ಮುಂಬಯಿ: ಕೆಫೆ ಕಾಫಿ ಡೇ ಸರಣಿಗಳನ್ನು ನಡೆಸುತ್ತಿರುವ ಕಾಫಿ ಡೇ ಗ್ಲೋಬಲ್ ಕಂಪನಿಯು ದಿವಾಳಿ ಪ್ರಕ್ರಿಯೆಗೆ ಬ್ಯಾಂಕ್ರಪ್ಟಸಿ ಕೋರ್ಟ್‌ನಲ್ಲಿ ಇತ್ತೀಚೆಗೆ ಅರ್ಜಿ ಸಲ್ಲಿಸಿದೆ (Cafe Coffee Day) ಎಂದು ವರದಿಯಾಗಿದೆ. ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ಕಳೆದ ಗುರುವಾರ ಆದೇಶಿಸಿದೆ. ಇಂಡಸ್‌ಇಂಡ್ ಬ್ಯಾಂಕ್‌ನ ಅರ್ಜಿಯ ಆಧಾರದ ಮೇರೆಗೆ ಈ ಆದೇಶ ನೀಡಿದೆ.
ಕಾಫಿ ಡೇ ಗ್ಲೋಬಲ್, ಕಾಫಿ ಡೇ ಎಂಟರ್‌ಪ್ರೈಸಸ್‌ನ ಅಧೀನ ಕಂಪನಿಯಾಗಿದೆ. ಉದ್ಯಮಿ ವಿ.ಜಿ ಸಿದ್ಧಾರ್ಥ ಅವರು ಕಾಫಿ ಡೇ ಎಂಟರ್‌ಪ್ರೈಸಸ್ ಅನ್ನು ಸ್ಥಾಪಿಸಿದ್ದರು. 2019ರಲ್ಲಿ ನಡೆದ ಅವರ ಆತ್ಮಹತ್ಯೆ ಪ್ರಕರಣ ಕಾರ್ಪೊರೇಟ್ ವಲಯವನ್ನು ತಲ್ಲಣಗೊಳಿಸಿತ್ತು.
ಕಾಫಿ ಡೇ ಗ್ಲೋಬಲ್ 2022ರ ಮಾರ್ಚ್ 31ಕ್ಕೆ ಇಂಡಸ್‌ಇಂಡ್ ಬ್ಯಾಂಕಿನಿಂದ 67.3 ಕೋಟಿ ರೂ. ಸಾಲವನ್ನು ಹೊಂದಿತ್ತು. ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಕಂಪನಿಯ ನಡುವೆ ಸೆಟ್ಲ್‌ಮೆಂಟ್ ಕುರಿತ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಎನ್‌ಸಿಎಲ್‌ಟಿ ದಿವಾಳಿ ಅರ್ಜಿಯನ್ನು ಪುರಸ್ಕರಿಸಿದೆ. ಕೆಫೆ ಕಾಫಿ ಡೇ ಇದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.
ವಿಜಿ ಸಿದ್ಧಾರ್ಥ ಅವರ ನಿಧನದ ಬಳಿಕ ಕೆಫೆ ಕಾಫಿ ಡೇಯಲ್ಲಿ ಗಣನೀಯ ಬದಲಾವಣೆಗಳು ನಡೆದಿತ್ತು. ಹಿಂದೊಮ್ಮೆ ಭಾರತದ ಅತಿ ದೊಡ್ಡ ಕೆಫೆ ಸರಣಿಯಾಗಿದ್ದ ಕೆಫೆ ಕಾಫಿ ಡೇ 2018-19ರಲ್ಲಿ 1,752 ಮಳಿಗೆಗಳನ್ನು ಹೊಂದಿತ್ತು. 2022-23ರ ವೇಳೆಗೆ ಇದು 469ಕ್ಕೆ ಇಳಿದಿದೆ. 2019ರಲ್ಲಿ 7,000 ಕೋಟಿ ರೂ.ನಷ್ಟಿದ್ದ ಸಾಲದ ಹೊರೆಯನ್ನು ಕಂಪನಿ ಗಣನೀಯವಾಗಿ ಇಳಿಸಿಕೊಂಡಿತ್ತು. 2023ರ ವೇಳೆಗೆ ಸಾಲದ ಬಾಕಿ ಮೊತ್ತ 465 ಕೋಟಿ ರೂ.ಗೆ ಇಳಿದಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಭಾರತದಲ್ಲಿ ಕಾಫಿ ರಿಟೇಲ್ ಮಾರುಕಟ್ಟೆ ಬೆಳೆಯುತ್ತಿದೆ. ವಾರ್ಷಿಕ 5,000 ಕೋಟಿ ರೂ.ಗೂ ಹೆಚ್ಚು ವಹಿವಾಟು ಈ ವಲಯದಲ್ಲಿ ನಡೆಯುತ್ತದೆ. ಸ್ಟಾರ್ ಬಕ್ಸ್, ಟಿಮ್ ಹೋರ್ಟಾನ್ಸ್ ಮತ್ತಿತರ ಕಂಪನಿಗಳ ಕೆಫೆಗಳು ಇಲ್ಲಿವೆ.