Site icon Vistara News

Gold import : ಏಪ್ರಿಲ್-ಫೆಬ್ರವರಿಯಲ್ಲಿ ಬಂಗಾರದ ಆಮದು 30% ಇಳಿಕೆ

Gold Rate Today

Gold Rate Today

ನವ ದೆಹಲಿ: ಭಾರತದ ಬಂಗಾರದ ಆಮದು (Gold import) 2022ರ ಫೆಬ್ರವರಿಯಿಂದ 2023ರ ಏಪ್ರಿಲ್‌ ತನಕದ ಅವಧಿಯಲ್ಲಿ 30% ಇಳಿಕೆಯಾಗಿದ್ದು, ಮೌಲ್ಯದ ಲೆಕ್ಕಾಚಾರದಲ್ಲಿ 31.8 ಶತಕೋಟಿ ಡಾಲರ್‌ಗೆ (2.60 ಲಕ್ಷ ಕೋಟಿ ರೂ.) ಇಳಿದಿದೆ. ಉನ್ನತ ಮಟ್ಟದ ಕಸ್ಟಮ್ಸ್‌ ಸುಂಕ ಮತ್ತು ಆರ್ಥಿಕ ಅನಿಶ್ಚಿತತೆಯ ಪರಿಣಾಮ ಬೇಡಿಕೆ ಕುಸಿದಿತ್ತು ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಈ ಅವಧಿಯಲ್ಲಿ ಭಾರತ 600 ಟನ್‌ ಚಿನ್ನವನ್ನು ಆಮದು ಮಾಡಿಕೊಂಡಿದೆ. ಸಾಮಾನ್ಯವಾಗಿ 900 ಟನ್‌ ಬಂಗಾರವನ್ನು ದೇಶ ಆಮದು ಮಾಡಿಕೊಳ್ಳುತ್ತದೆ.

ಕಳೆದ 2021-22ರಲ್ಲಿ 45.2 ಶತಕೋಟಿ ಡಾಲರ್‌ (3.70 ಲಕ್ಷ ಕೋಟಿ ರೂ.) ಮೌಲ್ಯದ ಹಳದಿ ಲೋಹ ಆಮದಾಗಿತ್ತು. 2022ರ ಆಗಸ್ಟ್‌ ಬಳಿಕ ಆಮದು ಋಣಾತ್ಮಕ ಮಟ್ಟದಲ್ಲಿದೆ. ಹೀಗಿದ್ದರೂ, ಬೆಳ್ಳಿಯ ಆಮದು 66% ಏರಿಕೆಯಾಗಿದ್ದು, ಏಪ್ರಿಲ್-‌2023ರ ಫೆಬ್ರವರಿ ತನಕದ ಅವಧಿಯಲ್ಲಿ 5.3 ಶತಕೋಟಿ ಡಾಲರ್‌ (43,460 ಕೋಟಿ ರೂ.) ಆಮದಾಗಿದೆ.

ಬಂಗಾರದ ಆಮದಿನಲ್ಲಿ ಗಣನೀಯ ಇಳಿಕೆಯಾಗಿದ್ದರೂ, ವ್ಯಾಪಾರ ಕೊರತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಯಾವುದೇ ಕೊಡುಗೆಯನ್ನು ನೀಡಿಲ್ಲ. ಈ 2022-23ರ ಅವಧಿಯಲ್ಲಿ ವ್ಯಾಪಾರ ಕೊರತೆ 247 ಶತಕೋಟಿ ಡಾಲರ್‌ನಷ್ಟಿತ್ತು. (20 ಲಕ್ಷ ಕೋಟಿ ರೂ.) 2021-22ರಲ್ಲಿ ಇದು 172 ಶತಕೋಟಿ ಡಾಲರ್‌ನಷ್ಟಿತ್ತು. (14 ಲಕ್ಷ ಕೋಟಿ ರೂ.)

ಬಂಗಾರದ ದರ 2023ರಲ್ಲಿ ನಾಗಾಲೋಟದಲ್ಲಿದ್ದು, 2023-24ರಲ್ಲಿ ದರ 68,000 ರೂ.ಗೆ ಜಿಗಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಪರಿಣಾಮ ಬಂಗಾರದ ಮೇಲಿನ ಹೂಡಿಕೆಗೆ 10-15% ಆದಾಯ ಸಿಗುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಜತೀನ್‌ ತ್ರಿವೇದಿ (Gold Price Outlook) ತಿಳಿಸಿದ್ದಾರೆ.

ಒಂದು ವೇಳೆ ಬಂಗಾರದ ದರ 15-20% ಪ್ರಮಾಣದಲ್ಲಿ ಏರಿಕೆಯಾದರೆ 64,500 ರೂ. ಮತ್ತು 66,800 ರೂ. ಶ್ರೇಣಿಯಲ್ಲಿ ಏರಿಕೆಯಾಗಲಿದೆ. 2024ರಲ್ಲಿ 68,000 ರೂ. ತನಕ ಹಚ್ಚಳವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1869 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 68,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

Exit mobile version