Site icon Vistara News

Byju Raveendran: ಕಳೆದ ವರ್ಷ ಬಿಲಿಯನೇರ್ ಆಗಿದ್ದ ಬೈಜುಸ್‌ ಮಾಲೀಕ ಈಗ ಯಾವ ಸ್ಥಿತಿಯಲ್ಲಿದ್ದಾರೆ ನೋಡಿ!

Byju Raveendran

ಹೊಸದಿಲ್ಲಿ: ವರ್ಷದ ಹಿಂದೆಯಷ್ಟೇ ಪೋರ್ಬ್ ಬಿಲಿಯನೇರ್ ( Forbes Billionaire) ಪಟ್ಟಿಗೆ ಸೇರ್ಪಡೆಯಾಗಿದ್ದ ಬೈಜು ರವೀಂದ್ರನ್ (Byju Raveendran) ಅವರ ನಿವ್ವಳ ಮೌಲ್ಯ ಶೂನ್ಯಕ್ಕೆ ಕುಸಿದಿದ್ದು, 2024ರ ಫೋರ್ಬ್ ಪಟ್ಟಿಯಿಂದ (forbes list) ಅವರನ್ನು ಕೈಬಿಡಲಾಗಿದೆ.

ಒಂದು ವರ್ಷದ ಹಿಂದೆ ಬೈಜು ರವೀಂದ್ರನ್ ಅವರ ನಿವ್ವಳ ಮೌಲ್ಯ 17,545 ಕೋಟಿ ರೂ. ಆಗಿ ಹಲವಾರು ಪ್ರತಿಷ್ಠಿತ ವಿಶ್ವದ ಶ್ರೀಮಂತರ ಪಟ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ಫೋರ್ಬ್ಸ್ ಬಿಲಿಯನೇರ್ ಇಂಡೆಕ್ಸ್ 2024ರ ಪ್ರಕಾರ ರವೀಂದ್ರನ್ ಅವರ ನಿವ್ವಳ ಮೌಲ್ಯವು ಶೂನ್ಯಕ್ಕೆ ಕುಸಿದಿದೆ.

ಭಾರತದ ಸ್ಟಾರ್ಟ್‌ ಅಪ್ ಪ್ರಗತಿಯಿಂದಾಗಿ ಅವರು ತೀವ್ರ ಸಂಕಷ್ಟ ಎದುರಿಸುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ. ಕಳೆದ ವರ್ಷದ ಪಟ್ಟಿಯಿಂದ ಬೈಜು ರವೀಂದ್ರನ್ ಸೇರಿ ಕೇವಲ ನಾಲ್ಕು ಮಂದಿಯನ್ನು ಫೋರ್ಬ್ ಬಿಲಿಯನೇರ್ ಪಟ್ಟಿಯಿಂದ ಈ ಬಾರಿ ಕೈಬಿಡಲಾಗಿದೆ.

ಇದನ್ನೂ ಓದಿ: Youngest billionaires: ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿನ ಕಿರಿಯ ಬಿಲಿಯನೇರ್ ಸಹೋದರರು!

ಭಾರತದಲ್ಲಿ ಬೈಜುಸ್ ಕ್ರಾಂತಿ

2011 ರಲ್ಲಿ ಸ್ಥಾಪಿತವಾದ ಬೈಜೂಸ್ 2022 ರಲ್ಲಿ 22 ಶತಕೋಟಿ ಡಾಲರ್ ನಷ್ಟು ಗರಿಷ್ಠ ಮೌಲ್ಯವನ್ನು ಹೊಂದುವ ಮೂಲಕ ಭಾರತದ ಅತ್ಯಮೂಲ್ಯವಾದ ಸ್ಟಾರ್ಟ್ಅಪ್ ಆಗಿ ವೇಗ ಕಂಡಿತ್ತು. ಬೈಜುಸ್ ನವೀನ ಕಲಿಕಾ ಅಪ್ಲಿಕೇಶನ್‌ನೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಪ್ರಾಥಮಿಕ ಶಾಲೆಯಿಂದ ಎಂಬಿಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಕಂಪೆನಿಯ ವೇಗದ ನಡಿಗೆಗೆ ತೀವ್ರ ಹೊಡೆತವನ್ನು ನೀಡಿವೆ.

ಮಾರ್ಚ್ 2022ರ ಹಣಕಾಸಿನ ವರ್ಷದಲ್ಲಿ ಬೈಜು 1 ಬಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿನ ನಿವ್ವಳ ನಷ್ಟವನ್ನು ಬಹಿರಂಗಪಡಿಸಿದ ಬಳಿಕ ಪ್ರಮುಖ ಹೂಡಿಕೆದಾರರು ಹಿಂದೆ ಸರಿದದ್ದು ಮಾರುಕಟ್ಟೆಯಲ್ಲಿ ತೀವ್ರ ಕುಸಿತವನ್ನು ಕಂಡಿತು.

ಇಡಿ ನೊಟೀಸ್

ಮಾರುಕಟ್ಟೆಯಲ್ಲಿ ತೀವ್ರ ಟೀಕೆಗಳನ್ನು ಎದುರಿಸಿದ ಬೈಜು ರವೀಂದ್ರನ್ ಕಂಪನಿಯ ಷೇರುದಾರರು ಕಳೆದ ತಿಂಗಳು ಸಿಇಒ ಹುದ್ದೆಯಿಂದ ಕೆಳಗಿಳಿಸಲು ಮತ ಹಾಕಿದ್ದಾರೆ.
ಬೈಜು ಅವರ ವಿದೇಶಿ ಹೂಡಿಕೆಯು ಜಾರಿ ನಿರ್ದೇಶನಾಲಯದ ಕಣ್ಣಿಗೆ ಬಿದ್ದಿದ್ದು, ಅದರ ಸಂಸ್ಥಾಪಕರ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿಗೊಳಿಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಡಿ 9,362 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಹಣಕಾಸು ವರ್ಗಾವಣೆ ಸಂಬಂಧಿಸಿ ಬೈಜು ಅವರ ಮಾತೃ ಸಂಸ್ಥೆ ಥಿಂಕ್ ಆಂಡ್ ಲರ್ನ್‌ಗೆ ಇಡಿ ನೊಟೀಸ್ ಜಾರಿ ಗೊಳಿಸಿದೆ.

ಭಾರತದ 200 ಬಿಲಿಯನೇರ್‌ಗಳು

ವಿಶ್ವದ ಫೋರ್ಬ್ ಪಟ್ಟಿಯಲ್ಲಿ ಈ ಬಾರಿ ಭಾರತದ 200 ಬಿಲಿಯನೇರ್‌ಗಳು ಸೇರಿದ್ದಾರೆ. ಇವರು ಒಟ್ಟು 954 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಕಳೆದ ವರ್ಷ 675 ಶತಕೋಟಿ ಡಾಲರ್ ಇದ್ದ ಒಟ್ಟು ಸಂಪತ್ತಿನ ಮೌಲ್ಯದಲ್ಲಿ ಶೇ. 40ರಷ್ಟು ಹೆಚ್ಚಳವಾಗಿದೆ.

ಮುಖೇಶ್ ಅಂಬಾನಿ ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಇವರ ಸಂಪತ್ತು 116 ಬಿಲಿಯನ್ ಡಾಲರ್, ಗೌತಮ್ ಅದಾನಿ 17ನೇ ಶ್ರೀಮಂತ ವ್ಯಕ್ತಿಯಾಗಿದ್ದು ಇವರ ಸಂಪತ್ತಿನ ಒಟ್ಟು ಮೌಲ್ಯ 84 ಬಿಲಿಯನ್ ಡಾಲರ್ .

ಯುಎಸ್ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ರಾಷ್ಟ್ರವಾಗಿದ್ದು, ಎರಡನೇ ಸ್ಥಾನದಲ್ಲಿ ಚೀನಾ ಇದೆ. ಭಾರತ 200 ಬಿಲಿಯನೇರ್‌ಗಳು ಫೋರ್ಬ್ ಪಟ್ಟಿಗೆ ಸೇರಿದ್ದರಿಂದ ಅತಿ ಶ್ರೀಮಂತರನ್ನು ಹೊಂದಿರುವ ಮೂರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಕಳೆದ ವರ್ಷ ಭಾರತದ 169 ಬಿಲಿಯನೇರ್‌ಗಳು ಫೋರ್ಬ್ ಪಟ್ಟಿಯಲ್ಲಿದ್ದರು.

Exit mobile version