ಮುಂಬಯಿ: ಎಲ್‌ಐಸಿ ಐಪಿಒದ ಮೂರನೇ ದಿನ 1.1 ಪಟ್ಟು ಬಿಡ್ ಸಲ್ಲಿಕೆಯಾಗಿದೆ. ರಿಟೇಲರ್, ಉದ್ಯೋಗಿಗಳು ಮತ್ತು ಪಾಲಿಸಿದಾರರ ಕೋಟಾ ಸಂಪೂರ್ಣವಾಗಿ ಚಂದಾದಾರಿಕೆಯಾಗಿದ್ದರೂ, (ಸಬ್‌ಸ್ಕ್ರೈಬ್) ಹೂಡಿಕೆದಾರರ ಆಕರ್ಷಣೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಶನಿವಾರ ಮತ್ತು ಭಾನುವಾರ ರಿಟೇಲ್ ಹೂಡಿಕೆದಾರರಿಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಐದು ಕೆಟಗರಿಗಳ ಪೈಕಿ ಪಾಲಿಸಿದಾರರು 3.3 ಪಟ್ಟು ಬಿಡ್ ಸಲ್ಲಿಸಿದ್ದರೆ, ಎಲ್‌ಐಸಿಯ ಉದ್ಯೋಗಿಗಳು 2.4 ಪಟ್ಟು ಬಿಡ್ ಸಲ್ಲಿಸಿದ್ದಾರೆ. ಭಾರತದ ಷೇರು ಮಾರುಕಟ್ಟೆಯಲ್ಲಿಯೇ ಅತಿ ದೊಡ್ಡ ಐಪಿಒ ಇದಾಗಿದ್ದು, ಮೇ 9ರ ತನಕ ಬಿಡ್ ಸಲ್ಲಿಸಲು ಅವಕಾಶ ಇದೆ.
ಬಿಎಸ್‌ಇ ಅಂಕಿ ಅಂಶಗಳ ಪ್ರಕಾರ ಹೂಡಿಕೆದಾರರು ಶುಕ್ರವಾರ ಬೆಳಗ್ಗೆ 11 ಗಂಟೆಯ ವೇಳೆಗೆ 16,20,78,067 ಈಕ್ವಿಟಿ ಷೇರುಗಳಿಗೆ ಪ್ರತಿಯಾಗಿ 17,62,80,840 ಈಕ್ವಿಟಿ ಷೇರುಗಳ ಬಿಡ್ ಸಲ್ಲಿಸಿದ್ದಾರೆ.
ಅರ್ಹ ಸಾಂಸ್ಥಿಕ ಖರೀದಿದಾರರ ಕೋಟಾದಡಿಯಲ್ಲಿ ಇದುವರೆಗೆ ಶೇ.40ರಷ್ಟು ಚಂದಾದಾರಿಕೆ ನಡೆದಿದೆ. ಎಲ್‌ಐಸಿಯ 22.13 ಕೋಟಿ ಷೇರುಗಳನ್ನು ಕೇಂದ್ರ ಸರಕಾರ ಮಾರಾಟ ಮಾಡುತ್ತಿದೆ. ಅಂದರೆ ಶೇ.100 ಷೇರುಗಳ ಪೈಕಿ ಶೇ.3.5ರಷ್ಟನ್ನು ಮಾತ್ರ ಸರಕಾರ ಮಾರಾಟ ಮಾಡುತ್ತಿದೆ.
ಎಲ್‌ಐಸಿ ವಿಮೆ ಉತ್ಪನ್ನಗಳು ಹಾಗೂ ಹೂಡಿಕೆಯ ಉತ್ಪನ್ನಗಳನ್ನೂ ನೀಡುತ್ತದೆ. ಖಾತರಿಯ ಆದಾಯವನ್ನು ನೀಡುವ ಹೂಡಿಕೆ ಹಾಗೂ ವಿಮೆಯ ಉತ್ಪನ್ನಗಳನ್ನು ಹೊಂದಿದೆ.
LIC IPOಗೆ ಭರ್ಜರಿ ರೆಸ್ಪಾನ್ಸ್, ಎರಡೇ ದಿನದಲ್ಲಿ ಶೇ.95 ಷೇರುಗಳಿಗೆ ಬಿಡ್ ಸಲ್ಲಿಕೆ
13.5 ಲಕ್ಷ ಏಜೆಂಟರ ನೆಟ್‌ವರ್ಕ್
ಎಲ್‌ಐಸಿ 13.5 ಲಕ್ಷ ಏಜೆಂಟರ ಜಾಲವನ್ನು ಹೊಂದಿದೆ. ಸಂಸ್ಥೆಯ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮುಖ್ಯವಾದ ಪಾತ್ರ ವಹಿಸುತ್ತಾರೆ. ಜೀವ ವಿಮೆ ಕವರೇಜ್ ಅನ್ನು ಒಳಗೊಂಡಿರುವ ವಿಮೆಯ ಪ್ಲಾನ್‌ಗಳನ್ನು ಎಲ್‌ಐಸಿ ವಿತರಿಸುತ್ತದೆ. ಎಲ್‌ಐಸಿ 39 ಲಕ್ಷ ಕೋಟಿ ರೂ. ಆಸ್ತಿಯನ್ನು ನಿರ್ವಹಿಸುತ್ತದೆ. ಇಡೀ ಮ್ಯೂಚುವಲ್ ಫಂಡ್ ಉದ್ದಿಮೆ ಒಟ್ಟಾಗಿ ನಿರ್ವಹಿಸುತ್ತಿರುವ ಆಸ್ತಿಗಿಂತಲೂ ಇದು ದೊಡ್ಡದು. ನಾನಾ ಷೇರುಗಳು ಮತ್ತು ಬಾಂಡ್‌ಗಳಲ್ಲಿ ಎಲ್ ಐಸಿ ಹೂಡಿಕೆ ಮಾಡಿದೆ. ಭಾರತದಲ್ಲಿ ನೋಂದಣಿಯಾಗಿರುವ ಒಟ್ಟು ನೋಂದಾಯಿತ ಷೇರುಗಳ ಪೈಕಿ ಶೇ.4ರಷ್ಟು ಷೇರುಗಳನ್ನು ಎಲ್‌ಐಸಿ ಒಳಗೊಂಡಿದೆ. ಆರ್‌ಬಿಐ ಹೊಂದಿರುವುದಕ್ಕಿಂತ ಹೆಚ್ಚು ಬಾಂಡ್‌ಗಳನ್ನು ಎಲ್‌ಐಸಿ ಒಳಗೊಂಡಿದೆ. ಜಾಗತಿಕ ಮಟ್ಟದಲ್ಲಿ 5ನೇ ಅತಿ ದೊಡ್ಡ ವಿಮೆ ಕಂಪನಿಯಾಗಿದೆ. ಎಲ್‌ಐಸಿ ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಸರಕಾರಿ ಸ್ವಾಮ್ಯದ ವಿಮೆ ಕಂಪನಿಯಾಗಿದೆ. 1956ರ ಸೆಪ್ಟೆಂಬರ್ 1ರಂದು ಸ್ಥಾಪನೆಯಾಗಿತ್ತು. ಎಂ.ಆರ್.ಕುಮಾರ್ ಅಧ್ಯಕ್ಷರಾಗಿದ್ದಾರೆ. ಎಲ್ ಐಸಿಯು 2048 ಡಿಜಿಟಲೀಕರಣ ಹೊಂದಿರುವ ಶಾಖಾ ಕಚೇರಿಗಳನ್ನು ಒಳಗೊಂಡಿದೆ. 113 ವಿಭಾಗೀಯ ಕಚೇರಿಗಳು, 8 ವಲಯಾವಾರು ಕಚೇರಿಗಳು (ದಿಲ್ಲಿ, ಭೋಪಾಲ, ಕೋಲ್ಕತಾ, ಮುಂಬಯಿ, ಚೆನ್ನೈ, ಪಟನಾ, ಕಾನ್ಪುರ, ಹೈದರಾಬಾದ್) 1408 ಸ್ಯಾಟಲೈಟ್ ಕಚೇರಿಗಳನ್ನು ಒಳಗೊಂಡಿದೆ. 22 ವಿಭಾಗಗಳನ್ನು ಹೊಂದಿದೆ. ಯೋಗಕ್ಷೇಮಂ ವಹಾಮ್ಯಹಂ ಎಂಬುದು ಎಲ್‌ಐಸಿಯ ಘೋಷವಾಕ್ಯವಾಗಿದೆ.
ಗ್ರೇ ಮಾರ್ಕೆಟ್‌ನಲ್ಲಿ LIC IPO ಮೌಲ್ಯ ಹೆಚ್ಚಳ: ₹45-₹80ರ ವರೆಗೆ GMP
ವಿಮೆ ಉದ್ದಿಮೆ ಬೆಳವಣಿಗೆ ನಿರೀಕ್ಷೆ
ಭಾರತೀಯ ವಿಮೆ ಉದ್ದಿಮೆ ತ್ವರಿತ ಗತಿಯಲ್ಲಿ ವೃದ್ಧಿಸಿದೆ. ಹಾಗೂ ಮಾರುಕಟ್ಟೆ ವಿಸ್ತರಣೆಗೆ ವಿಫುಲ ಅವಕಾಶ ಇದೆ. ಎಲ್ ಐಸಿ ಕಳೆದ 65 ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿದೆ. ಖಾಸಗಿ ವಿಮೆ ಕಂಪನಿಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ವಹಿವಾಟು ವೃದ್ಧಿಸುತ್ತಿದ್ದರೂ, ಎಲ್ ಐಸಿ ಪ್ರಾಬಲ್ಯ ಸದ್ಯಕ್ಕೆ ಅಬಾಧಿತವಾಗಿದೆ. ರಿಟೇಲ್ ಹೂಡಿಕೆದಾರರು ಎಲ್‌ಐಸಿ ಷೇರುಗಳಿಗೆ ಹೆಚ್ಚಿನ ಆಸಕ್ತಿ ತೋರಿದ್ದು, ಇದು ಬ್ರ್ಯಾಂಡ್ ಮೇಲಿನ ವಿಶ್ವಾಸವನ್ನು ಬಿಂಬಿಸಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಿಇಒ ಉದಯ್ ಕೋಟಕ್ ತಿಳಿಸಿದ್ದಾರೆ.