ಹೊಸದಿಲ್ಲಿ: ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ (ನಾಮಿನಿ) ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಗಡುವನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಇದಕ್ಕೆ ಡಿಸೆಂಬರ್ ಅಂತ್ಯದವರೆಗೆ ಸಮಯ ನೀಡಿದೆ.
ಈ ಹಿಂದೆ, ಅರ್ಹ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನದ ಆಯ್ಕೆಯನ್ನು ಒದಗಿಸಲು ಗಡುವು ಸೆಪ್ಟೆಂಬರ್ 30ರವರೆಗೆ ಇತ್ತು. ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ, ಟ್ರೇಡಿಂಗ್ ಖಾತೆಗಳಿಗೆ ʼನಾಮನಿರ್ದೇಶನದ ಆಯ್ಕೆ’ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
“ವ್ಯವಹಾರವನ್ನು ಸುಲಭಗೊಳಿಸುವುದಕ್ಕಾಗಿ, ಠೇವಣಿದಾರರು, ದಲ್ಲಾಳಿಗಳ ಸಂಘಗಳು ಮತ್ತು ಇತರ ವಿವಿಧ ಪಾಲುದಾರರಿಂದ ಪಡೆದ ಮಾಹಿತಿಯಂತೆ, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನದ ಆಯ್ಕೆಯ ಸಲ್ಲಿಕೆಯನ್ನು ಸ್ವಯಂಪ್ರೇರಿತ ಮಾಡಲಾಗಿದೆ. ಡಿಮ್ಯಾಟ್ ಖಾತೆಗಳಿಗೆ ಸಂಬಂಧಿಸಿದಂತೆ ನಾಮಿನಿ ಆಯ್ಕೆ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2023ಕ್ಕೆ ವಿಸ್ತರಿಸಲಾಗಿದೆ” ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ.
ಸ್ಥಿರಾಸ್ತಿ ಭದ್ರತೆ ಹೊಂದಿರುವವರು ಪ್ಯಾನ್, ನಾಮಿನಿ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಲಿಯೊ ಸಂಖ್ಯೆಗಳಿಗೆ ಮಾದರಿ ಸಹಿಯನ್ನು ಸಲ್ಲಿಸಲು ಸೆಬಿ ಡಿಸೆಂಬರ್ 31ರವರೆಗೆ ಸಮಯವನ್ನು ನೀಡಿದೆ.
ಅಸ್ತಿತ್ವದಲ್ಲಿರುವ ಎಲ್ಲಾ ಅರ್ಹ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ, ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ವಿಸ್ತರಿಸಿತು.
ಸೆಬಿ ನಿಯಮಾವಳಿಗಳ ಪ್ರಕಾರ, ಹೊಸ ಹೂಡಿಕೆದಾರರು ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳನ್ನು ತೆರೆದಾಗ, ತಮ್ಮ ಸೆಕ್ಯುರಿಟೀಸ್ ನಾಮಿನಿಯನ್ನು ಗೊತ್ತುಪಡಿಸಬೇಕು ಅಥವಾ ಡಿಕ್ಲರೇಶನ್ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ನಾಮನಿರ್ದೇಶನವನ್ನು ಸ್ಪಷ್ಟವಾಗಿ ನಿರಾಕರಿಸಬೇಕು.
ಇದನ್ನೂ ಓದಿ: Demat Account: ಡಿಮ್ಯಾಟ್ ಖಾತೆಗೆ ಅಗತ್ಯವಿರುವ ದಾಖಲೆಗಳು