Site icon Vistara News

Business Guide : ಮಾರುಕಟ್ಟೆಯಲ್ಲಿ ನಿಮ್ಮ ಪ್ರಾಡಕ್ಟ್‌ ಗೆಲ್ಲೋದು ಹೇಗೆ?

business guide

ಬಹುತೇಕ ಎಲ್ಲ ಸ್ಟಾರ್ಟಪ್‌ಗಳು, ಉದ್ಯಮಿಗಳು ಮೊದಲು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲೇಬೇಕಾಗುತ್ತದೆ. ಇದುವೇ ಅವರ ಯಶಸ್ಸನ್ನು ನಿರ್ಧರಿಸುವ ಮಾನದಂಡ. (Business Guide ) ಮಾರುಕಟ್ಟೆಯಲ್ಲಿ ನಿಮ್ಮ ಪ್ರಾಡೆಕ್ಟ್‌ ಫಿಟ್‌ ಆಗುತ್ತದೆಯೇ? ಅದನ್ನು ಗೆಲ್ಲಿಸುವುದು ಹೇಗೆ? ಎಂಬುದನ್ನು ಅರಿತುಕೊಳ್ಳದಿದ್ದರೆ, ಯಶಸ್ಸು ಸಿಗುವುದಿಲ್ಲ. 80% ಸ್ಟಾರ್ಟಪ್‌ಗಳು ಇದನ್ನು ಅರಿತುಕೊಳ್ಳದೆ ವಿಫಲವಾಗುತ್ತವೆ.

ಸಾಮಾನ್ಯವಾಗಿ ಸ್ಟಾರ್ಟಪ್‌ಗಳು ಸಣ್ಣ ಮಟ್ಟಿನ ಬಂಡವಾಳದೊಂದಿಗೆ ಶುರುವಾಗುತ್ತವೆ. ಅದು ಒಳ್ಳೆಯದು ಕೂಡಾ. ತಮ್ಮದೇ ಉಳಿತಾಯ, ಸ್ನೇಹಿತರು, ಬಂಧು ಬಳಗದವರು ನೀಡಿದ ಕೈಸಾಲ, ಸಣ್ಣ ಪುಟ್ಟ ಸಾಲಗಳನ್ನು ಪಡೆದು ಪುಟ್ಟದಾಗಿ ಬಿಸಿನೆಸ್‌ ಆರಂಭಿಸುವವರೇ ಹೆಚ್ಚು. ನೀವು ಅಂಬೆಗಾಲಿಟ್ಟು ಬಿಸಿನೆಸ್‌ ಮಾಡುವ ಹೊತ್ತಿನಲ್ಲಿ ಎದುರಾಗುವ ಮೂಲಭೂತ ಪ್ರಶ್ನೆ ಏನೆಂದರೆ-ನಿಮ್ಮ ಪ್ರಾಡಕ್ಟ್‌ ಮಾರ್ಕೆಟ್‌ಗೆ ಫಿಟ್‌ ಆಗುತ್ತಾ? ಎಂಬುದು. ಅದಕ್ಕೆ ಉತ್ತರ ಕಂಡುಕೊಳ್ಳುವ ತನಕ ನೆಮ್ಮದಿ ಇರುವುದಿಲ್ಲ. ಒಂದು ಸಲ ಫಿಟ್‌ ಆಗುತ್ತದೆ ಎಂಬುದು ಸಾಬೀತಾದ ಬಳಿಕ ಹೆಚ್ಚುವರಿ ಫಂಡ್‌ ಸಂಗ್ರಹಿಸುತ್ತೀರಿ. ಬಿಸಿನೆಸ್‌ ಅನ್ನು ಮತ್ತಷ್ಟು ವಿಸ್ತರಿಸಲು ರೆಡಿಯಾಗುತ್ತೀರಿ. ಹಾಗಾದರೆ ನಿಮ್ಮ ಪ್ರಾಡಕ್ಟ್‌ ಮಾರುಕಟ್ಟೆಗೆ ಫಿಟ್‌ ಆಗುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ? ಇದಕ್ಕಾಗಿಯೇ ಕಾರ್ಯತಂತ್ರವಿದೆ. ಬಿಸಿನೆಸ್‌ ಭಾಷೆಯಲ್ಲಿ ಇದನ್ನು ಪ್ರಾಡಕ್ಟ್-ಮಾರ್ಕೆಟ್‌ ಫಿಟ್‌ ಎನ್ನುತ್ತಾರೆ. ಈ ಪ್ರಕ್ರಿಯೆ ಹೀಗಿರುತ್ತದೆ ನೋಡಿ.

ನಿಮ್ಮ ಮಾರುಕಟ್ಟೆಯನ್ನು ಗುರುತಿಸಿ: ಮೊದಲು ಸಮಾಜದ ಸಮಸ್ಯೆಗಳಿಗೆ ನಿಮ್ಮ ಉತ್ಪನ್ನ ಅಥವಾ ಸೇವೆಯಿಂದ ಪ್ರಯೋಜನ ಸಿಗುವುದೇ ಎಂಬುದನ್ನು ಖಾತರಿಪಡಿಸಿ. ಯಾವ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಉತ್ಪನ್ನವನ್ನು ತಯಾರಿಸುತ್ತಿದ್ದೀರಿ ಎಂಬುದು ಸ್ಪಷ್ಟವಾಗಿರಲಿ. ಯಾವ ಮಾರ್ಕೆಟ್‌ ನಿಮ್ಮ ಟಾರ್ಗೆಟ್‌ ಎಂಬುದು ಖಚಿತವಾಗಿರಬೇಕು. ಆಗ ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ನಿರ್ದಿಷ್ಟ ಗ್ರಾಹಕರಿಗೆ ತಲುಪಿಸುವುದು ಸುಲಭವಾಗುತ್ತದೆ. ಗ್ರಾಹಕರ ಸಮಸ್ಯೆಗಳಿಗೆ ಉತ್ಪನ್ನ ಅಥವಾ ಸೇವೆಗಳು ಸೂಕ್ತ ಪರಿಹಾರವಾಗುವುದು ಮುಖ್ಯ.

ಗ್ರಾಹಕರ ಪ್ರತಿಕ್ರಿಯೆಗಳನ್ನು ಪಡೆಯಿರಿ: ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ನಿಮ್ಮ ಸ್ನೇಹಿತರು ಅಥವಾ ಬಂಧುಗಳು ನಿಮ್ಮ ಮೇಲಿನ ಪ್ರೀತಿ- ಅಕ್ಕರೆ-ಮಮಕಾರಗಳಿಂದ ಖರೀದಿಸಬಹುದು. ಅದು ಆರಂಭಿಕ ಹಂತವಷ್ಟೇ. ಆದರೆ ಅಷ್ಟೇ ಸಾಕಾಗುವುದಿಲ್ಲ. ಮಾರುಕಟ್ಟೆಯಲ್ಲಿ ಅಪರಿಚಿತ ಗ್ರಾಹಕರ ದೊಡ್ಡ ವಲಯದಲ್ಲಿ ನಿಮ್ಮ ಪ್ರಾಡಕ್ಟ್‌ ಜನಪ್ರಿಯವಾಗಬೇಕು. ಆದ್ದರಿಂದ ನಿಮ್ಮ ಗ್ರಾಹಕರು ಏನನ್ನು ಬಯಸುತ್ತಾರೆ? ಎಂಬುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಹಕರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಬೇಕು. ನೀವು ಎಲ್ಲಿ ಸುಧಾರಿಸಿಕೊಳ್ಳಬೇಕು ಎಂಬುದನ್ನು ಅರಿಯಲು ಫೀಡ್‌ ಬ್ಯಾಕ್‌ ಅವಶ್ಯಕ.

ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಸಂಶೋಧನೆ ನಡೆಸಿ: ಮಾರುಕಟ್ಟೆಯಲ್ಲಿ ನಿಮ್ಮ ಪ್ರತಿಸ್ಪರ್ಧಿಗಳು ಯಾವೆಲ್ಲ ಉತ್ಪನ್ನಗಳು ಮತ್ತು ಸೇವೆಯನ್ನು ಕೊಡುತ್ತಿದ್ದಾರೆ? ಅದರ ಗುಣಮಟ್ಟ, ದರ ಎಷ್ಟು? ಎಂಬಿತ್ಯಾದಿ ವಿಚಾರಗಳನ್ನು ತಿಳಿಯಿರಿ. ನಿಮ್ಮ ಉತ್ಪನ್ನವನ್ನು ಸ್ಪರ್ಧಿಗಳದ್ದಕ್ಕೆ ಹೋಲಿಸಿ. ಎಲ್ಲಿ ಸುಧಾರಿಸಬಹುದು, ಭಿನ್ನವಾಗಿರಬಹುದು ಎಂಬುದು ಮನವರಿಕೆಯಾಗುತ್ತದೆ.

ಇದನ್ನೂ ಓದಿ: Suburban Rail: ಬೆಂಗಳೂರು ಉಪನಗರ ರೈಲು; ಜರ್ಮನಿಯ ಬ್ಯಾಂಕ್‌ ಜತೆ ಕೆ-ರೈಡ್‌ ಒಪ್ಪಂದ

ವ್ಯಾಪಾರ ಮತ್ತು ಬೆಳವಣಿಗೆಗೆ ವಿಶ್ಲೇಷಣೆ: ನಿಮ್ಮ ಸೇಲ್ಸ್‌ ಮತ್ತು ವ್ಯಾಪಾರದ ಬೆಳವಣಿಗೆ ಕುರಿತ ಅಂಕಿ ಅಂಶಗಳನ್ನು ನಿಯಮಿತವಾಗಿ ವಿಶ್ಲೇಷಣೆಗೆ ಒಳಪಡಿಸಿ. ನಿಮ್ಮ ಉತ್ಪನ್ನ ಮತ್ತು ಸೇವೆಯು ಉನ್ನತ ಮಟ್ಟದಲ್ಲಿ ಪ್ರಗತಿ ಸಾಧಿಸಿದ್ದರೆ, ಗ್ರಾಹಕರ ಮನಗೆದ್ದಿದೆ ಎಂದು ಅರ್ಥ. ಇದು ನಿಮ್ಮ ಪ್ರಾಡಕ್ಟ್‌ ಮಾರುಕಟ್ಟೆಗೆ ಫಿಟ್‌ ಆಗಿದೆ ಎಂಬುದನ್ನು ಸೂಚಿಸುತ್ತದೆ.

ನೀವು ಯಾವ ಉತ್ಪನ್ನವನ್ನು ಮಾರಾಟ ಮಾಡುತ್ತೀರೋ, ಅದಕ್ಕೊಂದು ಬೇಡಿಕೆ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಬೇಕು. ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಪ್ರಾಡಕ್ಟ್‌ ಗೆಲ್ಲಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವೊಂದು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

ನಿಮ್ಮ ಉತ್ಪನ್ನ ಆರ್ಗಾನಿಕ್‌ ಆಗಿ ಬೆಳೆಯುತ್ತಿದೆಯೇ? ನಿಮ್ಮ ಪ್ರಾಡಕ್ಟ್‌ ಬಗ್ಗೆ ಜನ ಅವರಾಗಿಯೇ ಬೇರೆಯವರಿಗೆ ತಿಳಿಸುತ್ತಿದ್ದಾರೆಯೇ? ನಿಮ್ಮ ಉತ್ಪನ್ನವನ್ನು ಖರೀದಿಸಲು ಹಣ ಖರ್ಚು ಮಾಡುವುದು ಮೌಲ್ಯಯುತವಾದದ್ದು ಎಂದು ಜನ ಭಾವಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ: The rule of 72 : ನಿಮ್ಮ ಹಣ ಯಾವಾಗ ಡಬಲ್‌ ಆಗುತ್ತೆ ಅಂತ ಹೀಗೆ ತಿಳಿಯಿರಿ

ಅಂತರ್ಜಾಲ ದಿಗ್ಗಜ ಗೂಗಲ್‌ ಆರಂಭಿಕ ದಿನಗಳಲ್ಲಿ ಇತರ ಸರ್ಚ್‌ ಎಂಜಿನ್‌ಗಳ ಜತೆಗೆ ಸ್ಪರ್ಧಿಸುತ್ತಿತ್ತು. ಆದರೆ 2003ರಲ್ಲಿ ಹೊಸ ಪರಿಕಲ್ಪನೆಯಾದ ಆಡ್‌ಸೆನ್ಸ್‌ ಅನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಯಿತು. ಸ್ಪರ್ಧಿಗಳನ್ನು ಹಿಂದಿಕ್ಕಿತು. ಸರ್ಚ್‌ ಪೇಜ್‌ಗಿಂತ ಆಚೆಯೂ ಜಾಹೀರಾತುಗಳನ್ನು ಡಿಸ್‌ ಪ್ಲೇ ಮಾಡಿದರೆ ಲಾಭವಾದೀತು ಎಂದು ಗೂಗಲ್‌ನ ನಾಯಕರು ಭಾವಿಸಿದ್ದರು. ಆಡ್‌ ಸೆನ್ಸ್‌ ಈ ನಿಟ್ಟಿನಲ್ಲಿ ಸಹಕರಿಸಿತು. ಆಡ್‌ ಸೆನ್ಸ್‌ ಹೊಸ ತಂತ್ರಜ್ಞಾನವನ್ನು ಬಳಸಿ ವೆಬ್‌ ಪೇಜ್‌ ಅನ್ನು ಸ್ಕ್ಯಾನ್‌ ಮಾಡುತ್ತದೆ. ಹಾಗೂ ರಿಲೆವೆಂಟ್‌ ಆಗುವ ಜಾಹೀರಾತುಗಳನ್ನು ತನ್ನಿಂತಾನೆ ಪ್ರದರ್ಶಿಸುತ್ತದೆ. ಟಾಟಾ, ರಿಲಯನ್ಸ್‌, ಅದಾನಿ ಗ್ರೂಪ್‌, ಮಹೀಂದ್ರಾ & ಮಹೀಂದ್ರಾ, ಆಮೆಜಾನ್‌, ವಾಲ್‌ ಮಾರ್ಟ್‌ ಹೀಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣ ಅವುಗಳ ಉತ್ಪನ್ನ ಮತ್ತು ಸೇವೆಗಳು ಮಾರುಕಟ್ಟೆಗೆ ಫಿಟ್‌ ಆಗಿರುವುದೇ ಆಗಿದೆ.

Exit mobile version