ನವ ದೆಹಲಿ: ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪಿಜಿ ಬಾಡಿಗೆ ಮತ್ತಷ್ಟು ದುಬಾರಿಯಾಗಲಿದೆ. (GST for hostel rent) ಏಕೆಂದರೆ ಹಾಸ್ಟೆಲ್, ಪಿಜಿ ಬಾಡಿಗೆ ಮೇಲೆ 12% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ( Authority of Advance Ruling ) ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆದೇಶಿಸಿದೆ.
ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್‌ನ (AAR) ಬೆಂಗಳೂರು ಪೀಠವು, ಹಾಸ್ಟೆಲ್ ಮತ್ತು ಪಿಜಿಗಳು ವಸತಿ ಘಟಕಗಳಲ್ಲ, ಆದ್ದರಿಂದ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗದು (Goods and Services Tax-GST) ಎಂದು ತಿಳಿಸಿದೆ. 2022ರ ಜುಲೈ 17ರ ತನಕ ದಿನಕ್ಕೆ 1000 ರೂ. ಬಾಡಿಗೆ ಇರುವ ಹಾಸ್ಟೆಲ್, ಕ್ಲಬ್, ಪಿಜಿಗಳಿಗೆ ಜಿಎಸ್‌ಟಿ ಅನ್ವಯವಾಗುತ್ತಿತ್ತು.
ವಸತಿ ಘಟಕಗಳು ಎಂದರೆ ಶಾಶ್ವತವಾಗಿ ನೆಲೆಸಲು ಇರುವಂಥವುಗಳು. ಅವುಗಳಲ್ಲಿ ಗೆಸ್ಟ್ ಹೌಸ್, ಲಾಡ್ಜ್ ಇತ್ಯಾದಿಗಳು ಇರುವುದಿಲ್ಲ ಎಂದು ಎಎಆರ್ ತಿಳಿಸಿದೆ. ಎಎಆರ್‌ನ ಲಖನೌ ಪೀಠವು ಪ್ರಕರಣವೊಂದರಲ್ಲಿ, ದಿನಕ್ಕೆ 1000 ರೂ.ಗಿಂತ ಕಡಿಮೆ ಬಾಡಿಗೆಯ ಹಾಸ್ಟೆಲ್ ಬಾಡಿಗೆ ಮೇಲೆ ಕೂಡ ಜಿಎಸ್ ಟಿ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಆದ್ದರಿಂದ 2022ರ ಜುಲೈ 18 ರಿಂದ ಈ ಬದಲಾವಣೆ ಜಾರಿಯಾಗಿದೆ. ಹೀಗಾಗಿ ಹಾಸ್ಟೆಲ್, ಪಿಜಿ ಖರ್ಚು ವೆಚ್ಚ ದುಬಾರಿಯಾಗುವ ನಿರೀಕ್ಷೆ ಇದೆ.
ಎಎಂಆರ್‌ಜಿ & ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್, ವಿದ್ಯಾರ್ಥಿಗಳ ಹಾಸ್ಟೆಲ್, ಪಿಜಿ ಬಾಡಿಗೆ ಮೇಲೆ 12% ಜಿಎಸ್‌ಟಿ ಎಂದರೆ ಭಾರತೀಯ ಕುಟುಂಬಗಳಿಗೆ ದುಬಾರಿಯಾದೀತು ಎಂದು ಹೇಳಿದ್ದಾರೆ. ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ಹಾಸ್ಟೆಲ್, ಪಿಜಿಗಳ ವೆಚ್ಚದ ಮೇಲೆ ಜಿಎಸ್‌ಟಿ ಹೊರೆ ಇಳಿಸಲು ಜಿಎಸ್‌ಟಿ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.