Site icon Vistara News

Cafe Coffee Day :‌ ಏಪ್ರಿಲ್-ಜೂನ್‌ನಲ್ಲಿ 440 ಕೋಟಿ ರೂ. ಸಾಲ ಮರು ಪಾವತಿಸಲು ಕಾಫಿ ಡೇ ವಿಫಲ

cofee day

ಬೆಂಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (Cafe Coffee Day Enterprises Ltd) ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 440 ಕೋಟಿ ರೂ. ಸಾಲವನ್ನು ಮರು ಪಾವತಿಸುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ. ಕಂಪನಿಯ ಅಲ್ಪವಾವಧಿ ಹಾಗೂ ದೀರ್ಘಾವಧಿ ಸಾಲ 2023ರ ಜೂನ್‌ 30ರ ವೇಳೆಗೆ 440 ಕೋಟಿ ರೂ.ಗಳಾಗಿದೆ. ಮತ್ತಷ್ಟು ಆಸ್ತಿ ವಿಕ್ರಯದ ಮೂಲಕ ಸಾಲ ಮರು ಪಾವತಿಸಲು ಕಂಪನಿ ಯತ್ನಿಸುತ್ತಿದೆ ಎಂದು ವರದಿಯಾಗಿದೆ.

2019ರ ಜುಲೈನಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್‌ ಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಸಾವಿನ ಬಳಿಕ ಕಂಪನಿಯು ತನ್ನ ಸಾಲದ ಬಿಕ್ಕಟ್ಟನ್ನು ಉಪಶಮನಗೊಳಿಸಲು ಯತ್ನಿಸಿದೆ. ಹಾಗೂ ಸಾಲದ ಪ್ರಮಾಣವನ್ನು ಗಣನೀಯವಾಗಿ ಇಳಿಸಿತ್ತು. 2020ರ ಮಾರ್ಚ್‌ನಲ್ಲಿ ಕಂಪನಿಯು 13 ಸಾಲದಾತರಿಗೆ 1644 ಕೋಟಿ ರೂ. ಸಾಲ ಮರು ಪಾವತಿಸಿರುವುದಾಗಿ ತಿಳಿಸಿತ್ತು. ಇದಕ್ಕೂ ಮೊದಲು ಕಾಫಿ ಡೇ ಎಂಟರ್‌ಪ್ರೈಸಸ್‌ ತನ್ನ ಟೆಕ್ನಾಲಜಿ ಪಾರ್ಕ್‌ ಅನ್ನು ಬ್ಲಾಕ್‌ಸ್ಟೋನ್‌ ಗ್ರೂಪ್‌ಗೆ ಮಾರಾಟ ಮಾಡಿತ್ತು.

ಇದನ್ನೂ ಓದಿ: Stock Market : ಸೆನ್ಸೆಕ್ಸ್‌ ಮೊದಲ ಬಾರಿಗೆ 65,000ಕ್ಕೆ ಜಿಗಿತ, ನಿಫ್ಟಿ ಹೈ ಜಂಪ್

ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಈ ವರ್ಷ ಕಾಫಿ ಡೇ ವಿರುದ್ಧ 26 ಕೋಟಿ ರೂ.ಗಳ ದಂಡವನ್ನು ವಿಧಿಸಿತ್ತು. ಕಾಫಿ ಡೇ ತನ್ನ ಅಧೀನ ಕಂಪನಿಗಳಿಂದ 3,535 ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ತಡೆಯುವಲ್ಲಿ ವಿಫಲವಾಗಿದ್ದಕ್ಕೆ ಸೆಬಿ ಈ ದಂಡ ವಿಧಿಸಿತ್ತು.

ವಿ.ಜಿ ಸಿದ್ಧಾರ್ಥ ಅವರು 1996ರಲ್ಲಿ ಕೆಫೆ ಕಾಫಿ ಡೇ ಕೆಫೆ ಹೌಸ್‌ಗಳ ಸರಣಿಯನ್ನು ಸ್ಥಾಪಿಸಿದ್ದರು. ಬೆಂಗಳೂರಿನಲ್ಲಿ ಪ್ರಧಾ ಕಚೇರಿಯನ್ನು ಇದು ಹೊಂದಿದೆ. 2011ರ ವೇಳೆಗೆ ದೇಶಾದ್ಯಂತ 1000 ಮಳಿಗೆಗಳನ್ನು ಇದು ಹೊಂದಿತ್ತು. ಕಾಫಿ ಡೇ ವಿಶ್ವ ದರ್ಜೆಯ ಕಾಫಿಯನ್ನು ರಫ್ತು ಮಾಡುತ್ತಿದೆ. ಭಾರತದಲ್ಲಿ ಗ್ರೀನ್‌ ಕಾಫಿಯ ಅತಿ ದೊಡ್ಡ ರಫ್ತುದಾರರಲ್ಲೊಂದು. ಮಧ್ಯ ಪ್ರಾಚ್ಯ, ಯುರೋಪ್‌ ಮತ್ತು ಜಪಾನ್‌ಗೂ ರಫ್ತು ಮಾಡುತ್ತದೆ.

Exit mobile version