ವಾಷಿಂಗ್ಟನ್: ಜಾಗತಿಕ ಕನ್ಸಲ್ಟಿಂಗ್ ದಿಗ್ಗಜ ಮೆಕೆನ್ಸಿ ಕಂಪನಿಯಲ್ಲಿ 2,000 ಉದ್ಯೋಗ ಕಡಿತವಾಗಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಂಗಳವಾರ ತಿಳಿಸಿದೆ. ಕಂಪನಿಯ (McKinsey layoffs) ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಹುದ್ದೆ ಕಡಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ಕಂಪನಿಗಳು 28,000ದಿಂದ 45,000ಕ್ಕೆ ಉದ್ಯೋಗಿಗಳ ಸಂಖ್ಯೆಯನ್ನು ಏರಿಸಿತ್ತು. ಮತ್ತಷ್ಟು ಉದ್ಯೋಗ ಕಡಿತವನ್ನು ಇದೀಗ ನಿರೀಕ್ಷಿಸಲಾಗಿದೆ.
ಕಂಪನಿಯ ನಿರ್ವಹಣಾ ವೆಚ್ಚದಲ್ಲಿ ಉಳಿತಾಯ ಮಾಡಲು ಹಾಗೂ ಜಾಗತಿಕ ಅನಿಶ್ಚಿತತೆಯ ಪರಿಣಾಮ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಮೆಕೆನ್ಸಿ ಹೇಳಿದೆ. ಅಮೆರಿಕದಲ್ಲಿ ಹಲವಾರು ತಂತ್ರಜ್ಞಾನ ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, ಲಕ್ಷಾಂತರ ಮಂದಿಗೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಅಮೆರಿಕದ ಮನರಂಜನಾ ವಲಯದ ದಿಗ್ಗಜ ಕಂಪನಿಯಾದ ವಾಲ್ಟ್ ಡಿಸ್ನಿ ಕಂಪನಿ ಇತ್ತೀಚೆಗೆ 7000 ಉದ್ಯೋಗಗಳನ್ನು ಕಡಿತಗೊಳಿಸಿದೆ. (Disney layoffs) ಕಂಪನಿಯ ವೆಚ್ಚ ಇಳಿಕೆ, ಪುನಾರಚನೆಯ ಭಾಗವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಸಿಇಒ ಬಾಬ್ ಐಗರ್ ತಿಳಿಸಿದ್ದರು. ಡಿಸ್ನಿಯ ಒಟ್ಟು ಉದ್ಯೋಗ ಬಲದಲ್ಲಿ 3.6% ಮಂದಿಯನ್ನು ವಜಾಗೊಳಿಸಲಾಗಿದೆ.