ಬೆಂಗಳೂರು: ತೀವ್ರ ಸಂಕಷ್ಟದಲ್ಲಿರುವ ಶೈಕ್ಷಣಿಕ ತಂತ್ರಜ್ಞಾನ ಸ್ಟಾರ್ಟಪ್ ಬೈಜೂಸ್‌ನ (Byju ) ಸಂಸ್ಥಾಪಕ ಬೈಜೂ ರವೀಂದ್ರನ್ ಅವರು ಕಳೆದ ಏಪ್ರಿಲ್‌ನಲ್ಲಿ ತಮ್ಮ ಕಂಪನಿಯ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿಯ ಬಳಿಕ ಹೂಡಿಕೆದಾರರ ಜತೆಗೆ ನಡೆಸಿದ ಸಭೆಯೊಂದರಲ್ಲಿ (Byju Raveendran) ಕಂಪನಿಯ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟಿದ್ದರು ಎಂಬ ಸಂಗತಿ ವರದಿಯಾಗಿದೆ.
ಬೈಜೂ ರವೀಂದ್ರನ್ ಅವರು ದುಬೈನಲ್ಲಿ ನಡೆಸಿದ ಹೂಡಿಕೆದಾರರ ಜತೆಗಿನ ಸಭೆಯಲ್ಲಿ ಈ ಘಟನೆ ನಡೆದಿದೆ. ಕಂಪನಿಯನ್ನು ಸಮರ್ಥಿಸಿಕೊಳ್ಳುತ್ತಾ ರವೀಂದ್ರನ್ ಕಣ್ಣೀರು ಹಾಕಿದ್ದರು ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದ ಹೂಡಿಕೆದಾರರ ಮೂಲಕ 1 ಶತಕೋಟಿ ಡಾಲರ್ (8.2 ಲಕ್ಷ ಕೋಟಿ ರೂ.) ಹೂಡಿಕೆ ಸಂಗ್ರಹಿಸಲು ಬೈಜೂ ರವೀಂದ್ರನ್ ಯೋಜಿಸಿದ್ದರು. ಆದರೆ ಆ ಪ್ಲಾನ್ ಸದ್ಯ ಅನಿಶ್ಚಿತತೆಯಲ್ಲಿದೆ.
ಒಂದು ಕಾಲದಲ್ಲಿ ಬೈಜೂಸ್ ಸ್ಟಾರ್ಟಪ್ ವಲಯದಲ್ಲಿ ವಿಜೃಂಭಿಸುತ್ತಿತ್ತು. ಆದರೆ ಕಾಲ ಕ್ರಮೇಣ ಹಣಕಾಸು ಲೆಕ್ಕಪತ್ರಗಳನ್ನು ಸಲ್ಲಿಸುವಕಲ್ಲಿ ವಿಫಲವಾಗಿದೆ. ತನ್ನ ಟರ್ಮ್ ಲೋನ್‌ಗೆ ಬಡ್ಡಿ ದರ ನೀಡುವಲ್ಲಿ ವಿಫಲವಾಗಿದೆ. ಸಾಲ ಕೊಟ್ಟವರ ಜತೆಗೆ ಕಾನೂನು ಹೋರಾಟ ನಡೆಸುತ್ತಿದೆ. ಅಮೆರಿಕದಲ್ಲಿನ ಹಲವಾರು ಹೂಡಿಕೆದಾರರು ಬೈಜೂಸ್ ಲಕ್ಷಾಂತರ ಡಾಲರ್‌ಗಳನ್ನು ಗೌಪ್ಯವಾಗಿ ತೆಗೆದಿಟ್ಟಿದೆ. ಹೀಗಾಗಿಯೇ ತನಿಖೆ ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಬೈಜೂಸ್‌ನ ಆರಂಭಿಕ ಹೂಡಿಕೆದಾರ ಪ್ರೊಸುಸ್ ಎನ್‌ವಿ (Prosus NV) ಪ್ರಕಾರ ಬೈಜೂಸ್ ನಲ್ಲಿ ಆಡಳಿತ ನಿರ್ವಹಣೆ ಕಳಪೆಯಾಗಿದೆ. ಇದೇ ಕಾರಣಕ್ಕಾಗಿ ಆಡಳಿತಮಂಡಳಿಯಿಂದ ಹೊರನಡೆದಿತ್ತು. ಬೈಜೂಸ್ ರವೀಂದ್ರನ್ ಕಂಪನಿಯ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಖಾಸಗಿ ಆನ್‌ಲೈನ್ ಟ್ಯೂಷನ್ ವಲಯದಲ್ಲಿ ಬೈಜೂಸ್ 22 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆದಿತ್ತು. ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿತ್ತು. ಆದರೆ ಬಳಿಕ ಮೌಕ್ಯ 5.1 ಶತಕೋಟಿ ಡಾಲರ್‌ಗೆ ಕುಸಿದಿತ್ತು.
ಇದನ್ನೂ ಓದಿ: ED Raid: ಬೈಜೂಸ್ ಮಾಲೀಕ ರವೀಂದ್ರನ್ ಮನೆ ಮೇಲೆ ಇ.ಡಿ ದಾಳಿ; ಡಿಜಿಟಲ್ ಡೇಟಾ, ದಾಖಲೆ ಸೀಜ್
ಬೈಜೂಸ್ ಕಳೆದ ವರ್ಷ ಅಕ್ಟೋಬರ್ ಬಳಿಕ 3,500 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. 2021-22ರ ರಿಸಲ್ಟ್ ಘೋಷಣೆಯಲ್ಲಿ ವಿಳಂಬವಾಗಿತ್ತು. 4500 ಕೋಟಿ ರೂ. ನಷ್ಟವನ್ನೂ ದಾಖಲಿಸಿತ್ತು. ಇತ್ತೀಚೆಗೆ ನಡೆಸಿದ ಹೂಡಿಕೆದಾರರ ಜತೆಗಿನ ಸಭೆಯಲ್ಲಿ ಬೈಜೂಸ್ ರವೀಂದ್ರನ್ ಅವರು ಕಂಪನಿಯಲ್ಲಿ ಈ ಹಿಂದೆ ಆಗಿರುವ ಪ್ರಮಾದಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು.