ನವದೆಹಲಿ: ಭಾರತದಲ್ಲಿ ಕಳೆದ ಮೇನಲ್ಲಿ 3,30,000 ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗೂ ಇವುಗಳು ಸಂಘಟಿತ ವಲಯದ ವೈಟ್ ಕಾಲರ್ ಹುದ್ದೆಗಳಾಗಿದ್ದು, ಕಳೆದ 30 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟದ ಉದ್ಯೋಗಾವಕಾಶಗಳು ಉಂಟಾಗಿವೆ ಎಂದು ಲಿಂಕ್ಡ್‌ಇನ್ ಮತ್ತು ಜಾಬ್ ಬೋರ್ಡ್ಸ್ ಸಮೀಕ್ಷೆ ತಿಳಿಸಿದೆ.
ಮೇನಲ್ಲಿ ನೇಮಕಾತಿ ಪ್ರಕ್ರಿಯೆಗಳು ಚುರುಕಾಗಿವೆ. ಕಾರ್ಪೊರೇಟ್ ವಲಯದ ಕಂಪನಿಗಳು ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುತ್ತಿವೆ. ಕೋವಿಡ್-ಪೂರ್ವ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಂಪನಿಗಳು ಈಗ ನೇಮಕಾತಿಗೆ ಮುಂದಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಆತಿಥ್ಯೋದ್ಯಮ, ಪ್ರವಾಸೋದ್ಯಮ, ಉತ್ಪಾದನೆ, ಹೆಲ್ತ್‌ಕೇರ್, ಆಟೊಮೊಬೈಲ್, ಮಾಧ್ಯಮ ಮತ್ತು ಜಾಹೀರಾತು ಮತ್ತು ಟೆಲಿಕಾಂ ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಏಪ್ರಿಲ್‌ಗೆ ಹೋಲಿಸಿದರೆ ಒಟ್ಟಾರೆ ಉದ್ಯೋಗ ಸೃಷ್ಟಿ ಇಮ್ಮಡಿಯಾಗಿದೆ. ಶಿಕ್ಷಣ, ಔಷಧ, ಲಾಜಿಸ್ಟಿಕ್ಸ್ ವಲಯದಲ್ಲೂ ಉದ್ಯೋಗಾವಕಾಶಗಳು ಲಭಿಸುತ್ತಿವೆ.
ಮಾಹಿತಿ ತಂತ್ರಜ್ಞಾನ, ಇಂಟರ್‌ನೆಟ್ ತಂತ್ರಜ್ಞಾನ ಆಧಾರಿತ ಉದ್ದಿಮೆ ವಲಯದಲ್ಲಿ ವೈಟ್ ಕಾಲರ್ ಹುದ್ದೆಗಳಲ್ಲಿ ಶೇ.11ರಷ್ಟು ಇಳಿಕೆಯಾದರೂ, ಒಟ್ಟಾರೆಯಾಗಿ ಏರಿಕೆ ದಾಖಲಾಗಿರುವುದು ಗಮನಾರ್ಹ. ಇದು ಇತರ ವಲಯಗಳೂ ಚೇತರಿಸುತ್ತಿರುವುದನ್ನು ಬಿಂಬಿಸಿದೆ. ಕಳೆದ ವರ್ಷ ಉದ್ಯೋಗ ಸೃಷ್ಟಿಯಲ್ಲಿ ಶೇ.70 ಕೊಡುಗೆಯನ್ನು ಐಟಿ ವಲಯ ತನ್ನದಾಗಿಸಿತ್ತು.
ಟೆಲಿಕಾಂ ಕ್ಷೇತ್ರದಲ್ಲಿ 38,000 ಉದ್ಯೋಗ ಸೃಷ್ಟಿ
ಟೆಲಿಕಾಂ ವಲಯದಲ್ಲಿ 2022-23ರ ಪ್ರಸಕ್ತ ಸಾಲಿನಲ್ಲಿ 38 ಸಾವಿರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಟೀಮ್‌ಲೀಸ್ ವರದಿ ತಿಳಿಸಿದೆ. ಈ ವರ್ಷ 5ಜಿ ಸೇವೆ ಆರಂಭವಾಗಲಿದ್ದು, ಟೆಲಿಕಾಂ ಉದ್ದಿಮೆಯ ವಿಸ್ತರಣೆಗೆ ಕಾರಣವಾಗಲಿದೆ. ಹೀಗಾಗಿ ಟೆಲಿಕಾಂನಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದೆ. ಪ್ರಸ್ತುತ ಈ ಕ್ಷೇತ್ರದಲ್ಲಿ 40 ಲಕ್ಷ ಮಂದಿ ದುಡಿಯುತ್ತಿದ್ದಾರೆ. 2025-26ರ ವೇಳೆಗೆ 60 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.