Site icon Vistara News

Amrit Mahotsav | ಹಲಗಲಿಯ ಬಲಶಾಲಿ ಕಲಿಗಳು

amrit mahotsav
http://vistaranews.com/wp-content/uploads/2022/08/halagali.mp3

೧೮೫೭ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದು, ಇಡೀ ದೇಶ ಬ್ರಿಟಿಷರ ವಿರುದ್ಧ ತಿರುಗಿಬಿದ್ದು ಬಲವಾದ ಹೊಡೆತ ಕೊಟ್ಟಿತು. ಇದರಿಂದ ಆಘಾತಕ್ಕೊಳಗಾದ ಆಂಗ್ಲರು ನಿಶ್ಯಸ್ತ್ರೀಕರಣ ಶಾಸನವನ್ನು ಜಾರಿಗೆ ತಂದರು. ಶಸ್ತ್ರಾಸ್ತ್ರಗಳನ್ನು ಯಾರೂ ಇಟ್ಟುಕೊಳ್ಳಬಾರದೆಂದು ಕಟ್ಟಪ್ಪಣೆ ಮಾಡಿದರು. ಸರ್ಕಾರದಿಂದ ಪರವಾನಗಿ ಹೊಂದಿದವರು ಮಾತ್ರ ಆಯುಧ ಹೊಂದಿರಬಹುದು. ಅದಿಲ್ಲದವರು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ತಂದೊಪ್ಪಿಸಬೇಕು ಎಂಬ ಕಟ್ಟಾಜ್ಞೆ. ಒಪ್ಪಿಸದಿದ್ದವರಿಂದ ಬ್ರಿಟಿಷರು ಒತ್ತಾಯದಿಂದ ಕಿತ್ತುಕೊಳ್ಳತೊಡಗಿದರು. ಆದರೆ ಸ್ವಾಭಿಮಾನಧನರಾಗಿದ್ದ ಹಲಗಲಿ ಗ್ರಾಮದ ಜನರು ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ.

ಶಸ್ತ್ರವೆಂದರೆ ಸ್ವಾಭಿಮಾನದ ಸಂಕೇತವಾಗಿತ್ತು. ಭಾರತೀಯರಿಗೆ ಅದು ಕೇವಲ ಕೊಲೆಯ ಸಾಧನವಲ್ಲ. ಪ್ರಾಣಪ್ರಿಯ ಪೂಜಾವಸ್ತು. ಪ್ರಾಣ ರಕ್ಷಣೆಗೆ ವಜ್ರ ಕವಚ. ಪರಕೀಯ ಸರ್ಕಾರದ ಕಟ್ಟಾಜ್ಞೆ ಕೇಳಿ ಹೇಡಿಗಳಾದವರು ಕೂಡಲೇ ತಮ್ಮಲ್ಲಿದ್ದ ಆಯುಧಗಳನ್ನು ತಂದೊಪ್ಪಿಸಿಬಿಟ್ಟರು. ಆದರೆ ಹೆಚ್ಚಿನ ಜನರು ಸಣ್ಣಪುಟ್ಟ ಆಯುಧಗಳನ್ನು ಕೊಟ್ಟು, ಹೆಚ್ಚು ಬೆಲೆಯ ದೊಡ್ಡ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟರು. ಸಾಲ ಸೋಲ ಮಾಡಿ, ದನಕರು ಮಾರಿ ಹಬ್ಬದ ದಿನ ಪೂಜೆಗೆಂದು ತಂದುದನ್ನು ಅವರೆಂತು ಕೊಟ್ಟಾರು? “ಹೇಗೆ ತೆಗೆದುಕೊಳ್ಳುತ್ತಾರೋ ನೋಡೋಣ” ಎಂದು ಗುಟ್ಟಾಗಿ ನೆಲದೊಳಗೆ ಹುದುಗಿಸಿಟ್ಟರು.

ಸರ್ಕಾರಕ್ಕೆ ತನ್ನ ಸಂಚು ಫಲಿಸದಿದ್ದುದಕ್ಕೆ ಗಾಬರಿಯಾಯಿತು. ಬಿಳಿಯರು ಕೈಕೈ ಹಿಸುಕಿಕೊಂಡರು. ಜನರ ಬಳಿ ತೆರಳಿ ಕುಟಿಲೋಪಾಯದಿಂದ ಎಲ್ಲೆಲ್ಲಿ ಎಷ್ಟೆಷ್ಟು ಇವೆ, ಎಂದು ನಯವಿನಯದ ಸೋಗುಹಾಕಿ ಮಾತಾಡಿದರು. ಮೂರ್ಖ ಜನರು ಸುಲಭವಾಗಿ ಬ್ರಿಟಿಷರ ಬಲೆಗೆ ಬಿದ್ದರು. ಒಬ್ಬರ ಮೇಲೊಬ್ಬರು ಚಾಡಿ ಹೇಳಿ ಆಯುಧಗಳನ್ನು ಬಚ್ಚಿಟ್ಟಿದ್ದ ಗುಪ್ತಸ್ಥಾನಗಳನ್ನು ಅಧಿಕಾರಿಗಳಿಗೆ ತೋರಿಸಿಕೊಟ್ಟರು. ಪರಸ್ಪರ ಕಚ್ಚಾಡಿ ಎಲ್ಲರೂ ಒಟ್ಟಿಗೆ ಹಾಳಾದರು.

ಕತ್ತಿ, ಕೋವಿಗಳೆಲ್ಲಾ ಜಪ್ತಿಯಾಗಿ, ಶಸ್ತ್ರ ಬರಿದಾಗಿ, ದೇಶಕ್ಕೆ ದೇಶವೇ ನಿರಾಯುಧವಾಯಿತು. ವೀರಭೂಮಿ ನಿಸ್ತೋಜವಾಗಿ ನಿರ್ವೀರ್ಯತೆ ಕಲೆಹಾಕಿತು. ದೇಶದ ಸಿರಿಸಂಪತ್ತುಗಳೆಲ್ಲ ಬಿಳಿಯರ ಬಾಯಿ ತುತ್ತಾದವು. ಮನೆಯ ಯಜಮಾನನಿದ್ದರೂ ಹೆಂಗಸರು, ಮಕ್ಕಳು ಅನಾಥರಾದರು.

ಇಂಥ ಚಿಂತಾಜನಕ ಸಮಯದಲ್ಲಿ ಬ್ರಿಟಿಷರ ನಿಷ್ಯಸ್ತ್ರೀಕರಣ ಕಾಯ್ದೆ ವಿರುದ್ಧ ತೊಡೆ ತಟ್ಟಿ ನಿಂತ ಗ್ರಾಮವೆಂದರೆ ಹಲಗಲಿ. ಹಲಗಲಿ ಇರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ. ನಿಶ್ಯಸ್ತ್ರೀಕರಣ ಶಾಸನದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿಯ ಬೇಡರು ಆಂಗ್ಲರ ವಿರುದ್ಧ ನೇರಾನೇರ ಯುದ್ಧಕ್ಕೆ ಇಳಿದಿದ್ದರು. ಹಲಗಲಿ ಎಂದು ಉಚ್ಚರಿಸಲು ನಾಲಿಗೆ ಹೊರಳದ ಬ್ರಿಟಿಷರಿಗೆ ಅಲ್ಲಿನ ಬೇಡರು ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದರು.

ನಿಶ್ಯಸ್ತ್ರೀಕರಣ ಕಾಯಿದೆ ವಿರುದ್ಧ ಕೆರಳಿದ ಹಲಗಲಿಯ ಬೇಡರು ಪೂಜಾರಿ ಹನುಮ, ಬಾಲ, ಜಡಗ, ರಾಮ ಮುಂತಾದ ಮುಖಂಡರ ನೇತೃತ್ವದಲ್ಲಿ ಸಭೆ ಸೇರಿದರು. ಸರ್ಕಾರ ಒಡ್ಡಬಹುದಾದ ಎಲ್ಲ ತೊಂದರೆಗಳನ್ನೂ ಎದುರಿಸಲು ಸಿದ್ಧತೆ ಮಾಡಿಕೊಂಡರು.

ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿಯಾಗಿದ್ದ ಲೆಪ್ಟಿನೆಂಟ್‌ ಕರ್ನಲ್‌ ಜೆ.ಬೊ.ಸೆಟನ್‌ಕರ್‌ ೧೮೫೭ರ ಅಕ್ಟೋಬರ್‌ ತಿಂಗಳಲ್ಲಿ ತನ್ನ ಆಳ್ವಿಕೆಗೆ ಒಳಪಟ್ಟಿದ್ದ ಮುಧೋಳದ ಎಲ್ಲರೂ ಶಸ್ತ್ರಾಸ್ತ್ರ ತಂದೊಪ್ಪಿಸಬೇಕೆಂದು ಆಜ್ಞೆ ಕಳುಹಿಸಿದ. ಆ ಆಜ್ಞೆಯನ್ನು ಹೊತ್ತು ತಂದವರನ್ನೇ ಹಲಗಲಿಯ ಗಡಿಯಾಚೆ ಅಟ್ಟಿಸಿಕೊಂಡು ಜನರು ಹೋದರು. ಈ ಮಧ್ಯೆ ಬಡಣಿ ಮತ್ತು ಮಂಟೂರು ಗ್ರಾಮಗಳ ಜನರೂ ಶಸ್ತ್ರಾಸ್ತ್ರ ಸಮೇತರಾಗಿ ಹೋಗಿ ಹಲಗಲಿಗೆ ಸೇರಿಕೊಂಡರು. ಅಳಗುಂದಿಯ ಬೇಡರೂ ಅಲ್ಲಿಗೆ ಹೋದರು. ಹಲಗಲಿ ಗ್ರಾಮದೊಳಗೆ ಬ್ರಿಟಿಷ್‌ ಕಡೆಯವರು ಯಾರನ್ನೂ ಬಿಟ್ಟುಕೊಳ್ಳದೆ ನಿರ್ಬಂಧ ಹೇರಲಾಯಿತು.

ದಕ್ಷಿಣ ಮರಾಠ ಅಶ್ವದಳದ ಸೇನಾಧಿಕಾರಿಯಾಗಿದ್ದ ಲೆ.ಕ.ಮಾಲ್ಕಲ ಸಾಹೇಬರಿಗೆ ಈ ವಿಷಯ ತಿಳಿದು ರೇಗಿ ಹೋಯಿತು. ತನ್ನ ಕಿರಿಯ ಅಧಿಕಾರಿ ಲೆ.ಕ.ಸೆಟನ್‌ಕರ್‌ ಬಿಜಾಪುರದ ಅಶ್ವದಳದೊಂದಿಗೆ ಹಲಗಲಿಯ ಬಾಗಿಲಿಗೆ ಬಂದು ತನ್ನ ಸೈನಿಕರನ್ನು ಊರಿನ ಸುತ್ತಲೂ ಕಾವಲು ನಿಲ್ಲಿಸಿದ. ಇಂಗ್ಲಿಷರು ಗುಂಡು ಹಾರಿಸುತ್ತಾ ಊರಿನ ಮಧ್ಯದ ಚೌಕಕ್ಕೆ ನುಗ್ಗಲು ಪ್ರಯತ್ನಿಸಿದರು. ಹಲಗಲಿಯ ವೀರಯೋಧರು ಮಾತ್ರ ಮುಂಗಾರುಮಳೆಯಂತೆ ಗುಂಡು ಹೊಡೆದು ಶತ್ರುಗಳನ್ನು ಹಿಂದಕ್ಕಟ್ಟಿದರು. ಆದರೆ ಪೆಟ್ಟು ತಿಂದ ಆಂಗ್ಲ ಸೈನ್ಯ ಇಡೀ ಊರಿನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿತು. ಮರುದಿನ ಬೆಳಗಾಗುವುದರೊಳಗೆ ಲೆ.ಅಡ್ಜುಟಂಟ್‌ ಲಾ ಟಾಕೆ, ಮಾಲ್ಕುಂ ಮ್ಯಾಜಿಸ್ಟ್ರೇಟ್‌ ಹ್ಯಾವಲಾಕ್‌ ಮುಂತಾದವರು ಸೇನೆಗಳನ್ನು ತೆಗೆದುಕೊಂಡು ಬಂದರು. ಅದೇ ದಿನ ಬಾಗಲಕೋಟೆಯಿಂದ ೨೮ನೇ ಕಾಲ್ದಳವೂ ಅಲ್ಲಿಗೆ ಧಾವಿಸಿ ಬಂತು. ಇಷ್ಟೊಂದು ಅಗಾಧ ಸೈನ್ಯ ಸುಸಜ್ಜಿತವಾಗಿ ಬಂದು ತಮ್ಮನ್ನು ಸುತ್ತುಗಟ್ಟಿ ನಿಂತಿದ್ದರೂ ಹಲಗಲಿಯ ವೀರರು ಒಂದಂಗುಲವೂ ಹಿಂದೆ ಸರಿಯಲಿಲ್ಲ. ಶಸ್ತ್ರ ಅಥವಾ ಸ್ವಾತಂತ್ರ್ಯದ ಬದಲು ಪ್ರಾಣವನ್ನೇ ಒಪ್ಪಿಸಲು ಅವರು ಸಜ್ಜಾಗಿದ್ದರು.

ಭೀಕರ ಗುಂಡಿನ ಕಾಳಗವೇ ನಡೆದುಹೋಯಿತು. ಜೀವದ ಹಂಗು ತೊರೆದು ಹಲಗಲಿಯ ಕಲಿಗಳು ಶತ್ರುಗಳನ್ನು ಸದೆಬಡಿದು ಯಮಪುರಿಗಟ್ಟಿದರು. ಆದರೆ ಸಂಖ್ಯಾಬಲ ಶತ್ರುಬಲ ಅಧಿಕವಾಗಿದ್ದರಿಂದ ಹಳ್ಳಿಯೊಳಗೆ ಅಲ್ಲಲ್ಲೇ ಇಂಗ್ಲಿಷ್‌ ಸೈನಿಕರು ನುಗ್ಗಿ ಬರತೊಡಗಿದರು. ಕನ್ನಡಿಗ ವೀರರು ಆಗಲೂ ಜಗ್ಗಲಿಲ್ಲ. ಮನೆಯೊಳಗಿಂದಲೇ ಹೋರಾಟ ಮುಂದುವರಿಸಿದರು. ಇಂಗ್ಲಿಷ್‌ ಸೇನೆಯಲ್ಲಿ ರಾಶಿರಾಶಿಯಾಗಿ ಹೆಣಗಳು ಬೀಳುವಂತೆ ಗುಂಡು ಹಾರಿಸಿದರು. ಜಡಗ, ಬಾಬಾಜಿ ಮೊದಲಾದ ಮುಖಂಡರು ಅದ್ಭುತ ಶೌರ್ಯ ಪ್ರದರ್ಶಿಸುತ್ತಾ ಬಿಳಿಯ ಸೈನಿಕರನ್ನು ಆಹುತಿ ತೆಗೆದುಕೊಂಡರು.

ಇನ್ನು ತನಗೆ ಉಳಿಗಾಲವಿಲ್ಲವೆಂದು ಲೆ.ಕ.ಸೆಟನ್‌ಕರ್‌ಗೆ ಅರಿವಾಯಿತು. ಆಂಗ್ಲಜಾತಿಯ ಕುಟಿಲಬುದ್ಧಿಗೆ ಸಹಜವಾದ ಒಂದು ದಾರಿ ಆ ನರರಾಕ್ಷಸನಿಗೆ ಹೊಳೆಯಿತು. ಇಡೀ ಊರಿಗೆ ಬೆಂಕಿ ಹಚ್ಚಲು ತನ್ನವರಿಗೆ ಆದೇಶಿಸಿದನು. ಹೆಚ್ಚಾಗಿ ಮರಮಟ್ಟುಗಳಿಂದಲೇ ಕಟ್ಟಿದ್ದ ಮನೆಗಳಿಗೆ ಬಲುಬೇಗ ಉರಿ ತಾಗಿ, ಇಡೀ ಊರು ಧಗಧಗನೆ ಹೊತ್ತಿ ಉರಿಯಲಾರಂಭಿಸಿತು. ಬೇಡರ ಪಾಡು ದಯನೀಯವಾಯಿತು. ಬೆಂಕಿಯಿಂದ ತಮ್ಮ ಹೆಂಡತಿ ಮಕ್ಕಳ ರಕ್ಷಣೆ ಮಾಡಬೇಕೆ? ಅಥವಾ ಶತ್ರುಗಳ ಗುಂಡಿನಿಂದ ತಮ್ಮನ್ನ ರಕ್ಷಿಸಿಕೊಳ್ಳಬೇಕೇ? ಎಂಬ ಉಭಯಸಂಕಟಕ್ಕೆ ಸಿಲುಕಿದರು. ಆದರೂ ಆ ಆಜನ್ಮ ವೀರರು ಶತ್ರುಗಳ ಕಡೆಗೆ ಗುಂಡು ಹಾರಿಸುತ್ತಲೇ ಸತ್ತುಬಿದ್ದರು. ಮದ್ದುಗುಂಡುಗಳಿಲ್ಲದೆ ಹಲವರು ಕತ್ತಿ ಹಿಡಿದು ಹೋರಾಡತೊಡಗಿದರು. ದನಕರು, ಹಸುಗೂಸುಗಳು ಬೆಂಕಿಯಲ್ಲಿ ಬೆಂದುಹೋದವು. ಇಡೀ ಊರು ಭಸ್ಮವಾಗಿ ಹೋಗಿತ್ತು. ಇಂಗ್ಲಿಷ್‌ ಸೈನಿಕರು ʼಬೆಂದ ಮನೆಗೆ ಹಿಡಿವಷ್ಟೆ ಲಾಭʼ ಎನ್ನುವಂತೆ ಊರಿನೊಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿದರು. ನಿರಾಯುಧರಾದ ೨೯೦ ಜನರು ಕೈಸೆರೆ ಸಿಕ್ಕಿದರು.

೧೮೫೭ರ ಡಿಸೆಂಬರ್‌ ೧೧ರಂದು ಮುಧೋಳದಲ್ಲಿ ಸಂತೆಗೆಂದು ಜನರು ಸೇರಿದ್ದರು. ಜನರೆದುರೇ ಬ್ರಿಟಿಷರು ತಾವು ಸೆರೆ ಹಿಡಿದಿದ್ದವರಲ್ಲಿ ೧೩ ಮಂದಿಯನ್ನು ಗಲ್ಲಿಗೇರಿಸಿ ಕೇಕೆಹಾಕಿದರು. ತನ್ಮೂಲಕ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿಯದಂತೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹುನ್ನಾರವನ್ನು ಕಂಪನಿ ಸರ್ಕಾರ ನಡೆಸಿತ್ತು.

ಬ್ರಿಟಿಷರ ವಿರುದ್ಧ ಹಲಗಲಿಯ ವೀರ ಬೇಡರು ನಡೆಸಿದ ಅಸಾಮಾನ್ಯ ಹೋರಾಟದ ಕುರಿತ ಲಾವಣಿಗಳು ಈಗಲೂ ಜನಪ್ರಿಯವಾಗಿವೆ. ಹಲಗಲಿಯ ವೀರರನ್ನು ಗಲ್ಲಿಗೇರಿಸಿದ ಮುಧೋಳದ ಆ ಜಾಗದಲ್ಲಿ ಹಲಗಲಿ ವೀರರ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಜನರು ಈಗಲೂ ಸರ್ಕಾರವನ್ನು ಆಗ್ರಹಿಸುತ್ತಲೇ ಇದ್ದಾರೆ.

ಇದನ್ನೂ ಓದಿ | Amrit Mahotsav | ಹೈದರಾಬಾದ್‌ ಬ್ರಿಟಿಷ್‌ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ ಮೌಲ್ವಿ ಸೈಯದ್‌ ಅಲ್ಲಾವುದ್ದೀನ್‌

Exit mobile version