ಬೆಂಗಳೂರು: ಜೂನ್ ತಿಂಗಳ ಮೊದಲ ದಿನವಾದ ಇಂದು ತೈಲ ಮಾರುಕಟ್ಟೆ ಕಂಪನಿಗಳು, 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ (19KG LPG Cylinder Price )ಯನ್ನು 83.50 ರೂಪಾಯಿ ಕಡಿತಗೊಳಿಸಿವೆ (LPG Price Cut). ಅದರ ಅನ್ವಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಷ್ಟು ದಿನ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1,856.50 ರೂಪಾಯಿ ಇದ್ದಿದ್ದು, ಅದೀಗ 1,773 ರೂ.ಗೆ ಇಳಿಕೆಯಾಗಿದೆ. ಕೋಲ್ಕತ್ತದಲ್ಲಿ 1875.50 ರೂ., ಮುಂಬೈಯಿಯಲ್ಲಿ 1725 ರೂ., ಚೆನ್ನೈನಲ್ಲಿ 1937 ರೂ.ಗೆ ಇಳಿಕೆಯಾಗಿದೆ. ಹಾಗೇ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1685.5 ರೂ.ಆಗಿದೆ. ಇನ್ನು ಗೃಹ ಬಳಕೆ ಅಂದರೆ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ.
19 ಕೆಜಿ ಸಿಲಿಂಡರ್ ಬೆಲೆ ಕಳೆದ ಎರಡು ತಿಂಗಳುಗಳಿಂದಲೂ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಹೊಟೆಲ್, ರೆಸ್ಟೋರೆಂಟ್ ಉದ್ಯಮಿಗಳಿಗೆ ಅನುಕೂಲವಾಗುತ್ತಿದೆ. ಮೇ ತಿಂಗಳಿನಲ್ಲಿ 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 171.50 ರೂ. ಕಡಿಮೆಯಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಈ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ 91.50 ರೂ. ಕಡಿತ ಮಾಡಿದ್ದವು. ಅದಕ್ಕೂ ಮೊದಲು 2022ರ ಜೂನ್ನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು. ಸೆಪ್ಟೆಂಬರ್ನಲ್ಲಿ ಒಮ್ಮೆ ಏರಿಸಲಾದರೂ ಮತ್ತೆ ಇಳಿಕೆಯಾಗಿತ್ತು. ಆದರೆ 2023ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿದ್ದವು. ಅದನ್ನು ಏಪ್ರಿಲ್ನಿಂದ ಕಡಿಮೆ ಮಾಡುತ್ತಿವೆ.
ಇದನ್ನೂ ಓದಿ: LPG Price Cut : ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ 171.50 ರೂ. ಇಳಿಕೆ
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆ ಮಾಡುತ್ತವೆ. ಈ ಅಡುಗೆ ಅನಿಲದ ಬೆಲೆ ನಿರ್ಧರಿತವಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಎಷ್ಟಿದೆ ಎಂಬುದರ ಆಧಾರದ ಮೇಲೆ. ಹಾಗಿದ್ದಾಗ್ಯೂ ಅಡುಗೆ ಅನಿಲದ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುತ್ತದೆ. ಆಯಾ ರಾಜ್ಯಗಳು ಸ್ಥಳೀಯವಾಗಿ ವಿಧಿಸಿರುವ ತೆರಿಗೆ ಆಧಾರದ ಮೇಲೆ ಅಲ್ಲಿ ದರ ನಿಗದಿಯಾಗುತ್ತದೆ.