ನವ ದೆಹಲಿ: ಉದ್ಯಮಿ ಗೌತಮ್ ಅದಾನಿ (Adani) ಅವರು ಗುಜರಾತಿನ ಮುಂದ್ರಾದಲ್ಲಿ ತಮ್ಮ 34,900 ಕೋಟಿ ರೂ.ಗಳ ಪೆಟ್ರೊಕೆಮಿಕಲ್ಸ್ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ( Hindenburg fallout) ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹ ತನ್ನ ಹೂಡಿಕೆಗಳನ್ನು ಎಚ್ಚರದಿಂದ ಮಾಡುತ್ತಿದೆ.
2019ರಲ್ಲಿ ಅದಾನಿ ಅವರು ತವರು ರಾಜ್ಯ ಗುಜರಾತಿನಲ್ಲಿ ಪೆಟ್ರೊಕೆಮಿಕಲ್ಸ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದರು. ಎರಡು ವರ್ಷಗಳ ಬಳಿಕ ಮುಂದ್ರಾ ಪೆಟ್ರೊಕೆಮ್ ಮತ್ತು ಅದಾನಿ ಪೆಟ್ರೊಕೆಮಿಕಲ್ಸ್ , ತೈಲ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದವು.
ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಇದೀಗ ತನ್ನ ಗ್ರೀನ್ ಪಿವಿಸಿ ಪ್ರಾಜೆಕ್ಟ್ ಅನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಡಿಬಿ ಪವರ್ ಅನ್ನು ಖರೀದಿಸುವ 7,017 ಕೋಟಿ ರೂ.ಗಳ ಡೀಲ್ ಅನ್ನೂ ಅದಾನಿ ಗ್ರೂಪ್ ಸ್ಥಗಿತಗೊಳಿಸಿತ್ತು.
ಅದಾನಿ ಷೇರು ದರ ಚೇತರಿಕೆ: ಈ ನಡುವೆ ಅದಾನಿ ಗ್ರೂಪ್‌ನ 3 ಕಂಪನಿಗಳ ಷೇರುಗಳು ಇತ್ತೀಚೆಗೆ ಉತ್ತಮ ಚೇತರಿಕೆ ದಾಖಲಿಸಿವೆ. ಕಳೆದ ಶುಕ್ರವಾರ ಅದಾನಿ ಎಂಟರ್‌ಪ್ರೈಸಸ್ ಷೇರು ದರದಲ್ಲಿ 41 ರೂ. ಏರಿತ್ತು. (1884 ರೂ.) ಅದಾನಿ ಪವರ್, ಅದಾನಿ ವಿಲ್ಮರ್ ಷೇರು ದರ ಕೂಡ ಚೇತರಿಸಿತ್ತು. ಅದಾನಿ ಪೋರ್ಟ್ ಷೇರು ಕೂಡ ಸುಧಾರಿಸುತ್ತಿದೆ. ಎನ್‌ಎಸ್‌ಇನ ಅಲ್ಪಾವಧಿಯ ನಿಗಾ ವ್ಯಾಪ್ತಿಯಿಂದ ಈ ಷೇರುಗಳು ಮುಕ್ತ ಪಡೆದಿರುವುದು ಇದಕ್ಕೆ ಕಾರಣ.
ಅದಾನಿ ಸಮೂಹದ ಪ್ರವರ್ತಕರಾದ ಎಸ್.ಬಿ ಅದಾನಿ ಫ್ಯಾಮಿಲಿ ಟ್ರಸ್ಟ್ 15,446 ಕೋಟಿ ರೂ. ಮೌಲ್ಯದ 21 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಮಾರಾಟ ಮಾಡಿದೆ. (Adani Group) ಅದಾನಿ ಗ್ರೂಪ್‌ನ 4 ಕಂಪನಿಗಳ ಷೇರುಗಳನ್ನು ಬ್ಲಾಕ್ ಡೀಲ್ ಮೂಲಕ ಎಫ್‌ಐಐಗೆ ಷೇರು ಮಾಡಿದೆ. ಟ್ರಸ್ಟ್ ಅದಾನಿ ಗ್ರೂಪ್‌ನ ಪ್ರವರ್ತಕ ಸಂಸ್ಥೆಯಾಗಿದ್ದು, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಶನ್ ಷೇರುಗಳನ್ನು ಮಾರಾಟ ಮಾಡಿದೆ.
ಅಮೆರಿಕ ಮೂಲದ ಜಿಕ್ಯೂಜಿ ಪಾರ್ಟ್‌ನರ್ಸ್ (GQG) , ಈ 15,446 ಕೋಟಿ ರೂ. ಮೌಲ್ಯದ ಷೇರುಗಳನ್ನು ಬ್ಲಾಕ್‌ಡೀಲ್‌ನಲ್ಲಿ ಖರೀದಿಸಿದೆ. ಜಿಕ್ಯೂಜಿ ಜತೆಗೆ ಐತಿಹಾಸಿಕ ಒಪ್ಪಂದ ಮಾಡಿರುವುದಕ್ಕೆ ಸಂತಸವಾಗುತ್ತಿದೆ ಎಂದು ಅದಾನಿ ಗ್ರೂಪ್ ಸಿಎಫ್‌ಒ ಜುಗೇಶಿಂದರ್ ಸಿಂಗ್ ತಿಳಿಸಿದ್ದಾರೆ. ಅದಾನಿ ಗ್ರೂಪ್‌ನ ಈ ಕಂಪನಿಗಳ ಭವಿಷ್ಯ ಉತ್ತಮವಾಗಿದ್ದು, ಹೂಡಿಕೆಗೆ ಸಂತಸವಾಗುತ್ತಿದೆ ಎಂದು ಜಿಕ್ಯೂಜಿ ಪಾರ್ಟ್‌ನರ್ಸ್ ಅಧ್ಯಕ್ಷ ರಾಜೀವ್ ಜೈನ್ ತಿಳಿಸಿದ್ದಾರೆ.