Site icon Vistara News

Adani Group : ಅದಾನಿ-ಹಿಂಡೆನ್‌ಬರ್ಗ್‌ ತನಿಖಾ ವರದಿಯನ್ನು ಆ.14ರೊಳಗೆ ಸಲ್ಲಿಸಲು ಸೆಬಿಗೆ ಸುಪ್ರೀಂಕೋರ್ಟ್‌ ಸೂಚನೆ

Adani-Hindenburg Supreme Court panel of experts gives clean chit to Adani Group

ನವ ದೆಹಲಿ: ಅದಾನಿ-ಹಿಂಡೆನ್‌ಬರ್ಗ್‌ ವಿವಾದದ ತನಿಖಾ ವರದಿಯನ್ನು ಆಗಸ್ಟ್‌ 14ರೊಳಗೆ ನೀಡುವಂತೆ ಸುಪ್ರೀಂಕೋರ್ಟ್‌, ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ (SEBI) ಸೂಚಿಸಿದೆ. (Adani Group) ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶವನ್ನು ಕೊಟ್ಟಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ಪೀಠವು, ಪ್ರಕರಣದ ಬಗ್ಗೆ ಪರಿಷ್ಕೃತ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೆಬಿಗೆ ತಿಳಿಸಿದೆ.

ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 11ಕ್ಕೆ ‌ ನಿಗದಿಪಡಿಸಿದೆ. ಅದಾನಿ ಕಂಪನಿಗಳ ವಿರುದ್ಧ ಸೆಬಿ (Securities Exchange Board of India) 2016ರಿಂದೀಚೆಗೆ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ನಿರಾಧಾರವಾಗಿವೆ ಎಂದು ಸೆಬಿ, ಸುಪ್ರೀಂಕೋರ್ಟ್‌ಗೆ ಸೋಮವಾರ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಿಳಿಸಿತ್ತು. ಜತೆಗೆ ಅದಾನಿ ಕಂಪನಿಗಳ ವ್ಯವಹಾರಗಳ ಕುರಿತ ತನಿಖೆಗೆ ಹೆಚ್ಚುವರಿ 6 ತಿಂಗಳಿನ ಕಾಲಾವಕಾಶ ಕೋರಿತ್ತು. ಆದರೆ ಸುಪ್ರೀಂಕೋರ್ಟ್‌ 3 ತಿಂಗಳಿನ ಕಾಲಾವಕಾಶ ಕೋರಿದೆ.

ಅದಾನಿ ಸಮೂಹದ (Adani group) ಕಂಪನಿಗಳ ವ್ಯವಹಾರಗಳು ಅತಿ ಸಂಕೀರ್ಣವಾಗಿದ್ದು, ತನಿಖೆಗೆ ಹೆಚ್ಚುವರಿ ಸಮಯಾವಕಾಶ ಬೇಕು ಎಂದು ಸೆಬಿ ಪ್ರತಿಪಾದಿಸಿತ್ತು.

ಹೂಡಿಕೆದಾರರ ಹಿತಾಸಕ್ತಿ ದೃಷ್ಟಿಯಿಂದ ಯಾವುದೇ ತರಾತುರಿಯಲ್ಲಿ ಅಪ್ರಬುದ್ಧ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದು. ಹಿಂಡೆನ್‌ ಬರ್ಗ್‌ ಅದಾನಿ ಗ್ರೂಪ್‌ನ 12 ಹಣಕಾಸು ವರ್ಗಾವಣೆಗಳ ಬಗ್ಗೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಇದು ಹಲವು ಉಪ ವರ್ಗಾವಣೆಗಳನ್ನೂ ಒಳಗೊಂಡಿದೆ. ಇವುಗಳ ಬಗ್ಗೆ ನಾನಾ ಮೂಲಗಳಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕಾಗಿದೆ. ಪೂರಕ ದಾಖಲೆಗಳನ್ನು ಸಂಗ್ರಹಿಸಬೇಕಾಗಿದೆ. ಬಳಿಕ ವಿಶ್ಲೇಷಣೆ ಕೈಗೊಂಡು ನಿರ್ಧರಿಸಬಹುದು ಎಂದು ಸೆಬಿ, ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ಇದನ್ನೂ ಓದಿ: Adani group : ಆಸ್ಟ್ರೇಲಿಯಾ ಕಲ್ಲಿದ್ದಲು ವ್ಯವಹಾರದ 3 ಕಂಪನಿಗಳಿಗೆ ವಿನೋದ್‌ ಅದಾನಿ ರಾಜೀನಾಮೆ: ವರದಿ

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ 2023ರ ಜನವರಿ 24ರಂದು ಅದಾನಿ ಗ್ರೂಪ್‌ ವಿರುದ್ಧ ತನ್ನ ತನಿಖಾ ವರದಿಯನ್ನು ಪ್ರಕಟಿಸಿತ್ತು. ಕಂಪನಿ ಕೃತಕವಾಗಿ ತನ್ನ ಷೇರುಗಳ ದರ ಏರಿಸಿದೆ. ಹಲವು ಅವ್ಯವಹಾರಗಳನ್ನು ನಡೆಸಿದೆ ಎಂದು ಆರೋಪಿಸಿತ್ತು. ಈ ವರದಿ ಬಳಿಕ ಅದಾನಿ ಗ್ರೂಪ್‌ ಕಂಪನಿಗಳ ಷೇರು ದರ ಭಾರಿ ಕುಸಿತಕ್ಕೀಡಾಗಿತ್ತು. ಈ ಬಗ್ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ತನ್ನ ತನಿಖೆ ನಡೆಸುತ್ತಿದ್ದು, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿದೆ. ಆದರೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಹೆಚ್ಚುವರಿ 6 ತಿಂಗಳ ಕಾಲಾವಕಾಶವನ್ನು ಸೆಬಿ ನಿರೀಕ್ಷಿಸಿದೆ.

Exit mobile version