ನ್ಯೂಯಾರ್ಕ್: ಎಲಾನ್ ಮಸ್ಕ್, ಜೆಫ್ ಬಿಜೋಸ್ ಸೇರಿದಂತೆ ವಿಶ್ವದ ೫೦೦ ಆಗರ್ಭ ಶ್ರೀಮಂತರ ಸಂಪತ್ತಿನಲ್ಲಿ ಕಳೆದ ೬ ತಿಂಗಳಿನಲ್ಲಿ ಬರೋಬ್ಬರಿ ೧.೪ ಲಕ್ಷ ಕೋಟಿ ಡಾಲರ್ ಕರಗಿದೆ. ರೂಪಾಯಿ ಲೆಕ್ಕದಲ್ಲಿ ೧೦೯ ಲಕ್ಷ ಕೋಟಿ ರೂ.ಗೂ ಹೆಚ್ಚು.
ಜೆಫ್ ಬಿಜೋಸ್ ಸಂಪತ್ತಿನಲ್ಲಿ ೬೩ ಶತಕೋಟಿ ಡಾಲರ್ (೪.೯೧ ಲಕ್ಷ ಕೋಟಿ ರೂ.) ಕರಗಿದೆ. ಮಾರ್ಕ್ ಜುಕರ್ ಬರ್ಗ್ ಹೊಂದಿರುವ ಸಂಪತ್ತಿನಲ್ಲೂ ಅರ್ಧಕ್ಕೂ ಹೆಚ್ಚು ನಷ್ಟವಾಗಿದೆ. ಈ ಉದ್ಯಮಿಗಳ ಷೇರುಗಳು ಭಾರಿ ನಷ್ಟಕ್ಕೀಡಾಗಿವೆ.
ಕಳೆದ ಎರಡು ವರ್ಷಗಳಲ್ಲಿ ಸರ್ಕಾರಗಳು ಮತ್ತ ಸೆಂಟ್ರಲ್ ಬ್ಯಾಂಕ್‌ಗಳು, ಕೋವಿಡ್ ಬಿಕ್ಕಟ್ಟಿನಿಂದ ಆರ್ಥಿಕತೆಯನ್ನು ಚೇತರಿಸಲು ಭರಪೂರ ಹಣಕಾಸು ನೆರವಿನ ಪ್ಯಾಕೇಜ್‌ಗಳನ್ನು ಪ್ರಕಟಿಸಿದ್ದವು. ಇದರಿಂದ ಟೆಕ್ ಕಂಪನಿಗಳಿಂದ ಕ್ರಿಪ್ಟೊ ಕರೆನ್ಸಿಗಳ ತನಕ ಎಲ್ಲದರ ಮೌಲ್ಯ ಗಣನೀಯ ಏರಿಕೆಯಾಗಿತ್ತು. ಆದರೆ ಇದೀಗ ಸೆಂಟ್ರಲ್ ಬ್ಯಾಂಕ್‌ಗಳು ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರ ಏರಿಸುತ್ತಿವೆ. ಇದರ ಪರಿಣಾಮ ಬಿಲಿಯನೇರ್ ಉದ್ಯಮಿಗಳು ಹೊಂದಿದ್ದ ಷೇರುಗಳ ದರಗಳು ಇಳಿದಿವೆ. ಹೀಗಾಗಿ ಅವರ ಸಂಪತ್ತೂ ಕರಗುತ್ತಿದೆ.