Site icon Vistara News

Fed hikes interest rate : ಅಮೆರಿಕದಲ್ಲಿ ಬಡ್ಡಿ 0.25% ಏರಿಕೆ,‌ ಭವಿಷ್ಯದಲ್ಲಿ ರೇಟ್ ಇಳಿಸುವ ಸುಳಿವು ನೀಡಿದ ಫೆಡರಲ್‌ ರಿಸರ್ವ್

us fed

ವಾಷಿಂಗ್ಟನ್:‌ ಅಮೆರಿಕದ ಫೆಡರಲ್‌ ರಿಸರ್ವ್‌ (Fed hikes interest rate) ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ತನ್ನ ಅಲ್ಪಾವಧಿಯ ಬಡ್ಡಿ ದರವನ್ನು ಬುಧವಾರ 0.25% ಏರಿಸಿದೆ. ಫೆಡರಲ್‌ ರಿಸರ್ವ್‌ ಬಡ್ಡಿ ದರ ಈಗ 4.75-5% ಆಗಿದೆ. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಬಿಕ್ಕಟ್ಟಿನ ಹೊರತಾಗಿಯೂ ಬಡ್ಡಿ ದರವನ್ನು ಏರಿಸಲಾಗಿದೆ. ಹೀಗಿದ್ದರೂ, ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆಯನ್ನು ಅಂತ್ಯಗೊಳಿಸುವ ಸುಳಿವನ್ನೂ ನೀಡಿದೆ.

ಬಡ್ಡಿ ದರ ಏರಿಕೆಯಿಂದ ಬ್ಯಾಂಕ್‌ಗಳಲ್ಲಿ ಸಾಲದ ವಹಿವಾಟು ಮತ್ತು ಆರ್ಥಿಕತೆ ದುರ್ಬಲವಾಗುತ್ತದೆ ಹಾಗೂ ಹಣದುಬ್ಬರ ಇಳಿಕೆಯಾಗಲಿದೆ ಎಂದು ಫೆಡರಲ್‌ ರಿಸರ್ವ್‌ ಒಪ್ಪಿಕೊಂಡಿದೆ. ಹೀಗಾಗಿ ಈ ವರ್ಷ ಕೇವಲ ಒಂದು ಸಲ ದರ ಏರಿಸಲಾಗುವುದು, ಹಾಗೂ ಅದೂ ಗ್ಯಾರಂಟಿ ಇಲ್ಲ ಎಂದು ಫೆಡರಲ್‌ ರಿಸರ್ವ್‌ ತಿಳಿಸಿದೆ.‌

ಗೃಹ ವಲಯ ಮತ್ತು ಬಿಸಿನೆಸ್‌ ಕ್ಷೇತ್ರಕ್ಕೆ ಸಾಲದ ಹರಿವನ್ನು ಬಿಗಿಗೊಳಿಸಿದ ಪರಿಣಾಮ ಸಿಲಿಕಾನ್‌ ವ್ಯಾಲಿ ಬ್ಯಾಂಕಿಂಗ್‌ ಬಿಕ್ಕಟ್ಟು ಸಂಭವಿಸಿದೆ. ಆದರೆ ಅಮೆರಿಕದ ಬ್ಯಾಂಕಿಂಗ್‌ ಬುನಾದಿ ಸದೃಢವಾಗಿದೆ ಎಂದು ಫೆಡರಲ್‌ ರಿಸರ್ವ್‌ ತಿಳಿಸಿದೆ. ಡಿಸೆಂಬರ್‌ನಲ್ಲಿ ಮತ್ತೆ 0.25% ಬಡ್ಡಿ ಏರಿಸುವ ಮೂಲಕ ಬಡ್ಡಿಯನ್ನು 5%-5.25%ಕ್ಕೆ ಏರಿಸುವ ಸಾಧ್ಯತೆ ಇದೆ. ಬಳಿಕ ಬಡ್ಡಿ ದರವನ್ನು ಇಳಿಸುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಚಿನ್ನದರ ದರ ಏರಿಕೆ: ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು 0.25% ಏರಿಸಿರುವ ಪರಿಣಾಮ ಬಂಗಾರದ ದರದಲ್ಲಿ 1.7% ಹೆಚ್ಚಳವಾಯಿತು. ವಾಯಿದಾ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಬಂಗಾರದ ದರ 1,949 ಡಾಲರ್‌ ಇತ್ತು.

ಏಷ್ಯಾದಲ್ಲಿ ಷೇರು ಸೂಚ್ಯಂಕ ಪತನ: ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸಿದ ಬೆನ್ನಲ್ಲೇ ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ಷೇರು ಸೂಚ್ಯಂಕಗಳು ಮುಗ್ಗರಿಸಿವೆ. ಆಸ್ಟ್ರೇಲಿಯಾ, ಜಪಾನ್‌, ದಕ್ಷಿಣಕೊರಿಯಾದಲ್ಲಿ ಸೂಚ್ಯಂಕಗಳು ಕುಸಿಯಿತು. ಅಮೆರಿಕದಲ್ಲಿ ಎಲ್ಲ ಮೂರು ಪ್ರಮುಖ ಸೂಚ್ಯಂಕಗಳು ಮುಗ್ಗರಿಸಿತು.

Exit mobile version