ಮುಂಬಯಿ: ಜಾಗತಿಕ ಮಾರುಕಟ್ಟೆ ಅಸ್ಥಿರತೆ ಮುಂದುವರಿದ ಪರಿಣಾಮ ಭಾರತೀಯ ಷೇರುಪೇಟೆಯಲ್ಲೂ ಯಾವುದೇ ದಿಕ್ಸೂಚಿ ಸ್ಪಷ್ಟವಾಗಿ ಕಂಡುಬರುತ್ತಿಲ್ಲ. (Sensex) ಬ್ಯಾಂಕ್ ನಿಫ್ಟಿಯ ಬೆಂಬಲದ ಪರಿಣಾಮ ನಿಫ್ಟಿ ಇಂದು ಅಲ್ಪ ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.
ನಿಫ್ಟಿ 58 ಅಂಕಗಳ ಏರಿಕೆಯೊಂದಿಗೆ 17622 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 179 ಅಂಶಗಳ ಹೆಚ್ಚಳದೊಂದಿಗೆ 59381 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಟಿ 271 ಅಂಕಗಳ ಏರಿಕೆಯೊಂದಿಗೆ 40370 ಕ್ಕೆ ವಹಿವಾಟು ಪ್ರಾರಂಭವಾಯಿತು. ನಿಫ್ಟಿ ಮಧ್ಯಾಹ್ನ 1 ಗಂಟೆವರೆಗೆ ಹೆಚ್ಚಿನ ಏರಿಳಿತ ಕಾಣದೆ ವಹಿವಾಟು ನಡೆಸಿತು ಆದರೆ ಮಧ್ಯಾಹ್ನದ ನಂತರ ಇಳಿಕೆ ಕಂಡಿತು. ಒಂದು ಹಂತದಲ್ಲಿ ನಿನ್ನೆಯ ಮುಕ್ತಾಯಕ್ಕಿಂತ ಕಡಿಮೆ ಅಂಕಗಳಿಗೆ ವಹಿವಾಟು ನಡೆಸಿ ದಿನದ ಅಂತ್ಯದಲ್ಲಿ ಕೇವಲ 12 ಅಂಕಗಳ ಅಲ್ಪ ಏರಿಕೆಯೊಂದಿಗೆ 17576 ಅಂಶಗಳಿಗೆ ಮುಕ್ತಾಯವಾಯಿತು. ಸೆನ್ಸೆಕ್ಸ್ 104 ಅಂಶಗಳ ಏರಿಕೆಯೊಂದಿಗೆ 59307 ರಲ್ಲಿ ಅಂತ್ಯವಾಯಿತು.
ಬ್ಯಾಂಕಿಂಗ್ ಷೇರುಗಳ ಚೇತರಿಕೆ
ಷೇರುಪೇಟೆಗೆ ಇಂದು ಹೆಚ್ಚು ಬೆಂಬಲವಾಗಿ ನಿಂತಿದ್ದು ಬ್ಯಾಂಕಿಂಗ್ ವಲಯ. ನಿನ್ನೆ ಉತ್ತಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದ ಆಕ್ಸಿಸ್ ಬ್ಯಾಂಕ್ ಇಂದು ಶೇ. 9ರಷ್ಟು ಏರಿಕೆ ಕಂಡು ಬ್ಯಾಂಕ್ ನಿಫ್ಟಿ ಉತ್ತಮ ಸ್ಥಿತಿಯಲ್ಲಿ ಮುಕ್ತಾಯವಾಗಲು ಕಾರಣವಾಯಿತು. ದಿನದ ಅಂತ್ಯಕ್ಕೆ ಬ್ಯಾಂಕ್ ನಿಫ್ಟಿ 684 ಅಂಕಗಳ ಏರಿಕೆಯೊಂದಿಗೆ 40784 ರಲ್ಲಿ ವಹಿವಾಟು ಪೂರ್ಣಗೊಂಡಿತು.
ಇಂದು ಬ್ಯಾಂಕಿಂಗ್ ಕ್ಷೇತ್ರದ ಬೆಂಬಲ ಇಲ್ಲದಿದ್ದರೆ ಷೇರುಪೇಟೆ ಬಹಳ ನಕಾರಾತ್ಮಕವಾಗಿ ವಹಿವಾಟು ಪೂರ್ಣಗೊಳಿಸುತ್ತಿತ್ತು. ಮುಂದಿನ ವಾರ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಮತ್ತು ಬುಧವಾರ ಮಾರುಕಟ್ಟೆಗೆ ರಜೆ ಇರುವುದರಿಂದ ಹೆಚ್ಚು ಜನರು ಲಾಭಾಂಶ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಸಹ ಮಾರುಕಟ್ಟೆ ಇಳಿಕೆಗೆ ಪ್ರಮುಖ ಕಾರಣವಾಯಿತು. ಸೋಮವಾರ ಸಂಜೆ ಮೂಹೂರ್ತ ಟ್ರೆಂಡಿಂಗ್ 1 ಗಂಟೆ ಮಾತ್ರ ನಡೆಯಲಿದೆ.
ಸಣ್ಣ ಮತ್ತು ಮಧ್ಯಮ ಸೂಚ್ಯಂಕಗಳು ಸಹ ಅಲ್ಪ ಇಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದವು. ಬ್ಯಾಂಕಿಂಗ್ ಮತ್ತು ಸೇವಾ ಕ್ಷೇತ್ರದ ಸೂಚ್ಯಂಕಗಳು ಏರಿಕೆ ಕಂಡರೆ, ಮಾಧ್ಯಮ, ಲೋಹ, ಮತ್ತು ಔಷಧ ವಲಯದ ಸೂಚ್ಯಂಕಗಳು ಇಳಿಕೆಯಾದವು. ಬೆಳ್ಳಿ ಇಂದು 900 ರೂ ಹಾಗೂ ಚಿನ್ನ 160 ರೂ ಇಳಿಕೆಯಾಗಿದೆ.
ಇಂದೂ ಸಹ ಜಾಗತಿಕ ಹೂಡಿಕೆದಾರರು 438 ಕೋಟಿ ರೂ ಅಲ್ಪ ಪ್ರಮಾಣದಲ್ಲಿ ಷೇರುಗಳನ್ನು ಕೊಂಡುಕೊಂಡಿದ್ದರೆ, ದೇಶಿ ಹೂಡಿಕೆದಾರರು 119 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ತ್ರೈಮಾಸಿಕ ಫಲಿತಾಂಶ : ಇಂದು ಹೆಚ್ಯುಎಲ್ ಕಂಪನಿ ಉತ್ತಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ.
ನಾಳೆ ಐಸಿಐಸಿಐ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಎಂಸಿಎಕ್ಸ್ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ