿ ಎತ್ತರದ ಪಂಡಿತ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ಮೌಲಾನಾ ಆಜಾದ್, ಸರ್ದಾರ್ ಪಟೇಲ್, ಜಗಜೀವನ್ ರಾಮ್, ಗೋವಿಂದ್ ವಲ್ಲಭ್ ಪಂತ್ ಅವರ ಪ್ರತಿಮೆಗಳು ನಿಮ್ಮ ಮನಸೂರೆಗೊಳ್ಳುತ್ತವೆ.
ಈಡೇರಬೇಕಿದೆ ಕನಸು!
ರಾಮ್ ಸುತಾರ್ ಅವರು, ರಾಮ್ ಸುತಾರ್ ಫೈನ್ ಆರ್ಟ್ಸ್ ಪ್ರೈವೇಟ್ ಕಂಪನಿಯ ಮೂಲಕ ಪ್ರತಿಮೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕೆಲಸವನ್ನು ಈಗ ಅವರ ಪುತ್ರ ಅನಿಲ್ ಸುತಾರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಎತ್ತರದ ಶಿಲ್ಪವನ್ನು ನಿರ್ಮಿಸುವ ರಾಮ್ ಸುತಾರ್ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತ
ಪ್ರತಿಮೆಗಳು ಮಾತ್ರವಲ್ಲದೇ ರಾಮ್ ಅವರ ಮುಂದಾಳತ್ವದಲ್ಲಿ ಅರಳಿದ ಶಿಲ್ಪಗಳು ಭಾರತ ಮಾತ್ರವಲ್ಲದೇ, ಅಮೆರಿಕ, ಯುರೋಪ್ ಮತ್ತು ಏಷ್ಯಾದ ಹಲವ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ. ಶಿಲ್ಪಕಲೆಗೆ ನೀಡಿದ ಅಪಾರ ಕೊಡುಗೆಯನ್ನು ಗಮನಿಸಿ ಕೇಂದ್ರ ಸರ್ಕಾರವು 1999 ಪದ್ಮಶ್ರೀ ಪುರಸ್ಕಾರವನ್ನು ನೀಡಿತು. 2016ರಲ್ಲಿ ಸರ್ಕಾರವು ಪದ್ಮಭೂಷಣ ಗೌರವ ನೀಡಿತು. ಇದರ ಹೊರತಾಗಿಯೂ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಅವರನ್ನು ಅರಸಿ ಬಂದಿವೆ.
ತಂದೆಯ ಹಾದಿಯಲ್ಲಿ ಮಗ
ಅನಿಲ್ ಸುತಾರ್ ಅವರು ಹುಟ್ಟಾ ಶಿಲ್ಪ ಮತ್ತು ಚಿತ್ರಕಲಾವಿದ ಎಂದರೆ ಉತ್ಪ್ರೇಕ್ಷೆಯಾಗಲಾರದು. ದಿಲ್ಲಿಯ ಕಾಲೇಜ್‌ನಲ್ಲಿ ಪ್ಲ್ಯಾನಿಂಗ್ ಮತ್ತು ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದುಕೊಂಡಿರುವ ಅವರು, ಅಮೆರಿಕದ ಮಿಸೌರಿಯ ವಾಷಿಂಗ್ಟನ್ ವಿವಿಯಿಂದ ಆರ್ಕಿಟೆಕ್ಚರ್ ಮತ್ತು ಅರ್ಬನ್ ಡಿಸೈನ್ ವಿಷಯದಲ್ಲಿ ಮಾಸ್ಟರ್ ಮಾಡಿದ್ದಾರೆ. ತಂದೆಯಂತೆ ಅನಿಲ್ ಕೂಡ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ. ಅಮೆರಿಕ, ಮಧ್ಯ ಪ್ರಾಚ್ಯ, ನೈಜೀರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳನ್ನು ಕೈಗೊಂಡು ಯಶಸ್ವಿಯಾಗಿ ಪೂರೈಸಿದ್ದಾರೆ. ಆರ್ಟಿಟೆಕ್ಚರ್ ಮತ್ತು ಎಂಜನಿಯರಿಂಗ್ ಜ್ಞಾನದಿಂದಾಗಿ ವಿಶಿಷ್ಟವಾದ ಮತ್ತು ವಿಭಿನ್ನವಾದ ಪ್ರತಿಮೆಗಳನ್ನು ರೂಪಿಸುವಲ್ಲಿ ಅನಿಲ್ ಅವರಿಗೆ ಸಾಧ್ಯವಾಗಿದೆ.
ನೋಯ್ಡಾದಲ್ಲಿ ಅತಿದೊಡ್ಡ ಸ್ಟುಡಿಯೊವನ್ನು ಇವರು ಹೊಂದಿದ್ದಾರೆ. ಜಗತ್ತಿನಾದ್ಯಂತ ಶಿಲ್ಪ ಕಲೆಯ ವಿದ್ಯಾರ್ಥಿಗಳು ಈ ಸ್ಟುಡಿಯೊಗೆ ಭೇಟಿ ನೀಡುತ್ತಾರೆ. ರಾಮ್ ಸುತಾರ್ ಅವರಿಗೆ ವಯಸ್ಸಾದ ಹಿನ್ನೆಲೆಯಲ್ಲೇ ಅನಿಲ್ ಸುತಾರ್ ಅವರು, ರಾಮ್ ಸುತಾರ್ ಆರ್ಟ್ಸ್ ಕ್ರಿಯೇಷನ್ ಪ್ರೈವೇಟ್ ಲಿ. ಮತ್ತು ರಾಮ್ ಸುತಾರ್ ಫೈನ್ ಆರ್ಟ್ಸ್ ಪ್ರೈ. ಎರಡೂ ಕಂಪನಿಗಳನ್ನು ಅನಿಲ್ ಅವರೇ ಮುನ್ನಡೆಸುತ್ತಿದ್ದಾರೆ.
ಕೆಂಪೇಗೌಡ ಪ್ರತಿಮೆ ಹೇಗೆ ನಿರ್ಮಾಣ?
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಭವ್ಯ 90 ಅಡಿಯ ಕೆಂಪೇಗೌಡ ಪ್ರತಿಮೆಯು ಸಂಪೂರ್ಣವಾಗಿ ಈ ಅನಿಲ್ ಅವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡಿದೆ. ಸುಮಾರು 14 ತಿಂಗಳಲ್ಲಿ ಅವರು ಇಡೀ ಪ್ರತಿಮೆಯನ್ನು ತಯಾರಿಸಿದ್ದಾರೆ.
ಅನಿಲ್ ಸುತಾರ್ ಹಾಗೂ ಅವರ ತಂಡವು ಮೊದಲಿಗೆ ಕೆಂಪೇಗೌಡ ಪ್ರತಿಮೆಯ ಮಾದರಿಯನ್ನು ತಯಾರಿಸಿತು. ಈ ಮಾದರಿಯನ್ನು ವೀಕ್ಷಿಸಿದ ಆದಿಚುಂಚನಗಿರಿ ಶ್ರೀಗಳು ಹಾಗೂ ಸಚಿವ ಅಶ್ವತ್ಥ ನಾರಾಯಣ ಅವರು ತಮ್ಮ ಒಪ್ಪಿಗೆ ನೀಡಿದರು. ಆ ಬಳಿಕ, 9 ಅಡಿಯ ಕೆಂಪೇಗೌಡ ಪ್ರತಿಮೆ ತಯಾರಿಸಿ, ಮತ್ತೆ ಒಪ್ಪಿಗೆಯನ್ನು ಪಡೆದುಕೊಳ್ಳಲಾಯಿತು. ಉದ್ದೇಶಿತ ಭವ್ಯ ಪ್ರತಿಮೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ರೂಪಿಸಲಾಯಿತು. ಒಂದೊಂದು ಭಾಗವನ್ನು ಎರಕಹೊಯ್ದು, ಕಂಚಿನ ಮೂಲಕ ಪ್ರತಿಮೆಯನ್ನು ನಿರ್ಮಿಸಲಾಯಿತು. ಬಳಿಕ ಒಂದೊಂದೇ ಭಾಗವನ್ನು ತಂದು ಜೋಡಿಸಲಾಯಿತು. ಈಗ ಕಂಪೇಗೌಡ ಪ್ರತಿಮೆ ಬೆಂಗಳೂರಿನ ಹೆಗ್ಗುರುತಾಗಿ ಉದಯಿಸಿದೆ.
ಇದನ್ನೂ ಓದಿ | Modi in bengaluru | ಇನ್ನೂ ಬಹಳಷ್ಟಿದೆ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯ ವೈಶಿಷ್ಟ್ಯ!