Site icon Vistara News

Credit growth : ಬಡ್ಡಿ ದರ ಏರಿದ್ದರೂ, ಬ್ಯಾಂಕ್‌ ಸಾಲ ವಿತರಣೆ 11 ವರ್ಷಗಳಲ್ಲೇ ಅಧಿಕ, ಕಾರಣವೇನು?

cash

ಮುಂಬಯಿ: ಬಡ್ಡಿ ದರ ಏರಿಕೆಯ ಹೊರತಾಗಿಯೂ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆಯ (Credit growth) ಪ್ರಮಾಣದಲ್ಲಿ 2022-23ರಲ್ಲಿ 14.6%ರಷ್ಟು ಏರಿಕೆಯಾಗಿದೆ. ಠೇವಣಿ ಸಂಗ್ರಹ ಏರಿಕೆಯಾಗಿರುವುದು (lending rate) ಕೇವಲ 9.6% ಎಂದು ಆರ್‌ಬಿಐನ ಇತ್ತೀಚಿನ ವರದಿ ತಿಳಿಸಿದೆ. ಈ ಹಿಂದೆ 2011-12ರಲ್ಲಿ 17% ಸಾಲ ವಿತರಣೆ ಏರಿತ್ತು. ಇದಾದ ಬಳಿಕ 2022-23ರಲ್ಲಿ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ.

ಆರ್‌ಬಿಐ ಹೇಳಿದ್ದೇನು?

ಕೋವಿಡ್‌ ಬಿಕ್ಕಟ್ಟಿನ ಬಳಿಕ ಆರ್ಥಿಕ ಚಟುವಟಿಕೆಗಳು 2022-23ರ ದ್ವಿತೀಯಾರ್ಧದ ಬಳಿಕ ಗಣನೀಯವಾಗಿ ಚೇತರಿಸಿದೆ. ಬ್ಯಾಂಕೇತರ ಫಂಡಿಂಗ್‌ ಮತ್ತು ಬ್ಯಾಂಕ್‌ ಸಾಲದ ನಡುವಣ ವ್ಯತ್ಯಾಸವೂ ಪ್ರಭಾವ ಬೀರಿದೆ. ಬ್ಯಾಂಕಿಂಗ್‌ ಕ್ಷೇತ್ರದ ಆರೋಗ್ಯವೂ, ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವೂ ಸುಧಾರಿಸಿದೆ. 2019-20ರಲ್ಲಿ ಅಂದರೆ ಕೋವಿಡ್-‌19 ಬರುವುದಕ್ಕೆ ಮುನ್ನ ಹಾಗೂ ಕೋವಿಡ್‌ ಪೀಡಿತ ವರ್ಷ 2020-21ರಲ್ಲಿ ಸಾಲ ವಿತರಣೆ ಕುಸಿದಿತ್ತು. ಇದಾದ ಬಳಿಕ 2022-23ರಲ್ಲಿ ಸಾಲ ವಿತರಣೆ ಚುರುಕಾಗಿದೆ. ಠೇವಣಿ ಬಡ್ಡಿ ದರ ಏರಿಕೆಯಿಂದಾಗಿ ಡಿಪಾಸಿಟ್‌ ಸಂಗ್ರಹವೂ ವೃದ್ಧಿಸಿದೆ ಎಂದು ಆರ್‌ಬೀಐ ತಿಳಿಸಿದೆ.

ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆಯ ಶೇಕಡಾವಾರು ಮಟ್ಟ 18.4%ರಷ್ಟು ಹೆಚ್ಚಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 13.7%ರಷ್ಟಿತ್ತು. ಹೀಗಿದ್ದರೂ ಒಟ್ಟಾರೆಯಾಗಿ scheduled commercial banks (SCB) ಹೆಚ್ಚಿನ ಸಾಲ ವಿತರಣೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದರರ್ಥ ಬಡ್ಡಿ ದರಕ್ಕೂ ಸಾಲದ ವಿತರಣೆಗೂ ಸಂಬಂಧ ಇಲ್ಲ, ಬದಲಿಗೆ ಆರ್ಥಿ ಚಟುವಟಿಕೆ ಚುರುಕಾಗಿರುವುದಕ್ಕೆ ಸಂಬಂಧ ಇದೆ.

ಯುಪಿಐ ಮೂಲಕ ಸಾಲ ವಿತರಣೆಗೆ ಸಿದ್ಧತೆ:

ಇದೀಗ ಸಾಲವನ್ನೂ ಯುಪಿಐ ಮೂಲಕ ಪಡೆಯಲು ಆರ್‌ಬಿಐ ಹಾದಿ (RBI Policy) ಸುಗಮಗೊಳಿಸಿದೆ. ಇದು ಭಾರತೀಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಯುಪಿಐ ಮೂಲಕ ದಿನಕ್ಕೆ ಸರಾಸರಿ 36 ಕೋಟಿ ವರ್ಗಾವಣೆಗಳು (transactions) ನಡೆಯುತ್ತಿದ್ದು, ಶೀಘ್ರದಲ್ಲಿಯೇ ಗ್ರಾಹಕರಿಗೆ ತ್ವರಿತ ಸಾಲ ಸಿಗಲಿದೆ. ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ ಯುಪಿಐ ಆಧರಿತ ಆ್ಯಪ್‌ಗಳ ಮೂಲಕ ಬ್ಯಾಂಕಿನಿಂದ ಸಾಲ ಪಡೆಯಬಹುದು.

ಚೀನಾದ ಲೋನ್‌ ಆ್ಯಪ್‌ಗಳು ದುಬಾರಿ ಬಡ್ಡಿಯ ಸಾಲದ ಸುಳಿಗೆ ಜನರನ್ನು ಈ ಹಿಂದೆ ಸಿಲುಕಿಸಿತ್ತು. ಇಂಥ ವಂಚನೆಗಳನ್ನು ತಪ್ಪಿಸಲು ಯುಪಿಐ ಮೂಲಕ ಸಾಲ ವಿತರಣೆ ಸಹಕಾರಿಯಾಗಲಿದೆ ಎನ್ನುತ್ತಾರೆ ತಜ್ಞರು.

Exit mobile version