ನವ ದೆಹಲಿ: ಆನ್‌ಲೈನ್ ಡೆಲಿವರಿ ಕಂಪನಿ ಡನ್ಜೊಗೆ (Dunzo) 614 ಕೋಟಿ ರೂ. ಹೂಡಿಕೆ ಲಭಿಸಿದೆ. ಜತೆಗೆ ತನ್ನ 30% ಉದ್ಯೋಗಿಗಳನ್ನು, ಅಂದರೆ 300ಕ್ಕೂ ಹೆಚ್ಚು ಮಂದಿಯನ್ನು ವಜಾಗೊಳಿಸಲು ಉದ್ದೇಶಿಸಿದೆ. ರಿಲಯನ್ಸ್ ರಿಟೇಲ್ ಮತ್ತು ಆಲ್ಫಬೆಟ್ ಕಂಪನಿ 409 ಕೋಟಿ ರೂ. ಹೂಡಿಕೆ ಮಾಡಲಿದೆ. ಉಳಿದ ಮೊತ್ತವನ್ನು ಇತರ ಹೂಡಿಕೆದಾರರು ಹೂಡಲಿದ್ದಾರೆ. ಈ ಬೆಳವಣಿಗೆ ಬಗ್ಗೆ ಡನ್ಜೊ, ಗೂಗಲ್, ರಿಲಯನ್ಸ್ ರಿಟೇಲ್ ಪ್ರತಿಕ್ರಿಯಿಸಿಲ್ಲ.
ಹೊಸ ಬಿಸಿನೆಸ್ ಮಾದರಿಯಲ್ಲಿ ಕಂಪನಿಯು ತನ್ನ 50% ಡಾರ್ಕ್ ಸ್ಟೋರ್‌ಗಳನ್ನು ಕಡಿತಗೊಳಿಸಲಿದೆ. ಲಾಭದಾಯಕ ಸ್ಥಿತಿಯಲ್ಲಿ ಇರುವುದನ್ನು ಮಾತ್ರ ಮುಂದುವರಿಸಲಿದೆ.
ಉದ್ಯೋಗ ಕಡಿತಕ್ಕೆ ಕಾರಣವೇನು?
ಡನ್ಜೊ ತನ್ನ ಉದ್ಯೋಗಿಗಳಿಗೆ ಏಪ್ರಿಲ್ 5ರ ಟೌನ್ ಹಾಲ್ ಮೀಟಿಂಗ್‌ನಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡಿತ್ತು. ಐಪಿಒಗೆ ಮುನ್ನ ಲಾಭವನ್ನು ದಾಖಲಿಸಲು ಡನ್ಜೊ ಮುಂದಾಗಿದೆ. ಹೀಗಾಗಿ ವೆಚ್ಚ ನಿಯಂತ್ರಣಕ್ಕಾಗಿ ಉದ್ಯೋಗ ಕಡಿತ ಮಾಡುತ್ತಿದೆ ಎನ್ನಲಾಗಿದೆ. 2025ರಲ್ಲಿ ಐಪಿಒ ನಡೆಸಲು ಡನ್ಜೊ ಉದ್ದೇಶಿಸಿದೆ.
2015ರಲ್ಲಿ ಸ್ಥಾಪನೆಯಾಗಿರುವ ಡನ್ಜೊ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆದಿದೆ. ದಿನಸಿ ವಸ್ತುಗಳು ಸೇರಿದಂತೆ ನಾನಾ ಉತ್ಪನ್ನಗಳನ್ನು ರವಾನಿಸಲು ಜನತೆ ಡನ್ಜೊ ಸೇವೆಯನ್ನು ಬಳಸುತ್ತಾರೆ. ಬೈಕ್ ಟ್ಯಾಕ್ಸಿ ಸೇವೆ ಸೇರಿದಂತೆ ಇತರ ವಲಯದಲ್ಲೂ ವಹಿವಾಟು ನಡೆಸಲು ಉದ್ದೇಶಿಸಿದೆ. ಕಳೆದ ಜನವರಿಯಲ್ಲಿ ಡನ್ಜೊ 60-80 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಡನ್ಜೊ 8 ನಗರಗಳಲ್ಲಿ ಅಸ್ತಿತ್ವದಲ್ಲಿದೆ. ಕಬೀರ್ ಬಿಸ್ವಾಸ್, ಅಂಕುರ್ ಅಗ್ರವಾಲ್, ದಲ್ವೀರ್ ಸೂರಿ, ಮುಕುಂದ್ ಜಾ ಡನ್ಜೊ ಸ್ಥಾಪಕರಾಗಿದ್ದಾರೆ.