ಪೂಲಿತ್ತೇವನ್- ಈ ಹೆಸರೇ ವಿಚಿತ್ರ. ಬಹುಶಃ ತಮಿಳಿಗರಲ್ಲದವರು ಕೇಳಿಯೇ ಇರದ ಹೆಸರದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೂಲಿತ್ತೇವನ್ ಭಾರತ ಸ್ವಾತಂತ್ರ್ಯ ಹೋರಾಟದ ಮೊಟ್ಟಮೊದಲ ಸೇನಾನಿ ಎಂದರೆ ಬಹುಶಃ ಇತಿಹಾಸಜ್ಞರು ನಂಬಲಿಕ್ಕಿಲ್ಲ. ಆದರಿದು ನಿಜ. 1855ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೂ (ಅದನ್ನು ಬ್ರಿಟಿಷರು ಮತ್ತು ಎಡಪಂಥೀಯ ಇತಿಹಾಸಕಾರರು ‘ಸಿಪಾಯಿ ದಂಗೆ’ ಎಂದು ಕರೆದು ಅವಮಾನಿಸಿದ್ದರು) ಮುನ್ನ, ನೂರು ವರ್ಷಗಳಿಗೂ ಹಿಂದೆ ಪೂಲಿತ್ತೇವನ್ ಬ್ರಿಟಿಷರ ವಿರುದ್ಧ ಮೊದಲು ಕತ್ತಿ ಝಳಪಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಮಹಾನ್ ವೀರ.
ಈತನ ಮೂಲ ಹೆಸರು ಕಟ್ಟಪ್ಪ ಪೂಲಿತ್ತೇವನ್. ತಿರುನಲ್ವೇಲಿ ಜಿಲ್ಲೆಯ ನೆರಕ್ಕತ್ತನ್ ಸೆವ್ವಲ್ ಎಂಬ ಊರಿನಲ್ಲಿ ಚಿತಿರಪುತಿರ ಥೇವರ್ ಮತ್ತು ಶಿವಜ್ಞಾನ ನಾಚಿಯಾರ್ ದಂಪತಿಗಳ ಮಗನಾಗಿ 1-5-1715ರಲ್ಲಿ ಜನಿಸಿದ. ಆಗ ತಿರುನಲ್ವೇಲಿಯ ದಕ್ಷಿಣ ಭಾಗ ಪಾಂಡ್ಯ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು. ಪೂಲಿತ್ತೇವನ್ ತಂದೆ ಚಿತಿರಪುತಿರ ಥೇವರ್ 63 ವರ್ಷಗಳ ಕಾಲ ನೆರಕ್ಕತ್ತನ್ ಸೆವ್ವಲ್ ಪಾಳಯಂ (ಸಣ್ಣ ಸಾಮ್ರಾಜ್ಯ) ಆಳಿದ ಶೂರ. ಉಳಿದ ಪಾಳಯಂಗಳ ದೊರೆಗಳು ಚಿತಿರಪುತಿರ ಥೇವರ್‌ನನ್ನು ಬಹಳ ಭಯಭಕ್ತಿಯಿಂದ ಗೌರವಿಸಿದ್ದರು. ಅಂತಹ ಕಾಲದಲ್ಲಿ ಜನಿಸಿದ ಪೂಲಿತ್ತೇವನ್ ಸಹಜವಾಗಿಯೇ ವೀರಾಧಿವೀರನಾಗಿ ಬೆಳೆದ. ಚಿಕ್ಕಂದಿನಲ್ಲೇ ದೇವರು ಮತ್ತು ಧರ್ಮದ ಬಗ್ಗೆ ಅಗಾಧ ಶ್ರದ್ಧೆ, ಗೌರವ. ಇಲಂಜಿ ಸುಬ್ರಮಣಿಯನ್ ಪಿಳ್ಳೆ ಅವರಿಂದ ಚಿಕ್ಕಂದಿನಲ್ಲೇ ತಮಿಳು, ವ್ಯಾಕರಣ, ಸಾಹಿತ್ಯವನ್ನು ಅಭ್ಯಸಿಸಿದ ಪೂಲಿತ್ತೇವನ್ ಅನಂತರ ತಮಿಳಿನಲ್ಲಿ ಹಲವಾರು ಕವನಗಳನ್ನು ರಚಿಸಿದ್ದ. 12 ವರ್ಷದವನಿದ್ದಾಗ ಪೂಲಿತ್ತೇವನ್ ಸಮರ ಕಲೆ, ಕುದುರೆ ಸವಾರಿ, ಆನೆ ಸವಾರಿ, ಕುಸ್ತಿ, ಧನುರ್ವಿದ್ಯೆ, ಖಡ್ಗಯುದ್ಧ, ಹುಲಿಶಿಕಾರಿ ಇತ್ಯಾದಿ ಕಲೆಗಳನ್ನು ಕರಗತ ಮಾಡಿಕೊಂಡ. ಹುಲಿಯ ಚರ್ಮದ್ದೇ ಉಡುಗೆ, ಜೊತೆಗೆ ಹುಲಿಯುಗುರು ಧರಿಸುತ್ತಿದ್ದ. ಹಾಗಾಗಿಯೇ ಆತನಿಗೆ ಪೂಲಿತ್ತೇವನ್ ಎಂಬ ಜನಪ್ರಿಯ ಹೆಸರು ಅಂಟಿಕೊಂಡಿತ್ತು.
ಪೂಲಿತ್ತೇವನ್ 18ರ ಹರೆಯದಲ್ಲಿದ್ದಾಗ ನೆರಕ್ಕತ್ತನ್ ಸೆವ್ವಲ್‌ನ ಹೊರಗೆ ಎರಡು ಪಾಳಯಂಗಳ ನಡುವಿನ ಗಡಿ ವಿವಾದ ಪರಿಹರಿಸಲು ಧಾವಿಸಿದ್ದ. ಆ ಸಂದರ್ಭದಲ್ಲಿ ಪೂಲಿತ್ತೇವನ್ ಊರಿನಲ್ಲಿಲ್ಲದಿದ್ದಾಗ ಶಿವಗಿರಿಯ ಪಾಳೇಗಾರ ನೆರಕ್ಕತ್ತನ್ ಸೆವ್ವಲ್‌ಗೆ 3 ಸಾವಿರ ಜನರೊಂದಿಗೆ ದಾಳಿ ಮಾಡಿ, ಕೆಲವು ಜಾನುವಾರುಗಳನ್ನು ವಶಪಡಿಸಿಕೊಂಡು ಹೋಗಿದ್ದ. ಈ ವಿಷಯ ಪೂಲಿತ್ತೇವನ್‌ಗೆ ಗೊತ್ತಾಗುತ್ತಲೇ, ಆತ 150 ಸೈನಿಕರೊಂದಿಗೆ ತೆರಳಿ, ಶಿವಗಿರಿ ಸೈನ್ಯದ ಮೇಲೆ ಮುಗಿಬಿದ್ದ. ಹಲವರು ಸಮರದಲ್ಲಿ ಯಮಪುರಿ ಸೇರಿದರು. ಉಳಿದವರು ಪಲಾಯನ ಮಾಡಿದರು. ಪೂಲಿತ್ತೇವನ್ ಶತ್ರುಗಳು ಕದ್ದೊಯ್ದಿದ್ದ ಅಷ್ಟೂ ಜಾನುವಾರುಗಳನ್ನು ವಾಪಸ್ ಹಿಡಿದು ತಂದಿದ್ದ.
ಮಧುರೈ ವಿಜಯರಂಗ ಚೊಕ್ಕನಾಥ ನಾಯಕರ್ (1704-1731) ಆಡಳಿತ ಕಾಲದಲ್ಲಿ ಮಧುರೈನ ಉತ್ತರ ಭಾಗದಲ್ಲಿ ಹುಲಿಯೊಂದು ಕದ್ದಡಗಿಕೊಂಡು ದಾರಿಹೋಕರನ್ನು ಕೊಂದು ಹಾಕುತ್ತಿತ್ತು. ದೊರೆ ನಾಯಕರ್ ಎಲ್ಲ ಪಾಳೇಗಾರರಿಗೆ ಆ ಹುಲಿಯನ್ನು ಕೊಂದು ಹಾಕಿದರೆ ಸೂಕ್ತ ಬಹುಮಾನ ನೀಡುವುದಾಗಿ ಸಂದೇಶ ಕಳಿಸಿದ. ಈ ಸಂದೇಶ ಪೂಲಿತ್ತೇವನ್‌ಗೆ ತಲುಪಿದ ಕೂಡಲೇ ಆತ ಮಧುರೈಗೆ ಧಾವಿಸಿಬಂದ. ಹೊಂಚುಹಾಕಿ ಹುಲಿಯ ಮೇಲೆರಗಿ ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಮೇಲೆತ್ತಿ ನೆಲಕ್ಕಪ್ಪಳಿಸಿದ. ಪೂಲಿತ್ತೇವನ್ ಅಪ್ಪಳಿಸಿದ ಹೊಡೆತಕ್ಕೆ ಆ ಹುಲಿ ಸತ್ತೇಹೋಯ್ತು. ಯಾವುದೇ ಆಯುಧವಿಲ್ಲದೆ ತನ್ನ ಬಲಶಾಲಿ ಕೈಗಳಿಂದಲೇ ಹುಲಿಯನ್ನು ಹಿಡಿದು ಸಾಯಿಸಿದ ಈ ಘಟನೆ ಆ ಪ್ರಾಂತದಲ್ಲೆಲ್ಲ ಭಾರೀ ಸುದ್ಧಿಯಾಗಿತ್ತು. ಮಧುರೈ ದೊರೆ ನಾಯಕರ್ ಆತನಿಗೆ ವಡಕ್ಕತ್ತನ್ ಪೂಲಿತ್ತೇವನ್ (ಸಾಮ್ರಾಜ್ಯ ರಕ್ಷಕ) ಎಂಬ ಬಿರುದು ನೀಡಿ ಸನ್ಮಾನಿಸಿದ್ದ.
ತನ್ನ ಪಾಳಯಂನಿಂದ ದೊರಕಿದ ಆದಾಯವೆಲ್ಲವನ್ನೂ ಆಡಳಿತ ಮತ್ತು ಜನರ ಕಲ್ಯಾಣಕಾರ‍್ಯಗಳಿಗೆ ಬಳಸಿದ. ಈ ಕಾರ‍್ಯಗಳಿಗೆ ಬಳಸಿ ಉಳಿಕೆಯಾದ ಹಣವನ್ನು ದೇಗುಲಗಳ ಅಭಿವೃದ್ಧಿ, ಜೀರ್ಣೋದ್ಧಾರಗಳಿಗಾಗಿ ಬಳಸಿದ. ವಿಲಾಸಿ ಬದುಕು ಆತನಿಗಿಷ್ಟವಿರಲಿಲ್ಲ. ತಿರುನಲ್ವೇಲಿ ಪ್ರದೇಶದಲ್ಲಿ ಒಂದು ಡಜನ್‌ಗೂ ಹೆಚ್ಚು ದೇಗುಲಗಳ ಜೀರ್ಣೋದ್ಧಾರ ಮಾಡಿಸಿದ. ಬಹುದೂರ ಪ್ರಯಾಣಿಸುವ ಯಾತ್ರಿಕರಿಗೆ ವಿಶ್ರಾಂತಿಗೃಹ, ಛತ್ರಗಳನ್ನು ನಿರ್ಮಿಸಿದ. ಕೆರೆಕಟ್ಟೆ, ಬಾವಿಗಳ ನಿರ್ಮಾಣ, ಒಣಭೂಮಿಯಲ್ಲಿ ಗಿಡ ನೆಟ್ಟು ಹಸಿರುತೋಪು ನಿರ್ಮಾಣ …. ಹೀಗೆ ಹಲವು ಜನಪರ ಕಾರ‍್ಯಗಳನ್ನು ವ್ಯವಸ್ಥಿತವಾಗಿ ಪೂಲಿತ್ತೇವನ್ ನಿರ್ವಹಿಸಿದ್ದ.
ಸುತ್ತಮುತ್ತಲಿನ ಎಲ್ಲ ಪಾಳೇಗಾರರನ್ನು ಒಗ್ಗೂಡಿಸಿ, ನಾವೆಲ್ಲರೂ ಒಂದಾಗಿದ್ದರೆ ನಮ್ಮ ವಿರುದ್ಧ ಪರಕೀಯರ ಆಕ್ರಮಣ ದುಸ್ಸಾಧ್ಯ ಎಂಬ ಸಂದೇಶ ಸಾರಿದ್ದ. ಇತ್ತ ನಾಯಕರ್‌ಗಳ ಸಣ್ಣಪುಟ್ಟ ಸಂಸ್ಥಾನಗಳು ದುರ್ಬಲ ಆಡಳಿತದಿಂದಾಗಿ ಸೊರಗಿದವು. ಕ್ರಮೇಣ ಆ ಸಂಸ್ಥಾನಗಳ ಮೇಲೆ ಮುಸ್ಲಿಮರ ಹಿಡಿತ ಪ್ರಬಲವಾಯಿತು. ಪಾಳೇಗಾರರಿಂದ ಕಂದಾಯ ವಸೂಲಿ ವಿಚಾರದಲ್ಲಿ ಆರ್ಕಾಟ್ ನವಾಬ ಮತ್ತು ಇನ್ನೊಬ್ಬ ಮುಸ್ಲಿಂ ದೊರೆಯ ನಡುವೆ ವಿವಾದ ಉಂಟಾಗಿ, ಪಾಳೇಗಾರರು ಕಂದಾಯ ಬಾಬ್ತು ಸಂಪೂರ್ಣ ನಿಲ್ಲಿಸಿದರು. ಆಗ ಆರ್ಕಾಟ್ ನವಾಬ ಈಸ್ಟ್ ಇಂಡಿಯಾ ಕಂಪನಿಯ ಇಂಗ್ಲಿಷರ ಮೊರೆ ಹೋದ. ಈಸ್ಟ್ ಇಂಡಿಯಾ ಕಂಪನಿ ಮಾಡಿಕೊಂಡ ಒಪ್ಪಂದದಂತೆ, ಪಾಳೇಗಾರರಿಂದ ತೆರಿಗೆ ಸಂಗ್ರಹಿಸುವ ಹೊಣೆ ಇಂಗ್ಲಿಷರ ಕೈಗೆ ಹಸ್ತಾಂತರವಾಯ್ತು. ಅಲ್ಲಿಂದಲೇ ಶುರುವಾಯ್ತು ಇಂಗ್ಲಿಷರು ಹಾಗೂ ಭಾರತೀಯ ದೊರೆಗಳ ನಡುವೆ ನಿಲ್ಲದ ಕದನ.
ಆರ್ಕಾಟ್ ನವಾಬನ ಸಾಮ್ರಾಜ್ಯಶಾಹಿ ದುರಾಸೆಯಿಂದಾಗಿ ಇಲ್ಲಿನ ಜನರು ಮುಂದೆ ಸುಮಾರು 200 ವರ್ಷಗಳ ಕಾಲ ಇಂಗ್ಲೀಷರ ಆಳ್ವಿಕೆಯನ್ನು ಸಹಿಸಿಕೊಳ್ಳಬೇಕಾಗಿ ಬಂದಿದೆ. ಈ ಇತಿಹಾಸ, ತೆರಿಗೆ ಕೊಡಲು ಒಪ್ಪದ ಪಾಳೇಗಾರರ ವಿರುದ್ಧ 1755ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕರ್ನಲ್ ಹೆರಾನ್ ಮತ್ತು ನವಾಬನ ಸೋದರ ಮಬೂಶ್‌ಖಾನ್ ನೇತೃತ್ವದಲ್ಲಿ ಸೈನ್ಯ ದಂಡೆತ್ತಿ ಬಂದಿತು. ಒಂದಿಷ್ಟು ಪಾಳೇಗಾರರು ಹೆದರಿ ತೆರಿಗೆ ನೀಡಿದರು. ಆದರೆ ನೆರಕ್ಕತ್ತನ್ ಸೆವ್ವಲ್‌ಗೆ ಕರ್ನಲ್ ಹೆರಾನ್ ಮತ್ತು ಮಬೂಶ್‌ಖಾನ್ ದಂಡೆತ್ತಿ ಹೋದಾಗ ನಿರಾಶೆ ಕಾದಿತ್ತು. ಪೂಲಿತ್ತೇವನ್ ತೆರಿಗೆ ಕೊಡಲೊಪ್ಪದೆ ಪ್ರತಿಭಟಿಸಿದ. ತಕ್ಷಣ ಹೆರಾನ್ ಮತ್ತು ಮಬೂಶ್‌ಖಾನ್ ಸೈನ್ಯ ಪೂಲಿತ್ತೇವನ್ ಕೋಟೆಯನ್ನು ವಶಪಡಿಸಿಕೊಂಡಿತು. ಇಂಗ್ಲಿಷರ ಸೈನ್ಯದಲ್ಲಿ ಬಂದೂಕುಗಳೂ, ಫಿರಂಗಿಗಳು, ಸ್ಫೋಟಕಗಳು ಇತ್ಯಾದಿ ಆಯುಧಗಳಿದ್ದವು. ಇಷ್ಟೆಲ್ಲ ಆಧುನಿಕ ಶಸ್ತ್ರಾಸ್ತ್ರಗಳಿದ್ದರೂ ಪೂಲಿತ್ತೇವನ್ ಕೋಟೆಯೊಳಗೆ ನುಗ್ಗಲು ಆ ಸೈನ್ಯಕ್ಕೆ ಸಾಧ್ಯವಾಗಲಿಲ್ಲ. ಶತ್ರುಸೈನ್ಯದಲ್ಲಿದ್ದ ಆಹಾರಪದಾರ್ಥ ಖಾಲಿಯಾಗುತ್ತ ಬಂತು. ಇದನ್ನೇ ಕಾಯುತ್ತಿದ್ದ ಪೂಲಿತ್ತೇವನ್ ಸೈನ್ಯದೊಂದಿಗೆ ಕೋಟೆಯಿಂದ ಹೊರಬಂದು ಶತ್ರುಸೈನಿಕರ ಮೇಲೆರಗಿ, ಎಲ್ಲರನ್ನೂ ಸಂಹಾರ ಮಾಡಿದ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ 100 ವರ್ಷಗಳ ಹಿಂದೆಯೇ, ಹೀಗೆ 1755ರಲ್ಲಿ ಒಬ್ಬ ಸಾಮಾನ್ಯ ಪಾಳೇಗಾರ ಪೂಲಿತ್ತೇವನ್ ಇಂಗ್ಲಿಷರ ಮೇಲೆರಗಿ, ಸಂಪೂರ್ಣ ಸದೆಬಡಿದಿದ್ದ.
ಅನಂತರ 1772ರಲ್ಲಿ ಮುತ್ತುವಡಗನಾಥನ್ ಮತ್ತು ವೇಲು ನಾಚಿಯರ್ ನೇತೃತ್ವದಲ್ಲಿ, 1765ರಲ್ಲಿ ಮುತ್ತುರಾಮಲಿಂಗ ಸೇತುಪತಿ ಹಾಗೂ 1799ರಲ್ಲಿ ವೀರಪಾಂಡ್ಯ ಕಟ್ಟಬೊಮ್ಮನ್ ಸಾರಥ್ಯದಲ್ಲಿ ಬ್ರಿಟಿಷ್ ಸೈನ್ಯದ ಹುಟ್ಟಡಗಿಸಲಾಗಿತ್ತು.
ಇಂಗ್ಲಿಷರ ವಿರುದ್ಧ ಗೆಲುವು ಸಾಧಿಸಿದ್ದರೂ ಪೂಲಿತ್ತೇವನ್‌ಗೆ ಇಂಗ್ಲಿಷರು ಮತ್ತೆ ತನ್ನ ತಂಟೆಗೆ ಬರಲಾರರು ಎಂಬ ಖಾತ್ರಿಯೇನೂ ಇರಲಿಲ್ಲ. ಇಂಗ್ಲಿಷರ ‘ನರಿಬುದ್ಧಿ’ ಆತನಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿ ಆತ ಮತ್ತೆ ಪಾಳೇಗಾರರನ್ನು ಒಂದುಗೂಡಿಸುವ ಯತ್ನಕ್ಕೆ ಕೈಹಾಕಿದ. ಆದರೆ ಅಷ್ಟರಲ್ಲೇ ಪಾಳೇಗಾರರಲ್ಲಿ ಹಲವಾರು ಸ್ವಾರ್ಥಿಗಳಾಗಿ ಇಂಗ್ಲಿಷರ ಜೊತೆ ಕೈ ಜೋಡಿಸಿಬಿಟ್ಟಿದ್ದರು. ದೇಶಹಿತಕ್ಕಿಂತ ಅವರಿಗೆ ತಮ್ಮ ಸ್ವಂತ ಹಿತಾಸಕ್ತಿಯೇ ಮುಖ್ಯವೆನಿಸಿಬಿಟ್ಟಿತ್ತು. ತಮಗೆ ತಮ್ಮ ಪಾಳಯಂನ ಆಳ್ವಿಕೆ ಕೈತಪ್ಪದಿದ್ದರೆ ಅಷ್ಟೇ ಸಾಕು ಎಂಬ ಸ್ವಾರ್ಥಭಾವ ಹೆಪ್ಪುಗಟ್ಟಿತ್ತು. ಸ್ವಾರ್ಥಿ ಪಾಳೇಗಾರರ ಈ ಮನಸ್ಥಿತಿ ಅರಿತ ಇಂಗ್ಲಿಷರು ಯೂಸೂಫ್‌ಖಾನ್ ಎಂಬ ತಮಿಳುಮೂಲದ ವ್ಯಕ್ತಿಯ ನೇತೃತ್ವದಲ್ಲಿ ಸ್ವಾರ್ಥಿ ಪಾಳೇಗಾರರನ್ನೆಲ್ಲ ಒಗ್ಗೂಡಿಸಿ ‘ನೇಟಿವ್ ಆರ್ಮಿ’ ಸ್ಥಾಪಿಸಿ, ಪೂಲಿತ್ತೇವನ್ ವಿರುದ್ಧ ಈ ಸೈನ್ಯವನ್ನು ಛೂಬಿಟ್ಟರು.
ಆರಂಭದಲ್ಲಿ ತಿರುವಾಂಕೂರಿನ ರಾಜ ಮಾರ್ತಾಂಡವರ್ಮ ಮತ್ತಿತರ ಕೆಲವು ಪಾಳೇಗಾರರು ಪೂಲಿತ್ತೇವನ್‌ಗೆ ಬೆಂಬಲ ನೀಡಿದರಾದರೂ, ಅನಂತರ ಬೆಂಬಲ ಹಿಂತೆಗೆದುಕೊಂಡರು. ಆದರೂ 1755ರಿಂದ 1767ರವರೆಗೆ ಹನ್ನೆರಡು ವರ್ಷಗಳ ಕಾಲ ಇಂಗ್ಲಿಷರ ವಿರುದ್ಧ ಪೂಲಿತ್ತೇವನ್ ನಿರಂತರವಾಗಿ ಸೆಣಸಿ, ಸೋಲುಣಿಸಿದ್ದ. ಆದರೆ ಇಂಗ್ಲಿಷ್ ಸೈನಿಕರು ಇಂಗ್ಲೆಂಡಿನಿಂದ ತರಿಸಿದ್ದ ಭರ್ಜರಿ ಫಿರಂಗಿಗಳ ಮೂಲಕ ಪೂಲಿತ್ತೇವನ್ ಭದ್ರಕೋಟೆಯನ್ನೊಡೆಯುವಲ್ಲಿ ಸಫಲರಾದರೂ, ಪೂಲಿತ್ತೇವನ್‌ಗೆ ತಪ್ಪಿಸಿಕೊಳ್ಳದೆ ಅನ್ಯಮಾರ್ಗವೇ ಈಗ ಉಳಿದಿರಲಿಲ್ಲ. ಈಗ ಕುಂಭದ್ರೋಣವಾಗಿ ಸುರಿಯುತ್ತಿದ್ದ ಮಳೆಗಾಲ ಪೂಲಿತ್ತೇವನ್‌ಗೆ ತಪ್ಪಿಸಿಕೊಳ್ಳಲು ನೆರವಾಗಿತ್ತು.
ಪೂಲಿತ್ತೇವನ್ ಸಾವಿನ ಬಗ್ಗೆ ಎರಡು ಬಗೆಯ ವ್ಯಾಖ್ಯಾನಗಳಿವೆ. ಆತನನ್ನು ಇಂಗ್ಲಿಷರು ಕೋಳ ತೊಡಿಸಿ ಬಂಧಿಸಿ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲಿ ಶಂಕರನ್ ಕೊಯಿಲ್ ದೇಗುಲದಲ್ಲಿ ಪೂಜೆ ಸಲ್ಲಿಸುವ ಬಯಕೆ ವ್ಯಕ್ತಪಡಿಸಿದನಂತೆ, ಇಂಗ್ಲಿಷರು ಅದಕ್ಕೆ ಅವಕಾಶ ನೀಡಿದರು. ಆ ಸಮಯದಲ್ಲಿ ದಿವ್ಯಜ್ಯೋತಿಯೊಂದು ಪ್ರತಿಫಲಿಸಿ, ಆ ಜ್ಯೋತಿಯಲ್ಲಿ ಪೂಲಿತ್ತೇವನ್ ವಿಲೀನನಾದ ಎಂಬುದು ಒಂದು ವ್ಯಾಖ್ಯಾನವಾದರೇ, ಇಂಗ್ಲಿಷರು ಆತನನ್ನು ಬಂಧಿಸಿ ಕರೆದೊಯ್ದು ಗಲ್ಲಿಗೇರಿಸಿ ಸಾಯಿಸಿದರು ಎಂಬುದು ಇನ್ನೊಂದು ವ್ಯಾಖ್ಯಾನ. ಆದರೆ ಯಾವುದಕ್ಕೂ ದಾಖಲೆ ಈಗ ಇಲ್ಲ.
ಅದೇನೇ ಇರಲಿ, ಇಂಗ್ಲಿಷರ ದುರಾಡಳಿತದ ವಿರುದ್ಧ ಪೂಲಿತ್ತೇವನ್ ತನ್ನುಸಿರಿನ ಕೊನೆಯವರೆಗೂ ಹೋರಾಡಿದ ಮೊಟ್ಟಮೊದಲ ಸ್ವಾತಂತ್ರ್ಯ ಸೇನಾನಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಪಾಶ್ಚಾತ್ಯ ಇತಿಹಾಸಕಾರರಾಗಲಿ, ನಮ್ಮದೇ ಇತಿಹಾಸಕಾರರಾಗಲಿ ಪೂಲಿತ್ತೇವನ್ ಎಂಬ ಪರಾಕ್ರಮಿ ಸ್ವಾತಂತ್ರ್ಯ ಸೇನಾನಿಯ ಬಗ್ಗೆ ಒಂದಕ್ಷರವನ್ನು ದಾಖಲಿಸದಿರುವುದು ನಮ್ಮ ಸ್ವಾತಂತ್ರ್ಯ ಸಮರ ಇತಿಹಾಸಕ್ಕೆ ಎಸಗಿರುವ ಘೋರ ಅಪಚಾರವೇ ಸರಿ. ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ್‌ರಂತಹ ಪರಮಪಾಪಿ ದ್ರೋಹಿಗಳ ಚರಿತ್ರೆ ಉರುಹೊಡೆಯುವ ನಮ್ಮ ಮಕ್ಕಳಿಗೆ ಹುಲಿಯಂತಹ ವೀರ ಪರಾಕ್ರಮಿ ಪೂಲಿತ್ತೇವನ್ ಬಗ್ಗೆ ಕಿಂಚಿತ್ತು ತಿಳಿಯದಿರುವುದು ಇತಿಹಾಸದ ಘೋರ ವ್ಯಂಗ್ಯವಲ್ಲದೆ ಮತ್ತೇನು?
ಇದನ್ನೂ ಓದಿ | ಕ್ರಾಂತಿಯ ಕಿಡಿಗಳು ಅಂಕಣ | 24 ವರ್ಷ ಸೆರೆಯಲ್ಲಿದ್ದ ಸ್ವಾತಂತ್ರ್ಯ ಸೇನಾನಿ ಸೇತುಪತಿ