Site icon Vistara News

Sunday Read: ಹೊಸ ಪುಸ್ತಕ: ಸರಿಗನ್ನಡಂ ಗೆಲ್ಗೆ: ಸೊಗಸಿನ ಕನ್ನಡದ ಪರಿ, ಕುರಿತೋದಿದರೆ ಸರಿ!

sarigannada book

:: ಹರೀಶ್‌ ಕೇರ

ಅಪಾರ ಅವರ ʼಸರಿಗನ್ನಡಂ ಗೆಲ್ಗೆʼ ಕೃತಿಯ ಒಂದು ಪುಟ್ಟ ತುಣುಕು ಓದಿ:

ʼʼನೀರಲ್ಲಿ ಹೋಮ ಮಾಡಿದಂತಾಯ್ತು ಅಂತೀವಿ. ಬೆಂಕಿಯಲ್ಲಿ ಹೋಮ ಮಾಡಿದರೆ ಹೋಮದ್ರವ್ಯಗಳೆಲ್ಲಾ ಸುಟ್ಟು ದೇವತೆಗಳನ್ನು ತಲುಪುತ್ತವೆ. ಅದು ಬಿಟ್ಟು ನೀರಲ್ಲಿ ಮಾಡಿದರೆ ವ್ಯರ್ಥ ಅನ್ನುವುದು ಅದರ ಭಾವ. ಹೋಮ ಮಾಡುವ ವರ್ಗದ ಜನಕ್ಕೇನೋ ಇದು ಅರ್ಥ ಆಗುತ್ತೆ. ಆದರೆ ಉಳಿದವರಿಗೆ ಈ ಹೋಲಿಕೆ ಸ್ವಲ್ಪ ದೂರ ಅನ್ನಿಸಬಹುದು. ಅದಕ್ಕೇನೇ ʼಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ’ ಅನ್ನುವ ಇನ್ನೊಂದು ಮಾತಿದೆ. ಎರಡರ ಅರ್ಥವೂ ಒಂದೇ. ಹೀಗೆ ಸಂಸ್ಕೃತಿಗಳಲ್ಲಿರುವ ವ್ಯತ್ಯಾಸ ಭಾಷೆಯಲ್ಲೂ ಕಾಣಿಸುವುದು ವಿಶೇಷ. ಸಂಸ್ಕೃತಿ ಒಂದೇ ಅಲ್ಲ, ಆಹಾರಕ್ರಮ, ಪರಿಸರಗಳಿಗೆ ತಕ್ಕಂತೆ ಕೂಡ ಮಾತು ಬದಲಾಗುತ್ತೆ. ಉದಾಹರಣೆಗೆ ಬಂಗಾಲಿಗಳು ಹುಣಸೇ ಹಣ್ಣು ಬಳಸೋದೇ ಇಲ್ಲವಂತೆ. ಅವರ ಹತ್ತಿರ ಹೋಗಿ ಹೊಳೆಯಲ್ಲಿ ಹುಣಸೆ ತೊಳೆದ ಹಾಗೆ ಅಂದರೆ? ನಿಮ್ಮ ಮಾತು ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗೆ ವ್ಯರ್ಥ ಆಗುತ್ತಷ್ಟೇ!ʼʼ

ಈ ಪುಟ್ಟ ತುಣುಕಿನಲ್ಲಿ ಏನೆಲ್ಲ ಇದೆ ನೋಡಿ. ಕನ್ನಡದಲ್ಲಿ ಬಳಸುವ ಎರಡು ನಾಣ್ಣುಡಿಗಳ ವಿಶ್ಲೇಷಣೆ ಇದೆ. ಅವುಗಳ ಮೂಲ ಯಾವುದಿರಬಹುದು ಎಂಬ ಜಿಜ್ಞಾಸೆ ಇದೆ. ಮತ್ತು ಈ ಎರಡೂ ನಾಣ್ಣುಡಿಗಳನ್ನು ಯಾವ ಜನವರ್ಗಗಳಲ್ಲಿ ಬಳಸುತ್ತಾರೆ, ಅದಕ್ಕಿರುವ ಭಿನ್ನತೆ ಏನು ಎಂಬುದು ಇದೆ. ಬಂಗಾಲಿಗಳು ಹುಣಸೆ ಹಣ್ಣು ಬಳಸುವುದಿಲ್ಲ ಎಂಬ ಅಪರೂಪದ ವಿವರ ಕೂಡ ಇದೆ. ಕೊನೆಯಲ್ಲಿ ಐಸ್‌ಕ್ರೀಮ್‌ನ ಮೇಲಿರುವ ಚೆರ್ರಿ ಹಣ್ಣಿನಂತೆ ಒಂದು ವಿನೋದ ಕೂಡ ಇದೆ.

ʼತಪ್ಪಾಗೋದು ದೊಡ್ಡ ವಿಷಯ ಅಲ್ಲ, ತಿದ್ದಿಕೊಳ್ಳುವುದು ಸಣ್ಣ ವಿಷಯವೂ ಅಲ್ಲʼ ಎಂದು ಟ್ಯಾಗ್‌ಲೈನ್‌ನೊಂದಿಗೆ ಬಂದಿರುವ ಈ ಕೃತಿಯಲ್ಲಿ ಇಂಥ 600 ತುಣುಕುಗಳಿವೆ. ಎಲ್ಲವೂ ಭಾಷೆಗೆ ಸಂಬಂಧಿಸಿದವು. ಎಲ್ಲವೂ ಇದೇ ರೀತಿ ಕನ್ನಡದ ಮಾತಿನ ವೈಖರಿಯನ್ನು, ವ್ಯಾಕರಣವನ್ನು, ಭಾಷೆಯ ಬಳಕೆಯನ್ನು ಹಲವು ಮಗ್ಗುಲುಗಳಿಂದ ಸ್ಪರ್ಶಿಸುತ್ತವೆ. ಪದಗಳು, ನುಡಿಗಟ್ಟುಗಳು, ನಾಣ್ಣುಡಿಗಳ ಮೂಲ, ಅವುಗಳ ಸರಿಯಾದ ಬಳಕೆಯ ರೀತಿಗೆ ಒತ್ತು ಕೊಡುತ್ತದೆ. ʼಸರಿಯಾದ ಮಾತಿನ ಬಳಕೆʼ ಎಂಬುದೇ ಈ ಕೃತಿಯ ಮೂಲ ಸೂತ್ರ. ಟಿವಿ ವಾಹಿನಿಯಲ್ಲಿ ಮೊದಲ ಬಾರಿಗೆ ಇವುಗಳಲ್ಲಿ ಹಲವು ಪ್ರಸಾರವಾಗಿದ್ದವು ಎಂಬುದು ಇದರ ಬಳಕೆಯ ಗುಣದ ಕಡೆಗೇ ಹೆಚ್ಚು ಒತ್ತು ಕೊಡುವಂತಿದೆ.

ನಾವು ಮಾತಿನಲ್ಲಿಯೂ ಬರೆಯುವಾಗಲೂ ಅರಿಯದೇ ಹತ್ತೆಂಟು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇನ್ಯಾರೋ ಸೂಚಿಸಿದಾಗಲಷ್ಟೆ ನಮಗದು ಅರಿವಾಗುತ್ತದೆ. ಇಂಥ ಸಣ್ಣಪುಟ್ಟ ಪ್ರಮಾದಗಳನ್ನು ತಿದ್ದಿಕೊಳ್ಳಲು ಇದು ನೆರವಾಗುತ್ತದೆ. ನಿರಂತರ ಭಾಷೆಯ ಬಳಕೆ ಮಾಡುವವರಿಗೆ ಇದು ನೆರವಾಗುವ ಕೃತಿ. ಹಾಗೆಂದು ನಿಘಂಟಿನಂತೆ ಗಡುಚಾದ, ಅರ್ಥ ಹೇಳುವುದಕ್ಕೆ ಸೀಮಿತವಾದ ಕೃತಿಯಲ್ಲ.

ʼಅಡುಗೂಲಜ್ಜಿʼಯಲ್ಲಿ ಬರುವ ʼಅಡುʼ ಎಂಬುದಕ್ಕೂ ʼಅಡುಗೆʼಗೂ ಸಂಬಂಧವಿದೆ ಎಂಬುದು ನಿಮಗೆ ಗೊತ್ತೆ? ಮಹಾಭಾರತದ ದುರ್ಯೋಧನನ ವಜ್ರಕಾಯಕ್ಕೂ ಗ್ರೀಕ್‌ ಪುರಾಣದ ಅಖಿಲಸ್‌ನ ಹಿಮ್ಮಡಿಗೂ (ಅಖಿಲಸ್‌ ಹೀಲ್‌) ಏನು ಸಂಬಂಧ? ʼಕುಚಿಕು ಗೆಳೆಯರುʼ ಎಂಬುದರಲ್ಲಿ ʼಕುಚಿಕುʼಗೆ ಏನಾದರೂ ಅರ್ಥ ಇದೆಯಾ? ʼತಾರಮ್ಮಯ್ಯʼ ಯಾವಾಗ ಬಳಸುತ್ತಾರೆ ಮತ್ತು ಯಾಕೆ? ಸಕತ್‌, ಸಖತ್‌ ಪದಗಳನ್ನು ಬಳಸುವಾಗ ಅವುಗಳ ಹಿನ್ನೆಲೆಯೂ ತಿಳಿದುಕೊಂಡರೆ ಚಂದ. ಸೆಮಿಕೋಲನ್‌ ವಾಕ್ಯದಲ್ಲಿ ಬಳಸುವುದು ಹೇಗೆ, ಯಾವಾಗ? ಇಂಗ್ಲಿಷಿನ ʼನೀಟ್‌ʼ ಪದ ಕನ್ನಡದಲ್ಲೂ ಹಾಗೇ ಅದೇ ಅರ್ಥದಲ್ಲಿ ಸರ್ವಜ್ಞ ಮತ್ತಿತರ ಕವಿಗಳೂ ಪುರಾತನ ಕಾಲದಲ್ಲಿ ಬಳಸಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದಲ್ಲವೇ? ʼಪಂಚಾಂಗʼದಲ್ಲಿ ಬಳಸುವ ಪಂಚ ಅಂಗಗಳು ಯಾವುದು?

ಹೀಗೆ ಆಡುವ ಕನ್ನಡದ ಸ್ಪಷ್ಟ, ಸರಳ ಬಳಕೆಯ ಬಗ್ಗೆ ಮಾಹಿತಿಯನ್ನೂ ಮನರಂಜನೆಯನ್ನೂ ಏಕಕಾಲಕ್ಕೆ ಓದುವ ಸುಂದರ ಅನುಭೂತಿಯನ್ನೂ ಕೊಡುವ ಈ ಕೃತಿಯನ್ನು ಕನ್ನಡ ಭಾಷೆಯನ್ನು ಇಷ್ಟಪಡುವ ಎಲ್ಲರೂ ಓದಬಹುದು, ಓದಬೇಕು. ʼಕಲರ್ಸ್‌ ಕನ್ನಡʼ ವಾಹಿನಿಯಲ್ಲಿ ʼಕನ್ನಡತಿʼ ಧಾರಾವಾಹಿಯ ಕೊನೆಗೆ ಭುವನೇಶ್ವರಿಯ ಬಾಯಿಯಿಂದ ಇವುಗಳನ್ನು ನೀವು ಕೇಳಿರಬಹುದಾದರೂ, ಅವುಗಳನ್ನು ಮತ್ತೊಮ್ಮೆ ಓದಿ ಮನನ ಮಾಡಬಹುದು. ಅಲ್ಲಿ ಪ್ರಸಾರವಾಗಿರದ ಇನ್ನಷ್ಟು ಮಾಹಿತಿ ಕೂಡ ಇಲ್ಲಿದೆ. ಇಲ್ಲಿರುವ ಶಬ್ದಮೂಲಗಳ ಋಣವನ್ನು ಅಪಾರ ಅವರು ಪಾವೆಂ ಆಚಾರ್ಯ, ಜಿ ವೆಂಕಟಸುಬ್ಬಯ್ಯ ಮುಂತಾದ ಪೂರ್ವಸೂರಿಗಳ ಮೇಲೆ ಹೊರಿಸಿದ್ದಾರಾದರೂ, ವಿಷಯಗಳನ್ನು ಅವರು ನಿರೂಪಿಸಿದ ರೀತಿ ಹೆಚ್ಚು ಆಕರ್ಷಕವಾಗಿದೆ; ಹೈಸ್ಕೂಲ್‌ ಹುಡುಗನೂ ಆಸಕ್ತಿಯಿಂದ ಓದಿಕೊಂಡು ಹೋಗುವಂತಿದೆ. ಆದರೆ ಯಾವುದೇ ʼಶುದ್ಧತೆಯ ಪರಿಕಲ್ಪನೆʼ ʼಮಡಿವಂತಿಕೆʼಯನ್ನು ನಮ್ಮ ಮೇಲೆ ಹೇರುವುದಿಲ್ಲ. ಬಳಕೆ, ರೂಢಿ ಹೆಚ್ಚು ಮುಖ್ಯ; ಆದರೆ ಮೂಲದ ಸ್ಪಷ್ಟತೆಯೂ ಪೂರಕ ಎನ್ನುತ್ತದೆ.

ಭಾವನಾ, ವಿಜಯಕರ್ನಾಟಕ ಪತ್ರಿಕೆಗಳು, ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರಹಗಾರನಾಗಿ ದುಡಿದ ಹಿನ್ನೆಲೆ ಅಪಾರ ಅವರಿಂದ ಈ ಕೃತಿಯನ್ನು ಬರೆಸಿದೆ. ʼಮದ್ಯಸಾರʼ ಎಂಬ ಪುಟ್ಟ ಪುಸ್ತಕವನ್ನೂ ಬರೆದಿದ್ದಾರೆ. ʼಸರಿಗನ್ನಡಂ ಗೆಲ್ಗೆʼ ನೀವು ಭಾಷಾಪ್ರಿಯರಿಗೂ, ಮಕ್ಕಳಿಗೂ ಕೊಡಬಹುದಾದ ಅತ್ಯುತ್ತಮವಾದ ಗಿಫ್ಟ್ ಇದು.‌ ಛಂದ ಪುಸ್ತಕದ ವಸುಧೇಂದ್ರ ಇದನ್ನು ಚಂದವಾಗಿ ಪ್ರಕಟಿಸಿದ್ದಾರೆ. ಸ್ವತಃ ಚಿತ್ರಕಲಾವಿದರಾದ ಅಪಾರ ಕೃತಿಗೆ ಮುದ್ದಾದ ಮುಖಪುಟವನ್ನೂ ರಚಿಸಿದ್ದಾರೆ.

ಕೃತಿ: ಸರಿಗನ್ನಡಂ ಗೆಲ್ಗೆ
ಲೇಖಕ: ರಘು ಅಪಾರ
ಪ್ರಕಾಶನ: ಛಂದ ಪುಸ್ತಕ
ಬೆಲೆ: ರೂ.390

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಬರಗೂರು ರಾಮಚಂದ್ರಪ್ಪ ಅನುಭವ ಕಥನ: ಕಾಗೆ ಕಾರುಣ್ಯದ ಕಣ್ಣು

Exit mobile version