Site icon Vistara News

IBM Layoffs: ಟೆಕ್ ದೈತ್ಯ ಐಬಿಎಂನಲ್ಲಿ ಉದ್ಯೋಗ ಕಡಿತ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?

ibm office

ibm office

ಮುಂಬೈ: ಪೇಟಿಎಂ ಬಳಿಕ ಇನ್ನೊಂದು ದೈತ್ಯ ಕಂಪೆನಿ ಇಂಟರ್‌ನ್ಯಾಷನಲ್‌ ಬ್ಯುಸಿನೆಸ್ ಮೆಷಿನ್ಸ್ ಕಾರ್ಪ್ (International Business Machines Corp) ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಐಟಿ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ (IBM Layoffs). ನಿರ್ದಿಷ್ಟವಾಗಿ ಎಷ್ಟು ಸಂಖ್ಯೆಯ ಉದ್ಯೋಗ ಕಡಿತವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಇನ್ನೂ ಹೇಳಿಕೆ ಹೊರಡಿಸಿಲ್ಲ.

ಕಳೆದ ವರ್ಷವೇ ಸಿಕ್ಕಿತ್ತು ಸೂಚನೆ

ʼʼಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಅಳವಡಿಕೆಯಿಂದಾಗಿ ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರೀಕ್ಷೆಯಿದೆʼʼ ಎಂದು ಕಂಪನಿಯ ಸಿಇಒ ಅರವಿಂದ್ ಕೃಷ್ಣ ಕಳೆದ ವರ್ಷ ಹೇಳಿದ್ದರು. ʼʼಮಾನವ ಸಂಪನ್ಮೂಲದಂತಹ ಬ್ಯಾಕ್ ಆಫೀಸ್ ಕಾರ್ಯಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಗುವುದು ಅಥವಾ ನಿಧಾನಗೊಳಿಸಲಾಗುವುದುʼʼ ಎಂದು ಅರವಿಂದ್ ಕೃಷ್ಣ ತಿಳಿಸಿದ್ದರು. ಅವರ ಪ್ರಕಾರ ಐದು ವರ್ಷದಲ್ಲಿ ಶೇ. 30ರಷ್ಟು ಉದ್ಯೋಗಿಗಳ ಕೆಲಸವನ್ನು ಎಐ ಮತ್ತು ಆಟೊಮೇಶನ್​ ಮಾಡಲಿವೆಯಂತೆ. ಅದರ ಭಾಗವಾಗಿ ಉದ್ಯೋಗ ಕಡಿತ ನಡೆಯಲಿದೆಯಾ ಎನ್ನುವುದು ಸ್ಪಷ್ಟವಾಗಿಲ್ಲ.

ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.

2022ರಿಂದ ಈಚೆಗೆ ವಿವಿಧ ಟೆಕ್ ಕಂಪನಿಗಳ ಬಹಳಷ್ಟು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವರ್ಷ ಎರಡು ತಿಂಗಳಲ್ಲಿ 204 ಟೆಕ್ ಕಂಪನಿಗಳು ಉದ್ಯೋಗ ಕಡಿತ ಕೈಗೊಂಡಿವೆ. ಇದರಿಂದ 49,978 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಉದ್ಯೋಗ ಕಡಿತಕ್ಕೆ ಮುಂದಾದ ಪೇಟಿಎಂ

ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆಯ ಭಾಗವಾಗಿ ತನ್ನ ಎಲ್ಲ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕಡಿತ ಮಾಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಆರ್​ಬಿಐಯ ಕಠಿಣ ಕ್ರಮಕ್ಕೆ ತುತ್ತಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಬಹುತೇಕ ಚಟುವಟಿಕೆ ನಾಳೆ (ಮಾರ್ಚ್ 15) ಸ್ಥಗಿತಗೊಳ್ಳಲಿದೆ. ಇದರ ನಡುವೆ ಈ ಬೆಳವಣಿಗೆ ನಡೆದಿದೆ.

ಉದ್ಯೋಗ ಕಳೆದುಕೊಳ್ಳಲಿರುವವರ ನಿಖರ ಸಂಖ್ಯೆಯನ್ನು ಕಂಪೆನಿ ಬಹಿರಂಗಪಡಿಸಲಾಗಿಲ್ಲವಾದರೂ ಎರಡು ವಾರಗಳಲ್ಲಿ ತಂಡದ ಗಾತ್ರವನ್ನು ಶೇ. 20ರವರೆಗೆ ಕಡಿಮೆ ಮಾಡಲು ಕೆಲವು ವಿಭಾಗಗಳಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Lays off: 200 ಉದ್ಯೋಗಿಗಳ ಹಬ್ಬದ ಖುಷಿ ಕಿತ್ತುಕೊಂಡ ಎಲ್‌&ಟಿ ಟೆಕ್ನಾಲಜಿ ಸರ್ವೀಸ್!

ʼʼವಾರ್ಷಿಕವಾಗಿ ಪೇಟಿಎಂನಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಇದು ಕೆಲವು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದುʼʼ ಎಂದು ಪೇಟಿಎಂ ವಕ್ತಾರರು ತಿಳಿಸಿದ್ದಾರೆ. ʼʼಎಷ್ಟು ಪ್ರಮಾಣದ ನೌಕರರು ಹೊರಬೀಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಕಾರ್ಯಕ್ಷಮತೆಯ ಕಾರಣಕ್ಕಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ (AI)ಯನ್ನು ಕೆಲವು ವಿಭಾಗಗಳಲ್ಲಿ ಅಳವಡಿಸಿಕೊಳ್ಳಲು ಕಂಪೆನಿ ತೀರ್ಮಾನಿಸಿದೆʼʼ ಮೂಲಗಳು ಹೇಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version