Site icon Vistara News

Adani Group : ಅದಾನಿ ಕಂಪನಿಗಳ ಬಗ್ಗೆ ವರದಿ ಸಲ್ಲಿಕೆಗೆ ಸುಪ್ರೀಂಕೋರ್ಟ್‌ನಿಂದ 6 ತಿಂಗಳ ಕಾಲಾವಕಾಶ ಕೋರಿದ ಸೆಬಿ

Adani Group SEBI seeks 6 months from Supreme Court to submit report on Adani companies

ನವ ದೆಹಲಿ: ಅದಾನಿ ಕಂಪನಿಗಳ ವಿರುದ್ಧ ಸೆಬಿ (Securities Exchange Board of India) 2016ರಿಂದೀಚೆಗೆ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ನಿರಾಧಾರವಾಗಿವೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ, ಸುಪ್ರೀಂಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ. ಜತೆಗೆ ಅದಾನಿ ಕಂಪನಿಗಳ ವ್ಯವಹಾರಗಳ ಕುರಿತ ತನಿಖೆಗೆ ಹೆಚ್ಚುವರಿ 6 ತಿಂಗಳಿನ ಕಾಲಾವಕಾಶ ಬೇಕು ಎಂದಿದೆ.

ಅದಾನಿ ಸಮೂಹದ (Adani group) ಕಂಪನಿಗಳ ವ್ಯವಹಾರಗಳು ಅತಿ ಸಂಕೀರ್ಣವಾಗಿದ್ದು, ತನಿಖೆಗೆ ಹೆಚ್ಚುವರಿ ಸಮಯಾವಕಾಶ ಬೇಕು ಎಂದು ಸೆಬಿ ಪ್ರತಿಪಾದಿಸಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿಎಸ್‌ ನರಸಿಂಹ, ಜೆಬಿ ಪಾರ್ದಿವಾಲಾ ಅವರನ್ನು ಒಳಗೊಂಡಿದ್ದ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಲಾಯಿತು. ಹಾಗೂ ತನಿಖೆಗೆ ಹೆಚ್ಚುವರಿ ಕಾಲಾವಕಾಶ ಕೋರಲಾಯಿತು.

ಹೂಡಿಕೆದಾರರ ಹಿತಾಸಕ್ತಿ ದೃಷ್ಟಿಯಿಂದ ಯಾವುದೇ ತರಾತುರಿಯಲ್ಲಿ ಅಪ್ರಬುದ್ಧ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದು. ಹಿಂಡೆನ್‌ ಬರ್ಗ್‌ ಅದಾನಿ ಗ್ರೂಪ್‌ನ 12 ಹಣಕಾಸು ವರ್ಗಾವಣೆಗಳ ಬಗ್ಗೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಇದು ಹಲವು ಉಪ ವರ್ಗಾವಣೆಗಳನ್ನೂ ಒಳಗೊಂಡಿದೆ. ಇವುಗಳ ಬಗ್ಗೆ ನಾನಾ ಮೂಲಗಳಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕಾಗಿದೆ. ಪೂರಕ ದಾಖಲೆಗಳನ್ನು ಸಂಗ್ರಹಿಸಬೇಕಾಗಿದೆ. ಬಳಿಕ ವಿಶ್ಲೇಷಣೆ ಕೈಗೊಂಡು ನಿರ್ಧರಿಸಬಹುದು ಎಂದು ಸೆಬಿ, ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ: Adani group : ಆಸ್ಟ್ರೇಲಿಯಾ ಕಲ್ಲಿದ್ದಲು ವ್ಯವಹಾರದ 3 ಕಂಪನಿಗಳಿಗೆ ವಿನೋದ್‌ ಅದಾನಿ ರಾಜೀನಾಮೆ: ವರದಿ

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ 2023ರ ಜನವರಿ 24ರಂದು ಅದಾನಿ ಗ್ರೂಪ್‌ ವಿರುದ್ಧ ತನ್ನ ತನಿಖಾ ವರದಿಯನ್ನು ಪ್ರಕಟಿಸಿತ್ತು. ಕಂಪನಿ ಕೃತಕವಾಗಿ ತನ್ನ ಷೇರುಗಳ ದರ ಏರಿಸಿದೆ. ಹಲವು ಅವ್ಯವಹಾರಗಳನ್ನು ನಡೆಸಿದೆ ಎಂದು ಆರೋಪಿಸಿತ್ತು. ಈ ವರದಿ ಬಳಿಕ ಅದಾನಿ ಗ್ರೂಪ್‌ ಕಂಪನಿಗಳ ಷೇರು ದರ ಭಾರಿ ಕುಸಿತಕ್ಕೀಡಾಗಿತ್ತು. ಈ ಬಗ್ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ತನ್ನ ತನಿಖೆ ನಡೆಸುತ್ತಿದ್ದು, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದೆ. ಆದರೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಹೆಚ್ಚುವರಿ 6 ತಿಂಗಳ ಕಾಲಾವಕಾಶವನ್ನು ಸೆಬಿ ನಿರೀಕ್ಷಿಸಿದೆ.

Exit mobile version