ಬೆಂಗಳೂರು: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಆನ್‌ಲೈನ್ ಶಿಕ್ಷಣ ತಂತ್ರಜ್ಞಾನ ವಲಯದ ಬೈಜೂಸ್, ಬೆಂಗಳೂರಿನಲ್ಲಿರುವ ತನ್ನ ಅತಿ ದೊಡ್ಡ ಕಚೇರಿಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. (Byjus Bengaluru office ) ಕಳೆದ ಕೆಲವು ತಿಂಗಳುಗಳಿಂದ ಬೈಜೂಸ್ ತನ್ನ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಬೈಜೂಸ್ ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ತೆರವುಗೊಳಿಸಲಿದೆ. ಖರ್ಚು ಉಳಿತಾಯ ಮಾಡಲು ಇದು ಸಹಕಾರಿಯಾಗಲಿದೆ. ಬೈಜೂಸ್ ತನ್ನ ಉದ್ಯೋಗಿಗಳಿಗೆ ಇತರ ಕಚೇರಿಗಳಿಂದ ಕೆಲಸ ಮಾಡುವಂತೆ ಸೂಚಿಸಿದೆ. ಕಂಪನಿಯಲ್ಲಿ ಹಿರಿಯ ಸಿಬ್ಬಂದಿಗೆ ಇನ್ಸೆಂಟಿವ್ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ವರದಿಯೂ ಇದೆ.
ಮೂಲಗಳ ಪ್ರಕಾರ ಬೈಜೂಸ್ ಪ್ರೆಸ್ಟೀಜ್ ಟೆಕ್ ಪಾರ್ಕ್‌ನಲ್ಲಿ 9ರ ಪೈಕಿ 2 ಅಂತಸ್ತುಗಳನ್ನು ಕೈಬಿಡುವ ನಿರೀಕ್ಷೆ ಇದೆ. ಬ್ರೂಕ್‌ಫೀಲ್ಡ್‌ನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ ಬೈಜೂಸ್ ಕಚೇರಿಯ ಸಿಬ್ಬಂದಿ ಪ್ರೆಸ್ಟೀಜ್ ಟೆಕ್ ಪಾರ್ಕ್ ಮತ್ತು ಬನ್ನೇರುಘಟ್ಟ ರಸ್ತೆಯ ಕಚೇರಿಯಲ್ಲಿ ಕೆಲಸ ಮಾಡುವ ನಿರೀಕ್ಷೆ ಇದೆ. ಬೈಜೂಸ್ ದೇಶದ ನಾನಾ ಕಡೆಗಳಲ್ಲಿ 30 ಲಕ್ಷ ಚದರ ಅಡಿ ಬಾಡಿಗೆ ಕಚೇರಿ ಜಾಗವನ್ನು ಹೊಂದಿದೆ. ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಬೆಂಗಳೂರಿನಲ್ಲಿ ಬೈಜೂಸ್ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ವಿದೇಶಿ ವಿನಿಮಯ ಕಾನೂನು ಫೆಮಾ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ವಿಸ್ತಾರ Explainer: China Borehole: ಭೂಮಿಗೆ ಭಾರೀ ರಂಧ್ರ ಕೊರೆಯಲು ಶುರು ಮಾಡಿದ ಚೀನಾ, ಏನಿದೆ ಅಲ್ಲಿ, ಇದರ ಉದ್ದೇಶವೇನು?
ಇನ್ಫೋಸಿಸ್ ನೇಮಕಾತಿ ಇಳಿಕೆ: ಇನ್ಫೋಸಿಸ್ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 11% ಏರಿಕೆ ದಾಖಲಿಸಿದೆ. ಹೀಗಿದ್ದರೂ ಇನ್ಫೋಸಿಸ್‌ನ ನಿವ್ವಳ ನೇಮಕಾತಿಯಲ್ಲಿ ಇಳಿಕೆ ಕಂಡು ಬಂದಿದೆ. 2022-23ರ ಏಪ್ರಿಲ್-ಜೂನ್‌ನಲ್ಲಿ ಟಾಪ್ ನಾಲ್ಕು ಐಟಿ ಕಂಪನಿಗಳು 17,335 ಮಂದಿಯನ್ನು ನೇಮಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 52,842 ಉದ್ಯೋಗಿಗಳನ್ನು ನೇಮಿಸಲಾಗಿತ್ತು. ಇನ್ಫೋಸಿಸ್ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಒಟ್ಟು ಉದ್ಯೋಗಿಗಳ ಬಲದಲ್ಲಿ (336,294) 6940 ಕಡಿತಗೊಳಿಸಿತ್ತು. ಜನವರಿ-ಮಾರ್ಚ್ ಅವಧಿಯಲ್ಲಿ 3,611 ಕಡಿತವಾಗಿತ್ತು.