ಈ ಲೇಖನದ ಆಡಿಯೊ ಇಲ್ಲಿ ಕೇಳಿ:
ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ಗೆ ಬ್ರಿಟಿಷ್ ಸರ್ಕಾರ 50 ವರ್ಷಗಳ ‘ಕಾಲಾಪಾನಿ’ ಸೆರೆವಾಸ ಶಿಕ್ಷೆ ವಿಧಿಸಿದ ಸಂಗತಿ ನಮಗೆ ಗೊತ್ತು. 1911 ಜುಲೈ 4ರಂದು ಅವರನ್ನು ಬಂಧಿಸಿ ಅಂಡಮಾನ್ ಸೆಲ್ಯುಲರ್ ಜೈಲ್‌ಗೆ ಸಾಗಿಸಿದಾಗ, ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ಪ್ರಕಾರ, ಸಾವರ್ಕರ್ ಬಿಡುಗಡೆ 1961ರಲ್ಲಿ (ಅವರ ಸಾವಿಗೆ 5 ವರ್ಷ ಮೊದಲು-ಮರಣ: 29, ಫೆಬ್ರವರಿ 1966) ಆಗಬೇಕಿತ್ತು. ಆದರೆ ಬ್ರಿಟಿಷ್ ಆಳ್ವಿಕೆ ವಿರುದ್ಧ ಹೆಚ್ಚಿದ ತೀವ್ರ ಆಕ್ರೋಶ, ಒತ್ತಡದ ಪರಿಣಾಮವಾಗಿ ಸಾವರ್ಕರ್ ಅವರನ್ನು 1924ರಲ್ಲಿ ಬಿಡುಗಡೆ ಮಾಡಬೇಕಾಗಿ ಬಂತೆಂಬುದು ಇತಿಹಾಸದ ಸತ್ಯ.
ಆದರೆ ಇಲ್ಲೊಬ್ಬ ಅಜ್ಞಾತ ಸ್ವಾತಂತ್ರ್ಯ ಸೇನಾನಿ 50 ವರ್ಷಗಳ ಕಾಲ ಅಂಡಮಾನ್ ಸೆರೆಯಲ್ಲಿ ಕೊಳೆಯಬೇಕಾಗಿ ಬಂದ ಘಟನೆ ಬಹುಶಃ ಅನೇಕ ಇತಿಹಾಸಕಾರರ ಗಮನಕ್ಕೆ ಬಂದಿರಲಿಕ್ಕಿಲ್ಲ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬಂಧನಕ್ಕೊಳಗಾಗಿ ಅಂಡಮಾನ್ ಜೈಲಿಗೆ ಸ್ಥಳಾಂತರಿಸಲ್ಪಟ್ಟ ಆ ಸ್ವಾತಂತ್ರ್ಯ ಯೋಧನ ಬಿಡುಗಡೆಯಾಗಿದ್ದು 1907ರಲ್ಲಿ! ಬರೋಬ್ಬರಿ 50 ವರ್ಷಗಳ ಕಾಲ ಆತ ಜೈಲಿನಲ್ಲೇ ಇದ್ದ. 1857ರ ಸ್ವಾತಂತ್ರ್ಯ ಸಮರದಲ್ಲಿ ಬಂಧಿಸಲ್ಪಟ್ಟು ಬಿಡುಗಡೆಯಾದ ಕೊನೆಯ ‘ಕೈದಿ’ ಆತನೇ ಆಗಿದ್ದ.
ಆತನೇ ಮುಸಾಯ್ ಸಿಂಗ್ ಎಂಬ ಮೊನಾಸ್ ರಜಪೂತ
ಸಮುದಾಯಕ್ಕೆ ಸೇರಿದ ಭಡೋಯಿ ಸಂಸ್ಥಾನದ ಪ್ರಜೆಯಾಗಿದ್ದವನು. 1857ರ ಜೂನ್ 4-5ರಂದು ಎಲ್ಲೆಡೆ ಪ್ರಥಮ ಸ್ವಾತಂತ್ರ್ಯ ಸಮರದ ಕಿಡಿ ಸಿಡಿದಂತೆ ಭಡೋಯಿ ಸಂಸ್ಥಾನದಲ್ಲೂ ಭುಗಿಲೆದ್ದಿತು. 1857ರ ಜೂನ್ 7-8ರಂದು ಭಡೋಯಿಗೆ ಸೇರಿದ ಮಿರ್ಜಾಪುರ ಜಿಲ್ಲೆಯಲ್ಲಿ ಬಂಡಾಯದ ಕಾವು ಏರಿದಂತೆ ಹಿಂದಿನ ಭಡೋಯಿ ಆಳುವ ಕುಟುಂಬದ ಮುಖ್ಯಸ್ಥರಾದ ಉದ್ವಂತ್‌ಸಿಂಗ್ ತನ್ನ ಪೂರ್ವಜರಾದ ಭಡೋಯಿರಾಜನ ಹಕ್ಕು ಸಂರಕ್ಷಣೆಗೆ ಭೋಲಾ ಸಿಂಗ್ ಮತ್ತು ರಾಮಭಕ್ಷ್ ಸಿಂಗ್ ಎಂಬ ಇಬ್ಬರು ದಿವಾನರನ್ನು ನಿಯುಕ್ತಿ ಮಾಡಿದ್ದ. ಜಹಗೀರುಗಳ ರಕ್ಷಣೆಗೆ ರಾಜಾ ಉದ್ವಂತ್‌ಸಿಂಗ್ 2 ಸಾವಿರ ಜನರ ಒಂದು ಸೈನ್ಯವನ್ನು ರಚಿಸಿದ್ದ. ಮುಸಾಯ್‌ಸಿಂಗ್ ಈ ಸೈನ್ಯಕ್ಕೆ ಸೇರಿದವನೆಂದು ಹೇಳಲಾಗುತ್ತದೆ.
ಭಡೋಯಿ ಸಂಸ್ಥಾನದ ಒಂದು ಗಡಿಯು ಬೆನಾರಸ್‌ಗೆ ತಾಗಿತ್ತು. ಬೆನಾರಸ್‌ನ ರಾಜ ಬ್ರಿಟಿಷರ ಪರಮಮಿತ್ರನಾಗಿದ್ದ. ಆ ರಾಜನ ಪ್ರಧಾನ ಅಧಿಕಾರಿ ಮುನ್ಶಿ ದರ್ಶನ ಲಾಲ್ ಎಂಬಾತ ರಾಜಾ ಉದ್ವಂತ್‌ಸಿಂಗ್ ಮತ್ತು ಆತನ ಇಬ್ಬರು ದಿವಾನರನ್ನು ಅಪಮಾನಕರ ರೀತಿಯಲ್ಲಿ ಬಂಧಿಸಿದನು. ಅಷ್ಟೇ ಅಲ್ಲ, ಈ ಮಾಹಿತಿಯನ್ನು ತಕ್ಷಣ ಮಿರ್ಜಾಪುರ ಜಿಲ್ಲೆಯ ಸಹಾಯಕ ಮ್ಯಾಜಿಸ್ಟ್ರೇಟ್ ಡಬ್ಲ್ಯು.ಆರ್. ಮೂರೆ ಮತ್ತು ಡೆಪ್ಯುಟಿ ಕಲೆಕ್ಟರ್‌ಗೆ ರವಾನಿಸಲಾಯಿತು. ಉದ್ವಂತ್‌ಸಿಂಗ್ ಸೆರೆಯಾಗಿದ್ದ ಕೋರ್ ಎಂಬಲ್ಲಿಗೆ ಮೂರೆ ಬಂದಿಳಿದು, ಆ ಮೂವರು ಬಂಧಿತರನ್ನು ಗೋಪಿಗಂಜ್ ಎಂಬ ಸ್ಥಳಕ್ಕೆ ಕರೆದೊಯ್ದು, ಸೈನಿಕ ವಿಚಾರಣೆ ನಡೆಸಿ, ಆ ಮೂವರನ್ನು ನೇಣಿಗೇರಿಸಿದನು.
ಅನ್ಯಾಯವಾಗಿ ನೇಣಿಗೇರಿದ ಈ ಮೂವರು ಮರಣದಂಡನೆಯ ದಾರುಣ ಸುದ್ದಿ ಭಡೋಯಿ ಜನಮನದಲ್ಲಿ ಬಲವಾದ ದ್ವೇಷಭಾವನೆಯನ್ನು ಮೂಡಿಸಿತು. ಉದ್ವಂತ್ ಸಿಂಗ್ ಮತ್ತು ಆತನ ಇಬ್ಬರು ದಿವಾನರನ್ನು ಬ್ರಿಟಿಷರು ನೇಣಿಗೇರಿದ ವಿದ್ಯಮಾನವು ಜನರಲ್ಲಿ ಭಯ ಹುಟ್ಟಿಸುವುದಕ್ಕಿಂತ ಪ್ರತಿಭಟಿಸುವಂತೆ ಕ್ರೋಧಾಗ್ನಿಯನ್ನು ಬಡಿದೆಬ್ಬಿಸಿತು. ನೇಣಿಗೇರಿದ ಮೂವರು ವ್ಯಕ್ತಿಗಳ ವಿಧವಾಪತ್ನಿಯರು ದರ್ಶನಲಾಲ್, ಮೂರೆ ಬದುಕಿರುವವರೆಗೆ ಒಂದು ಹನಿ ನೀರು ಸೇವಿಸುವುದಿಲ್ಲವೆಂದು ಶಪಥಗೈದರು. ಭಡೋಯಿರಾಜ ಉದ್ವಂತ್‌ಸಿಂಗ್‌ನ ಪತ್ನಿಯಂತೂ ಮೂರೆಯ ತಲೆ ಕಡಿದು ತಂದವರಿಗೆ 300 ರೂ. ಬಹುಮಾನ ನೀಡುವುದಾಗಿ ಘೋಷಿಸಿದಳು. ಮೂರೆಯನ್ನು ಹೇಗಾದರೂ, ಬಂಧಿಸಿ, ಆತನನ್ನು ಶಿಕ್ಷಿಸಲು ಸಿದ್ಧತೆ ಸಾಗಿತು.
ಈ ನಡುವೆ ಬ್ರಿಟಿಷರ ಹಿಡಿತದಲ್ಲಿದ್ದ ಪಾಲಿಯ ಇಂಡಿಗೋ ಫ್ಯಾಕ್ಟರಿಯ ಮೇಲೆ ಸರ್ನಾಮ್‌ಸಿಂಗ್ ಪಲ್ವಾರ್ ಮತ್ತು ಇತರ ಕೆಲವರು ದಾಳಿ ನಡೆಸಿ, ಲೂಟಿ ಮಾಡಿದರು. ಫ್ಯಾಕ್ಟರಿಯ ಮ್ಯಾನೇಜರ್ ಆಗಿದ್ದ ಜೋನ್ಸ್ ನಿಂದ ಈ ಮಾಹಿತಿ ಪಡೆದ ಮೂರೆ, ಲೂಟಿ ಮಾಡಿದ ಸರ್ನಾಂ ಸಿಂಗ್ ಮತ್ತು ಆತನ ಸಹಚರರನ್ನು ಬಂಧಿಸಲು ಪಾಲಿಗೆ ಹೊರಟನು.
ಮೂರೆ ಪಾಲಿಗೆ ಹೊರಟ ಸುದ್ದಿ ತಿಳಿದ ಜೂರಿಸಿಂಗ್ ಎಂಬ ಮೊನಾಸ್ ರಜಪೂತ ನಾಯಕ 300 ಮಂದಿ ಸಶಸ್ತ್ರ ಜನರೊಂದಿಗೆ ಮೂರೆಯ ಬೇಟೆಗೆ ಹೊರಟ. ಜೂರಿ ಸಿಂಗ್ ಪಡೆಯಲ್ಲಿದ್ದವರಲ್ಲಿ ಮುಸಾಯ್ ಸಿಂಗ್ ಕೂಡ ಒಬ್ಬ.
1857ರ ಜುಲೈ 5ರಂದು ಜೂರಿ ಸಿಂಗ್ ತನ್ನ ಸಶಸ್ತ್ರ ಪಡೆಯೊಂದಿಗೆ ಪಾಲಿಯಲ್ಲಿದ್ದ ಇಂಡಿಗೋ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ. ಆಗ ಅಲ್ಲಿದ್ದ ಮೂರೆ, ಫ್ಯಾಕ್ಟರಿಯ ಮ್ಯಾನೇಜರ್ ಜೋನ್ಸ್ ಮತ್ತು ಆತನ ಭಾವ ಕೆಂಪ್ ಜೀವ ಉಳಿಸಿಕೊಳ್ಳಲು ಫ್ಯಾಕ್ಟರಿಯ ಗೆಸ್ಟ್ಹೌಸ್‌ಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡರು. ಅಲ್ಲಿಂದ ಹಿಂದಿನ ಸಣ್ಣ ಬಾಗಿಲು ತೆರೆದು ಪಲಾಯನ ಮಾಡುವ ಹೊಂಚು ಹಾಕಿದ್ದರು. ಆದರೆ ಜೂರಿ ಸಿಂಗ್‌ನ ಸಶಸ್ತ್ರಪಡೆ ಅದಕ್ಕೆ ಅವಕಾಶ ನೀಡಲೇ ಇಲ್ಲ. ಆ ಮೂವರನ್ನು ಬೆನ್ನಟ್ಟಿದ ಸಶಸ್ತ್ರಪಡೆ ಫ್ಯಾಕ್ಟರಿಯ ಪ್ರಾಂಗಣದೊಳಗೆ ಆ ಮೂವರನ್ನು ಕೊಂದು ಹಾಕಿತು. ಜೋನ್ಸ್ ಮತ್ತು ಕೆಂಪ್‌ನ ಮೃತಶರೀರಗಳಿಗೆ ದಂಗೆಕೋರರು ಹಾನಿ ಮಾಡಲಿಲ್ಲ. ಆದರೆ ಮೂರೆಯ ತಲೆಯನ್ನು ಕಡಿದು ಅದನ್ನು ಉದ್ವಂತ್ ಸಿಂಗ್‌ನ ವಿಧವೆಗೆ ಸಮರ್ಪಿಸಿದರು. ಕೊನೆಗೂ ಆಕೆಯ ಉಪವಾಸ ಶಪಥ ಈಡೇರಿತ್ತು.
ಮೂರೆಯ ಕೊಲೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದವನು ಮುಸಾಯ್‌ಸಿಂಗ್ ಎಂಬುದು ಅನಂತರ ಬ್ರಿಟಿಷ್ ಅಧಿಕಾರಿಗಳು ನಡೆಸಿದ ತನಿಖೆ, ವಿಚಾರಣೆಗಳಿಂದ ತಿಳಿದು ಬಂತು. ಮೂರೆಯ ಕೊಲೆ ಕೃತ್ಯದಲ್ಲಿ ಭಾಗಿಗಳಾಗಿದ್ದ 8 ಮಂದಿಯನ್ನು ನೇಣಿಗೇರಿಸಲಾಯಿತು. 8 ಮಂದಿಗೆ ಜೀವಾವಧಿ ಗಡೀಪಾರು ಶಿಕ್ಷೆ, ಒಬ್ಬರಿಗೆ 14 ವರ್ಷ ಗಡೀಪಾರು ಶಿಕ್ಷೆ, ಮೂವರಿಗೆ 7 ವರ್ಷ ಕಾಲ ಸೆರೆವಾಸ. ಕೊಲೆಕೃತ್ಯದಲ್ಲಿ ಭಾಗಿಯಾಗಿದ್ದ 21 ವರ್ಷದ ತರುಣ ಮುಸಾಯ್ ಸಿಂಗ್‌ಗೆ 1860ರಲ್ಲಿ ಜೀವಾವಧಿ ಗಡೀಪಾರು ಶಿಕ್ಷೆ ವಿಧಿಸಿ ಅಂಡಮಾನ್‌ಗೆ ಪೋರ್ಟ್ ಬ್ಲೇರ್‌ಗೆ ಸಾಗಿಸಲಾಯಿತು. ಅಲ್ಲಿ ಆತನಿಗೆ ಕೈದಿ ಸಂಖ್ಯೆ 4568 ಎ ಎಂದು ನೊಂದಾಯಿಸಲಾಯಿತು.
ಅಂಡಮಾನ್ ಜೈಲುಪಾಲಾದ ಮುಸಾಯ್ ಸಿಂಗ್ ಕೈದಿಯಾಗಿ ಉತ್ತಮ ವರ್ತನೆ ತೋರಿದ ಕಾರಣಕ್ಕಾಗಿ ಅಲ್ಲಿನ ಅಧಿಕಾರಿಗಳೂ ಮತ್ತು ಮುಖ್ಯ ಕಮೀಷನರ್‌ರ ಕೃಪಾದೃಷ್ಟಿಗೆ ಪಾತ್ರವಾಗಿದ್ದ. ಒಮ್ಮೆಯಂತೂ ಮುಸಾಯ್‌ಸಿಂಗ್‌ನ ಬಿಡುಗಡೆಗೆ ಮುಖ್ಯ ಕಮೀಷನರ್ ಮೆರ್ಕ್ ಶಿಫಾರಸು ಕೂಡ ಮಾಡಿದ್ದರು. ಆದರೆ ಆತನ ಶಿಫಾರಸನ್ನು ಭಾರತ ಸರ್ಕಾರ ಮಾನ್ಯ ಮಾಡಲಿಲ್ಲ. 1884ರಲ್ಲಿ ಮುಸಾಯ್ ಸಿಂಗ್ ಅಂಡಮಾನ್‌ಗೆ ಬಂದು 25 ವರ್ಷಗಳಾಗಿತ್ತು. ಆಗ ಕೈದಿಯೊಬ್ಬನ ಮಾರಣಾಂತಿಕ ಹಲ್ಲೆಯಿಂದ ಮಹಿಳೆಯೊಬ್ಬಳ ಜೀವ ಉಳಿಸಿದ್ದ ಈ ಮುಸಾಯ್ ಸಿಂಗ್. ಇದಕ್ಕೆ ಬಹುಮಾನವಾಗಿ ಲಾರ್ಡ್ ರಿಪ್ಪನ್ ಸರ್ಕಾರ ಪೋರ್ಟ್ ಬ್ಲೇರ್‌ನಲ್ಲೇ ವಾಸ ಮುಂದುವರಿಸುವ ಷರತ್ತಿನ ಆಧಾರದಲ್ಲಿ ಮುಸಾಯ್ ಸಿಂಗ್‌ನ ಭಾಗಶಃ ಬಿಡುಗಡೆಗೆ ಸಮ್ಮತಿಸಿತು. ಮುಸಾಯ್ ಸಿಂಗ್‌ಗೆ ಆಗ 49 ವರ್ಷ. ಆ ವೇಳೆಗೆ ಆತನಿಗೆ ಮದುವೆಯಾಗಿ ದೃಗ್‌ಪಾಲ್‌ಸಿಂಗ್ ಎಂಬ ಮಗನೂ ಇದ್ದ. ಪೋರ್ಟ್ ಬ್ಲೇರ್‌ನಲ್ಲೇ ಗ್ರಾಮದ ಚೌಧರಿಯಾಗಿ ಉದ್ಯೋಗ ಗಿಟ್ಟಿಸಿದ್ದ. ಮಗ ದೃಗ್‌ಪಾಲ್‌ಸಿಂಗ್ ಅನಂತರ ಉದ್ಯೋಗವರಸಿ ಬರ್ಮಾಕ್ಕೆ ತೆರಳಿ ಅಲ್ಲೇ ನೆಲೆಸಿದ.
ಪೋರ್ಟ್ ಬ್ಲೇರ್‌ನಿಂದ ಮುಸಾಯ್ ಸಿಂಗ್‌ನ ಸಂಪೂರ್ಣ ಬಿಡುಗಡೆಯ ಪ್ರಶ್ನೆ ಭಾರತ ಸರ್ಕಾರದ ಮುಂದೆ ಪದೇ ಪದೇ ಪ್ರಸ್ತಾಪವಾಗುತ್ತಿದ್ದರೂ ಅದಕ್ಕೆ ನಕಾರವೇ ವ್ಯಕ್ತವಾಗುತ್ತಿತ್ತು. ಈ ವೇಳೆಗೆ ಹತ್ತೊಂಬತ್ತನೇ ಶತಮಾನವೂ ಮುಗಿಯಿತು. 1858ರ ರಾಯಲ್ ಆಮ್ನೆಸ್ಟಿ ಕಾಯ್ದೆಯೂ ಮುಸಾಯ್ ಸಿಂಗ್ ಬಿಡುಗಡೆಯ ಮೇಲೆ ಕೃಪೆ ತೋರಲಿಲ್ಲ. ಕೊನೆಗೆ ತನ್ನ ತಂದೆಯನ್ನು ಬಿಡುಗಡೆಗೊಳಿಸಿ, ವೃದ್ಧಾಪ್ಯವನ್ನು ಶಾಂತಿ, ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಬೇಕೆಂದು ಪುತ್ರ ದೃಗ್‌ಪಾಲ್‌ಸಿಂಗ್ ರಂಗೂನ್‌ನಿಂದ ಮನವಿ ಮಾಡಿಕೊಂಡ. ಆದರೆ ಆ ಮನವಿಯನ್ನು ಬ್ರಿಟಿಷ್ ಸರ್ಕಾರ ಪರಿಗಣಿಸಲಿಲ್ಲ.
ಆದರೆ ಅದು ಹೇಗೋ ಮುಸಾಯ್ ಸಿಂಗ್‌ನ ಪುತ್ರನ ಈ ಮನವಿ ವೈಸ್‌ರಾಯ್ ಲಾರ್ಡ್ ಮಿಂಟೋ ಗಮನಕ್ಕೆ ಬಂದು, ಆತ ಲಂಡನ್‌ಗೆ ಟೆಲಿಗ್ರಾಂ ಕಳಿಸಿ, ಮುಸಾಯ್ ಸಿಂಗ್‌ನನ್ನು ಈಗಲಾದರೂ ಬಿಡುಗಡೆಗೊಳಿಸಬೇಕೆಂದು ಬ್ರಿಟಿಷ್ ಅಧಿಪತ್ಯಕ್ಕೆ ಶಿಫಾರಸು ಮಾಡಿದ. ಲಂಡನ್‌ನಲ್ಲಿದ್ದ ಭಾರತೀಯ ಸರಕಾರದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಗೃಹ ಕಾರ್ಯದರ್ಶಿ ಷರತ್ತುಬದ್ಧ ಬಿಡುಗಡೆಗೆ ಕೊನೆಗೂ ಸಮ್ಮತಿಸಿದ.
ಹೀಗಾಗಿ 1907ರ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಅಂಡಮಾನ್‌ನಿಂದ ಮುಸಾಯ್‌ಸಿಂಗ್‌ನ ಬಿಡುಗಡೆ ಆಯಿತು. ಆಗ ಆತನಿಗೆ 71 ವರ್ಷ. ರಂಗೂನ್‌ನಲ್ಲಿದ್ದ ಮಗನೊಂದಿಗೆ ವಿಶ್ರಾಂತಜೀವನ ಕಳೆಯಲು ಮುಸಾಯ್ ಸಿಂಗ್ ಅಲ್ಲಿ ತಲಪಿದ್ದಿರಬಹುದು. ಆದರೆ ಬಿಡುಗಡೆಯ ಬಳಿಕ ಆತ ಎಷ್ಟು ವರ್ಷ ಜೀವಂತವಾಗಿದ್ದ? ಭಾರತಕ್ಕೆ ಅನಂತರ ಆತ ಬಂದಿದ್ದನೇ? ಈ ಬಗೆಯ ಯಾವ ಪ್ರಶ್ನೆಗಳಿಗೂ ಇದುವರೆಗೆ ಉತ್ತರ ಸಿಕ್ಕಿಲ್ಲ.
ಅದೇನೇ ಇರಲಿ, ಮುಸಾಯ್ ಸಿಂಗ್‌ನನ್ನು 1857ರ ಸ್ವಾತಂತ್ರ್ಯ ಸಮರದ ಹೀರೋಗಳಲ್ಲಿ ಒಬ್ಬ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ. 1857ರಲ್ಲಿ ಮಿರ್ಜಾಪುರ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ಕಾರ್ಯಚರಣೆ ನಡೆಸಿದ ಮುಸಾಯ್‌ಸಿಂಗ್ ಭಾರತದ ಸ್ವಾತಂತ್ರ್ಯ ಸಮರ ಇತಿಹಾಸದಲ್ಲಿ ಅನನ್ಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಒಬ್ಬ ಅಜ್ಞಾತ ಸ್ವಾತಂತ್ರ್ಯ ಯೋಧನಾಗಿಯೇ ಉಳಿದಿದ್ದಾನೆ. ಆತ ನಿಜಕ್ಕೂ ಅಜ್ಞಾತ ಸ್ವಾತಂತ್ರ್ಯವೀರ. ಏಕೆಂದರೆ ಆತನ ಒಂದೇ ಒಂದು ಭಾವಚಿತ್ರ ಕೂಡ ಉಪಲಬ್ಧವಿಲ್ಲ! ಬ್ರಿಟಿಷರ ದಾಸ್ಯದ ವಿರುದ್ಧ ಇನ್ನೂ ಅದೆಷ್ಟು ಅಜ್ಞಾತವೀರರು ಹೋರಾಡಿ ಮಡಿದರೋ ಬಲ್ಲವರಾರು? ಮುಸಾಯ್‌ಸಿಂಗ್ ಎಂಬ ಸ್ವಾತಂತ್ರ್ಯ ಸೇನಾನಿಯ ಬಗ್ಗೆಯೇ ಇಲ್ಲಿನವರೆಗೂ ಇತಿಹಾಸಕಾರರಿಗೆ ತಿಳಿದಿರಲಿಲ್ಲ. ಇನ್ನು ಇಂತಹ ಉಳಿದ ಮಹನೀಯರ ಬಗ್ಗೆ ತಿಳಿದಿರಲು ಹೇಗೆ ಸಾಧ್ಯ?
ಈ ಅಜ್ಞಾತ ಹೋರಾಟಗಾರರೇನೋ ಕೀರ್ತಿ, ಪ್ರಸಿದ್ಧಿಗಳಿಗಾಗಿ ಹೋರಾಡಿದ್ದಲ್ಲ. ಭವಿಷ್ಯದಲ್ಲಿ ತಾಮ್ರಪತ್ರ, ಮಾಸಾಶನ, ನೌಕರಿ, ಮಂತ್ರಿಗಿರಿ ಆಸೆಗಾಗಿಯೂ ಅಲ್ಲ. ಭಾರತಮಾತೆಯ ಬಿಡುಗಡೆಗಾಗಿ ಅಂಥವರ ಎದೆಯಲ್ಲಿ ಹೆಪ್ಪುಗಟ್ಟಿದ ದೇಶಭಕ್ತಿಯ ಉನ್ಮತ್ತಭಾವ ಅದೆಲ್ಲವನ್ನೂ ಮೀರಿದುದಾಗಿತ್ತು. ದೇಶಭಕ್ತಿಯ ಆ ಉನ್ಮತ್ತಭಾವ ಅಜ್ಞಾನವೀರರ ನೆಮ್ಮದಿ, ಸುಖ, ಸಂಸಾರ, ಉದ್ಯೋಗ, ಕನಸು, ಬಂಧುಬಾಂದವರು ಎಲ್ಲವನ್ನು ಕಸಿದುಕೊಂಡಿತ್ತು. ಆದರೆ ಅವರ್ಯಾರೂ ಶರಣಾಗತಿ ಸೂಚಿಸಲಿಲ್ಲ. ಕ್ಷಮೆಯಾಚಿಸಲಿಲ್ಲ. ಕರಿನೀರಿನ ಶಿಕ್ಷೆಗೂ ಅಂಜಲಿಲ್ಲ.
ನಮಗೆ ನಿಜವಾದ ಸ್ವಾತಂತ್ರ್ಯ ಬಂದಿದ್ದು ಇಂಥ ಅಗಣಿತ ಅಜ್ಞಾತ ವೀರರತ್ಯಾಗ, ಬಲಿದಾನಗಳಿಂದಲೇ.
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ | Amrit mahotsav | ಸ್ವಾತಂತ್ರ್ಯ ಸಂಗ್ರಾಮದ ಸವಿ ನೆನಪು ಸಾರುವ ಗಾಂಧಿ ಗುಡಿ!