ನಾಗ್ಪುರ: ನಾಗ್ಪುರ ಮೂಲದ ವೇದಾಂತ್ ದೇವಕಾಟೆ ಎಂಬ ಹುಡುಗ ಸಾಫ್ಟ್‌ವೇರ್ ಕೋಡ್ ಬರೆಯುವ ಸ್ಪರ್ಧೆಯೊಂದರಲ್ಲಿ ವಿಜೇತನಾಗಿದ್ದ. ಇದರ ಪರಿಣಾಮ ಆತನಿಗೆ ಅಮೆರಿಕ ಮೂಲಕ ಕಂಪನಿಯಿಂದ ವರ್ಷಕ್ಕೆ ೩೩ ಲಕ್ಷ ರೂ. ಸಂಬಳದ ಕೆಲಸದ ಆಫರ್ ಕೂಡ ಬಂದಿತ್ತು. ಆದರೆ ಈ ಹುಡುಗನ ವಯಸ್ಸು ಕೇಳಿದ ಕಂಪನಿ, ಹುದ್ದೆಯ ಆಫರ್ ಅನ್ನು ಹಿಂತೆಗೆದುಕೊಂಡಿತು. ಕಾರಣ ವೇದಾಂತ್ ದೇವಕಾಟೆಯ ವಯಸ್ಸು ಇನ್ನೂ ಕೇವಲ ೧೫ ಆಗಿರುವುದು. ಆತ ೧೦ನೇ ತರಗತಿಯ ವಿದ್ಯಾರ್ಥಿಯಾಗಿರುವುದು!
ವೇದಾಂತ್ ದೇವಕಾಟೆ ತನ್ನ ತಾಯಿಯ ಹಳೆಯ ಲ್ಯಾಪ್‌ಟಾಪ್‌ನಲ್ಲಿ ಅಂತರ್ಜಾಲವನ್ನು ಹುಡುಕಾಡುತ್ತಿದ್ದಾಗ, ವೆಬ್‌ಸೈಟ್ ಡೆವಲಪ್‌ಮೆಂಟ್ ಸ್ಪರ್ಧೆಯ ಲಿಂಕ್ ಅನ್ನು ಕಂಡು ಭಾಗವಹಿಸಿದ್ದ. ಎರಡು ದಿನಗಳಲ್ಲಿ ೨,೦೬೬ ಲೈನ್‌ಗಳ ಕೋಡ್ ಅನ್ನು ಬರೆದಿದ್ದ. ಇದಾದ ಬಳಿಕ ನ್ಯೂ ಜೆರ್ಸಿಯ ಜಾಹೀರಾತು ಏಜೆನ್ಸಿಯೊಂದು ತನ್ನ ಎಚ್‌ಆರ್‌ಡಿ ತಂಡಕ್ಕೆ ವೇದಾಂತ್‌ನ ಸೇರ್ಪಡೆಗೆ ನಿರ್ಧರಿಸಿತ್ತು. ಜಗತ್ತಿನ ನಾನಾ ಕಡೆಗಳಿಂದ ಸ್ವೀಕರಿಸಿದ್ದ ೧,೦೦೦ ಎಂಟ್ರಿಗಳ ಪೈಕಿ ವೇದಾಂತ್ ಆಯ್ಕೆಯಾಗಿದ್ದ. ಆದರೆ ವೇದಾಂತ್‌ಗೆ ಇನ್ನೂ ೧೫ ವರ್ಷ ವಯಸ್ಸು ಎಂಬುದು ಗೊತ್ತಾದಾಗ ಕಂಪನಿ ತನ್ನ ಆಫರ್ ಅನ್ನು ಕೈಬಿಟ್ಟಿತು. ನಿರಾಶೆ ಆಗಬಾರದು ಎನ್ನುವ ಕಾರಣಕ್ಕಾಗಿ ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಉದ್ಯೋಗಕ್ಕಾಗಿ ಸಂಪರ್ಕಿಸುವಂತೆ ಕಂಪನಿ ವೇದಾಂತ್‌ಗೆ ತಿಳಿಸಿದೆ.
ವೇದಾಂತ್ animeeditor.com ಎಂಬ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಈ ವೆಬ್‌ಸೈಟ್ ಮೂಲಕ ವಿಡಿಯೊ ಜತೆ ಹೆಚ್ಚುವರಿಯಾಗಿ ಬ್ಲಾಗ್, ವ್ಲೋಗ್, ಚಾಟ್‌ಬೋಟ್ ಇತ್ಯಾದಿ ಹೆಚ್ಚುವರಿ ಫೀಚರ್‌ಗಳನ್ನೂ ಪಡೆಯಬಹುದು. ಎಚ್‌ಟಿಎಂಎಲ್ ಮತ್ತು ಜಾವಾಸ್ಕ್ರಿಪ್ಟ್ ಲಾಂಗ್ವೇಜ್ ಮತ್ತು ವರ್ಚುವಲ್ ಸ್ಟುಡಿಯೊ ಕೋಡ್ ಅನ್ನು ಬಳಸಿರುವುದಾಗಿ ವೇದಾಂತ್ ತಿಳಿಸಿದ್ದಾನೆ. ವೇದಾಂತ್ ಅವರ ತಂದೆ ರಾಜೇಶ್ ಮತ್ತು ತಾಯಿ ಅಶ್ವಿನಿ ಅವರು ನಾಗ್ಪುರದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೇದಾಂತ್ ಸಾಫ್ಟ್‌ವೇರ್ ಕೌಶಲ ಕಲಿತಿದ್ದು ಹೇಗೆ? ಇಂಟರ್‌ನೆಟ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಬಗ್ಗೆ ನಿರಂತರವಾಗಿ ಹುಡುಕಾಡುತ್ತಿದ್ದೆ. ಆನ್‌ಲೈನ್ ಕ್ಲಾಸ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಸಾಫ್ಟ್‌ವೇರ್ ಕೋಡಿಂಗ್, ಪೈಥಾನ್ ಇತ್ಯಾದಿ ಟೆಕ್ನಿಕ್‌ಗಳನ್ನು ಕಲಿತಿದ್ದೆ. ಇಷ್ಟನ್ನೂ ತಾಯಿಯ ಹಳೆಯ ಹಾಗೂ ಔಟ್‌ಡೇಟೆಡ್ ಲ್ಯಾಪ್‌ಟಾಪ್‌ನಲ್ಲಿ ವೇದಾಂತ್ ಮಾಡಿದ್ದ. ಇದನ್ನು ಕಂಡು ಎಲ್ಲರಿಗೂ ಅಚ್ಚರಿಯಾಗಿತ್ತು. ವೇದಾಂತ್‌ಗೆ ಹೊಸ ಲ್ಯಾಪ್ ಟಾಪ್ ಕೊಡಿಸಲು ಈಗ ತಂದೆ ರಾಜೇಶ್ ಬಯಸಿದ್ದಾರೆ.