- ಎನ್. ರವಿ ಶಂಕರ್
ಪ್ರಕರಣದ ಸತ್ಯಾಸತ್ಯತೆಗಳು ಏನೇ ಇದ್ದರೂ, ಬಲಾಢ್ಯರು ದುರ್ಬಲರ ಮೇಲೆ ಎಸಗಬಹುದಾದ ಲೈಂಗಿಕ ದೌರ್ಜನ್ಯದ ಬಗೆಗಿನ ಚರ್ಚೆಯಂತೂ ಮುನ್ನೆಲೆಗೆ ಬಂದಿದೆ. ನಿಮಗೆಲ್ಲರಿಗೂ ಗೊತ್ತೇ ಇರುವ ಈ ಹೊತ್ತಿನ ವಿದ್ಯಮಾನಗಳು, ಹತ್ತು ವರ್ಷಗಳ ಕೆಳಗೆ ನಡೆದ ಘಟನೆಯೊಂದನ್ನು ನೆನಪಿಗೆ ತಂದವು…
ಅದು, ಬೆಂಗಳೂರಿನ ಶ್ರೀಮಂತ ಬಡಾವಣೆಯೊಂದರಲ್ಲಿ ಇರುವ ಜಾಹೀರಾತು ಮತ್ತು ಜನಸಂಪರ್ಕ ಕೌಶಲವನ್ನು ಕಲಿಸುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆ. ದೇಶದ ವಿವಿಧ ಭಾಗಗಳಿಂದ ಬರುವ ಯುವಕ ಯುವತಿಯರು, ಕಮ್ಯೂನಿಕೇಷನ್ / ಸಂವಹನ ಕಲೆಯಲ್ಲಿ ತಮ್ಮ ಮಾಸ್ಟರ್ಸ್ ಪದವಿಗಾಗಿ ಇಲ್ಲಿ ಶ್ರದ್ಧೆಯಿಂದ ಕಲಿಯುತ್ತಾರೆ. ಅವರ ಈ ಎರಡು ವರ್ಷದ ಕಲಿಕೆಯ ಪರಿಸಮಾಪ್ತಿಗೆ ಮುಖ್ಯವಾದ ಪರೀಕ್ಷೆಗಳಲ್ಲೊಂದು ಈ ರೀತಿಯಾಗಿತ್ತು. ತಮಗೆ ಕೊಡಲಾದ ವಾಣಿಜ್ಯ / ಸಾಮಾಜಿಕ ವಿಷಯವೊಂದರ ಬಗ್ಗೆ ವಿವರವಾದ ಮತ್ತು ವಿಸ್ತಾರವಾದ ಜಾಹೀರಾತು ಅಭಿಯಾನವನ್ನು ಸೃಷ್ಟಿಸಬೇಕು, ಮತ್ತು ಅದನ್ನು ತೀರ್ಪುಗಾರರ ಮುಂದೆ ಅರ್ಧಗಂಟೆಯ ಕಾಲ ಸವಿವರವಾಗಿ ಪ್ರದರ್ಶಿಸಬೇಕು. ಅದರ ಆಧಾರದ ಮೇಲೆ ಅವರಿಗೆ ಅಂಕಗಳನ್ನು ನೀಡಲಾಗುವುದು, ಮತ್ತು ಒಂದರ್ಥದಲ್ಲಿ ಅವರ ವೃತ್ತಿಭವಿಷ್ಯ ನಿರ್ಧಾರವಾಗುವುದು.
ಈ ಪರೀಕ್ಷೆಗೆ ನನ್ನನ್ನೂ ಸೇರಿದಂತೆ ಜಾಹೀರಾತು ಮತ್ತು ಸಂವಹನ ಕ್ಷೇತ್ರದಲ್ಲಿ ಅನುಭವವಿರುವ ಇನ್ನೂ ಕೆಲವರನ್ನು ತೀರ್ಪುಗಾರರನ್ನಾಗಿ ಕರೆಯಲಾಗಿತ್ತು. ಹೊಸ ಹುರುಪುಳ್ಳ ಸಂವಹನ ಕ್ಷೇತ್ರದ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯಲು, ಅವರೊಂದಿಗೆ ಅದೂ-ಇದೂ ಚರ್ಚಿಸಿ ಅವರ ಮನದಾಳಕ್ಕಿಳಿಯಲು ಒಳ್ಳೆಯ ಅವಕಾಶ ಎಂದುಕೊಂಡು ಉತ್ಸಾಹದಲ್ಲಿದ ನಮಗೆ ಆ ದಿನ ದೊಡ್ಡ ಆಘಾತವೇ ಕಾದಿತ್ತು!
ಒಟ್ಟು ಏಳೆಂಟು ತಂಡಗಳಿದ್ದ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಂಡಗಳು ಅನೇಕ ವಿಷಯಗಳ ಬಗ್ಗೆ ತಮ್ಮ ಜಾಹೀರಾತು ಅಭಿಯಾನಗಳನ್ನು ಮಂಡಿಸಿದರು. ‘ರಿಯಲ್ ಮೆನ್ ಡೋಂಟ್ ರೇಪ್’ / ‘ನಿಜವಾದ ಗಂಡಸರು ಅತ್ಯಾಚಾರ ಎಸಗುವುದಿಲ್ಲ’ ಎನ್ನುವುದು ಸ್ಪರ್ಧೆಯಲ್ಲಿದ್ದ ಒಂದು ತಂಡಕ್ಕೆ ಕೊಡಲಾದ ವಿಷಯವಾಗಿತ್ತು. ಬಹುಪಾಲು ಹುಡುಗಿಯರೇ ಇದ್ದ ಆ ತಂಡ, ತನ್ನ ವಿಷಯ ಮಂಡನೆಯನ್ನು ಚೆನ್ನಾಗಿಯೇ ಆರಂಭಿಸಿತು. ದೇಶ ಈಗಿರುವ ಪರಿಸ್ಥಿತಿಯಲ್ಲಿ ಹೆಂಗಸರಿಗಿಂತಲೂ ಗಂಡಸರಲ್ಲಿ ಲೈಂಗಿಕ ಶೋಷಣೆಯ ವಿಷಯದಲ್ಲಿ ಜಾಗೃತಿ ಮೂಡಿಸಿದರೆ ಇಂತಹ ಪ್ರಕರಣಗಳು ಕಡಿಮೆಯಾಗಬಹುದು; ಅವರ ‘ಪೌರುಷ’ದ ಬಗೆಗಿನ ಪರಿಕಲ್ಪನೆಯನ್ನು ಬದಲಿಸಿ, ಅವರ ಮನಃಪರಿವರ್ತನೆ ಮಾಡಬೇಕಾದ ಅವಶ್ಯಕತೆಯನ್ನು ಆ ತಂಡ ಸಮರ್ಪಕವಾಗಿ ನಿರೂಪಿಸುತ್ತಿತ್ತು.
ವಿಷಯ ಮಂಡನೆಯ ಅಂತಿಮ ಘಟ್ಟವಾಗಿ ಸೃಜನಶೀಲವಾದ ಟಿವಿ / ನ್ಯೂಸ್ ಪೇಪರ್ ಜಾಹೀರಾತೊಂದನ್ನು ತಂಡ ಸೃಷ್ಟಿಸಿ ತೋರಿಸಬೇಕು. ಟಾರ್ಗೆಟ್ ಆಡಿಯನ್ಸ್ / ಯಾರನ್ನು ಉದ್ದೇಶಿಸಿ ಈ ಜಾಹೀರಾತು ಮಾಡಲಾಗುತ್ತಿದೆ ಎನ್ನುವುದನ್ನು ಮೊದಲೇ ತಿಳಿಸಬೇಕು. ಈ ತಂಡ ತನ್ನ ಅಭಿಯಾನದ ಮೂಲ ಗುರಿಯಾದ ಶ್ರೋತೃಗಳು ಯಾರು ಎನ್ನುವುದನ್ನು ಹೇಳಿದಾಗಲೇ ಆಘಾತವಾದದ್ದು!
ತಂಡದ ನಾಯಕಿಯಾದ ಇಪ್ಪತ್ತೆರಡರ ಸುಮಾರಿನ ವಿದ್ಯಾರ್ಥಿನಿ ಕೋಪದ ಧ್ವನಿಯಲ್ಲಿ ಹೇಳಿದಳು – ಹದಿನಾರು ವರ್ಷ ಮೀರಿರುವ ಪ್ರತಿಯೊಬ್ಬ ಗಂಡಸೂ ಒಬ್ಬ ಪೊಟೆನ್‍ಷಿಯಲ್ ರೇಪಿಸ್ಟ್ / ಅತ್ಯಾಚಾರಿಯಾಗುವ ಸಾಧ್ಯತೆಯುಳ್ಳವ. ಆದುದರಿಂದ, ‘ರಿಯಲ್ ಮೆನ್ ಡೋಂಟ್ ರೇಪ್’ ಎನ್ನುವ ಈ ಅಭಿಯಾನಕ್ಕೆ ಹದಿನಾರು ವರ್ಷಕ್ಕೆ ಮೇಲ್ಪಟ್ಟ ನಮ್ಮ ದೇಶದ ಎಲ್ಲ ಗಂಡಸರೂ ಶ್ರೋತೃಗಳು ಎಂದು ಪರಿಗಣಿಸಿದ್ದೇವೆ!
ತೀರ್ಪುಗಾರರೆಲ್ಲರೂ ಅವಾಕ್ಕಾದರು! ಅಲ್ಲಿ ನೆರೆದಿದ್ದ ಆಕೆಯ ಸಹಪಾಠಿಗಳು ಮಾತ್ರ, ಯಾವುದೇ ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೆ, ಸುಮ್ಮನೆಯೇ ಇರುವಂತಿತ್ತು. ಅವರ ಸಹಜ ಮೌನ ಮತ್ತು ಇದರಲ್ಲಿ ಹೌಹಾರಲು ಏನಿದೆ ಎನ್ನುವ ಅಭಿವ್ಯಕ್ತಿ, ಈ ತಂಡದ ನಿಲುವನ್ನು ಸಮರ್ಥಿಸುವಂತಿತ್ತು!
ಆ ತಂಡದ ವಿಷಯ ಮಂಡನೆ ಮುಗಿದ ಮೇಲೆ, ತೀರ್ಪುಗಾರರಾದ ನಾವು, ಗಂಡಸರೆಲ್ಲರನ್ನೂ ಸಾರಾಸಗಟಾಗಿ ‘ಪೊಟೆನ್‍ಷಿಯಲ್ ರೇಪಿಸ್ಟ್ಸ್’ ಎಂದು ಕರೆದ ಆ ತಂಡದ ಆಕ್ರಮಣಾತ್ಮಕ ನಿಲುವನ್ನು ಪ್ರಶ್ನಿಸಿದೆವು. ಆರೇಳು ಜನರಿದ್ದ ತಂಡ ಒಕ್ಕೊರಲಿನಿಂದ ಪ್ರತಿಕ್ರಿಯಿಸಿತು. ತನ್ನ ನಿಲುವನ್ನು ದೃಢವಾಗಿ ಸಮರ್ಥಿಸಿಕೊಳ್ಳಲು ಯತ್ನಿಸಿತು. ಹಾಗೆ ಸಮರ್ಥಿಸಿಕೊಳ್ಳುವಾಗ ಅವರು ಹೇಳಿದ ಕೆಲವು ಮಾತುಗಳು –‘ಹೌದು ಮತ್ತೆ! ಕೆಲವು ಗಂಡಸರು ಅವಕಾಶ ಸಿಗದೆ ಇರುವುದರಿಂದ ಸುಮ್ಮನಿದ್ದಾರೆ ಅಷ್ಟೆ…’, ‘ರೇಪ್ ಎನ್ನುವುದು ಕೇವಲ ದೈಹಿಕ ದೌರ್ಜನ್ಯವಲ್ಲ. ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವ ಸಾವಿರಾರು ಗಂಡಸರನ್ನು ನಾವು ನೋಡಿದ್ದೇವೆ. ನಮ್ಮ ಮಟ್ಟಿಗೆ, ಅವರು ತಮ್ಮ ಮನಸ್ಸಿನಲ್ಲಿ ನಮ್ಮನ್ನು ಭೋಗಿಸಿದರೆ, ಅದೂ ಅತ್ಯಾಚಾರವೇ…’, ‘ನೀವೇ ಮಾಧ್ಯಮಗಳಲ್ಲಿ ನೋಡುತ್ತಿದ್ದೀರಲ್ಲ. ಅತ್ಯಂತ ಸಭ್ಯರೆನಿಸಿಕೊಂಡವರೆಲ್ಲ ಈಗ ಬಣ್ಣ ಬಯಲಾಗಿ ಜೈಲಿಗೆ ಹೋಗುತ್ತಿದ್ದಾರೆ. ಹೀಗಿರುವಾಗ, ನಮ್ಮ ಟಾರ್ಗೆಟ್ ಆಡಿಯನ್ಸ್ ಯಾರು ಎಂದು ವಿಂಗಡಿಸಿಕೊಳ್ಳುವುದಾದರೂ ಹೇಗೆ? ಪಟ್ಟಣದವರು, ಹಳ್ಳಿಯವರು, ಓದಿದವರು, ಅವಿದ್ಯಾವಂತರು, ನವಯುವಕರು, ಅಪರವಯಸ್ಕರು –ಎಲ್ಲರೂ ಒಂದಿಲ್ಲೊಂದು ಲೈಂಗಿಕ ಶೋಷಣೆಯ ಪ್ರಕರಣಗಳಲ್ಲಿ ಭಾಗಿಯಾಗಿರುವಾಗ, ಎಲ್ಲರನ್ನೂ ಸಂಭಾವ್ಯ ಅತ್ಯಾಚಾರಿಗಳು ಎಂದು ಪರಿಗಣಿಸದೆ ವಿಧಿಯಿಲ್ಲ’, ‘ದೆಹಲಿಯ ಪ್ರಕರಣದಲ್ಲಿ ಭಾಗಿಯಾದ ಆ ಹದಿನಾರರ ಹುಡುಗನನ್ನು ನೋಡಿ; ಸಭ್ಯಸ್ಥರ ಸೋಗಿನಲ್ಲಿ ಹೆಣ್ಣುಮಕ್ಕಳನ್ನು ಶೋಷಣೆಗೊಳಪಡಿಸಿದ ತೇಜ್‍ಪಾಲ್, ಜಸ್ಟಿಸ್ ಗಂಗೂಲಿ ಮೊದಲಾದವರ ಉದಾಹರಣೆಗಳನ್ನು ನೋಡಿ’, ‘ಹೊರಗೆ ಬರುತ್ತಿರುವ ಪ್ರಕರಣಗಳು ಇಷ್ಟಾದರೆ, ಒಳಗೆ ಇನ್ನೆಷ್ಟು ನಡೆಯುತ್ತಿರಬೇಕು’.
ಇವರ ಮಾತುಗಳನ್ನು ಅನುಮೋದಿಸುವಂತೆ ದೇಶದ ವಿವಿಧ ಭಾಗಗಳ ಪ್ರತಿನಿಧಿಗಳಂತಿದ್ದ ಆ ವಿದ್ಯಾರ್ಥಿ ಸಮೂಹ ಚಪ್ಪಾಳೆ ತಟ್ಟಲಾರಂಭಿಸಿತು. ಇದು, ಪರೀಕ್ಷೆಯಾಗಿಯಾಗಲೀ, ಅಂಕಗಳಿಗಾಗಿನ ಸ್ಫರ್ಧೆಯಾಗಿಯಾಗಲೀ ಉಳಿದಿರಲಿಲ್ಲ. ಇದು, ತಮ್ಮ ನಂಬಿಕೆಗಳ ಸತ್ವಪರೀಕ್ಷೆ ಎಂದೇ ಆ ತಂಡ ಮತ್ತು ಅಲ್ಲಿನ ವಿದ್ಯಾಥಿಗಳೆಲ್ಲರೂ ಪರಿಭಾವಿಸಿದಂತಿತ್ತು.
ಹೇಗೋ ಸವಾರಿಸಿಕೊಂಡು, ನಮ್ಮಲ್ಲೊಬ್ಬ ತೀರ್ಪುಗಾರರು ‘But, is it not unfair to paint everyone with the same brush?’ / ‘ಎಲ್ಲರದ್ದೂ ಇಷ್ಟೇ ಯೋಗ್ಯತೆ ಎಂದು ಸಾರಾಸಗಟಾಗಿ ಹೇಳಿಬಿಡುವುದು ಯಾವ ನ್ಯಾಯ?’. ಆ ತಂಡದ ವಿದ್ಯಾರ್ಥಿನಿಯೊಬ್ಬರು ತೀರ್ಪುಗಾರರನ್ನು ಎದುರು ಹಾಕಿಕೊಂಡರೆ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಗುವ ಸಾಧ್ಯತೆಯನ್ನೂ ಲೆಕ್ಕಿಸದೆ ಪ್ರತಿಪ್ರಶ್ನೆ ಕೇಳಿದರು – ‘Then, you tell us how to segment a potential rapist from others!’ / ‘ಹಾಗಾದರೆ ಸಂಭವ್ಯ ಅತ್ಯಾಚಾರಿಗಳಿಂದ ಇತರರನ್ನು ಬೇರ್ಪಡಿಸುವುದು ಹೇಗೆ ಎನ್ನುವುದನ್ನು ನೀವೇ ಹೇಳಿಕೊಡಿ’.
ತೀರ್ಪುಗಾರರ ಬಳಿ ಇದಕ್ಕೆ ತಕ್ಕನಾದ ಉತ್ತರ ಇರಲಿಲ್ಲ. ಯಾವುದೇ ಸಾಮಾಜಿಕ, ಆರ್ಥಿಕ, ಭೌಗೋಳಿಕ, ಸಾಂಸ್ಕೃತಿಕ ಮಾನದಂಡಗಳನ್ನು ಬಳಸಿದರೂ, ಇವರ ಅಭಿಯಾನಕ್ಕೆ ಒಳಪಡಬೇಕಾದ ಗಂಡಸರು ಯಾರು, ಹೊರತಾಗಬೇಕಾದ ಗಂಡಸರು ಯಾರು ಎನ್ನುವುದನ್ನು ಜರಡಿ ಹಿಡಿಯಲು ಸಾಧ್ಯವಿರಲಿಲ್ಲ.
ಆ ಹುಡುಗಿ ಹೇಳಿದ ಮಾತು, ಅದರಲ್ಲಿ ಆಕೆಗೂ ಆಕೆಯ ತಂಡಕ್ಕೂ ಇದ್ದ ನಂಬಿಕೆ – ಅಚಲವೂ, ಅವರ ಮಟ್ಟಿಗೆ ಚರ್ಚಾತೀತವೂ ಆಗಿತ್ತು. ಇಲ್ಲಿ, ಅವರು ಕೇವಲ ವಾದ ಸಲುವಾಗಿ ವಾದ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅವರದ್ದು ನಕಾರಾತ್ಮಕ ಧೋರಣೆ, ಕೆಲವರ ತಪ್ಪಿಗೆ ಎಲ್ಲರನ್ನೂ ಕೆಟ್ಟವರನ್ನಾಗಿಸುವುದು ಸರಿ ಅಲ್ಲ ಎಂದು ನಮ್ಮನ್ನು ನಾವು ಪರಿಸ್ಥಿತಿಯಿಂದ ಹೊರತಾಗಿಸಿಕೊಂಡುಬಿಡಬಹುದು. ಆದರೆ, ಅದರಿಂದ ಪರಿಸ್ಥಿತಿ ಬದಲಾಗುವುದಿಲ್ಲ! ತಮ್ಮ ಸುತ್ತಲಿನ ಪ್ರಪಂಚದ ಬಗೆಗಿನ ಈ ಯುವ ವಿದ್ಯಾರ್ಥಿಗಳ ಗ್ರಹಿಕೆ ನಕಾರಾತ್ಮಕವಾಗಿಯೇ ಉಳಿಯುತ್ತದೆ ಎನಿಸುವ ಸತ್ಯ ಕಣ್ಣಿಗೆ ರಾಚುತ್ತಿತ್ತು.
ಸಂವಹನಶಾಸ್ತ್ರದಲ್ಲಿ ಒಂದು ಬಲವಾದ ತತ್ವವಿದೆ – Perception is reality / ಗ್ರಹಿಕೆಯೇ ಸತ್ಯ. ನಿಜಕ್ಕೂ ಪರಿಸ್ಥಿತಿ ಏನಿದೆ ಎನ್ನುವುದಕ್ಕಿಂತಲೂ ಪರಿಸ್ಥಿತಿಯನ್ನು ಹೇಗೆ ಗ್ರಹಿಸಲಾಗಿದೆ ಎನ್ನುವುದೇ ಅಂತಿಮ ಸತ್ಯ. ಹಾಗಾಗಿ, ಈ ವಿದ್ಯಾರ್ಥಿಗಳೊಡನೆ ವಾದ ಹೂಡಿ, ಎಲ್ಲರೂ ಪೊಟೆನ್‍ಷಿಯಲ್ ರೇಪಿಸ್ಟ್‌ಗಳಲ್ಲ ಎನ್ನುವುದನ್ನು ಸಾಬೀತುಪಡಿಸಿದರೆ ಅದರಿಂದ ಏನೂ ಬದಲಾಗುವುದಿಲ್ಲ ಎನ್ನುವುದು ನಮಗೆ ಅರ್ಥವಾಯಿತು. ವಿಷಯವನ್ನು ಅಲ್ಲಿಗೇ ಬಿಟ್ಟು, ಅವರು ಸೃಷ್ಟಿಸಿದ್ದ ಅಭಿಯಾನವನ್ನು ನೋಡಿ, ಅಂಕ ಕೊಟ್ಟು, ಮುಂದುವರಿದೆವು.
ಈ ಪ್ರಕರಣದಿಂದ, ಇದಕ್ಕೂ ದೊಡ್ಡ ಜಿಜ್ಞಾಸೆಯೊಂದು ಮನಸ್ಸಿನಲ್ಲಿ ಮೂಡಿತು. ದೇಶದ ಯುವಜನರಲ್ಲಿ ಈಗ ಹೊರಬರುತ್ತಿರುವ ಲೈಂಗಿಕ ಪ್ರಕರಣಗಳಿಂದ ಮೂಡಿರುವ ಜಿಗುಪ್ಸೆಯ ಪ್ರತಿಬಿಂಬ ಇದಾದರೆ, ಇದನ್ನು ಹೋಗಲಾಡಿಸುವುದು ಹೇಗೆ? ಇದಕ್ಕೊಂದು ತಾರ್ಕಿಕವಾದ ಅಥವಾ ಸಕಾರಾತ್ಮಕ ಅಂತ್ಯ ಸಾಧ್ಯವೇ? ತಮ್ಮ ಭವಿಷ್ಯದ ಬಗ್ಗೆ ಅತ್ಯಂತ ಸಕಾರಾತ್ಮಕ ವಾಕ್ಯಗಳಲ್ಲಿ ಮಾತನಾಡುವ, ತಮ್ಮ ವೃತ್ತಿಜೀವನದ ಕನಸುಗಳು ಸಾಕಾರಗೊಳ್ಳುವ ಬಗ್ಗೆ ಭರವಸೆಯಿಂದ ವರ್ತಿಸುವ ಮತ್ತು ಅದಕ್ಕೆ ತಕ್ಕನಾಗಿ ಶ್ರಮಿಸುತ್ತಿರುವ ಈ ವಿದ್ಯಾರ್ಥಿಗಳು, ಈ ವಿಷಯದಲ್ಲಿ ಮಾತ್ರ ಅತ್ಯಂತ ನಕಾರಾತ್ಮಕವಾದ ನಿಲುವನ್ನು ತಳೆದಿದ್ದಾರೆ. ಆದರೆ, ತಮ್ಮ ಸುತ್ತಲೂ ಕೆಟ್ಟ ಸುದ್ದಿಯೇ ಕೇಳಿಬರುತ್ತಿರುವಾಗ, ಇವರ ನಿಲುವು ಮತ್ತು ಗ್ರಹಿಕೆಗಳು ಈಗಿರುವುದಕ್ಕಿಂತ ಭಿನ್ನವಾಗಿರಲು ಹೇಗೆ ಸಾಧ್ಯ? ಹಾಗಾಗಿಯೇ, ಎಲ್ಲರನ್ನೂ ಅನುಮಾನದಿಂದ ನೋಡುವುದೇ ಸುರಕ್ಷಿತವಾದ ವಿಧಾನ ಎನ್ನುವುದು ಅವರ ಧೋರಣೆಯಾಗಿದೆ.
ಈ ಘಟನೆಯ ಬಗ್ಗೆ ಯೋಚಿಸುತ್ತಿರುವಾಗ, ಬಹಳ ಹಿಂದೆ ನಡೆದಿದ್ದ ಮತ್ತೊಂದು ಘಟನೆ ನೆನಪಿಗೆ ಬಂತು. ಇಪ್ಪತ್ತು ವರ್ಷಗಳ ಹಿಂದೆ, ನಾನು ಮತ್ತು ನನ್ನ ‘debating partner’ ಆಗಿದ್ದ ಹುಡುಗಿ (ಈಗಲೂ ನನ್ನ ‘ಡಿಬೇಟಿಂಗ್ ಪಾರ್ಟ್‍ನರ್’ ಆಗಿಯೇ ಮುಂದುವರೆದಿರುವ ನನ್ನ ಪತ್ನಿ!) ಚರ್ಚಾಸ್ಪರ್ಧೆಯೊಂದರಲ್ಲಿ ಭಗವಹಿಸಲು ರೈಲಿನಲ್ಲಿ ಉತ್ತರ ಭಾರತಕ್ಕೆ ಹೋಗುತ್ತಿದ್ದೆವು. ಅದು ನಮ್ಮಿಬ್ಬರಿಗೂ ಉತ್ತರ ಭಾರತದ ಮೊದಲ ಅನುಭವ. ನಮ್ಮ ಬೋಗಿಯಲ್ಲಿ ಪುಂಡು ಹುಡುಗರ ಗುಂಪೊಂದು ನಮ್ಮೊಡನೆ ಸಲಿಗೆ ಬೆಳೆಸಲು ಯತ್ನಿಸುತ್ತಿತ್ತು. ನಮ್ಮ ಜೊತೆಗೆ ಪ್ರಯಾಣಿಸುತ್ತಿದ್ದ, ಆ ಪ್ರಾಂತ್ಯಕ್ಕೆ ಸೇರಿದ ನಿವೃತ್ತ ಪ್ರೋಫೆಸರ್ ಒಬ್ಬರು, ನಮಗೆ ಸೂಚ್ಯವಾಗಿ ಹೇಳಿದ್ದರು ‘Treat everyone to be a scoundrel, unless he proves himself otherwise.’ / ‘ತಾನು ನೀಚನಲ್ಲ ಎಂದು ಒಬ್ಬ ವ್ಯಕ್ತಿ ಸಾಬೀತು ಪಡಿಸುವವರೆಗೂ ನೀನು ಅವನನ್ನು ನೀಚನಂತೆಯೇ ಕಾಣು.’
ಆ ವೃದ್ಧರು ಹೇಳಿದ ಮಾತು ಮತ್ತು ಈ ಹುಡುಗಿಯರ ವಾದ ಒಂದೇ ಆಗಿತ್ತು. ಇಪ್ಪತ್ತು ವರ್ಷಗಳಲ್ಲಿ ಹೆಚ್ಚೇನೂ ಬದಲಾಗಿಲ್ಲ ಎನಿಸಿತು.
ಆದರೆ, ಮಾಹಿತಿ ಯುಗದಲ್ಲಿ, ಸಾಮಾಜಿಕ ಮತ್ತು ಸಮೂಹ ಮಾಧ್ಯಮಗಳ ದೆಸೆಯಿಂದಾಗಿ ಲೈಂಗಿಕ ಶೋಷಣೆಯ ಪ್ರಕರಣಗಳು ಹೆಚ್ಚು ಹೆಚ್ಚು ಹೊರಗೆ ಬರುತ್ತಿವೆ. ತಮ್ಮ ಮೇಲಾಗುತ್ತಿರುವ ಅನೇಕ ಸಣ್ಣ-ದೊಡ್ಡ ದೌರ್ಜನ್ಯಗಳನ್ನು ಪಟ್ಟಣದ ಹುಡುಗಿಯರು ಟ್ವಿಟರ್, ವಾಟ್ಸಾಪ್, ಫೇಸ್‍ಬುಕ್‍ನಂತಹ ಮಾಧ್ಯಮಗಳಲ್ಲಿ ಹಿಂಜರಿಕೆಯಿಲ್ಲದೆ ಹಂಚಿಕೊಳ್ಳುತ್ತಿದ್ದಾರೆ. ಸಮೂಹ ಮಾಧ್ಯಮಗಳಲ್ಲಿಯೂ ನಿರ್ಭಿಡೆಯಿಂದ ಮಾತನಾಡುತ್ತಿದ್ದಾರೆ. MeToo ನಂತಹ ಕ್ರಾಂತಿಕಾರಿ ಅಭಿಯಾನಗಳು ನಡೆದಿವೆ. ತಮ್ಮ ಅನುಭವದಿಂದ ಬೇರೆಯವರು ಕಲಿಯಲಿ ಮತ್ತು ಎಚ್ಚರದಿಂದಿರಲಿ ಎನ್ನುವುದು ಅವರ ಸದುದ್ದೇಶವಾಗಿದೆ.
ಏನೂ ಬದಲಾಗಿಲ್ಲವೆಂಬ ನಿರಾಶಾದಾಯಕ ಸಾರಾಂಶದ ನಡುವೆ ಇರುವ ಒಳ್ಳೆಯ ಸುದ್ದಿಯೆಂದರೆ ಇದೊಂದೇ. ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದಂತಹ ಸಮಸ್ಯೆಗಳು ಸಮಾಜದ ಕತ್ತಲಲ್ಲಿ ಹೂತುಹೋಗದೆ ಮೇಲ್ಪದರಕ್ಕೆ ಬರುತ್ತಿರುವುದು. ಇದು ಮನುಷ್ಯರಲ್ಲಿನ ವಿಕೃತಿಯನ್ನು ದಿಢೀರನೆ ಕಡಿಮೆ ಮಾಡುವುದಿಲ್ಲವದರೂ – ಬೇರೆಲ್ಲ ಅಪರಾಧಗಳ ವಿಷಯದಲ್ಲಾಗುವಂತೆ ಈ ಪಾರದರ್ಶಕತೆ ಲೈಂಗಿಕ ದೈರ್ಜನ್ಯದ ನಿಗ್ರಹದೆಡೆಗಿನ ಮೊದಲ ಹೆಜ್ಜೆಯಾಗಲಿ ಎನ್ನುವುದೇ ಸ್ವಸ್ಥ ಮತ್ತು ಸುರಕ್ಷಿತ ಸಮಾಜವನ್ನು ಬಯಸುವ ಎಲ್ಲರ ನಿರೀಕ್ಷೆ.
(ಲೇಖಕರು ಏಮ್ ಹೈ ಕನ್ಸಲ್ಟಿಂಗ್‌ನ ಸಿಇಒ ಮತ್ತು ಸಂವಹನ ಪರಿಣತರು. ಇಮೇಲ್: ravi@aimhighindia.com)