ಬೆಂಗಳೂರು: ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆಯ ಪಠ್ಯಕ್ರಮವನ್ನು ಅಳವಡಿಸಿದೆ. ವಿದ್ಯಾರ್ಥಿಗಳಿಗೆ ಹಣಕಾಸಿನ ಪ್ರಪಂಚ ( Financial literacy) ಮತ್ತು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಚಯಿಸಲು ಪಠ್ಯಕ್ರಮವನ್ನು ಪರಿಚಯಿಸಲಾಗಿದೆ.
ಈ ಪಠ್ಯಕ್ರಮವನ್ನು ದೇಶಾದ್ಯಂತ ಆರ್ಕಿಡ್ಸ್‌ನ 60ಕ್ಕೂ ಹೆಚ್ಚು ಶಾಖೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಕಲಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಶಾಲಾ ಜೀವನದಲ್ಲಿಯೇ ಆರ್ಥಿಕ ನಿರ್ವಹಣೆಯ ನಾನಾ ಅಂಶಗಳನ್ನು ಕಲಿಸಬೇಕು. ಆರ್ಥಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪಠ್ಯಕ್ರಮಗಳು ಸಹಕಾರಿಯಾಗಿವೆ ಎಂದು ಆರ್ಕಿಡ್ಸ್‌ನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಶೈಕ್ಷಣಿಕ ಮುಖ್ಯಸ್ಥರಾದ ಶುಭಂ ಚೌಹಾಣ್ ತಿಳಿಸಿದ್ದಾರೆ.
ಪಠ್ಯಕ್ರಮದಲ್ಲಿ ವೈಯಕ್ತಿಕ ಹಣಕಾಸು, ಬ್ಯಾಂಕಿಂಗ್, ಉಳಿತಾಯ ಯೋಜನೆಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಗುವುದು, ವಿದ್ಯಾರ್ಥಿಗಳನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಅಲ್ಲಿ ಸಿಗುವ ಸೇವೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ವಿವರಿಸಿದ್ದಾರೆ.