Site icon Vistara News

Money Guide: ತುರ್ತು ಚಿಕಿತ್ಸೆಗೆ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

EPF New rules

ಪಿಂಚಣಿ ಸೌಲಭ್ಯ (Pension facility) ಹೊಂದಿರುವ ಉದ್ಯೋಗಿಗಳಿಗೊಂದು ಗುಡ್ ನ್ಯೂಸ್. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಉದ್ಯೋಗಿಗಳ ಭವಿಷ್ಯ ನಿಧಿ ನಿಯಮಗಳಲ್ಲಿ (EPF New rule) ಬದಲಾವಣೆಯನ್ನು ಮಾಡಿದ್ದು, ಇನ್ನು ಮುಂದೆ ವೈದ್ಯಕೀಯ ಚಿಕಿತ್ಸೆಗಾಗಿ (Medical treatment) 1 ಲಕ್ಷ ರೂಪಾಯಿವರೆಗೆ ಭಾಗಶಃ ಹಿಂಪಡೆಯಬಹುದು ಎಂದು ತಿಳಿಸಿದೆ (Money Guide).

ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ (Auto claim settlements) ಅರ್ಹತೆಯ ಮಿತಿ ಈ ಮೊದಲು 50,000 ರೂಪಾಯಿಗಳಿದ್ದು, ಇದನ್ನು ಈಗ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗೆ ಪ್ಯಾರಾಗ್ರಾಫ್ 68 ಜೆ ಅಡಿಯಲ್ಲಿ ತಿಳಿಸಿದೆ.

ಇಪಿಎಫ್ ಹೊಂದಿರುವವರಿಗೆ ಪ್ಯಾರಾಗ್ರಾಫ್ 68ಜೆ ಸ್ವಯಂ ಮತ್ತು ಅವಲಂಬಿತರ ವೈದ್ಯಕೀಯ ವೆಚ್ಚಗಳಿಗಾಗಿ ಮುಂಗಡವಾಗಿ ಹಣ ಪಡೆಯಲು ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ. ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮುಂಗಡವಾಗಿ ಹಣವನ್ನು ಪಡೆಯಲು ಇಪಿಎಫ್ ಒ ತನ್ನ ಸದಸ್ಯರಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

ಸಕ್ಷಮ ಪ್ರಾಧಿಕಾರವು ಪ್ಯಾರಾ 68J ಅಡಿಯಲ್ಲಿ ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ ಮಿತಿಯನ್ನು 50,000 ರೂ. ನಿಂದ 1,00,000 ರೂ. ಗೆ ಹೆಚ್ಚಿಸಲಾಗಿದ್ದು ಇದನ್ನು ಅನುಮೋದಿಸಲಾಗಿದೆ. 2024ರ ಏಪ್ರಿಲ್ 10ರಂದು ಇದನ್ನು ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ನಿಯೋಜಿಸಲಾಗಿದೆ ಎಂದು ಇಪಿಎಫ್ ಒ ತಿಳಿಸಿದೆ.


ಯಾವುದೆಲ್ಲ ವೈದ್ಯಕೀಯ ವೆಚ್ಚಗಳು ?

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ ಪ್ಯಾರಾಗ್ರಾಫ್ 68-ಜೆಯು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಸಂದರ್ಭಗಳಲ್ಲಿ ನಿಧಿಯಿಂದ ಮುಂಗಡವಾಗಿ ಹಣ ಪಡೆಯಲು ಸದಸ್ಯರಿಗೆ ಅವಕಾಶ ನೀಡುತ್ತದೆ. ಇದರಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಆಸ್ಪತ್ರೆಗೆ ದಾಖಲಾಗುವುದು, ಪ್ರಮುಖ ಶಸ್ತ್ರಚಿಕಿತ್ಸೆ, ಕ್ಷಯರೋಗ, ಕುಷ್ಠರೋಗ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ವಿಕಲತೆ ಅಥವಾ ಹೃದಯ ಕಾಯಿಲೆಗಳಂತಹ ಕಾಯಿಲೆಗಳು ಸೇರಿವೆ.

ದೈಹಿಕವಾಗಿ ದುರ್ಬಲಗೊಂಡ ಸದಸ್ಯರಿಗೆ ಮುಂಗಡ ಪಾವತಿಗೆ ಅರ್ಜಿ ಸಲ್ಲಿಸುವ ಆಯ್ಕೆಯು ಪ್ಯಾರಾಗ್ರಾಫ್ 68-ಎನ್ ನಡಿಯಲ್ಲಿ ಬರುತ್ತದೆ. ಈ ವಿಭಾಗವು ಅಗತ್ಯ ಉಪಕರಣಗಳನ್ನು ಖರೀದಿಸಲು ನಿರ್ದಿಷ್ಟ ಹಣ ಹಿಂಪಡೆಯಲು ಅನುಮತಿ ನೀಡುತ್ತದೆ. ಆದರೂ ಇದಕ್ಕೆ ಪರವಾನಿಗೆ ಪಡೆದ ವೈದ್ಯರು ಅಥವಾ ಇಪಿಎಫ್‌ಒ ನೇಮಿಸಿದ ಅಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯ.


ಹೇಗೆ ?

ಇಪಿಎಫ್ ಒ ಯುನಿವರ್ಸಲ್ ಅಕೌಂಟ್ ನಂಬರ್ (UAN) ವ್ಯವಸ್ಥೆಯನ್ನು ಕ್ಲೈಮ್ ಸಲ್ಲಿಕೆಗಳನ್ನು ಸರಳೀಕರಿಸಲು ಪರಿಚಯಿಸಿದೆ. ಸದಸ್ಯರು ತಮ್ಮ ಯುಎಎನ್ ಅನ್ನು ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದ್ದರೆ ಉದ್ಯೋಗದಾತರ ದೃಢೀಕರಣದ ಅಗತ್ಯವನ್ನು ತೆಗೆದುಹಾಕಿ ನೇರವಾಗಿ ಇಪಿಎಫ್ ಓ ಗೆ ಕ್ಲೈಮ್ ಫಾರ್ಮ್‌ಗಳನ್ನು ಸಲ್ಲಿಸಬಹುದು. ಇದು ಇಪಿಎಫ್ ಚಂದಾದಾರರಿಗೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಫಾರ್ಮ್ 31 ವೈದ್ಯಕೀಯ ತುರ್ತುಸ್ಥಿತಿಗಳಿಂದ ಹಿಡಿದು ಮದುವೆ, ಮನೆ ಖರೀದಿ ಅಥವಾ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅಕಾಲಿಕ ನಿಧಿಯನ್ನು ಹಿಂದಕ್ಕೆ ಪಡೆಯಲು ವಿನಂತಿಗಳನ್ನು ಸಲ್ಲಿಸಲು ಬಳಸಲಾಗುವ ಒಂದು ವಿಧಾನವಾಗಿದೆ.

ಕ್ಲೈಮ್ ಮಾಡಲು ಏನು ಮಾಡಬೇಕು ?

ಇಪಿಎಫ್ ಹೊಂದಿರುವ ಸದಸ್ಯರು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ವಿವರಗಳನ್ನು ಬಳಸಿಕೊಂಡು ಇಪಿಎಫ್ ಒ ಪೋರ್ಟಲ್‌ ನಲ್ಲಿ ಲಾಗ್ ಇನ್ ಮಾಡಿ ಬಳಿಕ ಗ್ರಾಹಕರ KYC ವಿವರಗಳನ್ನು ಸಲ್ಲಿಸಬೇಕು. ಸೇವಾ ಅರ್ಹತೆಯ ಮಾಹಿತಿಯು ನವೀಕೃತವಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಪಡೆಯಲು ಬಯಸುವ ಕ್ಲೈಮ್ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಮದುವೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆ ಖರೀದಿ ಅಥವಾ ಹೋಮ್ ಲೋನ್ ಮರುಪಾವತಿ ಮೊದಲಾದ ಆಯ್ಕೆಗಳಿರುತ್ತವೆ.

ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒನ್- ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಬೇಕು. ಅನಂತರ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಲಾಗುತ್ತದೆ. ಅದಕ್ಕೆ ಸೂಕ್ತವಾಗಿ ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ಯಾವುದೇ ಅಗತ್ಯ ದಾಖಲೆ ಅಥವಾ ಮಾಹಿತಿಯನ್ನು ಒದಗಿಸಿದರೆ ಆನ್‌ಲೈನ್ ಕ್ಲೈಮ್ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾಗುತ್ತದೆ.

Exit mobile version