ನವ ದೆಹಲಿ: ಹಿಲ್ಟನ್, ರ‍್ಯಾಡಿಸನ್, ಮೈನರ್ ಇತ್ಯಾದಿ ಜಾಗತಿಕ ಮಟ್ಟದ ಪ್ರಮುಖ (Hotel Chains) ಹೋಟೆಲ್ ಸರಣಿಗಳು ಭಾರತದಲ್ಲಿ ಹೊಸ ಬ್ರಾಂಡ್‌ಗಳ ಹೋಟೆಲ್‌ಗಳನ್ನು ನಿರ್ಮಿಸಲಿದೆ. ವಿಂಡಮ್ ಹಲವು ಬ್ರಾಂಡ್‌ಗಳನ್ನು ತರಲಿದೆ. ಹಯಾತ್ ತನ್ನ ಬೋಟಿಕ್ ಹೋಟೆಲ್ ಬ್ರಾಂಡ್ ಜೆಡಿವಿಯನ್ನು ಜುಲೈನಲ್ಲಿ ಪರಿಚಯಿಸಲಿದೆ.
ಅಮೆರಿಕದ ಹಿಲ್ಟನ್ ಜೈಪುರದಲ್ಲಿ ತನ್ನ ವಾಲ್ಡೋರ್ಫ್ ಅಸ್ಟೋರಿಯಾ ಹೋಟೆಲ್ ಅನ್ನು ಅಸ್ತಿತ್ವಕ್ಕೆ ತರುತ್ತಿದೆ. 22 ಎಕರೆಗಳಲ್ಲಿ 51 ವಿಲ್ಲಾಗಳು, 174 ಗೆಸ್ಟ್ ರೂಮ್‌ಗಳು ಇರಲಿದ್ದು, 2027ರಲ್ಲಿ ತೆರೆಯುವ ನಿರೀಕ್ಷೆ ಇದೆ. ರ‍್ಯಾಡಿಸನ್ ಹೋಟೆಲ್ ಗ್ರೀಪ್ ಹೈದರಾಬಾದ್‌ನಲ್ಲಿ ತನ್ನ ಮೊದಲ ರ‍್ಯಾಡಿಸನ್ ಕಲೆಕ್ಷನ್ ಹೋಟೆಲ್ ತೆರೆಯಲಿದೆ. ಈ ಬ್ರಾಂಡ್ 2018ರಲ್ಲಿ ಜಾಗತಿಕ ಮಟ್ಟದಲ್ಲಿ ಶುರುವಾಗಿತ್ತು. ಈಗ 50ಕ್ಕೂ ಹೆಚ್ಚು ಹೋಟೆಲ್‌ಗಳು ಈ ಸರಣಿಯಲ್ಲಿವೆ.
ಮೈನರ್ ಹೋಟೆಲ್ಸ್ ಜೈಪುರದಲ್ಲಿ ತನ್ನ ಅಂತಾರಾ ಬ್ರಾಂಡ್ ಹೋಟೆಲ್ ಅನ್ನು ಆರಂಭಿಸಲಿದೆ. ಸಾಫ್ಟ್‌ಬ್ಯಾಂಕ್ ಹೂಡಿಕೆಯ ಬೆಂಬಲ ಹೊಂದಿರುವ ಒಯೊ ಕಂಪನಿ 2023ರಲ್ಲಿ ಅಮೆರಿಕದಲ್ಲಿ 100ಕ್ಕೂ ಹೆಚ್ಚು ಹೋಟೆಲ್‌ಗಳನ್ನು ತನ್ನ ನೆಟ್ ವರ್ಕ್‌ಗೆ ಸೇರಿಸಲು ಉದ್ದೇಶಿಸಿದೆ.
ಕೋವಿಡ್ ಬಿಕ್ಕಟ್ಟಿನ ಬಳಿಕ ಚೇತರಿಸಿದ್ದ ಹೋಟೆಲ್ ಉದ್ಯಮ ಪ್ರಸಕ್ತ ಸಾಲಿನಲ್ಲಿ ಗಣನೀಯ ವಹಿವಾಟು ದಾಖಲಿಸುವ ನಿರೀಕ್ಷೆ ಇದೆ. ಬೇಡಿಕೆ ಸಕಾರಾತ್ಮಕವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಗಳ ಹೆಚ್ಚಳ, ಜಿ20 ಶೃಂಗ ಸಭೆಗಳು, ವೈವಾಹಿಕ ಸಮಾರಂಭಗಳ ಪರಿಣಾಮ ಹೋಟೆಲ್‌ಗಳಿಗೆ ಬೇಡಿಕೆ ಕುದುರುತ್ತಿದೆ. ಮುಂಬಯಿ, ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಉದ್ದಿಮೆ ಹೆಚ್ಚು ಆದಾಯ ಗಳಿಸುತ್ತಿದೆ ಎಂದು ವರದಿಯಾಗಿದೆ.