ನವ ದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ೧೦೦ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ವಂಚನೆಯ ಪ್ರಕರಣಗಳು 2021-22ರಲ್ಲಿ ಇಳಿಕೆಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
೨೦೨೧-೨೨ರಲ್ಲಿ ಒಟ್ಟು ೪೧,೦೦೦ ಕೋಟಿ ರೂ. ಮೊತ್ತದ ವಂಚನೆ ನಡೆದಿದ್ದರೆ, ೨೦೨೦-೨೧ರಲ್ಲಿ ೧.೦೫ ಲಕ್ಷ ಕೋಟಿ ರೂ. ಅವ್ಯವಹಾರಗಳು ನಡೆದಿತ್ತು. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ವಂಚನೆಯ ಕೇಸ್‌ಗಳು ಇಳಿಕೆಯಾಗಿವೆ.
೧೦೦ ಕೋಟಿ ರೂ.ಗಿಂತ ಹೆಚ್ಚಿನ ವಂಚನೆಯ ಪ್ರಕರಣಗಳು ೨೦೨೦-೨೧ರಲ್ಲಿ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ೧೬೭ರಿಂದ ೮೦ಕ್ಕೆ ಇಳಿಕೆಯಾಗಿವೆ. ಖಾಸಗಿ ಬ್ಯಾಂಕ್ ಗಳಲ್ಲಿ ೯೮ರಿಂದ ೩೮ಕ್ಕೆ ಇಳಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಆರಂಭಿಕ ಎಚ್ಚರಿಕೆ ವ್ಯವಸ್ಥೆ (Early Warning System) ಮೂಲಕ ಬ್ಯಾಂಕ್‌ಗಳಲ್ಲಿ ಸಂಭವನೀಯ ವಂಚನೆಗಳನ್ನು ತಪ್ಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಡೇಟಾ ಅನಾಲಿಸಿಸ್, ಮೆಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿತ್ತು. ಈ ನಿಟ್ಟಿನಲ್ಲಿ ಆರ್‌ಬಿಐ, ರಿಸರ್ವ್ ಬ್ಯಾಂಕ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ( ReBIT) ಜತೆ ಸಹಯೋಗದಲ್ಲಿ ಕಾರ್ಯನಿರ್ವಹಿಸಿತ್ತು.
ಈ ವರ್ಷ ಎಸ್‌ಬಿಐ, ದೇಶದ ಬ್ಯಾಂಕಿಂಗ್ ಇತಿಹಾಸದಲ್ಲಿಯೇ ದೊಡ್ಡದು ಎನ್ನಲಾಗಿರುವ ಹಗರಣವನ್ನು ವರದಿ ಮಾಡಿತ್ತು. ಎಬಿಜಿ ಶಿಪ್‌ಯಾರ್ಡ್ ಮತ್ತು ಅದರ ಪ್ರವರ್ತಕರಿಗೆ ನೀಡಿದ್ದ ಸಾಲದಲ್ಲಿ ೨೨,೮೪೨ ಕೋಟಿ ರೂ.ಗಳ ಬೃಹತ್ ಹಗರಣ ನಡೆದಿತ್ತು. ಇದು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರನ್ನು ಒಳಗೊಂಡಿರುವ ಪಂಜಾಬ್ ನ್ಯಾಷನಲ್ ಹಗರಣಕ್ಕಿಂತಲೂ ದೊಡ್ಡದು.