ನವ ದೆಹಲಿ: ಟೊಮ್ಯಾಟೊ ದರ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ (Cheaper Tomatoes soon) ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯು ನ್ಯಾಶನಲ್ ಅಗ್ರಿಕಲ್ಚರಲ್ ಕೋಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (NAFED ) ಮತ್ತು ನ್ಯಾಶನಲ್ ಕೋಪರೇಟಿವ್ ಕನ್‌ಸ್ಯೂಮರ್ ಫೆಡರೇಷನ್ ಗೆ (NCCF) ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿರುವ ಮಂಡಿಗಳಿಂದ ಟೊಮ್ಯಾಟೊ ಖರೀದಿಸುವಂತೆ ಸೂಚಿಸಿದೆ. ಹಾಗೂ ರಿಟೇಲ್ ದರ ಅಧಿಕವಾಗಿರುವ ಕಡೆಗಳಲ್ಲಿ ವಿತರಿಸುವಂತೆ ತಿಳಿಸಿದೆ.
ಕಳೆದ ಒಂದು ತಿಂಗಳಿನಿಂದ ಟೊಮ್ಯಾಟೊ ದರ ಏರುಗತಿಯಲ್ಲಿ ಇರುವುದನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಗಮನಿಸಿದೆ. ಹೀಗಾಗಿ ಅಖಿಲ ಭಾರತ ಮಟ್ಟದ ಸರಾಸರಿ ದರಕ್ಕಿಂತ ಅಧಿಕವಾಗಿ ಮಾರಾಟವಾಗುತ್ತಿರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿಗೆ ಟೊಮ್ಯಾಟೊ ರವಾನೆ ಹೆಚ್ಚಲಿದೆ. ಇದರಿಂದ ದರ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಟೊಮ್ಯಾಟೊ ಬೆಳೆಯಲಾಗುತ್ತಿದೆ. ಆದರೆ ಪ್ರಮಾಣದಲ್ಲಿ ವ್ಯತ್ಯಾಸ ಇದೆ. ಬಹುತೇಕ ಟೊಮ್ಯಾಟೊವನ್ನು ದಕ್ಷಿಣ ಮತ್ತು ಪೂರ್ವ ಭಾರತ ಉತ್ಪಾದಿಸುತ್ತದೆ. ಈ ಭೂಭಾಗವು ಇಡೀ ಭಾರತದ ಟೊಮ್ಯಾಟೊ ಉತ್ಪಾದನೆಯಲ್ಲಿ 58% ಅನ್ನು ಉತ್ಪಾದಿಸುತ್ತದೆ. ಡಿಸೆಂಬರ್‌ನಿಂದ ಫೆಬ್ರವರಿ ತನಕ ಟೊಮ್ಯಾಟೊ ಕೊಯ್ಲಿನ ಗರಿಷ್ಠ ಚಟುವಟಿಕೆಗಳು ನಡೆಯುತ್ತದೆ. ಟೊಮ್ಯಾಟೊ ಸೀಸನ್ ಕೂಡ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಜುಲೈ-ಆಗಸ್ಟ್ ಮತ್ತು ಅಕ್ಟೋಬರ್ -ನವೆಂಬರ್ ಸಾಮಾನ್ಯವಾಗಿ ಫಸಲು ಕಡಿಮೆಯಾಗುವ ಅವಧಿಯಾಗಿರುತ್ತದೆ. ಜುಲೈನಲ್ಲಿ ಮಳೆಯ ಸೀಸನ್ ಹಾಗೂ ಸಾಗಣೆಯ ಸಮಸ್ಯೆ ಪರಿಣಾಮ ಟೊಮ್ಯಾಟೊ ದರ ಏರುತ್ತದೆ.
ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!
ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಹೆಚ್ಚಿನ ಟೊಮ್ಯಾಟೊ ರವಾನೆಯಾಗುತ್ತದೆ. ಈ ತಿಂಗಳಿನ ಅಂತ್ಯಕ್ಕೆ ಇದು ಮುಗಿಯಲಿದೆ. ಬಳಿಕ ಆಂಧ್ರಪ್ರದೇಶದಿಂದ ಆವಕವಾಗಲಿದೆ. ಬಳಿಕ ಕೋಲಾರದಿಂದಲೂ ಪೂರೈಕೆಯಾಗಲಿದೆ. ಶೀಘ್ರದಲ್ಲಿಯೇ ನಾಸಿಕ್‌ನ ಮಾರುಕಟ್ಟೆಗೆ ಟೊಮ್ಯಾಟೊ ಹೊಸ ಫಸಲು ಬರುವ ನಿರೀಕ್ಷೆ ಇದೆ.
ಕಳೆದ ಹಲವಾರು ದಿನಗಳಿಂದ ಟೊಮ್ಯಾಟೊ ದರ ಕೆ.ಜಿಗೆ 100 ರೂ.ಗಳ ಗಡಿಯನ್ನು ದಾಟಿದೆ. ದಿಲ್ಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಶುಕ್ರವಾರದಿಣಂದ ಡಿಸ್ಕೌಂಟ್ ದರದಲ್ಲಿ ಟೊಮ್ಯಾಟೊ ಮಾರಾಟವಾಗಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದ ಕೋಲಾರದಿಂದ ಟೊಮೆಟೊ ಫಸಲು ಆಗಮಿಸಿದರೆ ದರ ಇಳಿಕೆಯಾಗಲಿದೆ. ದರ ಇಳಿಕೆಯ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.