Site icon Vistara News

SBI PO Recruitment 2022 | ಪ್ರೊಬೇಷನರಿ ಆಫೀಸರ್‌ ಹುದ್ದೆಗೆ ಪರೀಕ್ಷೆ; ಬದಲಾವಣೆ ಏನೇನು?

SBI PO Recruitment 2022

ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಪ್ರೊಬೇಷನರಿ ಆಫೀಸರ್‌ (PO) ಹುದ್ದೆಗಳ ನೇಮಕಕ್ಕೆ (SBI PO Recruitment 2022) ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗಿದೆ.

ಈ ಬಾರಿ ಪರೀಕ್ಷೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯನ್ನು ಸರಿಯಾಗಿ ತಿಳಿದುಕೊಂಡೇ ಪರೀಕ್ಷೆಗೆ ಸಿದ್ಧತೆ ನಡೆಸುವುದು ಅವಶ್ಯ.

ಪರೀಕ್ಷೆ ಹೇಗಿರುತ್ತದೆ?
ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಬೀದರ್‌, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.

ಪೂರ್ವಭಾವಿ ಪರೀಕ್ಷೆಯನ್ನು ಡಿಸೆಂಬರ್‌ 17, 18,19,20 ರಂದು ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬೇಕು.

ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು, (ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ ) ಇದರಲ್ಲಿ ಇಂಗ್ಲಿಷ್‌ ಲಾಂಗ್ವೇಜ್‌ಗೆ 30, ನ್ಯೂಮರಿಕಲ್ ಎಬಿಲಿಟಿಯ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿಲ್ಲ. ಆದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.

ಪರೀಕ್ಷೆ ಹೀಗಿರುತ್ತದೆ

  1. English Language- 30 ಅಂಕ- 20 ನಿಮಿಷ
  2. Quantitative Aptitude 35 ಅಂಕ- 20 ನಿಮಿಷ
  3. Reasoning Ability 35 ಅಂಕ 20 ನಿಮಿಷ
    ಒಟ್ಟು 100 ಅಂಕ, ಸಮಯ 1 ಗಂಟೆ

ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಅಂದರೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಪಡೆದ ಅಂಕಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

ಈಗಾಗಲೇ ತಿಳಿಸಿದಂತೆ ಮುಖ್ಯ ಪರೀಕ್ಷೆಯು ಬೆಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈಲ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಮುಖ್ಯ ಪರೀಕ್ಷೆಯ ಮೊದಲ ಪರೀಕ್ಷೆಯು ಮೂರು ಗಂಟೆಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು 200 ಅಂಕಗಳಿಗೆ ಕೇಳಲಾಗಿರುತ್ತದೆ.

ಮುಖ್ಯ ಪರೀಕ್ಷೆ ಹೀಗಿರುತ್ತದೆ
I. Reasoning & Computer Aptitude 40 ಪ್ರಶ್ನೆ 50 ಅಂಕಗಳು 50 ನಿಮಿಷಗಳು,
II Data Analysis & Interpretation 30 ಪ್ರಶ್ನೆ 50 ಅಂಕಗಳು 45 ನಿಮಿಷಗಳು,
III General/ Economy/ Banking Awareness 50 ಪ್ರಶ್ನೆ 60 ಅಂಕಗಳು 45 ನಿಮಿಷಗಳು,
IV English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,

ಗಮನಿಸಿ: ಈ ಹಿಂದಿನಂತೆ ಇದ್ದ ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಸಲ General/ Economy/ Banking Awareness ನಲ್ಲಿ ಪ್ರಶ್ನೆ ಗಳ ಸಂಖ್ಯೆ ಹಾಗೂ ಅಂಕಗಳನ್ನು ಹೆಚ್ಚಿಸಲಾಗಿದೆ. ರೀಸನಿಂಗ್ ಮತ್ತು ಡಾಟಾ ಇಂಟ್ರಪೀಟೇಷನ್ ವಿಭಾಗದಲ್ಲಿ ಪ್ರಶ್ನೆಗಳ ಸಂಖ್ಯೆ ಹಾಗೂ ಅಂಕಗಳನ್ನು ಕಡಿಮೆಮಾಡಲಾಗಿದೆ.

ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು 180 ನಿಮಿಷ ಸಮಯ ನಿಗದಿಪಡಿಸಲಾಗಿದೆ. ಈ ಪರೀಕ್ಷೆಯು ಮುಗಿಯುತ್ತಿದ್ದಂತೆಯೇ ಡಿಸ್ಟ್ರಿಕ್ಟಿವ್‌ (Descriptive) ಟೆಸ್ಟ್ ಅಂದರೆ ವಿವರಣಾತ್ಮಕ ಪರೀಕ್ಷೆಯನ್ನು ಇಂಗ್ಲಿಷ್‌ ಭಾಷೆಗೆ ಸಂಬಂಧಿಸಿದಂತೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ (Letter Writing & Essay- with two questions) 50 ಅಂಕ ನಿಗದಿಪಡಿಸಲಾಗಿರುತ್ತದೆ. ಈ ಪರೀಕ್ಷೆ ಬರೆಯಲು 30 ನಿಮಿಷಗಳು.

ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು. ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಈ ಮುಖ್ಯ ಪರೀಕ್ಷೆಯು ಮುಂದಿನ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿದೆ. ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಇರುತ್ತವೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಕಳೆಯಲಾಗುತ್ತದೆ.

ಎಸ್ ಬಿಐ ತನ್ನ ಜ್ಯೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಎರಡೂ ಹಂತಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು. ಆದರೆ ಅದಿಕಾರಿ ಹುದ್ದೆಗಳಿಗೆ ಅವಕಾಶವಿಲ್ಲ ಎಂಬುದನ್ನು ಮರೆಯಬೇಡಿ.

ಸೈಕೋಮೆಟ್ರಿಕ್ ಪರೀಕ್ಷೆ
ಇದೇ ಮೊದಲ ಬಾರಿಗೆ ಪಿಒ ನೇಮಕದಲ್ಲಿ ಸೈಕೋ ಮೆಟ್ರಿಕ್ ಪರೀಕ್ಷೆಯನ್ನು ಸಂದರ್ಶನಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಪರಿಶೀಲಿಸಲು ಎಸ್‌ಬಿಐ ಬ್ಯಾಂಕ್ ಈ ಸೈಕೋಮೆಟ್ರಿಕ್ ಪರೀಕ್ಷೆ ನಡೆಸುತ್ತಿದೆ. ಸಮಾಜದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ದೃಷ್ಟಿಕೋನವನ್ನು ಪರಿಶೀಲನೆ ಮಾಡುವುದು ಇದರ ಉದ್ದೇಶ. ಹಂತ-III ಕ್ಕೆ ಶಾರ್ಟ್‌ ಲಿಸ್ಟ್‌ ಅಭ್ಯರ್ಥಿಗಳನ್ನು ಸೈಕೊಮೆಟ್ರಿಕ್ ಪರೀಕ್ಷೆಯ ಮೂಲಕ ಆರಿಸಿ ತದನಂತರದಲ್ಲಿ ಸಂದರ್ಶನಕ್ಕೆ ಆಯ್ಕೆ ಮಾಡುತ್ತಾರೆ.

ಸೈಕೊ ಮೆಟ್ರಿಕ್ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆ 2023ರ ಫೆಬ್ರವರಿ /ಮಾರ್ಚ್ ನಲ್ಲಿ ನಡೆಯಲಿದೆ. ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಸಂದರ್ಶನ (30 ಅಂಕಗಳು) ಮತ್ತು ಗುಂಪು ಚರ್ಚೆ (20 ಅಂಕಗಳು) ನಡೆಸಲಾಗುತ್ತದೆ. ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(Non-Creamy layer) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿಕೊಂಡಿರುವ ಆದರೆ (Non-Creamy layer)’ಕೆನೆರಹಿತ ಪದರ’ ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. EWS ಎಂದು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅಂತವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ಆಯ್ಕೆ ಪಟ್ಟಿ ಹೇಗೆ?
ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಮತ್ತು ಹಂತ- III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ.

ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (250 ಅಂಕಗಳಲ್ಲಿ) ಅದರೆ ಶೇ. 75 ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3 ರಲ್ಲಿ ಪಡೆದ ಅಂಕಗಳನ್ನು (50 ಅಂಕಗಳಲ್ಲಿ) ಅದರ ಶೇ. 25 ಅಂಕಗಳನ್ನು ಸೇರಿಸಿ( ಶೇ.100ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.
ಗಮನಿಸಿ: ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲಷ್ಟೇ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆನ್ಲೈನ್ ​​ಮೂಲಕ ಮೂಲಭೂತ ಬ್ಯಾಂಕಿಂಗ್ ಜ್ಞಾನವನ್ನು ಒದಗಿಸಲಾಗುತ್ತದೆ. ಪ್ರೊಬೆಷನರಿ ಆಫೀಸರ್ ಆಗಿ ನೇಮಕವಾದವರು ಮೊದಲಿಗೆ 2 ವರ್ಷ ಪ್ರೊಬೆಷನರಿ ಪಿರಿಯಡ್‌ನಲ್ಲಿ ವಿವಿಧ ತರಬೇತಿ ನೀಡಲಾಗುತ್ತದೆ. ಬ್ಯಾಂಕ್ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿರಂತರ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಬ್ಯಾಂಕಿನ ಅಸ್ತಿತ್ವದಲ್ಲಿರುವ ನೀತಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕಾಲಕಾಲಕ್ಕೆ ಬ್ಯಾಂಕ್ ನಿರ್ಧರಿಸಿದ ಮಾನದಂಡಗಳ ಪ್ರಕಾರ ಮೌಲ್ಯಮಾಪನವನ್ನು ದೃಢೀಕರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್ ಸೇರುವ ಮೊದಲು, 2.00 ಲಕ್ಷ ಮೌಲ್ಯಕ್ಕೆ ಬಾಂಡ್ ಅನ್ನು (ಎರಡು ಲಕ್ಷ ಮಾತ್ರ) ಬ್ಯಾಂಕ್ ಗೆ ಕನಿಷ್ಠ ಮೂರು ವರ್ಷಗಳ ಅವಧಿಗೆ ನೀಡಬೇಕು. ಅಭ್ಯರ್ಥಿಯು ಮೂರು ವರ್ಷಗಳ ಅವಧಿ ಮುಗಿಯುವ ಮೊದಲು ಬ್ಯಾಂಕ್ ಸೇವೆಗೆ ರಾಜೀನಾಮೆ ನೀಡಿದರೆ ಹಣ ಹಿಂತಿರುಗಿಸಲಾಗುವುದಿಲ್ಲ.

ಈ ಪರೀಕ್ಷೆ ಕುರಿತ ಮಾಹಿತಿಗಾಗಿ ನೋಡಬೇಕಾದ ವೆಬ್‌ಸೈಟ್‌: https://sbi.co.in/web/careers/current-openings

ಇದನ್ನೂ ಓದಿ | KPSC Recruitment 2022 | ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಲೇಖಕರ ಪರಿಚಯ: ಬ್ಯಾಂಕ್‌ನ ನಿವೃತ್ತ ಅದಿಕಾರಿಯಾಗಿರುವ ಆರ್‌ ಕೆ ಬಾಲಚಂದ್ರ ಅವರು ಕಳೆದ 38 ವರ್ಷಗಳಿಂದ ವಿವಿಧ ಬ್ಯಾಂಕ್‌ ನೇಮಕಾತಿ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳನ್ನು ಅದರಲ್ಲೂ ಕನ್ನಡ ಮೀಡಿಯಂನಲ್ಲಿ ಓದಿದ, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬಂದಿದ್ದಾರೆ. ಇದುವರೆಗೂ ಒಟ್ಟಾರೆ 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಇವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದು, ಇವರಲ್ಲಿ ಸಾವಿರಾರು ಅಭ್ಯರ್ಥಿಗಳು ಬ್ಯಾಂಕುಗಳಲ್ಲಿಯೇ ಉದ್ಯೋಗ ಪಡೆದುಕೊಂಡಿದ್ದಾರೆ. ಸುಮಾರು 45 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಸರಕಾರಿ/ಅರೆಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲು ತಮ್ಮ ಬಿಡುವಿನ ವೇಳೆಯನ್ನು ಬಳಸಿಕೊಳ್ಳುತ್ತಾ ಬಂದಿರುವ ಇವರು ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ 3,84೮ ತರಬೇತಿ ಕಾರ್ಯಗಾರ ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶಿಯಾಗಿಯೂ ಚಿರಪರಿಚಿತರಾಗಿದ್ದಾರೆ.

Exit mobile version