Site icon Vistara News

Earn 7.5% interest rate : ಪಿಎನ್‌ಬಿಯಿಂದ ಮಹಿಳಾ ಸಮ್ಮಾನ್‌ ಸರ್ಟಿಫಿಕೇಟ್

pnb

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (Panjab National Bank) ಮಹಿಳಾ ಸಮ್ಮಾನ್‌ ಸರ್ಟಿಫಿಕೇಟ್‌ (Mahila Samman Certificate) ಅನ್ನು ತನ್ನ ಮಹಿಳಾ ಗ್ರಾಹಕರಿಗೆ ಬಿಡುಗಡೆಗೊಳಿಸಿದೆ. ಈ ಯೋಜನೆಯನ್ನು ನೀಡುತ್ತಿರುವ ನಾಲ್ಕನೇ ಬ್ಯಾಂಕ್‌ ಇದಾಗಿದೆ. ಮಹಿಳಾ ಸಮ್ಮಾನ್‌ ಸರ್ಟಿಫಿಕೇಟ್‌ ಬಾಲಕಿಯರು ಹಾಗೂ ಮಹಿಳೆಯರಿಗೆ ಹೆಚ್ಚಿನ ಬಡ್ಡಿ ನೀಡುವ ಉಳಿತಾಯ ಯೋಜನೆ ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2023ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.

ಮಹಿಳಾ ಸಮ್ಮಾನ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ ಸ್ಕೀಮ್‌ ಈಗ ಅಂಚೆ ಕಚೇರಿಗಳು ಮತ್ತು ಶೆಡ್ಯೂಲ್ಡ್‌ ಬ್ಯಾಂಕ್‌ಗಳಲ್ಲಿ ಲಭ್ಯವಿದೆ. ಆರ್ಥಿಕ ವ್ಯವಹಾರಗಳ ಸಚಿವಾಲಯವು 2023ರ ಜೂನ್‌ 27ರಂದು ಘೋಷಿಸಿರುವಂತೆ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಅರ್ಹ ಖಾಸಗಿ ವಲಯದ ಬ್ಯಾಂಕ್‌ಗಳು ಮಹಿಳಾ ಸಮ್ಮಾನ್‌ ಸರ್ಟಿಫಿಕೇಟ್‌ 2023 ಅನ್ನು ಬಿಡುಗಡೆಗೊಳಿಸಬಹುದು. 2023 ಏಪ್ರಿಲ್‌ 1ರಿಂದ ಅಂಚೆ ಕಚೇರಿ ಮಾತ್ರ ಇದನ್ನು ನೀಡುತ್ತಿತ್ತು.

ಮಹಿಳಾ ಸಮ್ಮಾನ್‌ ಸೇವಿಂಗ್‌ ಸರ್ಟಿಫಿಕೇಟ್‌ನಲ್ಲಿ ಏನೇನಿದೆ?

ಈ ಯೋಜನೆಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಹಣವನ್ನು ಠೇವಣಿ ಇಡಬಹುದು. ಇಡಬಹುದಾದ ಠೇವಣಿಯ ಗರಿಷ್ಠ ಮೊತ್ತ 2 ಲಕ್ಷ ರೂ. ಎರಡು ವರ್ಷಗಳಿಗೆ ಡಿಪಾಸಿಟ್ ಇಡಬಹುದು. ಇದಕ್ಕೆ ಸಿಗುವ ಬಡ್ಡಿ ದರ 7.5%. ಈ ಹೂಡಿಕೆಗೆ ಯಾವುದೇ ತೆರಿಗೆ ಅನುಕೂಲಗಳು ಇಲ್ಲ. ಆದರೆ ಭಾಗಶಃ ಹಿಂತೆಗೆತ ಸಾಧ್ಯ. ಈ ಉಳಿತಾಯ ಠೇವಣಿ ಪತ್ರಗಳು ಎರಡು ವರ್ಷದ ಅವಧಿಗೆ ದೊರೆಯಲಿದೆ. ಅಂದರೆ 2025ರ ಮಾರ್ಚ್‌ ತನಕದ ಅವಧಿಗೆ ಲಭ್ಯವಿದೆ. ಮಹಿಳೆಯರಿಗೆ ಇದರಲ್ಲಿ ಹೆಚ್ಚು ಬಡ್ಡಿ ದರ ಸಿಗುವುದರಿಂದ ಉಳಿತಾಯ ಮಾಡಲು ಉತ್ತೇಜನ ಸಿಗಲಿದೆ ಎನ್ನುತ್ತಾರೆ ಆರ್ಥಿಕ ಸಲಹೆಗಾರರು. ಸದ್ಯದ ಘೋಷಣೆ ಪ್ರಕಾರ ಇದು 2025ರ ಮಾರ್ಚ್‌ವರೆಗೆ ಮುಂದುವರಿಯುತ್ತದೆ. ಆದರೆ ಆ ಬಳಿಕವೂ ಈ ಯೋಜನೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸದ್ಯ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಸುಕನ್ಯಾ ಸಮೃದ್ಧಿಗೂ ಎಂಎಸ್‌ಎಸ್‌ಸಿಗೂ ಇರುವ ವ್ಯತ್ಯಾಸ ಏನು?

ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಇರುವಂಥದ್ದು. 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಇದರ ಅವಧಿ 21 ವರ್ಷ. 15ನೇ ವರ್ಷದ ತನಕ ಹೂಡಿಕೆ ಮಾಡಬಹುದು. ಬಾಲಕಿಗೆ 18 ವರ್ಷ ಆಗುವ ತನಕ ಸುಕನ್ಯಾ ಸಮೃದ್ಧಿಯಲ್ಲಿ ಹಣ ಲಾಕ್‌ ಆಗಿರುತ್ತದೆ. ಬಳಿಕ ಶಿಕ್ಷಣ ಉದ್ದೇಶಕ್ಕೆ ಮಾತ್ರ 50% ಹಿಂಪಡೆಯಬಹುದು.

ಎರಡೂ ಯೋಜನೆಗಳು ಉಳಿತಾಯಕ್ಕೆ ಉತ್ತೇಜಿಸುತ್ತದೆ. ಎಂಎಸ್‌ಎಸ್‌ಸಿ ಎರಡು ವರ್ಷಗಳ ಸಂಕ್ಷಿಪ್ತ ಅವಧಿಯ ಠೇವಣಿ ಯೋಜನೆ. ಆದ್ದರಿಂದ ದೀರ್ಘಾವಧಿ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಜತೆ ಹೋಲಿಸಲಾಗದು. ಬ್ಯಾಂಕ್‌ಗಳಲ್ಲಿ ಮಹಿಳೆಯರಿಗೆ ಠೇವಣಿಗೆ ಸಿಗುವ ಬಡ್ಡಿ ದರಕ್ಕೆ ಹೋಲಿಸಿದರೆ ಮಹಿಳಾ ಸಮ್ಮಾನ್‌ನಲ್ಲಿ ಹೆಚ್ಚು ಸಿಗಲಿದೆ. ಉದಾಹರಣೆಗೆ ಎಸ್‌ಬಿಐನಲ್ಲಿ ಗರಿಷ್ಠ 7.25%, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 7% ಸಿಗುತ್ತದೆ.

Exit mobile version