ಹೊಸದಿಲ್ಲಿ: ಮುಂಬರುವ ಕೆಲ ವರ್ಷಗಳಲ್ಲಿ ಭಾರತದಲ್ಲಿ 1 ಲಕ್ಷ ಡ್ರೋನ್ ಪೈಲಟ್‌ಗಳಿಗೆ ಬೇಡಿಕೆ ಬರಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮಂಗಳವಾರ ತಿಳಿಸಿದ್ದಾರೆ.
ಕೇಂದ್ರ ಸರಕಾರದ 12 ಸಚಿವಾಲಯಗಳು ಡ್ರೋನ್ ಸೇವೆ ಬೇಡಿಕೆ ಸೃಷ್ಟಿಸಲು ಕಾರ್ಯಪ್ರವೃತ್ತವಾಗಿವೆ. ಡ್ರೋನ್ ಸೇವೆಗಳ ವಿಕಾಸ ಕುರಿತ ನೀತಿಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ನೀತಿ ಆಯೋಗದ ಸಭೆಯಲ್ಲಿ ಸಿಂಧ್ಯಾ ಅವರು ತಿಳಿಸಿದರು.
ಡ್ರೋನ್ ಉತ್ಪಾದನೆಯನ್ನು ಉತ್ತೇಜಿಸುವ ದೃಷ್ಟಿಯಿಂದ 2022ರ ಸೆಪ್ಟೆಂಬರ್‌ನಿಂದ ಪಿಎಲ್‌ಐ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ದ್ರೋನ್ ಕುರಿತ ನೀತಿಗಳನ್ನು ಉದಾರೀಕರಣಗೊಳಿಸಲಾಗಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಪಡೆದವರೂ (ಪಿಯುಸಿ) ಡ್ರೋನ್ ಪೈಲಟ್‌ಗಳಾಗಬಹದು. ಯಾವುದೇ ಕಾಲೇಜು ಪದವಿಯ ಅಗತ್ಯ ಇಲ್ಲ. 2-3 ತಿಂಗಳಿನ ತರಬೇತಿ ಪಡೆದರೆ ಮಾಸಿಕ 30,000 ವೇತನ ಗಳಿಸಬಹುದು ಎಂದು ತಿಳಿಸಿದರು. 2026ರ ವೇಳೆಗೆ ಭಾರತೀಯ ಡ್ರೋನ್ ವಲಯ 15,000 ಕೋಟಿ ರೂ. ವಹಿವಾಟು ನಡೆಸಲಿದೆ ಎಂದರು.