ವಾಷಿಂಗ್ಟನ್: ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಮಾಲೀಕ ಎಲಾನ್ ಮಸ್ಕ್ ಸೇರಿದಂತೆ 500 ಶ್ರೀಮಂತ ಉದ್ಯಮಿಗಳು ಕಳೆದ 6 ತಿಂಗಳಿನಲ್ಲಿ ದಿನಕ್ಕೆ ಸರಾಸರಿ 114 ಕೋಟಿ ರೂ. (14 ದಶಲಕ್ಷ ಡಾಲರ್) ಗಳಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ. (Bilionaires) ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg billionaires Index) ವಿಶ್ವದ ಅತಿ ಶ್ರೀಮಂತ 500 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದೆ. 2023ರ ಮೊದಲಾರ್ಧದಲ್ಲಿ ಅವರ ಸಂಪತ್ತಿನಲ್ಲಿ 852 ಶತಕೋಟಿ ಡಾಲರ್ ( 69 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ಎಲಾನ್ ಮಸ್ಕ್ ಕಳೆದ ಆರು ತಿಂಗಳಿನಲ್ಲಿ ಅಂದರೆ 2023ರ ಜನವರಿ-ಜೂನ್ ಅವಧಿಯಲ್ಲಿ ತಮ್ಮ ಸಂಪತ್ತಿಗೆ 96 ಶತಕೋಟಿ ಡಾಲರ್ ಮೊತ್ತವನ್ನು ಸೇರಿಸಿದ್ದಾರೆ. (7.87 ಲಕ್ಷ ಕೋಟಿ ರೂ.) ಸೇರಿಸಿದ್ದಾರೆ. ಮತ್ತೊಂದು ಕಡೆ ಅದಾನಿ ಸಮೂಹದ ಸ್ಥಾಪಕ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ 60 ಶತಕೋಟಿ ಡಾಲರ್ (4.92 ಲಕ್ಷ ಕೋಟಿ ರೂ.) ನಷ್ಟವಾಗಿದೆ.
ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳ ಚೇತರಿಕೆಯೇ ಬಿಲಿಯನೇರ್‌ಗಳ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈಗ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ. ಸೋಮವಾರ ಟೆಸ್ಲಾ ಷೇರು ದರದಲ್ಲಿ 7% ಹೆಚ್ಚಳವಾಗಿತ್ತು. ಆದರೆ ಎಲ್ಲ ಬಿಲಿಯನೇರ್‌ಗಳೂ ಲಾಭ ಗಳಿಸಿಲ್ಲ. ಗೌತಮ್ ಅದಾನಿ ಅವರಿಗೆ ಅತಿ ಹೆಚ್ಚು ನಷ್ಟವಾಗಿದೆ. ಜಗತ್ತಿನ 21ನೇ ದೊಡ್ಡ ಸಿರಿವಂತ ಅವರಾಗಿದ್ದಾರೆ. ಜನವರಿ 27ರಂದು ಹಿಂಡೆನ್ ಬರ್ಗ್ ಸ್ಫೋಟಕ ವರದಿ ಬಳಿಕ ಅದಾನಿ ಕಂಪನಿಗಳ ಷೇರು ದರ ಕುಸಿದಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಷೇರು ದರ ಚೇತರಿಸಿದೆ.
ಸೆನ್ಸೆಕ್ಸ್, ನಿಫ್ಟಿ ಮುಂದುವರಿದ ನಾಗಾಲೋಟ: ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ನಾಗಾಲೋಟ ಮುಂದುವರಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 274 ಅಂಕ ಚೇತರಿಸಿಕೊಂಡು 65,479ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 66 ಅಂಕ ಗಳಿಸಿ 19,389ಕ್ಕೆ ಸ್ಥಿರವಾಯಿತು. ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಎಕಾನಮಿ ಪ್ರಬಲ ಬೆಳವಣಿಗೆ ಸಾಧಿಸುತ್ತಿದೆ. ಇದರ ಪರಿಣಾಮ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಆಟೊಮೊಬೈಲ್, ಬ್ಯಾಂಕಿಂಗ್, ಹೆಲ್ತ್‌ಕೇರ್, ತೈಲ ಮತ್ತು ಅನಿಲ, ರಿಟೇಲ್, ಟೆಲಿಕಾಂ, ಲಾಜಿಸ್ಟಿಕ್ಸ್ ವಲಯದ ಷೇರುಗಳು ಲಾಭ ಗಳಿಸಿವೆ.
ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಪ್ರಕಾರ, ಐಸಿಐಸಿಐ ಬ್ಯಾಂಕ್, ಐಟಿಸಿ, ಎಲ್&ಟಿ, ಟೈಟನ್, ಎಂ&ಎಂ, ಎಚ್‌ಸಿಎಲ್ ಟೆಕ್ನಾಲಜೀಸ್, ಅಪೊಲೊ ಹಾಸ್ಪಿಟಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಒಎನ್‌ಜಿಸಿ, ಅಶೋಕ್ ಲೇಲ್ಯಾಂಡ್, ಮೆಟ್ರೊ ಬ್ರಾಂಡ್ಸ್, ಎಂ&ಎಂ ಫೈನಾನ್ಷಿಯಲ್ ಸರ್ವೀಸ್, ಎಪಿಎಲ್ ಅಪೊಲೊ, ಗೋದ್ರೇಜ್ ಪ್ರಾಪರ್ಟೀಸ್ ಷೇರು ದರ ಲಾಭದಾಯಕವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Stock Market : ಸೆನ್ಸೆಕ್ಸ್ ಮೊದಲ ಬಾರಿಗೆ 65,000ಕ್ಕೆ ಜಿಗಿತ, ನಿಫ್ಟಿ ಹೈ ಜಂಪ್
ಎಕ್ಸಿಸ್ ಸೆಕ್ಯುರಿಟೀಸ್ ಪ್ರಕಾರ ಐಸಿಐಸಿಐ ಬ್ಯಾಂಕ್, ಮಾರುತಿ ಸುಜುಕಿ, ಎಸ್‌ಬಿಐ, ಆರ್‌ಐಟಿಇಎಸ್, ಫೆಡರಲ್ ಬ್ಯಾಂಕ್, ವರುಣ್ ಬೇವರೇಜಸ್, ಅಶೋಕ್ ಲೇಲ್ಯಾಂಡ್, ಪಿಎನ್‌ಸಿ ಇನ್‌ಫ್ರಾಟೆಕ್, ಐಟಿಸಿ, ಆರತಿ ಡ್ರಗ್ಸ್, ರೆಲಾಕ್ಸೊ ಫುಟ್‌ವೇರ್ಸ್, ಮಹೀಂದ್ರಾ ಸಿಐಇ, ಪೊಲಿಕ್ಯಾಬ್ ಇಂಡಿಯಾ ಷೇರುಗಳು ಲಾಭದಾಯಕವಾಗುವ ನಿರೀಕ್ಷೆ ಇದೆ.