Site icon Vistara News

Amrit Mahotsav | ಬ್ರಿಟಿಷರಿಗೆ ಭಯ ಹುಟ್ಟಿಸಿದ್ದ ಗಂಡೆದೆಯ ಧೀರ ರಾಮ್‌ಜಿ ಗೋಂಡ್

amrit mahotsav
https://vistaranews.com/wp-content/uploads/2022/08/WhatsApp-Audio-2022-08-25-at-19.29.22.mp3

ಕರ್ನಾಟಕದ ಅಸಮಾನ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನಕ್ಕೆ ಸಾಕ್ಷಿಯಾಗಿ ನಂದಗಢದಲ್ಲಿ ಒಂದು ಅಲದ ಮರವಿದೆ. ಮಹಾರಾಷ್ಟ್ರದ ರಾಮೋಶಿ ಕ್ರಾಂತಿವೀರ ಊಮಾಜಿ ನಾಯಕನ ನೇಣಿನ ಕಥೆ ಹೇಳುವ ಅಲದ ಮರ ಪುಣೆ ಷಹರಿನ ಮಧ್ಯೆ ಖಡಕ್‌ ಮಾಲ್‌ ಎಂಬಲ್ಲಿದೆ. ಅದೇ ರೀತಿ ತೆಲಂಗಾಣ ರಾಜ್ಯದ ನಿರ್ಮಲ್‌ ಎಂಬ ಸ್ಥಳದಲ್ಲಿದ್ದ ಆಲದ ಮರವೂ ʼವೆಯ್ಯಿ ಉರಿ ಮರ್ರಿ ಚೆಟ್ಟುʼ ಅಂದರೆ ʼಸಾವಿರ ನೇಣಿನ ಆಲದ ಮರʼ ಎಂದು ಪ್ರಖ್ಯಾತವಾಗಿದೆ. ಆ ಆಲದ ಮರ ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಸ್ಥಳೀಯರ ನೆನಪಿನಲ್ಲಿ ೧೬೨ ವರ್ಷಗಳ ಹಿಂದೆ ನಡೆದುಹೋದ ಕಣ್ಣಲ್ಲಿ ರಕ್ತ ಉಕ್ಕಿಸುವ ಇತಿಹಾಸ ಅಚ್ಚಳಿಯದೆ ಉಳಿದಿದೆ.

ಜಲಿಯನ್‌ ವಾಲಾಬಾಗ್‌ ಮಾರಣಹೋಮ ನಮ್ಮ ಸ್ವಾತಂತ್ರ್ಯಹೋರಾಟದ ರಕ್ತರಂಜಿತ ಪುಟಗಳು. ಅದರೆ ಅಲ್ಲಿ ಅಸುನೀಗಿದ್ದಕ್ಕಿಂತ ಮೂರುಪಟ್ಟು ಹೆಚ್ಚು ವೀರರನ್ನು ಆಂಗ್ಲ ಸರ್ಕಾರ ಆ ʼವೆಯ್ಯಿ ಉರಿ ಮರ್ರಿ ಚೆಟ್ಟುʼಗೆ ನೇಣುಹಾಕಿ ಕೊಂದ ದಾರುಣ ಕಥೆ ಬಹುತೇಕರಿಗೆ ಗೊತ್ತೇ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಯಾವ ಪುಟದಲ್ಲೂ ಅದು ದಾಖಲಾಗಿಲ್ಲ. ಅದೇನಾದರೂ ಅಲ್ಪಸ್ವಲ್ಪ ದಾಖಲಾಗಿದ್ದರೆ ಹೈದರಾಬಾದಿನ ಸೆಂಟ್ರಲ್‌ ರೆಕಾರ್ಡ್ಸ್‌ ಆಫೀಸ್‌ನ ಕಡತಗಳಲ್ಲಿ ಹಾಗೂ ಸ್ಥಳೀಯ ಹಿರಿಯರ ನೆನಪಿನಾಳದಲ್ಲಿ. ʼಸಾವಿರ ನೇಣಿನ ಆಲದ ಮರʼ ರಾಮ್‌ಜಿ ಗೋಂಡ್‌ ಎಂಬ ಅಗ್ರ ಪಂಕ್ತಿಯ ಸ್ವಾತಂತ್ರ್ಯವೀರನ ಬಲಿದಾನಕ್ಕೆ ಸಾಕ್ಷಿಯಾಗಿದೆ.

ಬಿರ್ಸಾ ಮುಂಡಾ, ಊಮಾಜಿ ನಾಯಕ್‌, ದೌಲತ್‌ ರಾವ್‌ ನಾಯಕ್‌, ಸಿದ್ದು ಮುರ್ಮು ಮೊದಲಾದ ವನವಾಸಿ ಕ್ರಾಂತಿಕಾರಿಗಳ ಸಾಲಿನಲ್ಲಿ ಕೇಳಿಬರುವ ಇನ್ನೊಂದು ಹೆಸರು ಮಾರ್ಸಿಕೊಲ್ಲಾ ರಾಮ್‌ಜಿ ಗೋಂಡ್.‌

ಗೋಂಡರು ಎನ್ನಲಾಗುವ ಗಿರಿಜನರು ಮಧ್ಯಪ್ರದೇಶದ ಪೂರ್ವ ಭಾಗದ ಗೊಂಡ್ವಾನಾ ಪ್ರದೇಶಕ್ಕೆ ಸೇರಿದವರು. ಕ್ರಿ.ಶ.೧೩ರಿಂದ ೧೯ನೇ ಶತಮಾನಗಳ ನಡುವೆ ಬೇರೆ ಬೇರೆ ಕಡೆಗಳಿಂದ ಅಲ್ಲಿಗೆ ಬಂದು ನೆಲೆಸಿದ ವನವಾಸಿಗಳು. ಗೋಂಡ್‌ ಜನಾಂಗದವರು ಕ್ರಿ.ಶ.೧೨೪೦ರಿಂದ ೧೭೫೦ರವರೆಗೆ ಐದು ಶತಮಾನಗಳ ಕಾಲ ರಾಜ್ಯವಾಳಿದ್ದರು. ೯ ಮಂದಿ ಗೋಂಡ್‌ ರಾಜರಲ್ಲಿ ಕೊನೆಯವನಾದ ನೀಲ್‌ಕಂಠ್‌ ಷಾನನ್ನು ಮರಾಠರು ಬಂಧಿಸಿ, ಅವನ ಕೇಂದ್ರವಾಗಿದ್ದ ಚಂದ್ರಾಪುರವನ್ನು ಆಕ್ರಮಿಸಿಕೊಂಡರು. ಅನಂತರ ಮರಾಠರು ಬ್ರಿಟಿಷರಿಗೆ ಮಣಿದಾಗ ಆ ಪ್ರದೇಶದಲ್ಲಿ ಬ್ರಿಟಿಷ್‌ ಆಳ್ವಿಕೆ ಆರಂಭವಾಯಿತು. ಗೋಂಡ್‌ ಜನಾಂಗದವರೂ ಆಂಗ್ಲರ ಅಡಿಯಾಳಾಗಬೇಕಾಯಿತು.

ಗೋಂಡ್‌ ಗಿರಿಜನರು ಕಷ್ಟಸಹಿಷ್ಣುಗಳು. ಸ್ವಾಭಿಮಾನಿಗಳು, ಬೆಟ್ಟಗುಡ್ಡಗಳಲ್ಲಿ ವ್ಯವಸಾಯ, ಕಾಡಿನಲ್ಲಿರುವ ಒಣಮರ ಕಡಿದು ಸೌದೆ ಮಾಡಿ ಸುತ್ತಲ ಊರುಗಳಲ್ಲಿ ಮಾರಾಟ, ಉಳಿದ ವೇಳೆ ಪ್ರಾಣಿಗಳ ಬೇಟೆ. ಹೀಗೆ ತಮ್ಮ ಪಾಡಿಗೆ ತಾವಿದ್ದ ಗೋಂಡಾ ಜನರ ಮೇಲೆ ಬ್ರಿಟಿಷರು ದೌರ್ಜನ್ಯ ನಡೆಸಿ, ಅವರ ಸ್ಥಳಗಳಿಂದ ಎತ್ತಂಗಡಿ ಮಾಡತೊಡಗಿದಾಗ ಅದರ ವಿರುದ್ಧ ಸೆಟೆದು ನಿಂತು ಬಿಲ್ಲುಬಾಣ, ಕತ್ತಿಗಳಿಂದ ಅನ್ಯಾಯವನ್ನು ಎದುರಿಸಿದರು. ಆಗ ಗೋಂಡಾ ಜನರ ಸಾರಥಿಯಾಗಿ ಮೂಡಿಬಂದವನು ಈ ರಾಮ್‌ಜೀ ಗೋಂಡ್.‌ ಶತ್ರುಗಳ ವಿರುದ್ಧ ಗೋಂಡಾ ಜನರ ಹೋರಾಟವನ್ನು ಆತ ಸಂಘಟಿಸಿದ. ಗೋಂಡ್‌, ಕೊಲಾಮು, ಕೋಯ ಜಾತಿಯ ಜನರು ನೆಲೆಸಿದ್ದ ಗಿರಿ ಪ್ರದೇಶಗಳಲ್ಲಿ ಆಂಗ್ಲರು ಉಪಟಳ ಕೊಡತೊಡಗಿದಾಗ ಗಿರಿಜನರ ಕತ್ತಿ, ಗಂಡುಗೊಡಲಿ, ಭಲ್ಲೆ ಭರ್ಜಿ, ಈಟಿಗಳು ಮಾತಾಡತೊಡಗಿದವು. ಆಂಗ್ಲ ಸೈನಿಕರ ಕೈಗೆ ಸಿಗದೆ ರಾಮ್‌ಜೀ ನೇತೃತ್ವದಲ್ಲಿ ಗೋಂಡರು ಬೆಟ್ಟಗುಡ್ಡಗಳ ಕಡಿದಾದ ಕೊರಕಲು ಪ್ರದೇಶಗಳಲ್ಲಿ ಅವಿತಟ್ಟುಕೊಂಡರು.

ರಾಮ್‌ಜೀ ಗೋಂಡ್‌ನನ್ನು ಬಂಧಿಸುವ ಬ್ರಿಟಿಷರ ಪ್ರಯತ್ನ ಪದೇಪದೇ ವಿಫಲಗೊಂಡಿತು. ೧೮೬೦ರ ಏಪ್ರಿಲ್‌ ೯ರಂದು ನಿರ್ಮಲ್‌ನಿಂದ ಸುಮಾರು ೧೬ ಮೈಲು ದೂರದ ಬೆಟ್ಟ ಪ್ರದೇಶದಲ್ಲಿ ರಾಮ್‌ಜೀ ಮತ್ತು ಆತನ ಹಿಂಬಾಲಕರು ತಂಗಿದ್ದಾರೆಂಬ ಮಾಹಿತಿ ತಿಳಿಯುತ್ತಲೇ ಆಂಗ್ಲರ ಸೈನ್ಯ ಅಲ್ಲಿಗೆ ಧಾವಿಸಿತು. ಆದರೆ ಅದು ತೀರಾ ಇಕ್ಕಟ್ಟಾಗಿದ್ದ ಕೊರಕಲು ಪ್ರದೇಶ. ಅಲ್ಲಿಗೆ ತಲಪುವುದು ಅಷ್ಟು ಸುಲಭವಾಗಿರಲಿಲ್ಲ. ಅಂತೂ ಹೇಗೋ ಅಲ್ಲಿಗೆ ತಲಪಿದ ಆಂಗ್ಲ ಸೈನಿಕರು ಗೋಂಡರ ಮೇಲೆ ಆಕ್ರಮಣ ನಡೆಸಿದರು. ಗೋಂಡರ ಜತೆಗೆ ರೋಹಿಲರು, ದಖ್ಖನಿಗಳೂ ಇದ್ದರು. ಭಾರೀ ಹಣಾಹಣಿಯೇ ನಡೆಯಿತು. ಎಷ್ಟು ಮಂದಿ ಈ ಹಣಾಹಣಿಯಲ್ಲಿ ಸತ್ತರೆಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಹಲವರು ಸಾವಿಗೀಡಾದರು. ನೂರಾರು ಮಂದಿ ಗಾಯಗೊಂಡರು. ಗಾಯಗೊಂಡವರೆಲ್ಲ ತಪ್ಪಿಸಿಕೊಳ್ಳಲು ಓಡತೊಡಗಿದರು. ಸುಮಾರು ನಾಲ್ಕೂವರೆ ಗಂಟೆ ಹೀಗೆ ಓಡಿದ ಕ್ರಾಂತಿಕಾರಿಗಳು ಹಸಿವು, ನೀರಡಿಕೆ, ಬಳಲಿಕೆಯಿಂದ ಹೈರಾಣವಾಗಿ ಹೋಗಿದ್ದರು. ಬ್ರಿಟಿಷರೊಂದಿಗೆ ಹೈದರಾಬಾದಿನ ನಿಜಾಮನ ಆಡಳಿತವೂ ಶಾಮೀಲಾಗಿದ್ದುದರಿಂದ ಕ್ರಾಂತಿಕಾರಿಗಳ ಆಟ ನಡೆಯಲಿಲ್ಲ.

ರಾಮ್‌ಜೀ ಮಾತ್ರ ಆಂಗ್ಲರ ಕೈಗೆ ಸಿಕ್ಕಿರಲಿಲ್ಲ. ಆತನನ್ನು ಸೆರೆಹಿಡಿಯಲು ಎಲ್ಲ ಕಡೆ ಸರ್ಕಾರಿ ಬೇಹುಗಾರರನ್ನು ಬಳಸಿ ಕೊನೆಗೂ ಅವನಿದ್ದ ನೆಲೆಯನ್ನು ಪತ್ತೆಹಚ್ಚಿ ಬಂಧಿಸಿದರು. ಆತನ ಜೊತೆಗಿದ್ದ ಇನ್ನೂ ಸುಮಾರು ಸಾವಿರ ಜನರ ಬಂಧನವಾಯಿತು. ಸರ್ಕಾರದ ವಿರುದ್ಧ ಬಂಡೆದ್ದವರೆಂಬ ಆರೋಪ ಹೊರಿಸಿ, ನೇಣಿಗೆ ಹಾಕಬೇಕೆಂದು ನಿರ್ಧರಿಸಲಾಯಿತು. ೧೮೬೦ರ ಏಪ್ರಿಲ್‌ ೯ರಂದು ನಿರ್ಮಲ್‌ನಲ್ಲಿ ʼವೆಯ್ಯಿ ಉರಿ ಮರ್ರಿ ಚೆಟ್ಟುʼಗೆ ಅವರೆಲ್ಲರನ್ನೂ ನೇಣಿಗೇರಿಸಲಾಯಿತೆಂದು ಹೈದರಾಬಾದ್‌ ರೆಕಾರ್ಡ್‌ ಆಫೀಸಿನ ದಾಖಲೆಗಳು ತಿಳಿಸುತ್ತವೆ.

೧೯೯೫ರಲ್ಲಿ ಆ ಆಲದಮರ ಬಿದ್ದುಹೋಯಿತು. ಆದರೆ ಸಾವಿರ ಮಂದಿಯನ್ನು ನೇಣಿಗೇರಿಸಿದ ಭೀಕರ ನೆನಪು ಮಾತ್ರ ಈಗಲೂ ಅಳಿಸಿಹೋಗಿಲ್ಲ. ರಾಮ್‌ಜೀ ಸ್ಮರಣಾರ್ಥ ಅಲ್ಲೊಂದು ಸ್ಮಾರಕ ನಿರ್ಮಿಸಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸುತ್ತಲೇ ಇದ್ದಾರೆ. ರಾಮ್‌ಜೀ ನೆನಪಿಗಾಗಿ ಮ್ಯೂಸಿಯಂ ನಿರ್ಮಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ೨೦೨೧ರ ಸೆಪ್ಟೆಂಬರ್‌ ೧೬ರಂದು ಅದಿಲಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಮ್‌ಜೀ ಗೋಂಡ್‌ಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿತ್ತು.

ಇದನ್ನೂ ಓದಿ | Amrit Mahotsav | ಎರಡನೇ ಶಿವಾಜಿ ಮಹಾರಾಜ ಎಂದು ಕರೆಸಿಕೊಂಡಿದ್ದ ಕ್ರಾಂತಿಕಾರಿ ಊಮಾಜಿ ನಾಯಕ

Exit mobile version