೧೮೫೭ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎರಡು ವರ್ಷಗಳ ಮೊದಲೇ ನಡೆದ ಹುಲು (ಹುಯಿಲು) ಚಳವಳಿ ನಮ್ಮ ವನವಾಸಿ ಬುಡಕಟ್ಟು ಜನಾಂಗಗಳ ಪರಾಕ್ರಮ, ಶೌರ್ಯ, ಸ್ವಾಭಿಮಾನಗಳನ್ನು ವಸಾಹತುಶಾಹಿ ಈಸ್ಟ್ ಇಂಡಿಯಾ ಕಂಪನಿಗೆ ಪರಿಚಯಿಸಿದ ಮಹತ್ವದ ವಿದ್ಯಮಾನ. ಮುಗ್ಧ, ಪ್ರಾಮಾಣಿಕ, ಕಷ್ಟಜೀವಿಗಳಾದ ಸಂತಾಲರು ಕಾಡು ಮೇಡುಗಳನ್ನು ಕಡಿದು ಭೂಮಿಯನ್ನು ಹದಗೊಳಿಸಿ, ಉತ್ತು, ಬಿತ್ತು ರಾಜ್‌ಮಹಲ್ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಂಡಿದ್ದರು. ಅವರನ್ನು ರೊಚ್ಚಿಗೆಬ್ಬಿಸಿ ಫೂತ್ಕರಿಸುವಂತೆ ಮಾಡಿದ್ದು ಆಂಗ್ಲರ ದೌರ್ಜನ್ಯ ದಬ್ಬಾಳಿಕೆ.
೧೭೯೩ಕ್ಕೆ ಮೊದಲು ಸಂತಾಲ್ ಸಮುದಾಯದ ವನವಾಸಿಗಳು ಕಟಕ್, ಸಿಂಗ್‌ಭುಮ್, ಧುಲ್‌ಭುಮ್, ಮಿಡ್ನಾಪುರ, ಬಾಂಕುರಾ, ಛೋಟಾನಾಗ್ಪುರ, ಬೀರ್‌ಭುಮ್ ಮೊದಲಾದ ಪ್ರದೇಶಗಳಲ್ಲಿ ಚದರಿ ಹೋಗಿದ್ದರು. ರಾಜ್‌ಮಹಲ್ ಕಾಡುಮೇಡುಗಳ ವನ್ಯಸಂಪತ್ತು ಕಂಡ ಆಂಗ್ಲರಿಗೆ ಅದನ್ನು ಲಪಟಾಯಿಸಿ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳುವ ದುರಾಲೋಚನೆ ಮೂಡಿತು. ತಮ್ಮ ದುರಾಲೋಚನೆ ಕಾರ್ಯಗತವಾಗಬೇಕಾದರೆ ಮೊದಲು ಸಂತಾಲರನ್ನು ಆ ಪ್ರದೇಶಗಳಿಂದ ಓಡಿಸಬೇಕು. ಆಂಗ್ಲರ ಈ ಕುತಂತ್ರಕ್ಕೆ ಕುಮ್ಮಕ್ಕು ನೀಡಿದ ನೀಚರೆಂದರೆ ಇದೇ ದೇಶದ ಅನ್ನ ತಿಂದು, ಇಲ್ಲಿನದೇ ಗಾಳಿ ಉಸಿರಾಡಿದ ಆ ಪ್ರದೇಶಗಳ ಜಮೀನುದಾರರು, ಗುತ್ತಿಗೆದಾರರು, ಲೇವಾದೇವಿಗಾರರು. ಅವರಿಗೆ ದೇಶಹಿತಕ್ಕಿಂತ ತಮ್ಮ ಸ್ವಾರ್ಥವೇ ದೊಡ್ಡದೆನಿಸಿತ್ತು. ಬ್ರಿಟಿಷರ ಬಾಲಬಡುಕರಾದ ಈ ಶಕುನಿ ಶನಿಗಳಿಂದ ಸಂತಾಲರ ಬದುಕು ಮೂರಾಬಟ್ಟೆಯಾಯಿತು. ಅವರೆಲ್ಲ ದಾಮನ್ – ಇ – ಕೋಹ್ ಎಂಬ ಪ್ರದೇಶದಲ್ಲಿ ನೆಲೆನಿಂತು, ಅಲ್ಲಿ ತಮ್ಮ ಪರಿಶ್ರಮದಿಂದ ಆ ಪ್ರದೇಶವನ್ನು ಸಸ್ಯಶ್ಯಾಮಲೆಯನ್ನಾಗಿಸಿದರು. ಅಲ್ಪತೃಪ್ತರಾಗಿ ಹೇಗೋ ಜೀವನ ಸಾಗಿಸುತ್ತಿದ್ದರು.
ಆದರೆ ಅಗತ್ಯ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿತ್ತು. ಜೊತೆಗೆ ಬಡತನ, ಮುಗ್ಧ ಅಶಿಕ್ಷಿತ ವನವಾಸಿ ಸಂತಾಲರು ಸಾಲ ಮಾಡದೆ ಜೀವನ ಸಾಗಿಸುವುದೇ ಕಷ್ಟಕರವಾಯಿತು. ಶ್ರೀಮಂತ ಜಮೀನುದಾರರು, ಲೇವಾದೇವಿಗಾರರು ಸಂತಾಲರಿಗೆ ಸಾಲ ನೀಡುತ್ತಿದ್ದರೂ ಶೇ. ೫೦ರಿಂದ ಶೇ. ೫೦೦ ರವರೆಗೆ ಬಡ್ಡಿ, ಚಕ್ರಬಡ್ಡಿ ವಿಧಿಸುತ್ತಿದ್ದರು. ಆಂಗ್ಲರ ಏಜೆಂಟರು ಸಂತಾಲರನ್ನು ಜೀತದಾಳುಗಳನ್ನಾಗಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದರು.
ಈ ಪರಿಯ ಕಂಡು ಕೇಳರಿಯದ ಶೋಷಣೆಯಿಂದ ಕಂಗಾಲಾದ ಮುಗ್ಧ ಸಂತಾಲರ ತಾಳ್ಮೆಯೂ ತಪ್ಪಿತು. ಸಂತಾಲ ಸಮುದಾಯದ ಸಿದ್ದೂ ಮುರ್ಮು ಹಾಗೂ ಕಾನೂ ಮುರ್ಮು ಎಂಬ ಸೋದರರ ನೇತೃತ್ವದಲ್ಲಿ ಆಂಗ್ಲರ ದಮನ, ದಬ್ಬಾಳಿಕೆ ವಿರುದ್ಧ ಹೋರಾಡಲು ಸಂತಾಲರು ನಿರ್ಧರಿಸಿದರು.
ಮೊದಲು ಸಿದ್ದೂ ಮತ್ತು ಕಾನೂ ಸೋದರರು ಬಾಗಲ್‌ಪುರ, ಬೀರ್‌ಭೂಮ್ ಗಳ ಕಮೀಷನರ್‌ಗಳು, ಕಲೆಕ್ಟರ್‌ಗಳು ಹಾಗೂ ಮ್ಯಾಜಿಸ್ಟ್ರೇಟರಿಗೆ ತಮ್ಮ ಬೇಡಿಕೆಗಳ ಪತ್ರ ಸಲ್ಲಿಸಿದರು. ಕಂದಾಯ ಸಂಗ್ರಹವನ್ನು ತಾವೇ ಮಾಡುತ್ತೇವೆ. ದಾಮಿನ್ – ಇ – ಕೊಹ್ ಪ್ರದೇಶದಿಂದ ಎಲ್ಲ ಜಮೀನುದಾರರು, ಲೇವಾದೇವಿಗಾರರನ್ನು ಬಹಿಷ್ಕರಿಸಿ, ನಮ್ಮ ಮೇಲಿನ ದೌರ್ಜನ್ಯ ನಿಲ್ಲಿಸಿ ಎಂಬುದು ಸಂತಾಲರ ಪ್ರಮುಖ ಬೇಡಿಕೆಗಳಾಗಿದ್ದವು. ಹದಿನೈದು ದಿನದೊಳಗೆ ತಮ್ಮ ಈ ಪತ್ರಕ್ಕೆ ಉತ್ತರಿಸಬೇಕೆಂದು ಗಡವು ನೀಡಿದ್ದರು.
ಆದರೆ ಬ್ರಿಟಿಷ್ ಸರ್ಕಾರ ಕ್ಯಾರೇ ಅನ್ನಲಿಲ್ಲ. ಸಂತಾಲರಿಗೆ ಕ್ರಾಂತಿ ಮಾರ್ಗ ಹಿಡಿಯುವುದು ಅನಿವಾರ್ಯವಾಯಿತು. ಅವರೊಳಗಿನ ಪರಾಕ್ರಮ, ಸ್ವಾಭಿಮಾನ ಪುಟಿದೆದ್ದಿತು. ಸಂತಾಲ ಸಮುದಾಯದ ಸಂಕೇತವಾಗಿದ್ದ ಸಾಲ ವೃಕ್ಷದ ಟೊಂಗೆಗಳನ್ನು ಕೈಯಲ್ಲಿ ಹಿಡಿದು ಸಂತಾಲರು ನೆಲೆಸಿದ್ದ ಪ್ರದೇಶಗಳಿಗೆಲ್ಲ ತೆರಳಿ ಕ್ರಾಂತಿಯ ಸಂದೇಶ ಹರಡಿದರು. ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಸನ್ನದ್ಧರಾಗಬೇಕೆಂದು ಸೂಚನೆ ನೀಡಿದರು. ಎಲ್ಲಡೆ ಸಂತಾಲರು ಜಾಗೃತರಾದರು. ತಮಟೆ, ಬೇರಿ, ನಗಾರಿ, ಕೊಂಬು, ಕಹಳೆಗಳ ಭೋರ್ಗರೆತ ಎಲ್ಲೆಡೆ ಕೇಳಿಬರತೊಡಗಿತು.
ಈ ಕ್ರಾಂತಿಯನ್ನು ಮೊಳಕೆಯಲ್ಲೆ ಚಿವುಟಿ ಹಾಕಲು ಆಂಗ್ಲರು ಕುತಂತ್ರ ಹೂಡಿದರು. ಪೊಲೀಸರು ಮುರ್ಮು ಸೋದರರ ಮೇಲೆ ಕಳ್ಳತನದ ಆರೋಪ ಹೊರಿಸಿ ಬಂಧಿಸಿದರು. ರೊಚ್ಚಿಗೆದ್ದ ಸಂತಾಲರು ತಿರುಗಿಬಿದ್ದರು. ಕತ್ತಿ ಹಿಡಿದ ಸಿದ್ದೂ ಮುರ್ಮು ಪೊಲೀಸ್ ಇನ್ ಸ್ಪೆಕ್ಟರ್ ಮೇಲೆರಗಿ, ಆತನ ರುಂಡಮುಂಡ ಬೇರ್ಪಡಿಸಿದ. ಸಂತಾಲರ ರೋಷಾಗ್ನಿಗೆ ಪೊಲೀಸ್ ಸಿಪಾಯಿಗಳಲ್ಲದೆ, ಜಮೀನುದಾರರು, ಶ್ರೀಮಂತರು, ಲೇವಾದೇವಿಗಾರರೂ ತತ್ತರಿಸಿದರು. ಈ ಸುದ್ದಿ ಕಂಪನಿ ಸರ್ಕಾರದ ನಿದ್ದೆಗೆಡಿಸಿತು. ಸಂತಾಲರನ್ನು ಬಗ್ಗು ಬಡಿಯಲು ಜನರಲ್ ಲಾಯ್ಡ್ ನೇತೃತ್ವದಲ್ಲಿ ಇಂಗ್ಲಿಷ್ ಪಡೆ ಹೊರಟಿತು.
ಇಂಗ್ಲಿಷ್ ಸೈನ್ಯ ಸಂತಾಲರನ್ನು ಸಿಕ್ಕಸಿಕ್ಕಲ್ಲಿ ನಿರ್ದಯವಾಗಿ ಗುಂಡು ಹೊಡೆದು ಸಾಯಿಸಿದರು. ಸಂತಾಲರ ಬಿಲ್ಲುಬಾಣ, ಭರ್ಜಿ, ಕತ್ತಿ, ಗುರಾಣಿಗಳು ಸಾಕಷ್ಟು ಮಂದಿ ಆಂಗ್ಲ ಸೈನಿಕರನ್ನೂ ಬಲಿ ತೆಗೆದುಕೊಂಡಿತು. ಕಾಡುಮೇಡುಗಳಲ್ಲಿ ಮಣ್ಣಿನ ಕೋಟೆ ಗೋಡೆ ಕಟ್ಟಿಕೊಂಡು ತಮ್ಮ ಕೊನೆಯುಸಿರಿನವರೆಗೂ ಸಂತಾಲರು ಹೋರಾಡಿದರು.
ಸುಮಾರು ಆರು ತಿಂಗಳು ನಡೆದ ಈ ಸಂತಾಲರ ಕ್ರಾಂತಿ ಕೊನೆಗೂ ಆಂಗ್ಲರ ಕುಟಿಲ ತಂತ್ರಗಳಿಂದಾಗಿ ಆಂತ್ಯಗೊಂಡಿತು. ೧೮೫೫ ರ ನವೆಂಬರ್ ೩೦ ರಂದು ಕಾನೂ ಮುರ್ಮು ಬಂಧನಕ್ಕೊಳಗಾಗಿ ೧೮೫೬ ರ ಫೆಬ್ರವರಿ ೨೩ರಂದು ಅವನ ಹಳ್ಳಿಯಲ್ಲೇ ಗಲ್ಲಿಗೇರಿಸಲ್ಪಟ್ಟ. ಅವನ ಸೋದರ ಸಿದ್ದೂ ಮುರ್ಮು ತಮ್ಮವರ ವಿಶ್ವಾಸದ್ರೋಹಕ್ಕೆ ಬಲಿಯಾಗಿ ೧೮೫೫ ರ ಡಿಸೆಂಬರ್ ೧೧ ರಂದು ಬಾಬೂಪುರ್ ಎಂಬಲ್ಲಿ ಗಲ್ಲಿಗೇರಬೇಕಾಯಿತು.
ʼಐವತ್ತು ಸಾವಿರ ಸಂತಾಲ ಕ್ರಾಂತಿಕಾರಿಗಳ ಪೈಕಿ ಸುಮಾರು ೨೦ ಸಾವಿರ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಇಂಡಿಯಾ ಆರ್ಮಿ ಕೊಂದುಹಾಕಿತುʼ , ಎಂದು ಹಂಟರ್ ಎಂಬ ಚರಿತ್ರೆಯ ಲೇಖಕ ಬರೆದಿದ್ದಾನೆ. ಸಂತಾಲರ ಹುಲ್ (ಹುಯಿಲ್) ಚಳವಳಿಯ ಪರಿಣಾಮವಾಗಿ ʼಸಂತಾಲ್ ಪರಗಣʼ ಎಂಬ ವಿಶೇಷ ಜಿಲ್ಲೆಯೇ ಮುಂದೆ ನಿರ್ಮಾಣವಾಯಿತು. ಸಂತಾಲರಿಗೆ ಮಾನ್ಯತೆ ದೊರಕಿತು.
ಹೌದು, ಸಂತಾಲರ ಹೋರಾಟ ವ್ಯರ್ಥವಾಗಲಿಲ್ಲ. ಅವರ ಹೋರಾಟಕ್ಕೆ ಸ್ವಾತಂತ್ರ್ಯ ಬಂದ ೭೫ ವರ್ಷಗಳ ಬಳಿಕ ಸೂಕ್ತವಾದ ಮಾನ್ಯತೆಯೇ ದೊರಕಿದೆ! ಇತಿಹಾಸದ ಚಕ್ರ ಸಂಪೂರ್ಣವಾಗಿ ಒಂದು ಸುತ್ತು ತಿರುಗಿದೆ. ಸಂತಾಲ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಈಗ ನಮ್ಮ ದೇಶದ ಹೆಮ್ಮೆಯ ರಾಷ್ಟ್ರಪತಿಯಾಗಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ. ಹುತಾತ್ಮ ಸಿದ್ದು ಮುರ್ಮು, ಕಾನೂ ಮುರ್ಮುಗಳ ಆತ್ಮಕ್ಕೆ ಈಗ ಸಮಾಧಾನ ದೊರಕಿರಬಹುದು!