ವಾಷಿಂಗ್ಟನ್: ಕಳೆದ 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಿದ ಬಳಿಕ ಇಲ್ಲಿಯವರೆಗೆ ಷೇರು ಪೇಟೆಯಲ್ಲಿ 11 ಲಕ್ಷ ಕೋಟಿ ಡಾಲರ್ ನಷ್ಟವಾಗಿದೆ (ಅಂದಾಜು 847ಲಕ್ಷ ಕೋಟಿ ರೂ.) ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.
ಅಮೆರಿಕ ಮತ್ತು ಯುರೋಪ್‌ನಲ್ಲಿ ಬಹುತೇಕ ಎಲ್ಲ ವಲಯಗಳ ಕಂಪನಿಗಳ ಮಾರುಕಟ್ಟೆ ಮೌಲ್ಯ ನಷ್ಟವಾಗಿದೆ. ಈ ಸವಕಳಿ ಮತ್ತಷ್ಟು ಹೆಚ್ಚಬಹುದು ಎಂದು ಮೋರ್ಗಾನ್ ಸ್ಟ್ಯಾನ್ಲಿ ಮತ್ತು ಸಿಟಿಗ್ರೂಪ್ ವರದಿ ತಿಳಿಸಿದೆ.
ಅಮೆರಿಕದಲ್ಲಿ ಕಳೆದ ಕೆಲ ದಿನಗಳಿಂದ ತಂತ್ರಜ್ಞಾನ ಕಂಪನಿಗಳ ಷೇರು ದರಗಳೂ ಕುಸಿಯುತ್ತಿವೆ. ಅಮೆರಿಕದ ಆಪಲ್ ಈಗ ಅತಿ ದೊಡ್ಡ ಮೌಲ್ಯದ ಕಂಪನಿಯಾಗಿ ಉಳಿದಿಲ್ಲ. ಅಮೆಜಾನ್ ಷೇರುಗಳು 2015ರ ಬಳಿಕ ಮೊದಲ ಬಾರಿಗೆ ನಷ್ಟ ದಾಖಲಿಸಿದೆ. ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿರುವುದರಿಂದ ಫೇಸ್ ಬುಕ್‌ನ ಪ್ರಚವತಕ ಸಂಸ್ಥೆಯಾದ ಮೆಟಾದ ಷೇರಿನ ಮೌಲ್ಯ ಕುಸಿದಿದೆ. ತಂತ್ರಜ್ಞಾನ ವಲಯದ ಷೇರುಗಳು ಕಳೆದ ಕೆಲವು ವರ್ಷಗಳಿಂದ ಲಾಭದಾಯಕವಾಗಿದ್ದವು.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಜಗತ್ತು ಹೆಚ್ಚೆಚ್ಚು ಡಿಜಿಟಲೀಕರಣಗೊಂಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂತ್ರಜ್ಞಾನ ಕಂಪನಿಗಳ ಷೇರುಗಳ ದರ ಕುಸಿಯುತ್ತಿದೆ. ಸ್ಟಾರ್ಟಪ್‌ಗಳಲ್ಲೂ ಇದೇ ಟ್ರೆಂಡ್ ಕಂಡು ಬರುತ್ತಿದೆ. ಉದ್ಯೋಗ ಕಡಿತ ಶುರುವಾಗಿದೆ. ಕೋವಿಡ್-19 ಹೊಡೆತದ ಆರಂಭಿಕ ಘಟ್ಟದಲ್ಲಿ ಅಂದರೆ 2020ರ ಆರಂಭದ ದಿನಗಳಲ್ಲಿ ಪೆಲ್ಟೋನ್, ಝೂಮ್, ನೆಟ್‌ಫ್ಲಿಕ್ಸ್ ಷೇರುದರ ಜಿಗಿದಿತ್ತು. ಜೂಮ್ ಕೇವಲ 1 ವರ್ಷದಲ್ಲಿ ತನ್ನ ಮೌಲ್ಯವನ್ನು ಶೇ.500ರಷ್ಟು ಹೆಚ್ಚಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಅದರ ಷೇರು ದರ ಕೋವಿಡ್ ಪೂರ್ವ ಮಟ್ಟಕ್ಕೆ ಕುಸಿದಿದೆ.
ಬಿಟ್ ಕಾಯಿನ್ ದರದಲ್ಲೂ ಕಳೆದ ಶುಕ್ರವಾರ ಶೇ.12ರಷ್ಟು ಕುಸಿತ ಉಂಟಾಗಿದ್ದು, 36 ಸಾವಿರ ಡಾಲರ್‌ಗಿಂತ ಕೆಳಮಟ್ಟಕ್ಕೆ ತಗ್ಗಿತು. ಭಾರತೀಯ ಷೇರು ಮಾರುಕಟ್ಟೆಯಲ್ಲೂ ಕಳೆದೊಂದು ತಿಂಗಳಿನಲ್ಲಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 28ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.
ಅಮೆರಿಕದಲ್ಲೂ ಕಳೆದ ಏಪ್ರಿಲ್‌ನಲ್ಲಿ ಹಣದುಬ್ಬರ 30 ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇ.8.3ಕ್ಕೆ ಏರಿತ್ತು. ಹಣದುಬ್ಬರ ಗ್ರಾಹಕರ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ. ಅವರು ಖರ್ಚುವೆಚ್ಚಗಳನ್ನು ಕಡಿಮೆ ಮಾಡುತ್ತಾರೆ. ಇದು ಕಂಪನಿಗಳ ಲಾಭಾಂಶವನ್ನು ಕಡಿತಗೊಳಿಸುತ್ತವೆ.
ಇದನ್ನೂ ಓದಿ: ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ ಇಳಿಕೆ