Site icon Vistara News

Independence Day 2023 : ಆರೋಗ್ಯ – ಜೀವನೋಪಾಯ ನಡುವಿನ ಸಮತೋಲನವೇ ಸ್ವತಂತ್ರ ಬದುಕಿನ ಸೂತ್ರ

Health and independence

ವೇಗವಾಗಿ ಬದಲಾಗುತ್ತಿರುವ ಈ ದಿನಮಾನದಲ್ಲಿ ನಮ್ಮ ಆರೋಗ್ಯ ಮತ್ತು ಜೀವನ ನಿರ್ವಹಣೆಯ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಈ ಸಮತೋಲನ ಯಶಸ್ವಿಯಾದರೆ ಮಾತ್ರ ನಾವು ಸ್ವತಂತ್ರವಾಗಿ (Independence Day 2023) ನೆಮ್ಮದಿಯಿಂದ ಇರಲು ಸಾಧ್ಯ. ನಮ್ಮ ಯೋಗಕ್ಷೇಮ ಮತ್ತು ಆರ್ಥಿಕ ಸ್ಥಿರತೆ ಆಳವಾಗಿ ಪರಸ್ಪರ ಸಂಬಂಧ ಹೊಂದಿವೆ. ಈ ಎರಡೂ ಅಂಶಗಳ ಬಗ್ಗೆ ನಾವು ಕಾಳಜಿ ವಹಿಸುವುದು ಮತ್ತು ಪೂರ್ವಸಿದ್ಧತೆ ನಡೆಸುವುದು ಮುಖ್ಯ.

ಪರಸ್ಪರ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕು

ನಮ್ಮ ಆರೋಗ್ಯ ಮತ್ತು ಜೀವನೋಪಾಯವು ಸಂಕೀರ್ಣ ಸಂಬಂಧದಲ್ಲಿ ಹೆಣೆದುಕೊಂಡಿದೆ. ಉತ್ತಮ ಆರೋಗ್ಯವು ಉತ್ತಮ ಜೀವನವನ್ನು ನಡೆಸಲು ನಮಗೆ ಅನುವು ಮಾಡಿಕೊಡುತ್ತದೆ. ಸ್ಥಿರ ಆದಾಯ ಕೂಡ ಇದಕ್ಕೆ ಮುಖ್ಯ. ಇಲ್ಲಿ ಒಂದು ಅಂಶವನ್ನು ನಿರ್ಲಕ್ಷಿಸುವುದರೆ ಮತ್ತೊಂದು ಅಂಶದ ಮೇಲೆ ಹಾನಿಕಾರಕ ಪರಿಣಾಮ ಬೀರುವಂತಾಗುತ್ತದೆ.

ಅನಿಶ್ಚಿತತೆಯು ಪರಿಣಾಮ ಬೀರದಿರಲಿ

ನಮ್ಮ ಜೀವನ ಎನ್ನುವುದು ಅನಿರೀಕ್ಷಿತ ತಿರುವುಗಳ ಮಾರ್ಗ ಇದ್ದಂತೆ. ಜೀವನದಲ್ಲಿ ಆರೋಗ್ಯ ತುರ್ತು ಸ್ಥಿತಿ ಉದ್ಭವಿಸಬಹುದು. ಆರ್ಥಿಕ ಕುಸಿತಗಳಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ಅಂತಹ ಅನಿಶ್ಚಿತತೆಯ ಸಂದರ್ಭಗಳನ್ನು ಎದುರಿಸಲು ನಾವು ಮೊದಲೇ ತಯಾರಿ ಮಾಡಿಕೊಳ್ಳಬೇಕು. ಹೀಗೆ ಮೊದಲೇ ಗ್ರಹಿಸಿ ಪೂರ್ವ ತಯಾರಿ ಮಾಡಿಕೊಂಡರೆ ಅನಿರೀಕ್ಷಿತ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಬೇಕು

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ…ಇವು ಒಟ್ಟಾರೆ ನಮ್ಮ ಕುಟುಂಬದ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ. ನಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಇವು ಕಡಿಮೆ ಮಾಡುತ್ತವೆ.

ಆರ್ಥಿಕ ಶಿಸ್ತು ಅತಿ ಮುಖ್ಯ

ಗಳಿಸಿದ ಹಣದಲ್ಲಿ ತುರ್ತು ನಿಧಿಯನ್ನು ರಚಿಸುವುದು ಮತ್ತು ವೈಯಕ್ತಿಕ ಹಣಕಾಸುಗಳನ್ನು ವಿವೇಕಯುತವಾಗಿ ನಿರ್ವಹಿಸುವುದನ್ನು ಮಾಡಿದರೆ ಸವಾಲಿನ ಸಮಯದಲ್ಲಿ ಇವು ನಮ್ಮ ನೆರವಿಗೆ ಬರುತ್ತವೆ. ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತವೆ. ಆದಾಯದ ಒಂದು ಭಾಗವನ್ನು ಉಳಿಸುವುದು, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಅತಿಯಾದ ಸಾಲವನ್ನು ತಪ್ಪಿಸಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.

ಹೊಸ ಹೊಸ ಕೌಶಲಗಳನ್ನು ಹೊಂದಬೇಕು

ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹಾಗಾಗಿ ಹೊಸ ಹೊಸ ಕೌಶಲಗಳನ್ನು ನಾವು ಹೊಂದುತ್ತಲೇ ಇರಬೇಕಾಗುತ್ತದೆ. ಜೀವನಪರ್ಯಂತ ನಾವು ಕಲಿಕೆ ಮತ್ತು ಕೌಶಲಕ್ಕೆ ಒತ್ತ ನೀಡುತ್ತ ಹೋದರೆ ಉದ್ಯೋಗಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ವಿವಿಧ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ.

ಇರಬೇಕು ಆತ್ಮೀಯ ಸ್ನೇಹ ಜಾಲ

ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಒಳಗೊಂಡ ಬಲವಾದ ಜಾಲವನ್ನು ನಾವು ಜೀವನದಲ್ಲಿ ನಿರ್ಮಿಸಿಕೊಳ್ಳುವುದು ಅಗತ್ಯ. ಕಷ್ಟದ ಸಮಯದಲ್ಲಿ ಭಾವನಾತ್ಮಕವಾಗಿ ಮಾತ್ರವಲ್ಲ, ವಾಸ್ತವಿಕವಾಗಿಯೂ ಇವು ನಮ್ಮ ನೆರವಿಗೆ ಬರುತ್ತದೆ.

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು

ಸ್ವತಂತ್ರ ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗಾಗಿ ಹಲವಾರು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಪ್ರಯೋಜನವನ್ನು ನಾವು ಪಡೆಯಬೇಕು. ಹೀಗೆ ಮಾಡುವುದರಿಂದ ನಾವು ಆರೋಗ್ಯ ತುರ್ತು ಸಂದರ್ಭದಲ್ಲಿ ಅನವಶ್ಯಕವಾಗಿ ಹಣ ವ್ಯಯಿಸುವುದು ತಪ್ಪುತ್ತದೆ.

Exit mobile version