ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್‌ನ ( Twitter Logo) ಸಿಇಒ ಎಲಾನ್ ಮಸ್ಕ್ (Elon Musk) ಯಾವಾಗ ಏನು ಮಾಡುತ್ತಾರೆ, ಯೂ ಟರ್ನ್ ತೆಗೆದುಕೊಳ್ಳುತ್ತಾರೆ ಎಂದು ಊಹಿಸಲಾಗದು. ಕೆಲವೇ ದಿನಗಳ ಹಿಂದೆಯಷ್ಟೇ ಟ್ವಿಟರ್‌ನ ಲೋಗೊದಲ್ಲಿ ನೀಲಿ ಹಕ್ಕಿಯ ಚಿತ್ರವನ್ನೇ ತೆಗೆದು ಹಾಕಿದ್ದರು. ಅದರ ಬದಲಿಗೆ ಡಾಗ್ ಕಾಯಿನ್ (Dogcoin) ಎಂಬ ಕ್ರಿಪ್ಟೊ ಕರೆನ್ಸಿ ಮೇಲಿರುವ ನಾಯಿಯ ಮೀಮ್ಸ್ ಚಿತ್ರವನ್ನೇ ಟ್ವಿಟರ್‌ನ ಲೋಗೊವಾಗಿ ಬಳಸಿದ್ದರು. ಇದೀಗ ನಾಯಿ ಮುಖದ ಲೋಗೋ ನಾಪತ್ತೆಯಾಗಿದ್ದು, ಮತ್ತೆ ನೀಲಿ ಹಕ್ಕಿಯನ್ನೇ ಬಳಸಲಾಗಿದೆ.
ಎಲಾನ್ ಮಸ್ಕ್ ಅವರು ಹಿಂದಿನಿಂದಲೂ ಡಾಗ್ ಕಾಯಿನ್ ಅನ್ನು ಬೆಂಬಲಿಸಿದ್ದರು. 2013ರಲ್ಲಿ ಜೋಕ್‌ನಂತೆ ಸೃಷ್ಟಿಯಾದ ಡಾಗ್ ಕಾಯಿನ್ ಬಳಿಕ ವ್ಯಾಪಕವಾಗಿ ಬಳಕೆಯಾಗಿ ಜನಪ್ರಿಯವಾಗಿತ್ತು. ಟೆಸ್ಲಾದಲ್ಲೂ ಡಾಗ್ ಕಾಯಿನ್ ಅನ್ನು ಬಳಸಲಾಗುತ್ತಿತ್ತು. ನಾಯಿ ಮುಖದ ಲೋಗೊ ನಾಪತ್ತೆಯಾದ ಬಳಿಕ ಡಾಗ್ ಕಾಯಿನ್ ಷೇರು ದರದಲ್ಲಿ 9% ಇಳಿಕೆಯಾಗಿದೆ.
ಬಿಟ್ಕಾಯಿನ್ ಮತ್ತು ಇನ್ನಿತರ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಜೋಕ್ ಮಾಡಲು 2013ರಲ್ಲಿ ಬಿಲ್ಲಿ ಮಾರ್ಕಸ್, ಜಾಕ್ಸನ್ ಪಾಮರ್ ಎಂಬುವರು ಡಾಗ್ಕಾಯಿನ್ ಕ್ರಿಪ್ಟೋಕರೆನ್ಸಿ ಹೊರತಂದರು. 2021ರಲ್ಲಿ ಎಲಾನ್ ಮಸ್ಕ್ ಅವರು ಈ ಡಾಗ್ಕಾಯಿನ್ಗೆ ಉತ್ತೇಜನ ನೀಡಿದ್ದಲ್ಲದೆ, ಈ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ತಮ್ಮ ಟೆಸ್ಲಾ ಕಂಪನಿಯ ಉದ್ಯೋಗಿಗಳಿಗೂ ಶಿಫಾರಸು ಮಾಡಿದ್ದರು. ಅದೇ ಡಾಗ್ಕಾಯಿನ್ ಚಿತ್ರವನ್ನೇ ತಮ್ಮ ಟ್ವಿಟರ್ ಲೋಗೋವನ್ನಾಗಿ ಬದಲಿಸಿಬಿಟ್ಟಿದ್ದರು.
ಎಲಾನ್ ಮಸ್ಕ್ ಅವರು ಕಳೆದ ವರ್ಷ ಟ್ವಿಟರ್ ಖರೀದಿ ಮಾಡಿದ ನಂತರದಿಂದಲೂ ಈ ಡಾಗ್ಕಾಯಿನ್ನ್ನು ಪ್ರಮೋಟ್ ಮಾಡುತ್ತಿದ್ದರು. ಟ್ವಿಟರ್ನಲ್ಲಿ ನಾಯಿ ಮುಖದ ಮೀಮ್ಸ್ ಹಾಕುತ್ತಿದ್ದಂತೆ ಡಾಗ್ಕಾಯಿನ್ ಕ್ರಿಪ್ಟೋಕರೆನ್ಸಿ ಮೌಲ್ಯ ಶೇ.20ರಷ್ಟು ಏರಿಕೆಯಾಗಿತ್ತು. ಎಲಾನ್ ಮಸ್ಕ್ ಫೆಬ್ರವರಿ 15ರಂದು ಒಂದು ವಿಲಕ್ಷಣ ಪೋಸ್ಟ್ ಹಾಕಿಕೊಂಡಿದ್ದರು. ನಾಯಿಯೊಂದು ಕಪ್ಪು ಬಟ್ಟೆ, ಕನ್ನಡಕ ಹಾಕಿ ಸೀಟ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡು ‘ಟ್ವಿಟರ್‌ನ ನೂತನ ಸಿಇಒ ಅದ್ಭುತವಾಗಿದ್ದಾರೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.