ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿರುವ ದಾಳಿಯ ಬಳಿಕ (Income-tax) ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ 1,000 ಕೋಟಿ ರೂ. ಗಳ ಅವ್ಯವಹಾರ ಪತ್ತೆಯಾಗಿದೆ. ಸಹಕಾರಿ ಬ್ಯಾಂಕ್‌ಗಳ 16 ಕಚೇರಿಗಳಲ್ಲಿ ತೆರಿಗೆ ಇಲಾಖೆ ತನ್ನ ಶೋಧ ಕಾರ್ಯಾಚರಣೆಯನ್ನು ಮಾರ್ಚ್ 16ರಂದು ನಡೆಸಿತ್ತು. ದಾಳಿಯ ಸಂದರ್ಭ 3.3 ಕೋಟಿ ರೂ. ನಗದು ಮತ್ತು 2 ಕೋಟಿ ರೂ. ಜ್ಯುವೆಲ್ಲರಿಯನ್ನು ಜಪ್ತಿ ಮಾಡಲಾಗಿತ್ತು. ಆದರೆ ಇದೀಗ ಸಾವಿರಾರು ಕೋಟಿ ರೂ.ಗಳ ಭಾರಿ ಅವ್ಯವಹಾರಗಳೂ ಪತ್ತೆಯಾಗಿವೆ.
ಸಹಕಾರಿ ಬ್ಯಾಂಕ್‌ಗಳಲ್ಲಿ ಅವ್ಯವಹಾರ ಹೇಗೆ?
ಈಗ ಲಭಿಸಿರುವ ಸಾಕ್ಷ್ಯಗಳ ಪ್ರಕಾರ ಈ ಕೋಪರೇಟಿವ್ ಬ್ಯಾಂಕ್‌ಗಳು ನಾನಾ ಉದ್ದಿಮೆಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಕಂಪನಿಗಳು, ಸಂಸ್ಥೆಗಳಿಂದ ಡಿಸ್ಕೌಂಟ್ ದರದಲ್ಲಿ ಪಡೆದ ಚೆಕ್‌ಗಳನ್ನು ಖರೀದಿಸಿ, ಅಸ್ತಿತ್ವದಲ್ಲೇ ಇರದ ನಾನಾ ಸಂಸ್ಥೆಗಳ ಹೆಸರಿನಲ್ಲಿ ನಗದೀಕರಿಸಿವೆ ಎಂದು ಸಿಬಿಡಿಟಿ ತಿಳಿಸಿದೆ. ಆದರೆ ಇಂಥ ಅಕ್ರಮದ ಮೂಲಕ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಚೆಕ್‌ಗಳ ಖರೀದಿಯಲ್ಲಿ ಯಾವುದೇ ಕೆವೈಸಿಯನ್ನು ಕೋಪರೇಟಿವ್ ಬ್ಯಾಂಕ್‌ಗಳು ಪಾಲಿಸಿಲ್ಲ ಎಂದು ಸಿಬಿಡಿಟಿ ತಿಳಿಸಿದೆ.
ಆದಾಯದ ಮೂಲವನ್ನು ಮರೆ ಮಾಚುವ ನಿಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ಡಿಸ್ಕೌಂಟ್ ಚೆಕ್‌ಗಳನ್ನು ನೀಡಲಾಗುತ್ತಿತ್ತು. ಈ ಅಕ್ರಮಕ್ಕೆ ಕೋಪರೇಟಿವ್ ಬ್ಯಾಂಕ್‌ಗಳು ಮಾಧ್ಯಮವಾಗಿ ದುರ್ಬಳಕೆಯಾಗಿದೆ. ಕೆಲ ವ್ಯಕ್ತಿಗಳಿಗೆ ಲೆಕ್ಕಕ್ಕೆ ಸಿಗದ 15 ಕೋಟಿ ರೂ.ಗೂ ಹೆಚ್ಚು ನಗದು ಸಾಲ ನೀಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.