ಬೆಂಗಳೂರು: ಬಂಗಾರಪೇಟೆ ಎಂದರೆ ಮೊದಲೆಲ್ಲ ಹೆಸರಿಗೆ ತಕ್ಕಂತೆ ಬಂಗಾರ ನೆನಪಾಗುತ್ತಿತ್ತು. (Bangarpet Pani Puri) ಆದರೆ ಈಗ ಬಾಯಲ್ಲಿ ನೀರೂರಿಸುವ ಪಾನಿಪುರಿ ನೆನಪಾಗುತ್ತದೆ. ಇವತ್ತು ಬೆಂಗಳೂರೊಂದರಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಬಂಗಾರಪೇಟೆ ಪಾನಿಪುರಿ ಅಂಗಡಿಗಳು ಇವೆ. ಆದರೆ ದಕ್ಷಿಣ ಭಾರತದ ಈ ಬಂಗಾರಪೇಟೆ ಪಾನಿ ಪುರಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಶುರುವಾಗಿದ್ದು ಹೇಗೆ? ಇದರ ಮೂಲವೇನು? ವಿಸ್ತಾರ ಬಿಸಿನೆಸ್ & ಪ್ರಾಪರ್ಟಿ ಚಾನೆಲ್‌ನಲ್ಲಿ ಈ ಕುರಿತ ವಿಡಿಯೊ ಸಂದರ್ಶನವನ್ನು ವೀಕ್ಷಿಸಬಹುದು. ಬಂಗಾರಪೇಟೆಯ ಚಾಟ್ಸ್ ಉದ್ಯಮಿ ರಮೇಶ್ ಅವರು ತಮ್ಮ ತಂದೆ ಪಾಂಡು ರಂಗ ಶೆಟ್ಟರು ಹೇಗೆ ಮತ್ತು ಯಾವಾಗ ಬಂಗಾರಪೇಟೆ ಪಾನಿಪುರಿ ಆರಂಭಿಸಿದರು, ಕಾಲಕ್ರಮೇಣ ಅದು ಏಕೆ ಜನಪ್ರಿಯವಾಯಿತು ಎಂಬುದನ್ನು ತಿಳಿಸಿದ್ದಾರೆ.
ಪಾಂಡು ರಂಗ ಶೆಟ್ಟರು 1974ರಲ್ಲಿ ಬಂಗಾರಪೇಟೆಯಲ್ಲಿ ಸಣ್ಣ ಮಟ್ಟಿಗೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡುತ್ತಿದ್ದರು. ಚಕ್ಕುಲಿ, ನಿಪ್ಪಟ್ಟು ಇತ್ಯಾದಿಗಳ ವ್ಯಾಪಾರ ತುಸು ಕಡಿಮೆಯಾದಾಗ, ಪಾನಿಪುರಿ ಚಾಟ್ಸ್ ಆರಂಭಿಸಿದರು. ದಿನ ಕಳೆದಂತೆ ಅದು ಜನಪ್ರಿಯವಾಯಿತು. ಕೋಲಾರದಲ್ಲಿ ಶಿಕ್ಷಣ ಪೂರೈಸಿದ ಬಳಿಕ ರಮೇಶ್ ಅವರು ಕೂಡ ತಂದೆಯವರ ಪಾನಿಪುರಿ ಬಿಸಿನೆಸ್‌ಗೆ ಕೈಜೋಡಿಸಿದರು. ಪಾನಿಪುರಿಯಲ್ಲಿ ವೈವಿಧ್ಯತೆ, ಶುಚಿ, ರುಚಿಯನ್ನು ಪರಿಚಯಿಸಿದರು. ಅದು ಮನೆ ಮಾತಾಯಿತು.
ಬಂಗಾರ ಪೇಟೆ ಪಾನಿ ಪುರಿ ಆರೋಗ್ಯಕರ. ಅದರ ಗುಣಮಟ್ಟ ವಿಶೇಷವಾಗಿರುತ್ತದೆ. ಕಳೆದ 40 ವರ್ಷಗಳಲ್ಲಿ ರಮೇಶ್ ಎಲ್ಲೂ ಹಿಂತಿರುಗಿ ನೋಡಿಲ್ಲ. ಪ್ರತಿ ವರ್ಷವೂ ವ್ಯಾಪಾರದಲ್ಲಿ ಹೆಚ್ಚಳ ಉಂಟಾಗಿದೆ ಎನ್ನುತ್ತಾರೆ ರಮೇಶ್.
ಬಂಗಾರಪೇಟೆ ಪಾನಿಪುರಿ ಇಷ್ಟೊಂದು ಪ್ರಸಿದ್ಧಿ ಪಡೆಯುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಪೇಟೆಂಟ್ ಬಗ್ಗೆ ನಮಗೆ ತಿಳುವಳಿಕೆ ಇದ್ದಿರಲಿಲ್ಲ. ಆದರೆ ಬಂಗಾರಪೇಟೆ ಪಾನಿಪುರಿ ಈ ಮಟ್ಟಕ್ಕೆ ಜನಪ್ರಿಯವಾಗಿರುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ರಮೇಶ್.