ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಇ-ರೂಪಾಯಿ (Central Bank Digital Currency -CBDC) ಅನ್ನು ಮತ್ತಷ್ಟು ಬ್ಯಾಂಕ್‌ಗಳಿಗೆ ವಿಸ್ತರಿಸಲು ನಿರ್ಧರಿಸಿದೆ. 2023-24ರಲ್ಲಿ ಆರ್‌ಬಿಐ CBDC-Retail ಮತ್ತು CBDC-Wholesale ವಿಭಾಗದಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಯೋಜನೆಯನ್ನು ವಿಸ್ತರಿಸಲಿದೆ. CBDC-Retail ಅನ್ನು ಹೆಚ್ಚು ಸ್ಥಳಗಳಲ್ಲಿ ಹಾಗೂ ಬ್ಯಾಂಕಿಂಗ್ ಜಾಲದಲ್ಲಿ ವಿಸ್ತರಿಸಲು ಆರ್‌ಬಿಐ ಉದ್ದೇಶಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳಲ್ಲಿ ಡಿಜಿಟಲ್ ರೂಪಾಯಿ ಮೊದಲ ಹಂತದಲ್ಲಿ ವಿಸ್ತರಣೆಯಾಗುತ್ತಿದೆ.
ಬೆಂಗಳೂರು ಸೇರಿ ನಾನಾ ನಗರಗಳಲ್ಲಿ ಇ-ರೂಪಾಯಿ:
ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿಯನ್ನು (e-Rupee) ಮುಂಬಯಿ, ನವ ದೆಹಲಿ, ಬೆಂಗಳೂರು ಮತ್ತು ಭುವನೇಶ್ವರದಲ್ಲಿ ಆರಂಭದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಲಾಗಿತ್ತು. ಬಳಿಕ ಅಹಮದಾಬಾದ್, ಗ್ಯಾಂಗ್‌ಟಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಟನಾ, ಶಿಮ್ಲಾವನ್ನು ಸೇರಿಸಲಾಗುತ್ತು. ಆರಂಭದಲ್ಲಿ ಎಸ್‌ಬಿಐ, ಐಸಿಐಸಿಐ, ಯಸ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೆ ಸೀಮಿತವಾಗಿತ್ತು.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಎನ್ನುವುದು ಬ್ಯಾಂಕ್ ನೋಟ್‌ಗಿಂತ ಬೇರೆಯಲ್ಲ. ಆದರೆ ಡಿಜಿಟಲ್ ಸ್ವರೂಪದಲ್ಲಿ ಇರುತ್ತದೆ. ಹಾಗೂ ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡುತ್ತದೆ. ಡಿಜಿಟಲ್ ರೂಪದಲ್ಲಿ ಇರುವುದರಿಂದ ಅದರದ್ದೇ ಅನುಕೂಲಗಳನ್ನು ಒಳಗೊಂಡಿದೆ. ಕೆಲವು ಸವಾಲುಗಳನ್ನೂ ಒಳಗೊಂಡಿದೆ. ಆದರೆ ಇದರ ಬಳಕೆ ಸುಲಭ, ತ್ವರಿತ ಗತಿಯಲ್ಲಿ ಸಾಧ್ಯ. ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ. ಇದರ ವರ್ಗಾವಣೆಗೆ ಬ್ಯಾಂಕ್ ಖಾತೆಯ ಅಗತ್ಯ ಇಲ್ಲ. ಜಗತ್ತಿನ ನಾನಾ ದೇಶಗಳಲ್ಲಿ ಡಿಜಿಟಲ್ ಕರೆನ್ಸಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬಹುತೇಕ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲು ಸಂಶೋಧನೆ, ಸಿದ್ಧತೆ ನಡೆಸುತ್ತಿವೆ. ಏಕೆಂದರೆ ಪ್ರತಿಯೊಂದು ದೇಶಕ್ಕೂ ಇದರ ಅಗತ್ಯತೆ ಕಂಡು ಬಂದಿದೆ. ಡಿಜಿಟಲ್ ಕರೆನ್ಸಿ ಬಂದರೆ ಈಗ ಇರುವ ಬ್ಯಾಂಕ್ ನೋಟುಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಅವುಗಳ ಜತೆಗೆ ಹೆಚ್ಚುವರಿ ಆಯ್ಕೆಯಾಗಿ ಸಿಬಿಡಿಸಿ ಇರುತ್ತದೆ. ದೇಶ-ಗಡಿಗಳ ಹಂಗಿಲ್ಲದೆ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲು ಆರ್‌ಬಿಐಗೆ ಇದರಿಂದ ಹಾದಿ ಸುಗಮವಾಗಲಿದೆ.
ಡಿಜಿಟಲ್ ಕರೆನ್ಸಿಯ ಉದ್ದೇಶ ಏನು?
ಡಿಜಿಟಲ್ ಕರೆನ್ಸಿಗೆ ವಿಶಿಷ್ಟವಾದ ಅನುಕೂಲಗಳು ಇವೆ. ವಿಶ್ವಾಸ, ಸುರಕ್ಷತೆ, ನಗದೀಕರಣ, ಸೆಟ್ಲ್‌ಮೆಂಟ್, ಅಂತಿಮವಾಗಿ ಸಮಗ್ರತೆಯ ವಿಚಾರದಲ್ಲಿ ಡಿಜಿಟಲ್ ಕರೆನ್ಸಿಯಿಂದ ಪ್ರಯೋಜನ ಇದೆ. ಭೌತಿಕ ನಗದು ರೂಪಾಯಿಗಳ ನಿರ್ವಹಣೆಗೆ ತಗಲು ವೆಚ್ಚವನ್ನು ಗಮನಿಸಿದರೆ, ಡಿಜಿಟಲ್ ಕರೆನ್ಸಿಗೆ ಕಡಿಮೆ. ಪೇಮೆಂಟ್ ಸಿಸ್ಟಮ್‌ನಲ್ಲಿ ಹೆಚ್ಚು ದಕ್ಷತೆ ಸಿಗಲಿದೆ. ಸಿಬಿಡಿಸಿಯ ಆಫ್‌ಲೈನ್ ಬಳಕೆಯ ಫೀಚರ್ ಕೂಡ ಹಿಂದುಳಿದ ಪ್ರದೇಶಗಳಲ್ಲಿ, ವಿದ್ಯುತ್ ಅಥವಾ ಮೊಬೈಲ್ ನೆಟ್ ವರ್ಕ್ ಇಲ್ಲದಿರುವ ಕಡೆಗಳಲ್ಲಿ ಅನುಕೂಲಕರವಾಗಲಿದೆ.
ಡಿಜಿಟಲ್ ಕರೆನ್ಸಿಯ ವಿಧಗಳು: ಉದ್ದೇಶಿತ ಡಿಜಿಟಲ್ ಕರೆನ್ಸಿ ಮುಖ್ಯವಾಗಿ ಎರಡು ವಿಧಗಳಲ್ಲಿ ಇರಲಿದೆ. ಸಾಮಾನ್ಯ ಅಥವಾ ರಿಟೇಲ್ ಬಳಕೆಗೆ (CBDC-R) ಚಲಾವಣೆಯಲ್ಲಿ ಇರುವಂಥದ್ದು. ಇದನ್ನು ದೈನಂದಿನ ಸಾಮಾನ್ಯ ಹಣಕಾಸು ಚಲಾವಣೆಗೆ ಬಳಸಬಹುದು. ಇನ್ನೊಂದು ಹಣಕಾಸೇತರ ಗ್ರಾಹಕರು ಬಳಸುವ, ಬಿಸಿನೆಸ್ ಉದ್ದೇಶಗಳಿಗೆ ಬಳಸುವ ಹೋಲ್‌ಸೇಲ್ ಸಿಬಿಡಿಸಿ ( CBDC-W). ಇದನ್ನು ಬ್ಯಾಂಕ್‌ಗಳ ನಡುವೆ ಬಳಸಬಹುದು. ಸಗಟು ಹಣಕಾಸು ವರ್ಗಾವಣೆಗೆ ಉಪಯೋಗಿಸಬಹುದು.
500, 100, 50 ರೂ. ಮುಖಬೆಲೆಯಲ್ಲಿ ಡಿಜಿಟಲ್ ಕರೆನ್ಸಿ: ಸಿಬಿಡಿಸಿಗಳು ಬ್ಯಾಂಕ್ ನೋಟುಗಳ ಮುಖಬೆಲೆಯ ಮಾದರಿಯಲ್ಲಿ 500, 100, 50 ರೂ. ಇತ್ಯಾದಿ ನಿಗದಿತ ಮುಖಬೆಲೆಯಲ್ಲಿ ಸಿಗಲಿದೆ. ಟೋಕನ್ ಆಧಾರಿತವಾಗಿರಲಿದೆ.
ಇದನ್ನೂ ಓದಿ: PF e- passbook : ಕೊನೆಗೂ ಇ-ಪಿಎಫ್ ಪಾಸ್‌ಬುಕ್ ಸೇವೆ ಲಭ್ಯ, ನಿಮ್ಮ ಪಿಎಫ್ ಬ್ಯಾಲೆನ್ಸ್ ಸುಲಭವಾಗಿ ತಿಳಿಯಿರಿ