Site icon Vistara News

Independence Day 2023 : ಹೈದರಾಬಾದ್‌ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ನಡೆದಿತ್ತು ಮಹಾ ದಂಗೆ

Freedom Fight

ಅಲಕಾ ಕೆ
ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು (Independence Day 2023) ಕನ್ನಡ ಸೀಮೆಯ ಪ್ರಾಂತೀಯ ನೆಲೆಯಿಂದ ಸಿಂಹಾವಲೋಕನ ಮಾಡುವ ಉದ್ದೇಶದ ಇನ್ನೊಂದು ಮುಖವಾಗಿ, ಹೈದರಾಬಾದ್-ಕರ್ನಾಟಕ ಭಾಗದಲ್ಲಿ ನಡೆದ ಹೋರಾಟದ ಅವಲೋಕನವಿದು. ಈ ಪ್ರಾಂತ್ಯದ ಉದ್ದಗಲಕ್ಕೂ ಹಲವು ಅರಸೊತ್ತಿಗೆಗಳು ಹರಡಿಕೊಂಡಿದ್ದವು. ಹೈದರಾಬಾದ್‌ನ ನಿಜಾಮರ ಪ್ರಭಾವದಿಂದ ಹಿಡಿದು, ಸ್ವತಂತ್ರ ಅರಸರು, ಸಾಮಂತರು, ತುಂಡರಸರು, ದೇಸಾಯರು, ದೇಶಮುಖರು, ದೇಶಪಾಂಡೆಗಳಂಥ ಭಾರೀ ಜಮೀನುದಾರರು- ಹೀಗೆ ಹಲವರ ಕೈಗಳಲ್ಲಿತ್ತು ಈ ಭಾಗ. ಆದರೆ ತನ್ನ ಸರ್ವಾಧಿಕಾರದ ವಿರುದ್ಧ ಇವರೆಲ್ಲರ ದಂಗೆಗಳನ್ನು ಬ್ರಿಟಿಷ್‌ ಸರಕಾರ ಹತ್ತಿಕ್ಕಿದ್ದು ವಂಚನೆಯಿಂದ ಮತ್ತು ಬೆನ್ನಿಗೆ ಹೊಕ್ಕಿರಿದ ದ್ರೋಹಿಗಳ ನೆರವಿನಿಂದ.

ಕೊಪ್ಪಳದ ವೀರಪ್ಪ ದೇಸಾಯಿ ಬಂಡಾಯ…

ಇಡೀ ಹೈದರಾಬಾದ್-ಕರ್ನಾಟಕ ಪ್ರಾಂತ್ಯದಲ್ಲಿ ಮೊದಲ ಬಾರಿಗೆ, 1819ರಲ್ಲೇ ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಕೀರ್ತಿ ಸಲ್ಲುವುದು ಕೊಪ್ಪಳದ ವೀರಪ್ಪ ದೇಸಾಯಿಗೆ. ಬ್ರಿಟಿಷರು ಮತ್ತು ನಿಜಾಮರ ದಬ್ಬಾಳಿಕೆಯಿಂದ ಬೇಸತ್ತಿದ್ದ ರೈತರನ್ನು ಒಗ್ಗೂಡಿಸಿ, ಕರವಿರೋಧಿ ಚಳುವಳಿಯನ್ನು ಸಂಘಟಿಸಿದರು ವೀರಪ್ಪ ದೇಸಾಯಿ. ಜೊತೆಗೆ, ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಸುಮಾರು 500ಕ್ಕೂ ಹೆಚ್ಚಿನ ಸೈನಿಕರ ತುಕಡಿಯೊಂದರನ್ನು ಸೇರಿಸಿ, ಕೊಪ್ಪಳ ಕೋಟೆ ಮತ್ತು ಬಹದ್ದೂರ್‌ ಬಂಡಿ ಕೋಟೆಯಲ್ಲಿ ಆಡಳಿತ ನಡೆಸಿದ್ದರು. ಈ ಬಂಡಾಯದ ದಮನಕ್ಕೆಂದು ಮೊದಲಿಗೆ ಬ್ರಿಟಿಷರು ಕಳುಹಿಸಿದ್ದ ಸೇನೆಗೆ ಸೋಲುಂಟಾಯಿತು. ಮತ್ತೆ ಕಳುಹಿಸಿದ ದೊಡ್ಡ ಸೇನೆಯೊಂದಿಗೆ ಹೋರಾಡುತ್ತಾ ವೀರಪ್ಪ ವೀರಮರಣ ಹೊಂದಿದರು. ಆದರೆ ಕೋಟೆಯಿಂದ ತಪ್ಪಿಸಿಕೊಂಡು ಅಜ್ಞಾತವಾಗುಳಿದರು ಎಂದೂ ಹೇಳಲಾಗುತ್ತದೆ.

ಅದರ ಮಾರನೇ ವರ್ಷ, ಅಂದರೆ 1820ರಲ್ಲಿ ಶಿವಲಿಂಗಯ್ಯ ದೇಶಮುಖ್‌, ತಿರುಮಲರಾವ್‌ ದೇಶಮುಖ್‌, ಮೇಘಶ್ಯಾಮ ರಾವ್ ಮುಂತಾದವರು ಬಂಡೆದ್ದರು. ಇದು ದೇಶಮುಖ್‌ ದಂಗೆ ಎಂದೇ ಗುರುತಿಸಿಕೊಂಡಿದೆ. ಮಾತ್ರವಲ್ಲ, ಕಲಕೇರಿ ತಿಮ್ಮಾಪುರ ದೇಸಾಯಿ, ಕಲಕೇರಿ ದೇಸಾಯಿ, ಹಮ್ಮಿಗೆ ಕೆಂಚನಗೌಡ, ಭಾಲ್ಕಿಯ ರಾಮರಾಯ ಮುಂತಾದ ಹಲವಾರು ಭಾರೀ ಜಮೀನುದಾರರು ಬಂಡೆದ್ದರು. ಇವರೆಲ್ಲರನ್ನು ಹತ್ತಿಕ್ಕಲು ನಿಜಾಮರ ನೆರವಿನಿಂದಲೇ ಬ್ರಿಟಿಷ್‌ ಆಡಳಿತ ಪ್ರಯತ್ನಿಸಿತು. ನೂರಾರು ಜನರನ್ನು ಬಂಧಿಸಿ, ಅವರಲ್ಲಿ ಬಹಳಷ್ಟು ಮಂದಿಗೆ ಮರಣದಂಡನೆ ವಿಧಿಸಲಾಯಿತು. ಇವರೆಲ್ಲ ಮೊದಲಿಗೆ ತಂತಮ್ಮ ಹಿತ ಕಾಯ್ದುಕೊಳ್ಳುವುದಕ್ಕೆ ಬ್ರಿಟಷರ ವಿರುದ್ಧ ತೋಳೇರಿಸಿದರೂ, ಇಡೀ ಸಂಘರ್ಷವು ಮುಂದೆ ಮಹತ್ವದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿಯನ್ನು ಹೊತ್ತಿಸಿತು.

ಸಿಪಾಯಿ ದಂಗೆಯಲ್ಲಿ ಮುಗಿಲು ಮುಟ್ಟಿದ ಹೋರಾಟ

ಸ್ವಾಯತ್ತೆಗಾಗಿ ನಡೆಸುತ್ತಿದ್ದ ಸಶಸ್ತ್ರ ಹೋರಾಟಗಳು ಮತ್ತೊಂದು ಮಜಲನ್ನು ಮುಟ್ಟಿದ್ದು 1857ರಲ್ಲಿ ಇಡೀ ದೇಶವನ್ನೇ ವ್ಯಾಪಿಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ . ಸುರಪುರದ ವೆಂಕಟಪ್ಪ ನಾಯಕ, ನರಗುಂದದ ರಾಜರು, ಧಾರವಾಡದ ದೇಸಾಯಿಗಳು ಮುಂತಾದ ಹಲವರು ಮಂಡರಗಿಯ ವೀರ ಭೀಮರಾಯನ ಮುಂದಾಳತ್ವದಲ್ಲಿ ಬ್ರಿಟಿಷರನ್ನು ಎದುರಿಸಿದರು. ಮಂಡರಗಿಯ ಭೀಮರಾಯ ಇಂಗ್ಲಿಷ್‌ ಕಲಿತು ಬ್ರಿಟಿಷ್‌ ಸೇನೆಯಲ್ಲಿದ್ದಾತ. ಆದರೆ ಸ್ವಾತಂತ್ರ್ಯದ ತೀವ್ರ ಹಂಬಲವನ್ನು ಮನದಲ್ಲಿ ಹೊತ್ತಿದ್ದ ಆತನಿಗೆ ಬ್ರಿಟಿಷರ ವ್ಯವಹಾರ ಸಹ್ಯವಾಗಲಿಲ್ಲ. ಸೊರಟೂರು ದೇಸಾಯಿ, ಹಮ್ಮಿಗೆ ಕೆಂಚನಗೌಡ, ಡಂಬಳದ ದೇಶಮುಖ್‌, ಗೋವಿನಕೊಪ್ಪದ ದೇಸಾಯಿ ಮುಂತಾದವರನ್ನು ಸಂಘಟಿಸಿ ಶಸ್ತ್ರಾಸ್ತ್ರಗಳನ್ನು ಸಂಚಯಿಸಿದ. ಇದನ್ನು ಬ್ರಿಟಿಷರು ನಾಶ ಮಾಡಿದರು. ಆಗ ಆಳುವವರ ವಿರುದ್ಧ ನೇರ ಯುದ್ಧ ಸಾರಿದ ಆತ ಗದುಗಿನ ಮತ್ತು ಕೊಪ್ಪಳದ ಖಜಾನೆಯನ್ನು ಲೂಟಿ ಮಾಡಿದ. ಇದರಿಂದ ಆತನ ಕೋಟೆಗೆ ಬ್ರಿಟಿಷ್‌ ಸೇನೆ ಮುತ್ತಿಗೆ ಹಾಕಿತು. ನಡೆದಂಥ ಘೋರ ಯುದ್ಧದಲ್ಲಿ ಭೀಮರಾಯ ಮತ್ತು ಆತನ ಹಲವು ಸಹಚರರು ಪ್ರಾಣತ್ಯಾಗ ಮಾಡಿದರು.

ಸುರಪುರದ ವೆಂಕಟಪ್ಪ ನಾಯಕನ ಸಾಹಸ

ಸುರಪುರದ ವೆಂಕಟಪ್ಪ ನಾಯಕನೂ ಇಂಥದ್ದೇ ವೀರರಲ್ಲೊಬ್ಬ. ನಾನಾ ಸಾಹೇಬ್‌ ಪೇಶ್ವೆಯೊಂದಿಗೆ ಈತನಿಗೆ ಸಂಪರ್ಕವಿತ್ತು. ಸುರಪುರ ಸಂಸ್ಥಾನದ ಕಡೆಯ ದೊರೆ ಈತ. ಬ್ರಿಟಿಷರ ಆಡಳಿತವನ್ನು ಒಪ್ಪಿಕೊಳ್ಳದ ಆತನ ಮೇಲೆ 1958ರಲ್ಲಿ ಆಳುವವರು ಯುದ್ಧ ಸಾರಿದರು. ಸುರಪುರದ ಕೋಟೆಗೆ ಮುತ್ತಿಗೆ ಹಾಕಿ ಆತನನ್ನು ಬಂಧಿಸಿ, ಹೃದರಾಬಾದಿನ ಸೆರೆಯಲ್ಲಿಟ್ಟರು. ಈ ಸಂದರ್ಭದಲ್ಲಿ ನಿಜಾಮರಿಂದ ಬ್ರಿಟಿಷರಿಗೆ ನೆರವು ದೊರೆಯಿತು. ಆತನ ಶಿಕ್ಷೆಯ ಅವಧಿ ಮುಗಿದ ನಂತರ ರಾಜ್ಯವನ್ನು ಮರಳಿಸುವುದಾಗಿ ಬ್ರಿಟಿಷರು ಹೇಳಿದ್ದರೂ, ಸೆರೆಯಲ್ಲೇ ಆತ ಸಾವನ್ನಪ್ಪಿದ. ನಂತರ ಒಂದೆರಡು ವರ್ಷಗಳ ಕಾಲ ಬ್ರಿಟಿಷರ ವಶದಲ್ಲಿದ್ದ ಸುರಪುರವನ್ನು ನಂತರ ಬಹುಮಾನದಂತೆ ನಿಜಾಮರಿಗೆ ನೀಡಲಾಯಿತು.

ಇದೇ ರೀತಿಯ ವೀರಗಾಥೆ ನರಗುಂದದ ಬಾಬಾ ಸಾಹೇಬನದ್ದು. ಭಾಸ್ಕರ ರಾವ್‌ ಭಾವೆ ಎಂಬುದು ಆತ ನಿಜವಾದ ಹೆಸರು. ನರಗುಂದ ಸಂಸ್ಥಾನದಲ್ಲಿ ಆತ ಪಟ್ಟಕ್ಕೆ ಬಂದಾಗ ಅರಸೊತ್ತಿಗೆ ಸ್ಥಿತಿ ಆಶಾದಾಯಕವಾಗಿ ಇರಲಿಲ್ಲ. ಸಾಲ ವಿಪರೀತವಾಗಿತ್ತು. ಆದರೆ ಆತ ಬಹಳಷ್ಟು ಸುಧಾರಣೆಗಳನ್ನು ಮಾಡಿ, ದಕ್ಷತೆಯಿಂದ ಆಳುತ್ತಿದ್ದ. ಇದೇ ದಿನಗಳಲ್ಲಿ ಗವರ್ನರ್‌ ಜನರಲ್‌ ಡಾಲ್‌ಹೌಸಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ಬಾಬಾ ಸಾಹೇಬನನ್ನು ಕೆರಳಿಸಿತು. ಆತನಿಗೆ ಮಕ್ಕಳಿಲ್ಲದಿದ್ದರಿಂದ, ದತ್ತು ಸ್ವೀಕಾರಕ್ಕೆ ಆತ ಅನುಮತಿ ಕೇಳಿದ್ದರೂ, ಬ್ರಿಟಿಷ್‌ ಆಡಳಿತದಿಂದ ದೊರೆಯಲಿಲ್ಲ. ಇದರಿಂದ ಕುಪಿತನಾದ ಆತ ಬಂಡಾಯ ಸಾರಿದ್ದ. ಡಂಬಳ ಮತ್ತು ಹಮ್ಮಿಗೆ ದೇಸಾಯಿಗಳು ಹಾಗೂ ಮಂಡರಗಿಯ ಭೀಮರಾಯನೊಂದಿಗೆ ಈತನಿಗೆ ಗುಪ್ತವಾದ ನಂಟಿತ್ತು. ಎಲ್ಲರೂ ಒಟ್ಟಿಗೇ ದಂಗೆಯೇಳಲು ನಿರ್ಧರಿಸಿದ್ದರು. ಆದರೆ ಗುಪ್ತವಾಗಿ ಜನರನ್ನು ಪ್ರಚೋದಿಸುತ್ತಿದ್ದ ಸಂದರ್ಭದಲ್ಲಿ ಆತನ ಜೊತೆಗಾರರೇ ಅವನಿಗೆ ದ್ರೋಹ ಮಾಡಿದ್ದು ತಿಳಿಯಿತು. ಆದರೂ ಎದೆಗುಂದದೇ ಆತ ಬ್ರಿಟಿಷರೊಂದಿಗೆ ಯುದ್ಧದಲ್ಲಿ ಸೋಲಾಯಿತು. ಸೆರೆ ಸಿಕ್ಕ ಆತನನ್ನು ಬ್ರಿಟಿಷರು ಸಾರ್ವಜನಿಕವಾಗಿ ಗಲ್ಲಿಗೆ ಹಾಕಿದರು.

ಹೈದರಾಬಾದ್-ಕರ್ನಾಟಕದ ಭಾಗದಲ್ಲಿ ವ್ಯಾಪಕವಾಗಿದ್ದ ದಂಗೆಯನ್ನು ಬ್ರಿಟಿಷರು ಹತ್ತಿಕ್ಕಿದ್ದು, ಭಾರತೀಯರೇ ಆಗಿದ್ದರೂ ದ್ರೋಹ ಬಗೆದ ಗೋಮುಖವ್ಯಾಘ್ರಗಳಿಂದ. ಜೊತೆಗಾರರಂತೆ ಇದ್ದುಕೊಂಡು ಬ್ರಿಟಿಷರಿಗೆ ನೆರವಾದವರು, ರಹಸ್ಯಗಳನ್ನು ಅವರಲ್ಲಿಗೆ ತಲುಪಿಸಿದರು, ರಾಜ್ಯದಾಸೆಗೆ ಸೇನೆ ಕಳುಹಿಸಿದವರು, ತಮ್ಮದೇ ಶಸ್ತ್ರಾಸ್ತ್ರ ಕೋಠಿಗಳನ್ನು ನಾಶ ಮಾಡಿದವರು- ಇಂಥ ವಂಚನೆಯ ಕಥೆಗಳು ಪ್ರತಿಯೊಬ್ಬ ವೀರನ ಬೆನ್ನಿಗೆ ಕೇಳಿಬರುತ್ತವೆ. ನಮ್ಮವರ ವಿರುದ್ಧ ನಮ್ಮವರನ್ನೇ ಎತ್ತಿಕಟ್ಟುವ ಬ್ರಿಟಿಷರ ವ್ಯೂಹ ಸಫಲಗೊಂಡಲ್ಲೆಲ್ಲಾ ದಂಗೆಗಳು ಬಲ ಕಳೆದುಕೊಂಡವು, ಕ್ರಾಂತಿಗಳು ನೆಲಕಚ್ಚಿದವು, ವೀರರು ಜೀವ ಕಳೆದುಕೊಂಡರು.

ಹೋರಾಟಗಾರರ ಮಹಾ ಪ್ರವಾಹ…

ಚಳುವಳಿಯ ಹಂತ: ಬಲಪ್ರಯೋಗದಿಂದ ಬ್ರಿಟಿಷರನ್ನು ಓಡಿಸಲು ಸಾಧ್ಯವಿಲ್ಲ ಎಂಬ ಅರಿವು ಜನತೆಯಲ್ಲಿ ಹೆಚ್ಚುತ್ತಿದ್ದಂತೆ, ಆಳುವವರು ಕ್ರೌರ್ಯ, ದಬ್ಬಾಳಿಕೆಗಳೂ ಹೆಚ್ಚಾಗಿದ್ದವು. ಇನ್ನೀಗ ಅವರಿಗೆ ಆಳಲೇ ಸಾಧ್ಯವಿಲ್ಲದಂತೆ ಅಸಹಕಾರ ನೀಡುವುದು ಪ್ರತಿಭಟನೆಯ ಮಾರ್ಗವಾಗಿ ಜನತೆಗೆ ಗೋಚರವಾಯಿತು. ಅಷ್ಟರಲ್ಲಾಗಲ್ಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಉದಯಿಸಿತ್ತು. ಮಹಾತ್ಮಾ ಗಾಂಧಿ ಹೋರಾಟದ ಮುಂಚೂಣಿಯಲ್ಲಿದ್ದರು. ವಿದ್ಯಾವಂತರ ಪ್ರಮಾಣ ಕ್ರಮೇಣ ಹೆಚ್ಚುತ್ತಿತ್ತು. ಇಂಗ್ಲೆಂಡ್‌ನಲ್ಲಿ ಅವರು ತಮ್ಮ ಪ್ರಜೆಗಳಿಗೆ ಅನುಸರಿಸುವ ನೀತಿಗೂ, ಭಾರತದಲ್ಲಿ ಅನುಸರಿಸುವ ನೀತಿಗೂ ಅಜಗಜಾಂತರ ಭಿನ್ನತೆಯಿದೆ ಎಂಬುದನ್ನು ಅರಿತ ಜನ, ಚಳುವಳಿಗಳ ಮೂಲಕ ಅಕ್ಷರಶಃ ಬೀದಿಗಿಳಿದರು. ಒಂದು ರಾಜ್ಯ, ಒಂದು ಊರು, ಒಂದು ಮನೆಯೂ ಈ ಮಹಾಪ್ರವಾಹದಿಂದ ಹೊರಗುಳಿಯಲಿಲ್ಲ. ಭಾಷೆ, ಜಾತಿ, ಮತ, ಪ್ರಾಂತ್ಯಗಳನ್ನು ಮೀರಿ ನಿಂತ ಭಾರತೀಯರು ಸ್ವಾತಂತ್ರ್ಯವೆಂಬ ಏಕಲಕ್ಷ್ಯವನ್ನು ಇರಿಸಿಕೊಂಡಿದ್ದರು.

ಇದನ್ನೂ ಓದಿ : Independence Day 2023: ಮುಂಬಯಿ ಕರ್ನಾಟಕದಾದ್ಯಂತ ವ್ಯಾಪಿಸಿತ್ತು ಸ್ವಾತಂತ್ರ್ಯ ಹೋರಾಟದ ಜ್ವಾಲೆ

1920ರಲ್ಲಿ ಅಸಹಕಾರ ಚಳುವಳಿ ಮೊದಲಾಯಿತು. ಅಷ್ಟರಲ್ಲಿ ಗೋಪಾಲಕೃಷ್ಣ ಗೋಖಲೆಯವರ ಪ್ರಭಾವ ಕರ್ನಾಟಕದ ಉತ್ತರ ಭಾಗದಲ್ಲಿ ವಿಸ್ತರಿಸುತ್ತಿತ್ತು. ಲೋಕಮಾನ್ಯ ತಿಲಕರ ಅತ್ಯಂತ ಪ್ರಖರವಾದ ವಿಚಾರ ಧಾರೆಯಿಂದ ಈ ಭಾಗದ ಜನರು ಸ್ವದೇಶಿ ಚಳುವಳಿಯತ್ತ ಆಕರ್ಷಿತರಾಗುತ್ತಿದ್ದರು. ಬೀದರ್‌, ಗುಲಬರ್ಗಾ, ರಾಯಚೂರು ಮುಂತಾದೆಡೆಗಳಲ್ಲಿ ಅಸಹಕಾರ ಚಳುವಳಿಗಳನ್ನು ಜಯರಾಂ ನಗರುಂದ, ಕೋಲಾಚಲಂ ವೆಂಕಟರಾವ್‌, ರಾಮಾಚಾರ್ಯ, ರಮಾನಂದತೀರ್ಥ, ಕೃಷ್ಣಾಚಾರ್ಯ, ಜನಾರ್ದನ ದೇಸಾಯಿ ಮುಂತಾದ ಹಲವಾರು ಮುಖಂಡರ ನೇತೃತ್ವದಲ್ಲಿ ಸಂಘಟಿಸಲಾಯಿತು. ಜನ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಂತೆ ಸರಕಾರವೇ ವ್ಯಗ್ರವಾಗಿ ಹಿಂಸೆಗೆ ಇಳಿಯುತ್ತಿದ್ದ ಪ್ರಕರಣಗಳು ಎಲ್ಲೆಡೆ ನಡೆಯುತ್ತಿದ್ದವು. ಖಿಲಾಫತ್‌ ಚಳುವಳಿ, ಹೋಮ್ ರೂಲ್‌ ಚಳುವಳಿ, ಅಸಹಕಾರ, ಕರ ನಿರಾಕರಣೆ ಮುಂತಾದ ಹತ್ತು ಹಲವು ಚಳುವಳಿಗಳಲ್ಲಿ ಹೈದರಾಬಾದ್‌-ಕರ್ನಾಟಕದ ಜನತೆ ಪೂರ್ಣಮನದಿಂದ ಭಾಗವಹಿಸಿದ್ದರು. ಉಳಿದೆಲ್ಲಾ ಪ್ರಾಂತ್ಯಗಳಲ್ಲಿ ಇದ್ದಂತೆಯೇ ಹೊಣೆಗಾರಿಕೆಯ ಸರಕಾರವನ್ನು ಮುಂದೊಂದು ದಿನ ಸ್ಥಾಪಿಸುವುದು ಮತ್ತು ಕನ್ನಡ ಸೀಮೆಯನ್ನು ಒಂದುಗೂಡಿಸುವ ಕನಸು ಈ ಭಾಗದ ಜನರಲ್ಲೂ ಕುಡಿ ಒಡೆಯತೊಡಗಿತ್ತು.

Exit mobile version