ಮುಂಬಯಿ: ಏರ್ ಇಂಡಿಯಾದ ನೂತನ ಆಡಳಿತ ಮಂಡಳಿಯು ಏರ್‌ಲೈನ್‌ನ ರಿಬ್ರಾಂಡಿಂಗ್‌ನಲ್ಲಿ ತೊಡಗಿಸಿಕೊಂಡಿದೆ. (Air India Maharaja) ಏರ್ ಇಂಡಿಯಾದ ಐತಿಹಾಸಿಕ ಲಾಂಛನವಾಗಿರುವ ಮಹಾರಾಜನ ಭವಿಷ್ಯದ ಬಗ್ಗೆ ಕುತೂಹಲ ಉಂಟಾಗಿದೆ. ಹೊಸ ಆಡಳಿತಮಂಡಳಿಯು ಮಹಾರಾಜ ಮುಂದುವರಿಯಲಿದ್ದಾನೆ ಎಂದು ಹೇಳಿದ್ದರೂ, ಅಧಿಕಾರಿಗಳ ಪ್ರಕಾರ ಮಹಾರಾಜನ ಪಾತ್ರ ಬದಲಾಗುವ ನಿರೀಕ್ಷೆ ಇದೆ.
ಹೊಸ ಬ್ರಾಂಡಿಂಗ್‌ನಲ್ಲಿ ಏರ್ ಇಂಡಿಯಾದ ಮಹಾರಾಜನ ಪಾತ್ರ ಸೀಮಿತವಾಗಿರಬಹುದು. ಮೊದಲಿನಷ್ಟು ಪ್ರಾಮುಖ್ಯತೆ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಹೊಸ ಆಡಳಿತ ಮಂಡಳಿಯು ಪ್ಲಾನ್ ಅನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ರಿಬ್ರಾಂಡಿಂಗ್ ಬಗ್ಗೆ ಏರ್ ಇಂಡಿಯಾ ಆಗಸ್ಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ. 2023ರ ಅಂತ್ಯದ ವೇಳೆಗೆ ಅನುಷ್ಠಾನವಾಗುವ ಸಾಧ್ಯತೆ ಇದೆ. ಏರ್ ಇಂಡಿಯಾ ಈಗ ಹೊಂದಿರುವ ಕೆಂಪು ಹಂಸದ ಲೋಗೊ ಬದಲಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಸರ್ಕಾರ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಿತ್ತು.
ಮಹಾರಾಜನ ಇತಿಹಾಸವೇನು? 76 ವರ್ಷ ಹಳೆಯ ಏರ್ ಇಂಡಿಯಾ ಮಹಾರಾಜ ಲಾಂಛನವನ್ನು 1946ರಲ್ಲಿ ಮಾಡಲಾಗಿತ್ತು. ಜಾಹೀರಾತು ಏಜೆನ್ಸಿಯ ಕಲಾವಿದ ಉಮೇಶ್ ರಾವ್ ಹಾಗೂ ಬಾಬ್ಬಿ ಕೂಕಾ ಎಂಬುವರು ಏರ್ ಇಂಡಿಯಾ ಬ್ರಾಂಡ್ ಐಕಾನ್ ಅನ್ನು ತಯಾರಿಸಿದ್ದರು. ಬಳಿಕ ಏರ್ ಇಂಡಿಯಾ ಎಂದರೆ ಮಹಾರಾಜ ಎನ್ನುವಷ್ಟು ಜನಪ್ರಿಯತೆ ಗಳಿಸಿತ್ತು. ಆಗಿನ ಕಾಲದಲ್ಲಿ ವಿಮಾನ ಪ್ರಯಾಣ ಸಾಮಾನ್ಯವಾಗಿರಲಿಲ್ಲ ಅಥವಾ ಜನ ಸಾಮಾನ್ಯರಿಗೆ ಸುಲಭವಾಗಿರಲಿಲ್ಲ. ಆದ್ದರಿಂದ ಮಹಾರಾಜ ಸಂಕೇತ ಹೊಂದಿಕೆಯಾಗುತ್ತಿತ್ತು. ಆದರೆ ಈಗಿನ ಜಮಾನಾಕ್ಕೆ ಸೂಕ್ತವಾಗಿ ಹೊಂದಿಕೆ ಆಗುವುದಿಲ್ಲ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Pakistan Airlines : ಬಾಕಿ ಕೊಡದ ಪಾಕಿಸ್ತಾನ ಏರ್‌ಲೈನ್ಸ್‌ಗೆ ಸೌದಿ ಅರೇಬಿಯಾ ಕೊನೆಯ ಎಚ್ಚರಿಕೆ
ಏರ್ ಇಂಡಿಯಾ ಮುಂಬರುವ ತಿಂಗಳುಗಳಲ್ಲಿ ಮೊದಲ A350 ವಿಮಾನವನ್ನು ಸ್ವೀಕರಿಸಲಿದೆ. ಇದರಲ್ಲಿ ಪ್ರೀಮಿಯಂ ಎಕಾನಮಿ ಕ್ಯಾಬಿನ್ ಇರಲಿದೆ. ಏರ್‌ಲೈನ್ 2023ರ ಅಂತ್ಯಕ್ಕೆ 40 ಹೊಸ ಏರ್ ಕ್ರಾಫ್ಟ್ ಅನ್ನು ಖರೀದಿಸುವ ನಿರೀಕ್ಷೆ ಇದೆ. ಇದರಲ್ಲಿ ಬೋಯಿಂಗ್ 737 ಕೂಡ ಇರಲಿದೆ.