ಪ್ರತಿ ಬ್ರಾಂಡ್‌ನ ಹಿಂದೆಯೂ ಒಂದೊಂದು ಕಥೆಯಿರುತ್ತದೆ. ಒಂದು ಪುಟ್ಟ ಹೆಜ್ಜೆ ದೊಡ್ಡ ಪಯಣವಾಗಿ ಬದಲಾಗುವಾಗ ಎಲ್ಲವೂ ಬರೆದದ್ದು ಇತಿಹಾಸವೇ. ಭಾರತೀಯ ಮಾರುಕಟ್ಟೆಯಲ್ಲಿ ಅಂತಹ ಹಲವು ಕಥೆಗಳಿವೆ. ಮನೆಮಾತಾದ ಲೋಗೋಗಳ ಹಿಂದೆ ಆಸಕ್ತಿಕರವಾದ ಕಥೆಗಳಿವೆ. ಅವುಗಳಲ್ಲಿ, ಬಹಳ ಹಿಂದಿನ, ಈಗ ಇತಿಹಾಸವಾಗಿ ಬದಲಾದ ಐದು ಬ್ರ್ಯಾಂಡ್‌ಗಳ ಲೋಗೋಗಳ ಕಥೆಯಿದು.
1. ದೂರದರ್ಶನ: ನವದೆಹಲಿಯಲ್ಲಿ ಸೆಪ್ಟೆಂಬರ್ ೧೫ ೧೯೫೯ರಲ್ಲಿ ಆರಂಭವಾದ ದೂರದರ್ಶನ, ಅದರ ವಿಶೇಷ ಸಂಗೀತಯುಕ್ತ ಕುಣಿಯುವ ಕಣ್ಣಿನ ಲೋಗೋಗೆ ಹೆಚ್ಚು ಪ್ರಸಿದ್ಧ. ೮೦-೯೦ರ ದಶಕದ ಮಕ್ಕಳ ಕಿವಿಗಳಲ್ಲಿ, ಕಣ್ಣಿನಲ್ಲಿ ಇಂದಿಗೂ ಅನುರಣಿಸುವ ಬಲು ಪ್ರಸಿದ್ಧ ಲೋಗೋ ಅದು. ಈ ಲೋಗೋ ಹಿಂದೆ ಕಥೆಯೇ ಇದೆ. ದೇವಾಶಿಶ್ ಭಟ್ಟಾಚಾರ್ಯ ಅವರು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್(ಎನ್‌ಐಡಿ)ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಲೋಗೋ ಮಾಡುವ ಟಾಸ್ಕ್ ಒಂದನ್ನು ನೀಡಲಾಗಿತ್ತಂತೆ. ಭಟ್ಟಾಚಾರ್ಯ ಅವರು ಕಣ್ಣಿನ ಚಿತ್ರದೊಂದಿಗೆ ಎರಡು ವಕ್ರ ರೇಖೆಗಳನ್ನು ಅದರ ಸುತ್ತ ಸುತ್ತಿದಂತೆ ಚಿತ್ರಿಸಿ ತನ್ನ ಟೀಚರ್ ವಿಕಾಸ್ ಸತ್ವಾಲೇಕರ್ ಅವರಿಗೆ ನೀಡಿದ್ದರು. ತುಂಬ ಸರಳವಾಗಿದ್ದ ಈ ಲೋಗೋ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಇಷ್ಟವಾದ್ದರಿಂದ ಅವರು ಕೂಡಲೇ ಟಿವಿ ಚಾನಲ್‌ಗೆ ಆಯ್ಕೆ ಮಾಡಿದರು. ಇದರ ಆನಿಮೇಶನ್‌ಗಾಗಿ ಎನ್‌ಐಡಿಯ ಇನ್ನೊಬ್ಬ ವಿದ್ಯಾರ್ಥಿಆರ್ ಎಲ್ ಮಿಸ್ತ್ರಿ ಅವರಿಗೆ ನೀಡಲಾಗಿ ಇದುವೇ ಮುಂದೆ ಪ್ರಸಿದ್ಧ ಡಿಡಿ ಐ ಆಗಿ ಜನಪ್ರಿಯವಾಯಿತು.
2. ವಾಘ್ ಬಕ್ರಿ ಟೀ: ನರನ್ ದಾಸ ದೇಸಾಯಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ೧೮೯೨ರ ಸುಮಾರಿಗೆ ೫೦೦ ಎಕ್ರೆ ಪ್ರದೇಶದಲ್ಲಿ ಟೀ ಎಸ್ಟೇಟ್ ಆರಂಭಿಸಿದರಂತೆ. ಆದರೆ ದಕ್ಷಿಣ ಆಫ್ರಿಕಾದ ಜನಾಂಗೀಯ ಹಾಗೂ ರಾಜಕೀಯ ಸಮಸ್ಯೆಗಳಿಂದಾಗಿ, ಅಲ್ಲಿಂದ ೧೯೧೫ರಲ್ಲಿ ಅವರು ವಾಪಾಸಾಗಬೇಕಾಯಿತು. ೧೯೧೯ರಲ್ಲಿ ಗಾಂಧೀಜಿಯವರ ಸಹಾಯದಿಂದ ಅಹ್ಮದಾಬಾದಿನಲ್ಲಿ ಗುಜರಾತ್ ಟೀ ಡಿಪೋ ಎಂಬ ಸಂಸ್ಥೆಯನ್ನು ಆರಂಭಿಸಿದ ಇವರು ಆವೇಲೆ ಹಿಂತಿರುಗಿ ನೋಡಿಲ್ಲ. ಆಗ ಆ ಚಹಾ ಕಂಪನಿಗೆ ಲೋಗೋ ಆಗಿ ವಾಘ್ (ಹುಲಿ ಹಾಗೂ ಬಕ್ರಿ (ಆಡು) ಎರಡೂ ಒಂದೇ ಕಪ್ಪಿನಲ್ಲಿ ಚಹಾ ಕುಡಿಯುತ್ತಿರುವಂತೆ ಚಿತ್ರಿಸಲಾಯಿತು. ಯಾವುದೇ ಮೇಲು ಕೀಳೆಂಬ ಭಾವನೆ ಇಲ್ಲದೆ ಇಲ್ಲರೂ ಸಮಾನತೆ ಕಾಯ್ದುಕೊಳ್ಳಬೇಕೆಂಬುದು ಈ ಲೋಗೋನ ಉದ್ದೇಶ. ಹಾಗೆ, ೧೯೩೪ರಲ್ಲಿ ಈ ಸಂಸ್ಥೆಯ ಮೂಲಕ ವಾಘ್ ಬಕ್ರಿ ಟೀ ಬ್ರಾಂಡ್‌ನ ಉಗಮವಾಯಿತು. ಈಗ ಹಲವಾರು ಚಹಾ ಬ್ರಾಂಡ್‌ಗಳಿದ್ದರೂ ಅತ್ಯಂತ ಹಳೆಯ ಚಹಾ ಬ್ರಾಂಡ್ ಎಂಬ ಹೆಮ್ಮೆಯೊಂದಿಗೆ ವಾರ್ಷಿಕ ೧೫೦೦ ಕೋಟಿ ವಹಿವಾಟು ನಡೆಸುತ್ತದೆ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!
3. ಮೈಸೂರು ಸ್ಯಾಂಡಲ್ ಸೋಪ್: ೧೯೧೮ರ ಆಸುಪಾಸಿನಲ್ಲಿ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ ಅವರಿಗೆ ಬಹಳ ವಿಶೇಷವಾದ ಶ್ರೀಗಂಧದ ಸಾಬೂನಿನ ಉಡುಗೊರೆ ಸಿಕ್ಕಿತು. ಇದನ್ನು ನೋಡಿ ಉತ್ತೇಜಿತರಾದ ಅವರು ಆಗ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರಲ್ಲಿ ನಮ್ಮ ರಾಜ್ಯವೂ ಇಂಥದ್ದೇ ಸೋಪನ್ನು ಯಾಕೆ ತಯಾರಿಸಬಾರದು ಎಂಬ ಯೋಚನೆಯನ್ನು ಮುಂದಿಟ್ಟರು. ವಿಶ್ವೇಶ್ವರಯ್ಯನವರು ಪರ್ಫೆಕ್ಟ್ ಆಗಿ ಸಾಬೂನು ತಯಾರಿಸಲು, ಮುಂಬೈಯಿಂದ ತಂತ್ರಜ್ಞರನ್ನೂ ಕರೆಸಿಕೊಂಡು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಬಗೆಗೆ ಸಂಶೋಧನೆ ಕಾರ್ಯಾಗಾರಗಳನ್ನೂ ನಡೆಸಿದರು. ಈ ಕಾರ್ಯಾಗಾರದಲ್ಲಿ ನಿಪುಣತೆಯನ್ನು ಪ್ರದರ್ಶಿಸಿದ ಸೋಸಲೆ ಗರಳಪುರಿ ಶಾಸ್ತ್ರಿ ಅವರನ್ನು ಇಂಗ್ಲೆಂಡ್‌ಗೆ ಹೆಚ್ಚಿನ ತರಬೇತಿಗಾಗಿ ಕಳುಹಿಸಲಾಯಿತು. ಸೋಸಲೆ ಅವರು ತರಬೇತಿಯ ನಂತರ ಮರಳುವಾಗ ಅವರ ಕೈಯಲ್ಲಿ ವಿಶಿಷ್ಟ ಪರಿಮಳದ, ವಿಶೇಷ ಪ್ಯಾಕೇಜಿಂಗ್ ಮಾಡಿದ ಮೈಸೂರು ಸ್ಯಾಂಡಲ್ ಸೋಪಿತ್ತು. ಶಾಸ್ತ್ರಿ ಅವರಿಗೆ ಸಾಬೂನು ಎಲ್ಲವುಗಳಿಗಿಂತ ಭಿನ್ನವಾಗಿ ಮಾಡಲು ಆಸೆಯಿದ್ದುದರಿಂದ ಪ್ಯಾಕೇಜಿಂಗ್ ಮೇಲೂ ವಿಶೇಷ ಆಸಕ್ತಿ ವಹಿಸಿದರು. ಆಭರಣದ ಪೆಟ್ಟಿಗೆಯಂತೆ ಆಯತಾಕಾರದಲ್ಲಿ ಸೋಪು ಬಾಕ್ಸ್ ಮಾಡಿ, ಶರಭವನ್ನು ಲೋಗೋ ಆಗಿ ಮಾಡಿದರು. ಆನೆಯ ತಲೆ ಹಾಗೂ ಸಿಂಹದ ದೇಹವಿರುವ ಶರಭ ಎಂಬ ಕಾಲ್ಪನಿಕ ಪೌರಾಣಿಕ ಪ್ರಾಣಿ ದೈರ್ಯ ಹಾಗೂ ಬುದ್ಧಿಯ ಸಂಕೇತ. ಇದು ರಾಜ್ಯದ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ.
೪. ನಿರ್ಮಾ: ೧೯೬೯ರಲ್ಲಿ ಸರ್ಫ್ ಎಂಬ ದೈತ್ಯ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ತನ್ನ ಡಿಟರ್ಜೆಂಟು ಪ್ರಾಡಕ್ಟುಗಳ ಮೂಲಕ, ಕಲೆರಹಿತವಾಗಿ ಬಟ್ಟೆಗಳನ್ನು ಗರಿಗರಿಯಾಗಿಸಿ ಎಂದು ಜಾಹಿರಾತುಗಳ ಮೂಲಕ ಲಗ್ಗೆಯಿಟ್ಟಿದ್ದೇನೋ ನಿಜ. ಆದರೂ, ಅಷ್ಟು ಸುಲಭವಾಗಿ ಮಧ್ಯಮವರ್ಗದ ಜನತೆಯನ್ನು ತಲುಪುವುದು ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಕರ್ಸನ್‌ಭಾಯ್ ಪಟೇಲ್ ಎಂಬ ಗುಜರಾತಿನ ಉದ್ಯಮಿ ಕಡಿಮೆ ಬೆಲೆಯಲ್ಲಿ ಭಾರತೀಯ ಮಧ್ಯಮ ವರ್ಗವನ್ನು ತಲುಪುವ ಡಿಟರ್ಜೆಂಟು ಪೌಡರುಗಳನ್ನು ತಯಾರು ಮಾಡುವ ಯೋಚನೆ ಮಾಡಿದರು. ಇದರ ಫಲವೇ ವಾಷಿಂಗ್ ಪೌಡರ್ ನಿರ್ಮಾ. ಕೇವಲ ಮೂರು ರೂಪಾಯಿಗಳ ಪ್ಯಾಕೆಟ್ಟುಗಳಲ್ಲಿ ಮಾರಾಟವಾಗುತ್ತಿದ್ದ ಇದು ಭಾರತದ ಮನೆಮನೆಗೂ ತಲುಪಿತು. ಅಫಘಾತವೊಂದರಲ್ಲಿ ಮರಣಹೊಂದಿದ್ದ ಪಟೇಲರ ಮಗಳು ನಿರುಪಮಾಳನ್ನೇ ಈ ಜಾಹಿರಾತಿನ ಮುಖವಾಗಿ ಪರಿಚಯಿಸಿ ಅದು ರಾತ್ರೋರಾತ್ರಿ ಪ್ರಸಿದ್ಧವಾಯಿತು. ಇಂದಿಗೂ ಗುನುಗುನಿಸಲ್ಪಡುವ, ನಿರ್ಮಾ ಜಾಹಿರಾತೇ ಇತಿಹಾಸದಲ್ಲಿ ಸೇರಿಹೋಯಿತು.
೫. ಏಷ್ಯನ್ ಪೈಂಟ್ಸ್: ೧೯೪೨ರಲ್ಲಿ ಬ್ರಿಟೀಷ ಪೈಂಟುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ತಡೆ ಬಿದ್ದ ಮೇಲೆ, ಮುಂಬೈಯ ನಾಲ್ಕು ಗೆಳೆಯರು ಹೊಸದೊಂದನ್ನು ಆರಂಬಿಸುವ ಯೋಚನೆ ಮಾಡಿದರು. ಚಂಪಕ್‌ಲಾಲ್ ಚೋಕ್ಸೆ, ಚಿಮನ್‌ಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ ಹಾಗೂ ಅರವಿಂದ್ ವಕೀಲ್ ಅವರುಗಳು ಕಂಡ ಕನಸೇ ಇಂದು ಇತಿಹಾಸ. ಈ ಬ್ರಾಂಡ್ ಜಾಹಿರಾತು ಕೂಡಾ ಜನಪ್ರಿಯವಾದದ್ದು. ಖ್ಯಾತ ರೇಖಾಚಿತ್ರಕಾರ ಆರ್‌ಕೆ ಲಕ್ಷ್ಮಣ್ ಅವರು ಬಿಡಿಸಿದ, ಒಬ್ಬ ತರಲೆ ಹುಡುಗ ಪೈಂಟ್ ಡಬ್ಬಿ ಹಾಗೂ ಬ್ರಷ್ ಹಿಡಿದ ಚಿತ್ರವದು. ಆರ್ ಕೆ ಲಕ್ಷ್ಮಣ್ ಅವರ ಈ ಹುಡುಗನ ಚಿತ್ರಕ್ಕೆ ಹೆಸರಿಡಲು ಆಗ ಸಾರ್ವಜನಿಕರಲ್ಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ೪೭,೦೦೦ ಎಂಟ್ರಿಗಳಿದ್ದ ಆ ಸ್ಪರ್ಧೆಯ ಮೂಲಕ ಆ ಹುಡುಗನಿಗೆ ಕೊನೆಗೂ ಗಟ್ಟು ಎಂದು ನಾಮಕರಣ ಮಾಡಲಾಯಿತು. ಆಮೇಲೆ ಗಟ್ಟು ಏಷ್ಯನ್ ಪೈಂಟ್ಸ್ ಮೂಲಕ ಮನೆಮಾತಾದ.
ಇದನ್ನೂ ಓದಿ | Brand story | ಕಾಲೇಜು ಡ್ರಾಪ್‌ಔಟ್ ಹುಡುಗ ಡಿಮಾರ್ಟ್ ಸ್ಟೋರ್ ತೆರೆದು ರಿಟೇಲ್ ಕಿಂಗ್ ಆಗಿದ್ದು ಹೇಗೆ?!