Site icon Vistara News

Home loan : ಬ್ಯಾಂಕ್‌ಗಳು ಯಾವೆಲ್ಲ ಕಾರಣಕ್ಕೆ ಗೃಹ ಸಾಲ ಅರ್ಜಿಯನ್ನು ತಿರಸ್ಕರಿಸುತ್ತವೆ?

home loan

ಲಕ್ಷಾಂತರ ಮಂದಿಗೆ ತಲೆಯ ಮೇಲೊಂದು ಸ್ವಂತ ಸೂರು ಮಾಡಬೇಕು ಎಂಬುದು ಜೀವಮಾನದ ಕನಸಾಗಿರುತ್ತದೆ. ತನಗೆ ಮತ್ತು ತನ್ನನ್ನು ನಂಬಿರುವ ಕುಟುಂಬದ ಸದ್ಯರಿಗೆ ಆಶ್ರಯ ಕಲ್ಪಿಸಲು ಸ್ವಗೃಹ ಬೇಕು ಎಂಬುದು ಅಮೂಲ್ಯವಾದ ಕನಸು. ಆದರೆ ಸ್ವಂತ ಮನೆ ಕಟ್ಟುವುದು ಎಂದರೆ ಸುಲಭದ ಮಾತಲ್ಲ. ಲಕ್ಷಾಂತರ ರೂ. ಸಾಲವನ್ನೂ ಮಾಡಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕ್‌ ಅನ್ನು ಸಂಪರ್ಕಿಸುತ್ತಾರೆ. ಆದರೆ ಕೆಲವು ಕಾರಣಗಳಿಗೋಸ್ಕರ ಬ್ಯಾಂಕ್‌ಗಳು ಗೃಹ ಸಾಲ ಅರ್ಜಿಯನ್ನು ತಿರಸ್ಕರಿಸಬಹುದು. ಆದ್ದರಿಂದ ಹೋಮ್‌ ಲೋನ್‌ ಪಡೆಯುವುದಕ್ಕೆ ಮುನ್ನ ಆ ಕಾರಣಗಳನ್ನು ತಿಳಿಯುವುದು ಮುಖ್ಯ. ಆಗ ನೀವು ತಕ್ಷಣವೇ ನಿಮ್ಮ ಸಾಲದ ಅರ್ಜಿ ಸ್ವೀಕೃತವಾಗುವಂತೆ ನೋಡಿಕೊಳ್ಳಬಹುದು.

ಬ್ಯಾಂಕ್‌ಗಳು ನೀಡುವ ಜನಪ್ರಿಯ ಸಾಲಗಳಲ್ಲಿ ಗೃಹಸಾಲವೂ ಒಂದು. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾದರೂ ಸಾಲಗಾರರು ಮುನ್ನೆಚ್ಚರ ವಹಿಸುವುದು ಉತ್ತಮ. ಪ್ರೊಫೈಲ್‌ ವೆರಿಫಿಕೇಶನ್‌ ಎನ್ನುವುದು ನಿರ್ಣಾಯಕ. ಈಗ ಅರ್ಜಿ ತಿರಸ್ಕೃತವಾಗಲು ಕಾರಣಗಳನ್ನು ನೋಡೋಣ.

ಕಳಪೆ ಕ್ರೆಡಿಟ್‌ ಸ್ಕೋರ್: ‌(Poor credit score)

ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದರೆ ಮಾತ್ರ ಗೃಹ ಸಾಲ ಸಿಗುತ್ತದೆ. ತೀರಾ ಕಳಪೆಯಾಗಿದ್ದರೆ ಹೋಮ್‌ ಲೋನ್‌ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಕ್ರೆಡಿಟ್‌ ರಿಪೇಮೆಂಟ್‌ ಹಿಸ್ಟರಿ ಅಂದರೆ ಹಿಂದಿನ ಸಾಲದ ಮರು ಪಾವತಿಯ ಇತಿಹಾಸ ಚೆನ್ನಾಗಿರಬೇಕು. ನೀವು ಸಕಾಲಕ್ಕೆ ಕಂತುಗಳನ್ನು ಕಟ್ಟಿದ ಹಿಸ್ಟರಿ ಹೊಂದಿರಬೇಕು. ಅದು ನಿಮಗೆ ಸಾಲ ಕಟ್ಟುವ ಜವಾಬ್ದಾರಿಯನ್ನು ಬಿಂಬಿಸುತ್ತದೆ. ಬ್ಯಾಂಕಿಗೆ ಖಾತರಿ ನೀಡುತ್ತದೆ. ನಿಮ್ಮ ಸಿಬಿಲ್‌ ಸ್ಕೋರ್‌ 750 ಮತ್ತು ಹೆಚ್ಚಿದ್ದರೆ ಬ್ಯಾಂಕ್‌ಗಳು ಸುಲಭವಾಗಿ ಗೃಹ ಸಾಲವನ್ನು ಮಂಜೂರು ಮಾಡುತ್ತವೆ.

ಉದ್ಯೋಗದ ಸ್ವರೂಪ ಮತ್ತು ಆದಾಯ (Job profile and Income)

ಗೃಹ ಸಾಲ ಎನ್ನುವುದು ನಿಮ್ಮ ಫೈನಾನ್ಷಿಯಲ್‌ ಸ್ಟೇಟ್‌ಮೆಂಟ್‌ನಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ಆದಾಯ ಸ್ಥಿರವಾಗಿರುವುದು ಮುಖ್ಯ. ನಿಮ್ಮ ಜಾಬ್‌ ಪ್ರೊಫೈಲ್‌ ಮತ್ತು ಉದ್ಯೋಗದ ಭವಿಷ್ಯದ ಸ್ಥಿತಿಗತಿಗಳು ಹೋಮ್‌ ಲೋನ್‌ ಅರ್ಜಿ ಮೇಲೆ ಪ್ರಭಾವ ಬೀರುತ್ತದೆ. ಬ್ಯಾಂಕ್‌ಗಳು ಅದನ್ನು ನಿಕಟವಾಗಿ ಪರಿಶೀಲಿಸುತ್ತವೆ. 5 ಕೋಟಿ ರೂ. ಗಳಂಥ ದೊಡ್ಡ ಮೊತ್ತದ ಗೃಹ ಸಾಲಕ್ಕೆ ಆಕರ್ಷಕ ಬಡ್ಡಿ ದರ ನೀಡುತ್ತವೆ. ಆದರೆ ಹೆಚ್ಚಿನ ವೇತನದಾರರಾಗಿರಬೇಕು. ಉತ್ತಮ ಆದಾಯದ ಸ್ವ ಉದ್ಯೋಗ ಇರಬೇಕು. ಈ ಎಲ್ಲ ಅರ್ಹತೆ ಇದ್ದರೆ ದೊಡ್ಡ ಮೊತ್ತದ ಗೃಹ ಸಾಲವೂ ನಿಮ್ಮದಾಗುತ್ತದೆ.

ಈ ಹಿಂದಿನ ಸಾಲ ತಿರಸ್ಕೃತ (Previous loan rejections)

ಈ ಹಿಂದೆ ನಿಮ್ಮ ಸಾಲದ ಅರ್ಜಿ ತಿರಸ್ಕೃತವಾಗಿದ್ದರೆ ಹೊಸತಾಗಿ ನೀವು ಗೃಹ ಸಾಲ ಸಲ್ಲಿಸುವಾಗ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಅದೂ ರಿಜೆಕ್ಟ್‌ ಆಗುವ ಅಪಾಯ ಇರುತ್ತದೆ. ಆದ್ದರಿಂದ ಈ ಹಿಂದಿನ ಪ್ರಮಾದಗಳನ್ನು ಸರಿಪಡಿಸಿ ನಿಮ್ಮ ಸಾಲದ ಅರ್ಹತೆಯನ್ನು ಹೆಚ್ಚಿಸಿಕೊಳ್ಳಿ.

ರೆಡ್‌ ಝೋನ್‌ : (Red Zones)

ಹಣಕಾಸು ಸಂಸ್ಥೆಗಳು ರೆಡ್‌ ಝೋನ್‌ಗಳ ಪಟ್ಟಿಯನ್ನು ಇಟ್ಟುಕೊಂಡಿರುತ್ತವೆ. ಆ ವಲಯದಲ್ಲಿ ಇರುವವರಿಗೆ ಬ್ಯಾಂಕ್‌ಗಳು ಸಾಮಾನ್ಯವಾಗಿ ಸುಲಭವಾಗಿ ಸಾಲ ಕೊಡುವುದಿಲ್ಲ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕೆಲವು ಬಡಾವಣೆ ಅಥವಾ ಸ್ಥಳಗಳಲ್ಲಿ ಕೂಡ ಬ್ಯಾಂಕ್‌ ಸಾಲ ಸಿಗುವುದಿಲ್ಲ ಅಥವಾ ಕಷ್ಟಕರವಾಗುತ್ತದೆ. ಅಕ್ರಮವಾಗಿ ನಿರ್ಮಿಸಿರುವ ಬಡಾವಣೆ ಇದ್ದರೂ ಬ್ಯಾಂಕಿನಿಂದ ಗೃಹ ಸಾಲ ದೊರೆಯುವುದಿಲ್ಲ. ಈ ವಿಷಯದಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು ಸಮಗ್ರವಾಗಿ ಪರಿಶೀಲಿಸುತ್ತವೆ.

ಅಪೂರ್ಣ ದಾಖಲೆಗಳು: (Incomplete documentation)

ಗೃಹಸಾಲಕ್ಕೆ ಅಗತ್ಯ ಇರುವ ದಾಖಲಾತಿಗಳನ್ನು ಸಂಗ್ರಹಿಸಿಡಬೇಕು. ಕೊನೆಯ ನಿಮಿಷಗಳಲ್ಲಿ ಗೊಂದಲ ಆಗುವುದು ತಪ್ಪುತ್ತದೆ. ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಅರ್ಜಿ ರಿಜೆಕ್ಟ್‌ ಆಗಲು ಅಪೂರ್ಣ ದಾಖಲೆಗಳೂ ಕಾರಣವಾಗುತ್ತವೆ. ಪ್ರಾಪರ್ಟಿಗಳು ಕಾನೂನುಬದ್ಧ ಇರಬೇಕು. ownership title ಸರಿ ಇರಬೇಕು. ಸೇಲ್‌ ಪ್ರೈಸ್‌ಗಿಂತ ಪ್ರಾಪರ್ಟಿ ವಾಲ್ಯೂ ಅತಿ ಕಡಿಮೆ ಇದ್ದರೆ ಅರ್ಜಿ ತಿರಸ್ಕೃತವಾಗಬಹುದು. ಬಿಲ್ಡರ್‌ಗಳು ವಿಶ್ವಸಾರ್ಹರಾಗಿರಬೇಕು.

ಇದನ್ನೂ ಓದಿ: Inflation rate: ಹಣದುಬ್ಬರದಿಂದ ಉದ್ಯಮಿಗಳು ಹೇಗೆ ಪ್ರಯೋಜನ ಪಡೆಯುತ್ತಾರೆ? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

Exit mobile version